ರಾಣಿ ಚನ್ನಮ್ಮನ ನಾಡಲ್ಲಿ "ಮಿಶನ್ 625": ಎಸ್ಎಸ್ಎಲ್ಸಿಯಲ್ಲಿ 625 ಅಂಕ ಗಳಿಸಲು ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ
ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ವಸತಿ ಶಾಲೆಯಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಗಳಿಸುವ ಮಹತ್ವಾಕಾಂಕ್ಷೆಯಿಂದ ಶಿಕ್ಷಣ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ.

Published : March 3, 2026 at 3:08 PM IST
ವರದಿ: ಸಿದ್ದನಗೌಡ ಪಾಟೀಲ್
ಬೆಳಗಾವಿ: ಎಸ್ಎಸ್ಎಲ್ಸಿ 625ಕ್ಕೆ 625 ಅಂಕ ಗಳಿಸಲು ವೀರರಾಣಿ ಕಿತ್ತೂರು ಚನ್ನಮ್ಮನ ನಾಡಿನಲ್ಲಿ "ಮಿಶನ್ 625" ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಿವಿಧ ಶಾಲೆಗಳ 42 ವಿದ್ಯಾರ್ಥಿಗಳಿಗೆ 36 ದಿನ ಉಚಿತ ವಸತಿ ಸಹಿತ ವಿಶೇಷ ತರಬೇತಿ ನೀಡಲಾಗುತ್ತಿದೆ. ಇಡೀ ರಾಜ್ಯಕ್ಕೆ ಟಾಪರ್ ಬರುವ ನಿಟ್ಟಿನಲ್ಲಿ ಬಿಇಒ ನೇತೃತ್ವದಲ್ಲಿ ತಾಲೂಕಿನ ಪ್ರೌಢಶಾಲಾ ಶಿಕ್ಷಕರ ತಂಡ ಹಗಲು ರಾತ್ರಿ ಶ್ರಮಿಸುತ್ತಿದೆ. ಈ ಬಗ್ಗೆ ಇಲ್ಲಿದೆ ಈಟಿವಿ ಭಾರತದ ವಿಶೇಷ ವರದಿ.
ಶಿಸ್ತಿನಿಂದ ಪಾಠ ಮಾಡುತ್ತಿರುವ ಶಿಕ್ಷಕರು, ಚಿತ್ತಕೊಟ್ಟು ಪಾಠ ಕೇಳುತ್ತಿರುವ ಮಕ್ಕಳು. ಗುಂಪು ಗುಂಪಾಗಿ ಬಯಲಲ್ಲಿ ಕುಳಿತು ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದರೆ, ಅವರಿಗೆ ಕಠಿಣ ವಿಷಯಗಳನ್ನು ಸ್ಥಳದಲ್ಲೇ ಪರಿಹರಿಸುತ್ತಿರುವ ಗುರುಗಳು.
ಚನ್ನಮ್ಮನ ಕಿತ್ತೂರು ತಾಲೂಕಿನ ಹೂಲಿಕಟ್ಟಿ ಗ್ರಾಮದಲ್ಲಿರುವ ಅಲ್ಪಸಂಖ್ಯಾತರ ಇಲಾಖೆಯ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ವಸತಿ ಶಾಲೆಯಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಗಳಿಸುವ ಮಹತ್ವಾಕಾಂಕ್ಷೆಯಿಂದ ಶಿಕ್ಷಣ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ. ಇದಕ್ಕೆ "ಮಿಶನ್ 625" (ಸನಿವಾಸ) ಎಂಬ ಹೆಸರಿಟ್ಟಿದ್ದು, ಮಕ್ಕಳು ಪರೀಕ್ಷೆಗೆ ಯುದ್ಧೋಪಾದಿಯಲ್ಲಿ ಸಜ್ಜಾಗುತ್ತಿದ್ದಾರೆ.
