ಹತ್ಯೆ ಸಂಚು ಆರೋಪ: 'Z' ಶ್ರೇಣಿಯ ಭದ್ರತೆ ಕೋರಿ ಜನಾರ್ದನ್ ರೆಡ್ಡಿಯಿಂದ ಸಿಎಂ, ಅಮಿತ್ ಶಾ, ಪರಮೇಶ್ವರ್, ಡಿಜಿಐಜಿಪಿಗೆ ಪತ್ರ
ತಮ್ಮ ಹತ್ಯೆಗೆ ಸಂಚು ನಡೆದಿದೆ ಎಂದು ಆರೋಪಿಸಿರುವ ಗಂಗಾವತಿ ಶಾಸಕ ಗಾಲಿ ಜನಾರ್ದನ್ ರೆಡ್ಡಿ, ಇದೀಗ 'Z' ಶ್ರೇಣಿಯ ಭದ್ರತೆ ಕೋರಿ ಸಿಎಂ, ಕೇಂದ್ರ ಮತ್ತು ರಾಜ್ಯದ ಗೃಹ ಸಚಿವರಿಗೆ ಪತ್ರ ಬರೆದಿದ್ದಾರೆ.

Published : January 4, 2026 at 10:43 AM IST
ಬೆಂಗಳೂರು: 'ಬಳ್ಳಾರಿ ಶಾಸಕ ನಾರಾ ಭರತ್ ರೆಡ್ಡಿ ಮತ್ತು ಅವರ ಗೂಂಡಾ ಸಹಚರರಿಂದ ಪೆಟ್ರೋಲ್ ಬಾಂಬ್ ಹಾಗೂ ಬಂದೂಕು ಬಳಸಿ ನನ್ನ ಹತ್ಯೆಗೆ ಯತ್ನಿಸಿರುವ ಹಿನ್ನೆಲೆ ನನಗೆ ತುರ್ತು 'ಝಡ್' ಶ್ರೇಣಿಯ ಭದ್ರತೆಯನ್ನು ಒದಗಿಸುವಂತೆ' ಕೋರಿ ಶಾಸಕ ಗಾಲಿ ಜನಾರ್ದನ್ ರೆಡ್ಡಿ ಅವರು ಸಿಎಂ ಸಿದ್ದರಾಮಯ್ಯ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಜ್ಯ ಗೃಹ ಸಚಿವ ಪರಮೇಶ್ವರ್, ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.
'ಅತ್ಯಂತ ಆಘಾತ ಮತ್ತು ಆಕ್ರೋಶದೊಂದಿಗೆ ಈ ಪತ್ರವನ್ನು ಬರೆಯುತ್ತಿದ್ದೇನೆ. 1-01-2026 ರಂದು, ಹೊಸ ವರ್ಷದ ದಿನದಂದೇ ಬಳ್ಳಾರಿಯ ನನ್ನ ನಿವಾಸದ ಮೇಲೆ ನಡೆದ ಭೀಕರ ದಾಳಿಯು ಸಾಮಾನ್ಯ ರಾಜಕೀಯ ಘರ್ಷಣೆಯಲ್ಲ. ಬದಲಾಗಿ, ಬಳ್ಳಾರಿ ಶಾಸಕ ನಾರಾ ಭರತ್ ರೆಡ್ಡಿ, ಮತ್ತು ಅವರ ಗೂಂಡಾ ಪಡೆಯು ನನ್ನನ್ನು ವ್ಯವಸ್ಥಿತವಾಗಿ ಮುಗಿಸಲು ನಡೆಸಿದ ಪೂರ್ವನಿಯೋಜಿತ "ಹತ್ಯೆಯ ಸಂಚು" (Assassination Attempt) ಇದಾಗಿದೆ' ಎಂದು ಜನಾರ್ದನ್ ರೆಡ್ಡಿ ದೂರಿದ್ದಾರೆ.