42 ಮಕ್ಕಳಲ್ಲಿ 34 ಬಾಲಕಿಯರಿದ್ದರೆ, 8 ಬಾಲಕರಿದ್ದಾರೆ. ಬಿಇಒ ಚನ್ನಬಸಪ್ಪ ತುಬಾಕಿ ಅವರ ಈ ಪ್ರಯತ್ನಕ್ಕೆ ತಾಲೂಕಿನ ಎಲ್ಲ ಶಿಕ್ಷಕರು ಸಾಥ್ ಕೊಟ್ಟಿದ್ದಾರೆ. ಸ್ಥಳೀಯ ಶಾಸಕ ಬಾಬಾಸಾಹೇಬ ಪಾಟೀಲ್ ಅವರೂ ಮುತುವರ್ಜಿ ವಹಿಸಿದ್ದು, ಮಕ್ಕಳಿಗೆ ಬೇಕಾದ ವ್ಯವಸ್ಥೆ ಕಲ್ಪಿಸಿದ್ದಾರೆ. ತಾವು ಮಕ್ಕಳ ಬಳಿ ತೆರಳಿ ಯಾವ ರೀತಿ ಅಭ್ಯಾಸ ಮಾಡುತ್ತಿದ್ದಾರೆ ಅಂತಾ ಪರಿಶೀಲಿಸಿ, ಧೈರ್ಯ ತುಂಬುತ್ತಿದ್ದಾರೆ.
ಕಿತ್ತೂರು ತಾಲೂಕಿನ ಸರ್ಕಾರಿ ಮತ್ತು ಅನುದಾನಿತ 25 ಕನ್ನಡ ಮಾಧ್ಯಮ ಪ್ರೌಢ ಶಾಲೆಗಳ 42 ಟಾಪರ್ಸ್ಗಳನ್ನು ಒಂದೇ ಕಡೆ ಸೇರಿಸಿ, ವಿವಿಧ ಶಾಲೆಗಳ ವಿಷಯಾವಾರು ಶಿಕ್ಷಕರು ಮತ್ತು ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ಮಕ್ಕಳಿಗೆ ಪಾಠ ಮಾಡಲಾಗುತ್ತಿದೆ. ಫೆ.5 ರಿಂದ ಈ ವಿಶೇಷ ತರಬೇತಿ ಶುರುವಾಗಿದೆ.
ಹೇಗಿರುತ್ತೆ ಮಕ್ಕಳ ದಿನಚರಿ? ಪ್ರತಿದಿನ ಬೆಳಗ್ಗೆ 4.30ಕ್ಕೆ ಏಳುವ ಮಕ್ಕಳು ಬೆಳಗಿನ ಕ್ರಿಯಾಕರ್ಮಗಳನ್ನು ಮುಗಿಸಿ, 5 ರಿಂದ 6 ಗಂಟೆವರೆಗೆ ಅಭ್ಯಾಸ ಮಾಡುತ್ತಾರೆ. 6 ರಿಂದ 6.30ರವರೆಗೆ ಯೋಗ, ಧ್ಯಾನ, ಲಘು ವ್ಯಾಯಾಮ, ಪ್ರಾರ್ಥನೆ ಸಲ್ಲಿಸುತ್ತಾರೆ. 6.30-7.30ರೊಳಗೆ ಸ್ನಾನ ಮುಗಿಸುತ್ತಾರೆ. 7.30-8 ಬೆಳಗ್ಗಿನ ಉಪಹಾರ ಸೇವಿಸುತ್ತಾರೆ. ಬಳಿಕ 8 ಗಂಟೆಯಿಂದ ಮಧ್ಯಾಹ್ನ 1.30ರವರೆಗೆ ಶೈಕ್ಷಣಿಕ ತರಗತಿಗಳು ಶುರು ಆಗುತ್ತವೆ. ಮಧ್ಯಾಹ್ನ 1.30 ಊಟ ಮಾಡಿ, ಮತ್ತೆ 2.30ರಿಂದ 5.30ಕ್ಕೆ ತರಗತಿಗಳು ನಡೆಯುತ್ತವೆ. 5.30ಕ್ಕೆ ವಿದ್ಯಾರ್ಥಿಗಳಿಗೆ ಅಲ್ಪೋಪಹಾರ, ಚಹ, ಹಣ್ಣು ವ್ಯವಸ್ಥೆ ಇರುತ್ತದೆ. ಸಾಯಂಕಾಲ 6ರಿಂದ ರಾತ್ರಿ 8ರವರೆಗೆ ವಿದ್ಯಾರ್ಥಿಗಳು ಸ್ವಯಂ ಅಭ್ಯಾಸ ಮಾಡುತ್ತಾರೆ. ಈ ವೇಳೆ ಶಿಕ್ಷಕರು ಮಕ್ಕಳ ಸಮಸ್ಯೆ ಮತ್ತು ಗೊಂದಲ ನಿವಾರಿಸುತ್ತಾರೆ. 8- 8.30 ಊಟದ ಸಮಯ. ಊಟ ಮುಗಿದ ಮೇಲೆ ಮತ್ತೆ 8.30-10.30ರವರೆಗೆ ಮಕ್ಕಳು ಓದಿ, ನಿದ್ದೆಗೆ ಜಾರುತ್ತಾರೆ.
ನುರಿತ, ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ಪಾಠ: ಕಿತ್ತೂರು ತಾಲ್ಲೂಕಿನ 29 ಪ್ರೌಢಶಾಲೆಗಳಲ್ಲಿ ಒಟ್ಟು 1712 ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿದ್ದಾರೆ. ತಾಲೂಕಿನಲ್ಲಿರುವ 235ಕ್ಕೂ ಅಧಿಕ ಶಿಕ್ಷಕರು ಮಿಶನ್-625ಗೆ ಕೈಜೋಡಿಸಿದ್ದು, ತಮಗೆ ನಿಗದಿ ಪಡಿಸಿದ ದಿನದಂದು ಇಲ್ಲಿಗೆ ಬಂದು ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ. ಪ್ರತಿದಿನ ಆರು ವಿಷಯಗಳ ಆರು ಶಿಕ್ಷಕರು, ಸ್ಕೌಟ್ಸ್ ಆಂಡ್ ಗೈಡ್ಸ್ ಓರ್ವ ಶಿಕ್ಷಕ, ಓರ್ವ ಶಿಕ್ಷಕಿ, ಓರ್ವ ದೈಹಿಕ ಶಿಕ್ಷಕ, ಓರ್ವ ದೈಹಿಕ ಶಿಕ್ಷಕಿ, ಓರ್ವ ಪ್ರೌಢಾಶಾಲಾ ಮುಖ್ಯಶಿಕ್ಷಕರು ತಮ್ಮ ಪಾಳೇಯ ಪ್ರಕಾರ ಪಾಠ ಮಾಡಿ ಹೋಗುತ್ತಾರೆ. ಇನ್ನು ಎಸ್ಎಸ್ಎಲ್ಸಿ ನೋಡಲ್ ಅಧಿಕಾರಿ ಸಂಗೀತಾ ಹೊಸೂರ ಮತ್ತು ಬಿಇಒ ಚನ್ನಬಸಪ್ಪ ತುಬಾಕಿ ಅವರು ಖಾಯಂ ಇಲ್ಲಿಯೇ ಇದ್ದು ಎಲ್ಲವನ್ನೂ ನೋಡಿಕೊಳ್ಳುತ್ತಿದ್ದಾರೆ. ಇವರಷ್ಟೇ ಅಲ್ಲದೇ ಬೆಂಗಳೂರು ಸೇರಿದಂತೆ ಇತರೆ ಭಾಗಗಳ ರಾಜ್ಯ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ಕ್ಲಿಷ್ಠಕರ ಅಂಶಗಳನ್ನು ತಿಳಿಸಲಾಗುತ್ತಿದೆ.
ಪರೀಕ್ಷೆ ಮುಗಿಯೋವರೆಗೂ ವಿಶ್ರಮಿಸಲ್ಲ: ಪ್ರತಿದಿನ ಆರು ವಿಷಯಗಳ ಪ್ರತಿ ಘಟಕದ ಮೇಲೂ ಪರೀಕ್ಷೆ ನಡೆಸಲಾಗುತ್ತಿದೆ. ಘಟಕ ಆಧಾರಿತ ಪ್ರಶ್ನೆ ಕೋಟಿ (ಲೆಸನ್ ಬೇಸ್ಡ್ ಅಸ್ಸೆಸ್ಸಮೆಂಟ್) ಪ್ರಕಾರ 64 ಅಂಕಗಳ, ಇನ್ನುಳಿದ 16 ಅಂಕಗಳ ಅನ್ವಯಿಕ ಪ್ರಶ್ನೆಗಳ ಬಗ್ಗೆ ವಿಶೇಷ ಒತ್ತು ನೀಡಲಾಗುತ್ತದೆ. ಕಳೆದ 26 ದಿನಗಳಿಂದ ಮಿಶನ್-625 ಯಶಸ್ವಿಯಾಗಿ ನಡೆದುಕೊಂಡು ಬಂದಿದ್ದು, ಮಾರ್ಚ್ 10ಕ್ಕೆ ಮುಕ್ತಾಯವಾಗಲಿದೆ. ಇದು ಮುಗಿದ ಮೇಲೂ ವಾಟ್ಸ್ ಆ್ಯಪ್ ಗ್ರೂಪ್ನಲ್ಲಿ ನಿರಂತರವಾಗಿ ಆರು ಶಿಕ್ಷಕರು ಈ 42 ಮಕ್ಕಳ ಜೊತೆಗೆ ಸಂಪರ್ಕದಲ್ಲಿ ಇರುತ್ತಾರೆ. ಪರೀಕ್ಷೆ ಮುಗಿಯುವವರೆಗೆ ಮಕ್ಕಳ ಮೇಲೆ ತೀವ್ರ ನಿಗಾ ಇಟ್ಟಿರುತ್ತಾರೆ. ತಮ್ಮ ಗುರಿ ತಲುಪವವರೆಗೆ ವಿರಮಿಸುವ ಪ್ರಮೇಯವೇ ಇಲ್ಲ ಎನ್ನುತ್ತಿದ್ದಾರೆ ಶಿಕ್ಷಕರು.
ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಬಗ್ಗೆಯೂ ಕಾಳಜಿ: ಟಾಪರ್ಸ್ ಹೊರತು ಪಡಿಸಿ ಮಧ್ಯಮ, ಕಲಿಕೆಯಲ್ಲಿ ಹಿಂದಳಿದ ಮಕ್ಕಳ ಬಗ್ಗೆಯೂ ಶಿಕ್ಷಕರು ಕಾಳಜಿ ವಹಿಸುತ್ತಿದ್ದಾರೆ. ಶಿಕ್ಷಣ ಇಲಾಖೆ ನಿರ್ದೇಶನದಂತೆ ಅವರಿಗೆ ಅಗತ್ಯ ತರಬೇತಿ ನೀಡುತ್ತಿದ್ದೇವೆ. ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ವರ್ಕ್ ಶೀಟ್, ಲೆಸನ್ ಬೇಸ್ಡ್ ಅಸ್ಸೆಸ್ಮೆಂಟ್(ಎಲ್ಬಿಎ) ಮೂಲಕ ತಯಾರಿ ಮಾಡುತ್ತಿದ್ದೇವೆ. ಅವರು ಶೇ.75ಕ್ಕೂ ಅಧಿಕ ಅಂಕ ತೆಗೆದುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿದಿದೆ. ಇನ್ನು ಖೋದಾನಪುರ, ಎಂ.ಕೆ. ಹುಬ್ಬಳಿ, ಕಿತ್ತೂರು, ಬೈಲೂರಿನಲ್ಲಿ ಈಗಾಗಲೇ ಕಲಿಕೆಯಲ್ಲಿ ಹಿಂದುಳಿದ 392 ಮಕ್ಕಳಿಗೆ ಮಿಶನ್-40 ಕಾರ್ಯಕ್ರಮದಡಿ ವಿಶೇಷ ತರಬೇತಿ ನೀಡಿದ್ದು, ಅವರಲ್ಲಿ 326 ವಿದ್ಯಾರ್ಥಿಗಳು 28 ಅಂಕ ತೆಗೆದುಕೊಂಡು ಉತ್ತೀರ್ಣ ಆಗುವ ಮಟ್ಟಿಗೆ ಸುಧಾರಿಸಿದ್ದೇವೆ. ಇನ್ನುಳಿದಂತೆ 66 ಮಕ್ಕಳು ಸುಧಾರಿಸುತ್ತಿದ್ದು, ಅವರು ಉತ್ತೀರ್ಣರಾಗಿ ನಮ್ಮ ತಾಲೂಕಿನ ಒಟ್ಟಾರೆ ಫಲಿತಾಂಶ ನೂರಕ್ಕೆ ನೂರು ಆಗುವ ವಿಶ್ವಾಸದಲ್ಲಿದ್ದೇವೆ ಎನ್ನುತ್ತಿದ್ದಾರೆ ಶಿಕ್ಷಕರು.