'ಜ.1ರ ಮಧ್ಯಾಹ್ನ 2 ಗಂಟೆಗೆ ಶಾಸಕ ನಾರಾ ಭರತ್ ರೆಡ್ಡಿಯವರ ಗೂಂಡಾ ಬೆಂಬಲಿಗರು ನನ್ನ ಮನೆಯ ಫೆನ್ಶಿಂಗ್ ಆವರಣದಲ್ಲಿ ಅಕ್ರಮವಾಗಿ ಬ್ಯಾನರ್ ಹಾಕಲು ಯತ್ನಿಸಿದರು. ನಮ್ಮ ನಿವಾಸದ ಸಿಬ್ಬಂದಿ ಮತ್ತು ಪೊಲೀಸರ ಮಧ್ಯಪ್ರವೇಶದಿಂದ ಅವರನ್ನು ಹಿಂದಕ್ಕೆ ಕಳುಹಿಸಲಾಯಿತು. ಸಂಜೆ 5:30 ಗಂಟೆಗೆ (ಪೊಲೀಸರ ನಿರ್ಲಕ್ಷ್ಯ) ನಾರಾ ಭರತ್ ರೆಡ್ಡಿಯವರ ಆಪ್ತ ಸತೀಶ್ ರೆಡ್ಡಿ, 40-50 ಗೂಂಡಾಗಳೊಂದಿಗೆ ಬೀರ್ ಬಾಟಲ್, ಕಲ್ಲು ಮತ್ತು ಮಾರಕಾಸ್ತ್ರಗಳನ್ನು ಹಿಡಿದು, ನನ್ನ ಆವರಣದೊಳಗೆ ಅಕ್ರಮವಾಗಿ ನುಗ್ಗಿ ಕುರ್ಚಿ ಹಾಕಿ ಕುಳಿತು "ಯಾರು ಬರುತ್ತಾರೋ ನೋಡುತ್ತೇವೆ" ಎಂದು ಸವಾಲು ಹಾಕಿದರು. ಪೊಲೀಸರಿಗೆ ತಿಳಿಸಿದರೂ ಅವರು ಮೂಕಪ್ರೇಕ್ಷಕರಾಗಿದ್ದರು. ನಮ್ಮ ಕಾರ್ಯಕರ್ತರೊಬ್ಬರು ಪ್ರಶ್ನಿಸಿದಾಗ, ಅವರ ಮೇಲೆ ಹಲ್ಲೆ ನಡೆಸಿ, “ಜನಾರ್ದನ ರೆಡ್ಡಿ ಮನೆಯಲ್ಲಿದ್ದರೆ ಹೊರಗೆ ಬರಲು ಹೇಳು, ಇಂದು ಅವನ ಕಥೆ ಮುಗಿಸುತ್ತೇನೆ" ಎಂದು ಅಸಭ್ಯ ಭಾಷೆ ಬಳಸಿ ಬೆದರಿಕೆ ಹಾಕಿದರು' ಎಂದು ಆರೋಪಿಸಿದರು.