ಕನಿಷ್ಠ 15 ವಿದ್ಯಾರ್ಥಿಗಳು 625 ಅಂಕ ಗಳಿಸುತ್ತಾರೆ: ಈಟಿವಿ ಭಾರತ ಜೊತೆಗೆ ಮಾತನಾಡಿದ ಬಿಇಒ ಚನ್ನಬಸಪ್ಪ ತುಬಾಕಿ, ಕಳೆದ ಬಾರಿ ನಮ್ಮ ತಾಲ್ಲೂಕಿನ ಖೋದಾನಪುರ ವಿದ್ಯಾರ್ಥಿನಿ ಸ್ವಾತಿ ತಿಗಡಿ 624 ಅಂಕ ಗಳಿಸಿ, ಕೇವಲ 1 ಅಂಕದಿಂದ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯುವುದರಿಂದ ವಂಚಿತಳಾಗಿದ್ದಳು. ಇದನ್ನೆ ಪ್ರೇರಣೆಯಾಗಿ ಇಟ್ಟುಕೊಂಡು, ಈ ಬಾರಿ ಜೂನ್-ಜುಲೈ ತಿಂಗಳಲ್ಲೇ ಕ್ರಿಯಾ ಯೋಜನೆ ಸಿದ್ಧಪಡಿಸಿ ಅನುಷ್ಠಾನಕ್ಕೆ ತಂದಿದ್ದೇವೆ. ಟೀಂ ಕಿತ್ತೂರು ಅಡಿಯಲ್ಲಿ ಗ್ರೂಪ್ ಡಿಯಿಂದ ಹಿಡಿದು ಬಿಆರ್ಪಿ, ಸಿಆರ್ಪಿ, ಮುಖ್ಯಶಿಕ್ಷಕರು ಸೇರಿ ಎಲ್ಲರೂ ಶ್ರಮಿಸುತ್ತಿದ್ದೇವೆ. ಮಕ್ಕಳ ಕಲಿಕೆ ನೋಡಿದರೆ ಏನಿಲ್ಲವೆಂದರೂ 15 ವಿದ್ಯಾರ್ಥಿಗಳು 625 ಅಂಕ ಗಳಿಸುವ ವಿಶ್ವಾಸ ಇದೆ. 42 ಮಕ್ಕಳನ್ನು ಹೊರತು ಪಡಿಸಿ, ಅವರ ಶಾಲೆಗಳ ಇನ್ನುಳಿದ ವಿದ್ಯಾರ್ಥಿಗಳಲ್ಲೂ ಸ್ಪರ್ಧಾತ್ಮಕ ಮನೋಭಾವನೆ ಬೆಳೆದಿದೆ. ಅವರಿಂದಲೂ ಅತ್ಯುತ್ತಮ ಫಲಿತಾಂಶ ನಿರೀಕ್ಷೆ ಇದೆ ಎಂದು ವಿವರಿಸಿದರು.
ನಮ್ಮ ಬೆನ್ನಿಗೆ ಶಾಸಕರೂ ನಿಂತಿದ್ದಾರೆ: 36 ದಿನಗಳ ಮಿಶನ್-625 ಕಾರ್ಯಕ್ರಮಕ್ಕೆ ಅಗತ್ಯ ವೆಚ್ಚವನ್ನು ಶಾಸಕ ಬಾಬಾಸಾಹೇಬ ಪಾಟೀಲ್ ಅವರೇ ಭರಿಸುತ್ತಿದ್ದಾರೆ. ಜೊತೆಗೆ ಮಕ್ಕಳಿಗೆ ನೋಟ್ಸ್, ವರ್ಕ್ ಶೀಟ್ ನೀಡಲು ಹೊಸದಾಗಿ ಜೆರಾಕ್ಸ್ ಮಶಿನ್ ಅನ್ನೇ ಕೊಡಿಸಿದ್ದಾರೆ. ಅಲ್ಲದೆ ಪ್ರತಿ ಮಗುವಿಗೆ ಎರಡರಂತೆ 4 ಸಾವಿರ ಎಲ್ಬಿಎ ಪುಸ್ತಕಗಳನ್ನು ತಮ್ಮದೇ ಖರ್ಚಿನಲ್ಲಿ ವಿತರಿಸಿದ್ದಾರೆ. ಮಿಶನ್-625 ಪಾಲ್ಗೊಂಡ ಮಕ್ಕಳಿಗೆ ಊಟ, ಉಪಹಾರಕ್ಕೆ ಬೇಕಾದ ಸಾಮಗ್ರಿಗಳನ್ನು ಕೆಲ ದಾನಿಗಳು ನೀಡುತ್ತಿದ್ದಾರೆ ಎಂದು ಬಿಇಒ ಚನ್ನಬಸಪ್ಪ ತುಬಾಕಿ ತಿಳಿಸಿದರು.
ನೂರಕ್ಕೆ ನೂರು ಗುರಿ ತಲುಪುತ್ತೇವೆ: ಎಸ್ಎಸ್ಎಲ್ಸಿ ನೋಡಲ್ ಅಧಿಕಾರಿ ಸಂಗೀತಾ ಹೊಸೂರ ಮಾತನಾಡಿ, 1 ಮತ್ತು 2ನೇ ಸರಣಿ ಪರೀಕ್ಷೆಗಳಲ್ಲಿ 475ಕ್ಕೂ ಅಧಿಕ ಅಂಕ ಗಳಿಸಿರುವ ಪ್ರತಿ ಶಾಲೆಯ ಇಬ್ಬರು ವಿದ್ಯಾರ್ಥಿಗಳನ್ನು "ಸನಿವಾಸ" ತರಬೇತಿಗೆ ಆಯ್ಕೆ ಮಾಡಿದ್ದೇವೆ. ಪ್ರತಿನಿತ್ಯ ಆರು ಶಿಕ್ಷಕರು ಪಾಠ ಮಾಡುತ್ತಿದ್ದಾರೆ. ಬಾಲಕಿಯರ ಸುರಕ್ಷತೆ ದೃಷ್ಟಿಯಿಂದ ರಾತ್ರಿ ಹೊತ್ತು ಸ್ಕೌಟ್ಸ್ ಮತ್ತು ಗೈಡ್ ಮಹಿಳಾ ಶಿಕ್ಷಕಿ ಒಬ್ಬರು, ಬಾಲಕರಿಗೆ ಪುರುಷ ಶಿಕ್ಷಕರನ್ನು ನೇಮಿಸಲಾಗಿದೆ. ಮೂರು ಜಿಪಿಟಿ(ಪದವೀಧರ ಪ್ರಾಥಮಿಕ) ಶಿಕ್ಷಕರು ಉತ್ತರಪತ್ರಿಕೆಯಲ್ಲಿ ಮಕ್ಕಳ ಕಾಗುಣಿತ ಪರೀಕ್ಷೆ ಮಾಡುತ್ತಾರೆ. ಕಾಗುಣಿತ ಆಗದಂತೆ ತಿದ್ದಿ ತೀಡುತ್ತಿದ್ದಾರೆ. ಓದುವುದು, ಪರೀಕ್ಷೆಯಲ್ಲಿ ನೆನಪಿಟ್ಟುಕೊಂಡು ಹೇಗೆ ಬರೆಯಬೇಕು ಎಂಬುದನ್ನು ಮನವರಿಕೆ ಮಾಡಲಾಗುತ್ತಿದೆ. ಮಕ್ಕಳಲ್ಲಿ ಸಾಕಷ್ಟು ಬದಲಾವಣೆ ಕಂಡು ಬಂದಿದ್ದು, ನೂರಕ್ಕೆ ನೂರು ನಮ್ಮ ಗುರಿ ತಲಪುತ್ತೇವೆ ಎಂದು ಹೇಳಿದರು.
ತಂದೆ-ತಾಯಿಗಿಂತ ಹೆಚ್ಚು ಶಿಕ್ಷಕರಿಂದ ಕಾಳಜಿ: ನಮ್ಮ ಶಾಲೆಯಲ್ಲಿ ನಾವೇ ಟಾಪರ್ಸ್ ಅಂತಾ ತಿಳಿದಿದ್ದೆವು. ಇಲ್ಲಿ ಬಂದ ಮೇಲೆ ನಾವು ಎಷ್ಟು ಹಿಂದುಳಿದಿದ್ದೇವೆ ಅಂತ ಗೊತ್ತಾಯಿತು. ಅದಕ್ಕೆ ತಕ್ಕಂತೆ ಹೆಚ್ಚಿನ ಆಸಕ್ತಿ ವಹಿಸಿ ಓದುತ್ತಿದ್ದೇವೆ. ಸಣ್ಣ ತಪ್ಪು ದೊಡ್ಡ ತಪ್ಪು ಅಂತ ತಿಳಿದುಕೊಂಡು, ಅದು ಪುನರಾವರ್ತನೆ ಆಗದಂತೆ ಮನದಟ್ಟು ಮಾಡುತ್ತಿದ್ದಾರೆ. ಇಲ್ಲಿ ನಮಗೆ ಎಲ್ಲ ವ್ಯವಸ್ಥೆ ಉಚಿತವಾಗಿ ಕೊಟ್ಟಿದ್ದಾರೆ. ತಂದೆ-ತಾಯಿಗಿಂತ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ. ನಮಗೋಸ್ಕರ ಇಷ್ಟೊಂದು ಶಿಕ್ಷಕರು ಶ್ರಮ ವಹಿಸುವುದನ್ನು ನೋಡಿದ ಮೇಲೆ 625 ಅಂಕ ಗಳಿಸುವ ಛಲ ಹುಟ್ಟಿದೆ. ಇದರಲ್ಲಿ ಖಂಡಿತ ನಾವು ಯಶಸ್ವಿ ಆಗುತ್ತೇವೆ ಎಂಬುದು ಎಂ.ಕೆ.ಹುಬ್ಬಳ್ಳಿ ಕಲ್ಮೇಶ್ವರ ಶಾಲೆ ವಿದ್ಯಾರ್ಥಿನಿ ಸಹನಾ ವಿಶ್ವಾಸ.