'ರಾತ್ರಿ 7 ಗಂಟೆಗೆ ನಾನು ಗಂಗಾವತಿಯಿಂದ ಮನೆಗೆ ತಲುಪಿದ ತಕ್ಷಣ, ಶಾಸಕ ನಾರಾ ಭರತ್ ರೆಡ್ಡಿಯವರ ಸೂಚನೆ ಮೇರೆಗೆ ಸತೀಶ್ ರೆಡ್ಡಿ ಮತ್ತು ಅವರ ಗೂಂಡಾ ಪಡೆ ದಾಳಿ ಆರಂಭಿಸಿತು. ಈ ವೇಳೆ ಸತೀಶ್ ರೆಡ್ಡಿಯ ಖಾಸಗಿ ಗನ್ಮ್ಯಾನ್ಗಳು ನೇರವಾಗಿ ನನ್ನನ್ನೇ ಗುರಿಯಾಗಿಸಿಕೊಂಡು ಹಾಗೂ ನನ್ನ ಮನೆಯ ಮೇಲೆ ಸುಮಾರು 8 ಸುತ್ತು ಗುಂಡು ಹಾರಿಸಿದರು. ಆದರೆ ದೇವರ ದಯೆ ಹಾಗೂ ಅದೃಷ್ಟವಶಾತ್ ನಾನು ಪ್ರಾಣಾಪಾಯದಿಂದ ಪಾರಾಗಿರುತ್ತೇನೆ. ಈ ಸಂದರ್ಭದಲ್ಲಿ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ವಿಫಲರಾದರು' ಎಂದು ಗಂಗಾವತಿ ಶಾಸಕ ಜನಾರ್ದನ್ ರೆಡ್ಡಿ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
'ಅಂದು ರಾತ್ರಿ 9:00 ಗಂಟೆಗೆ ಸ್ವತಃ ಶಾಸಕ ನಾರಾ ಭರತ್ ರೆಡ್ಡಿ, ಎಸ್.ಪಿ ಸರ್ಕಲ್ ಬಳಿ ನೂರಾರು ಗೂಂಡಾಗಳೊಂದಿಗೆ ದೊಣ್ಣೆ, ಕಲ್ಲುಗಳಲ್ಲದೆ ಪೆಟ್ರೋಲ್ ಬಾಂಬ್ (Petrol Bombs) ಗಳನ್ನು ಹಿಡಿದು ನನ್ನ ಮನೆಯ ಮೇಲೆ ದಾಳಿ ಮಾಡಲು ಬಂದರು. ಈ ದಾಳಿಯ ಸಂದರ್ಭದಲ್ಲಿ ಸತೀಶ್ ರೆಡ್ಡಿ, ಖಾಸಗಿ ಗನ್ ಮ್ಯಾನ್ ಗಳು ನನ್ನ ಮನೆ ಮತ್ತು ಕಚೇರಿಯ ಮೇಲೆ ಮನಬಂದಂತೆ ಗುಂಡು ಹಾರಿಸಿದರು. ಇದರ ಪರಿಣಾಮ, ದುರದೃಷ್ಟವಶಾತ್ ಓರ್ವ ಅಮಾಯಕ ವ್ಯಕ್ತಿಗೆ ಗುಂಡು ತಗುಲಿ, ಸಾವನ್ನಪ್ಪಿರುತ್ತಾರೆ. ನಂತರ ಪೊಲೀಸರು ಟಿಯರ್ ಗ್ಯಾಸ್ ಬಳಸಿ, ಗಾಳಿಯಲ್ಲಿ ಗುಂಡು ಹಾರಿಸಿ ಮತ್ತು ಲಾಠಿಚಾರ್ಜ್ ನಡೆಸಿ ಪರಿಸ್ಥಿತಿಯನ್ನು ಹತೋಟಿಗೆ' ತಂದರು ಎಂದು ಅವರು ವಿವರಿಸಿದ್ದಾರೆ.