ಭಾವಿಯೊಳಗಿನ ಕಪ್ಪೆ ಆಗಿದ್ದೆವು: 600 ಮಾರ್ಕ್ಸ್ ಕ್ರಾಸ್ ಮಾಡುತ್ತೇವೆ ಅಂತಾ ಅಷ್ಟೇ ಅಂದುಕೊಂಡಿದ್ದೆವು. ಆದರೆ, ಇಲ್ಲಿ ಬಂದ ಮೇಲೆ 625 ಅಂಕ ಗಳಿಸುವ ಬಗ್ಗೆ ನಮಗೆ ಪೂರ್ತಿ ಭರವಸೆ ಮೂಡಿದೆ. ಶಾಸಕರು, ಬಿಇಒ ಸರ್ ಸೇರಿ ಎಲ್ಲ ಶಿಕ್ಷಕರು ನಮಗೆ ಹೆಚ್ಚು ಒತ್ತು ಕೊಡುತ್ತಿದ್ದಾರೆ. ಅವರಿಗೆ ನಾನು ಧನ್ಯವಾದ ಸಲ್ಲಿಸುತ್ತೇನೆ. ನಾವು ಎಲ್ಲಿ ವೀಕ್ ಇದ್ದೇವೆ ಅಂತ ತಿಳಿಸಿ, ದಿನದಿಂದ ದಿನಕ್ಕೆ ಸುಧಾರಿಸುತ್ತಿದ್ದಾರೆ. ಕ್ಲಿಷ್ಟಕರ ವಿಷಯಗಳನ್ನು ರಾಜ್ಯ ಸಂಪನ್ಮೂಲ ವ್ಯಕ್ತಿಗಳಿಂದ ತಿಳಿಸುತ್ತಿದ್ದಾರೆ. ನಮ್ಮ ಶಾಲೆಯಲ್ಲಿ ಒಂದು ರೀತಿ ಭಾವಿಯಲ್ಲಿನ ಕಪ್ಪೆ ಆಗಿದ್ದೆವು. ಇಲ್ಲಿ ಬಂದ ನಂತರ ಸಾಕಷ್ಟು ಬದಲಾಗಿದ್ದೇವೆ ಎನ್ನುತ್ತಾರೆ ಕಿತ್ತೂರು ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಸ್ನೇಹಾ ಶಿವಲಿಂಗನವರ.
ಶಿಕ್ಷಕರ ಶ್ರಮಕ್ಕೆ ಫಲ ಕೊಡುತ್ತೇವೆ: ಎಂ.ಕೆ. ಹುಬ್ಬಳ್ಳಿ ಕಲ್ಮೇಶ್ವರ ಹೈಸ್ಕೂಲ್ ವಿದ್ಯಾರ್ಥಿನಿ ದೀಪಾ ಮುಡೆನ್ನವರ ಮಾತನಾಡಿ, 625 ಅಂಕ ಗಳಿಸುವ ನಿಟ್ಟಿನಲ್ಲಿ ಇನ್ನು ಏನೆಲ್ಲಾ ಕಲಿಯಬೇಕು..? ಎಲ್ಲೆಲ್ಲಿ ಯಡವುತ್ತಿದ್ದೇವೆ..? ಎಂಬುದನ್ನು ವಿವರವಾಗಿ ತಿಳಿಸುತ್ತಿದ್ದಾರೆ. ನಮ್ಮ ಓದಿನ ಜೊತೆಗೆ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸುತ್ತಿದ್ದಾರೆ. ಕಿತ್ತೂರು ತಾಲೂಕಿನ ಪ್ರತಿಯೊಬ್ಬ ಶಿಕ್ಷಕರು ನಮಗಾಗಿ ಕಷ್ಟಪಡುತ್ತಿದ್ದಾರೆ. ಹೀಗಾಗಿ, 625 ಅಂಕ ಗಳಿಸಿ ನಮ್ಮ ಶಾಲೆ, ತಾಲೂಕು, ಶಿಕ್ಷಕರು ಮತ್ತು ತಂದೆ-ತಾಯಿಗೆ ಕೀರ್ತಿ ತರುತ್ತೇವೆ ಎಂದರು.
"ಎಸ್ಎಸ್ಎಲ್ಸಿಯಲ್ಲಿ ಗುಣಮಟ್ಟದ ಫಲಿತಾಂಶಕ್ಕಾಗಿ ವಿನೂತನ ಪ್ರಯೋಗ ಮಾಡುತ್ತಿದ್ದೇವೆ. ನಮ್ಮ ತಾಲೂಕಿನ ರೈತರ ಮಕ್ಕಳು ರಾಜ್ಯಕ್ಕೆ ಟಾಪರ್ ಬರಬೇಕು. ಆ ನಿಟ್ಟಿನಲ್ಲಿ ಬಿಇಒ ಅವರು ಒಳ್ಳೆಯ ಕಾರ್ಯ ಮಾಡುತ್ತಿದ್ದಾರೆ. ಅವರು ಮತ್ತು ಎಲ್ಲ ಶಿಕ್ಷಕರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತದಲ್ಲಿ ಮಕ್ಕಳಲ್ಲಿ ಕೌಶಲ್ಯ ಬೆಳೆಸಬೇಕು. ಹೀಗೆ ಮಾಡಿದ್ದೇ ಆದಲ್ಲಿ ಅವರ ಭವಿಷ್ಯ ಉಜ್ವಲವಾಗುತ್ತದೆ."
-ಬಾಬಾಸಾಹೇಬ ಪಾಟೀಲ, ಶಾಸಕರು, ಚನ್ನಮ್ಮನ ಕಿತ್ತೂರು
ನೀಲನಕ್ಷೆ ಒಂದೇ ಮಾನದಂಡ: ವಿದ್ಯಾರ್ಥಿಗಳೇ ಈಗಲೂ ಕಾಲ ಮಿಂಚಿಲ್ಲ. ಪರೀಕ್ಷೆಗೆ ಇನ್ನು 16 ದಿನ ಉಳಿದಿದೆ. ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಆರು ವಿಷಯ ಸೇರಿ ಒಟ್ಟು 235 ಪ್ರಶ್ನೆಗಳು ಬರುತ್ತವೆ. 2350 ನಿಮಿಷದಲ್ಲಿ 235 ಪ್ರಶ್ನೆಗಳನ್ನು ಓದಬೇಕು. ಒಂದು ಪ್ರಶ್ನೆಗೆ 10 ನಿಮಿಷ ಸಮಯ ಕೊಡಬೇಕು. ಹೀಗೆ ನೀವು ಮೂರು ಬಾರಿ ನೀಲನಕ್ಷೆ ಪ್ರಕಾರವೇ ಓದಬೇಕು. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳು ಸರ್ಕಾರ ನಿಗದಿ ಪಡಿಸಿದ ಮಿಶನ್-40 ಅಧ್ಯಯನ ಮಾಡಿದ್ದಲ್ಲಿ ಯಾರೂ ಅನುತ್ತೀರ್ಣ ಆಗುವುದಿಲ್ಲ. ಮಧ್ಯಮ ವಿದ್ಯಾರ್ಥಿಗಳು ಘಟಕ ಆಧಾರಿತ ಪ್ರಶ್ನೆ ಕೋಟಿ (ಲೆಸನ್ ಬೇಸ್ಡ ಅಸ್ಸೆಸ್ಸಮೆಂಟ್) ಪುಸ್ತಕಕ್ಕೆ ಹೆಚ್ಚು ಒತ್ತು ಕೊಟ್ಟು ಓದಿದರೆ ಅಧಿಕ ಅಂಕ ಗಳಿಸಬಹುದು. ಹಾಗಾಗಿ, ನೀಲನಕ್ಷೆ ಒಂದೇ ಮಾನದಂಡ. ಅದನ್ನು ಬಳಸಿ ಎಸ್ಎಸ್ಎಲ್ಸಿ ಪರೀಕ್ಷೆ ಎಂಬ ಯುದ್ಧದಲ್ಲಿ ಜಯಶಾಲಿ ಆಗಿ ಅಂತಾ ರಾಜ್ಯದ ಎಲ್ಲಾ ಮಕ್ಕಳಿಗೆ ಕಿವಿಮಾತು ಹೇಳಿದರು.
ಇದನ್ನೂ ಓದಿ: ಎಸ್ಎಸ್ಎಲ್ಸಿ ಪರೀಕ್ಷೆಗೆ ತಯಾರಿ ಹೇಗಿರಬೇಕು?: ವಿದ್ಯಾರ್ಥಿಗಳು ಅನುಸರಿಸಬೇಕಾದ ಕೆಲವು ಸಲಹೆಗಳು ಹೀಗಿವೆ