'ಒಬ್ಬ ಹಾಲಿ ಶಾಸಕನ ಮನೆಗೆ ಪೆಟ್ರೋಲ್ ಬಾಂಬ್ ಮತ್ತು ಬಂದೂಕುಗಳೊಂದಿಗೆ ಬಂದು ಪೊಲೀಸರ ಎದುರೇ ಗಂಟೆಗಟ್ಟಲೆ ದಾಂಧಲೆ ನಡೆಸಿ, ಸಾವಿರಾರು ಜನರ ಎದುರುಗಡೆಯೇ ಗುಂಡು ಹಾರಿಸಿ ಹತ್ಯೆಗೆ ಯತ್ನಿಸುವುದು ರಾಜ್ಯದಲ್ಲಿ "ಜಂಗಲ್ ರಾಜ್" ಇದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಇಲ್ಲಿ ಸ್ಥಳೀಯ ಪೊಲೀಸರ ವೈಫಲ್ಯ ಎದ್ದು ಕಾಣುತ್ತಿದೆ. ನನ್ನ ಪ್ರಾಣಕ್ಕೆ ಇರುವ ಅಪಾಯ ಈಗ ಅತ್ಯಂತ ಗರಿಷ್ಠ ಮಟ್ಟದಲ್ಲಿದೆ. ನನ್ನನ್ನು ಹತ್ಯೆ ಮಾಡಲು ಸಂಚು ರೂಪಿಸಿರುವ ವಿರೋಧಿಗಳು ಎಂತಹ ಕೃತ್ಯಕ್ಕೂ ಹೇಸುವುದಿಲ್ಲ ಎಂಬುದು ಸಾಬೀತಾಗಿದೆ. ಆದುದರಿಂದ ಮುಂದಿನ ದಿನಗಳಲ್ಲಿ ಮತ್ತೆ ಇಂಥ ದಾಳಿ ಸಂಭವಿಸುವ ಸಾಧ್ಯತೆ ಇದೆ' ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
'ಹೀಗಾಗಿ ನನಗೆ ಮತ್ತು ನನ್ನ ಕುಟುಂಬಕ್ಕೆ ತಕ್ಷಣದಿಂದ ಜಾರಿಗೆ ಬರುವಂತೆ 'ಝಡ್' (2 Category) ಅಥವಾ ತತ್ಸಮಾನವಾದ ಉನ್ನತ ಪೊಲೀಸ್ ಭದ್ರತೆಯನ್ನು ಒದಗಿಸಬೇಕು. ಘಟನೆಯಲ್ಲಿ ಮೃತಪಟ್ಟ ವ್ಯಕ್ತಿಯ ಸಾವಿಗೆ ಕಾರಣರಾದ ಮತ್ತು ಪೆಟ್ರೋಲ್ ಬಾಂಬ್ ಬಳಸಿದ ಶಾಸಕ ಭರತ್ ರೆಡ್ಡಿ, ಸತೀಶ್ ರೆಡ್ಡಿ ಮತ್ತು ಅವರ ಸಹಚರರ ಮೇಲೆ ಕೊಲೆ ಮೊಕದ್ದಮೆ ದಾಖಲಿಸಿ ಬಂಧಿಸಬೇಕು. ಕರ್ತವ್ಯಲೋಪ ಹಾಗೂ ನಿರ್ಲಕ್ಷ್ಯ ತೋರಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ನನಗೆ ಸೂಕ್ತ ಭದ್ರತೆ ಒದಗಿಸುವಲ್ಲಿ ಸರ್ಕಾರ ವಿಫಲವಾಗಿ, ಮುಂದಿನ ದಿನಗಳಲ್ಲಿ ನನ್ನ ಅಥವಾ ನನ್ನ ಕುಟುಂಬದ ಮೇಲೆ ಯಾವುದೇ ದಾಳಿ ನಡೆದರೆ, ಅದಕ್ಕೆ ನೇರವಾಗಿ ರಾಜ್ಯ ಸರ್ಕಾರವೇ ಹೊಣೆಯಾಗುತ್ತದೆ ಎಂದು ಈ ಮೂಲಕ ಎಚ್ಚರಿಸಲು ಬಯಸುತ್ತೇನೆ' ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಬಳ್ಳಾರಿ ಗಲಾಟೆ: ಮೃತ ಕಾಂಗ್ರೆಸ್ ಕಾರ್ಯಕರ್ತನ ಕುಟುಂಬಕ್ಕೆ ವೈಯಕ್ತಿಕವಾಗಿ ₹25 ಲಕ್ಷ ಆರ್ಥಿಕ ನೆರವು ನೀಡಿದ ಸಚಿವ ಜಮೀರ್

