ETV Bharat / state

ಶಾಲೆಗೆ ಹೋಗಿದ್ದ 5ನೇ ಕ್ಲಾಸ್ ವಿದ್ಯಾರ್ಥಿಗಳು ನಾಪತ್ತೆ: ಸಹಪಾಠಿಯ ಮಾಹಿತಿಯಿಂದ ಗೋವಾದಲ್ಲಿ ಪತ್ತೆ

ಶಾಲೆ ಮುಗಿದ ನಂತರ ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳು ಗೋವಾ ಮಡಗಾಂವ್ ರೈಲು ನಿಲ್ದಾಣದಲ್ಲಿ ಪತ್ತೆಯಾಗಿದ್ದಾರೆ.

KARWAR  UTTARAKANNADA  5ನೇ ಕ್ಲಾಸ್ ವಿದ್ಯಾರ್ಥಿಗಳು ನಾಪತ್ತೆ  ವಿದ್ಯಾರ್ಥಿಗಳು ಪತ್ತೆ STUDENTS MISSING
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Karnataka Team

Published : January 11, 2026 at 7:31 PM IST

2 Min Read
Choose ETV Bharat

ಕಾರವಾರ: ನಗರದ ಖಾಸಗಿ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಶನಿವಾರ ಶಾಲೆ ಮುಗಿದ ನಂತರ ನಾಪತ್ತೆಯಾಗಿ ಆತಂಕಕ್ಕೆ ಕಾರಣವಾಗಿದ್ದ ಘಟನೆ ಕೊನೆಗೂ ಸುಖಾಂತ್ಯ ಕಂಡಿದೆ. ರೈಲ್ವೆ ಪೊಲೀಸರು ಮತ್ತು ಸಹಪಾಠಿಯ ಸಮಯಪ್ರಜ್ಞೆಯಿಂದಾಗಿ ಮಕ್ಕಳು ಈಗ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ.

ಕಾರವಾರ ತಾಲೂಕಿನ ಶಿರವಾಡದ ಐದನೇ ತರಗತಿಯ ಇಬ್ಬರು ವಿದ್ಯಾರ್ಥಿಗಳು ಶಾಲೆ ಮುಗಿದ ನಂತರ ಮನೆಗೆ ಹೋಗುವ ಬದಲು ಸೈಕಲ್‌ನಲ್ಲಿ ರೈಲು ನಿಲ್ದಾಣದತ್ತ ತೆರಳಿದ್ದರು. ರೈಲ್ವೆ ನಿಲ್ದಾಣಕ್ಕೆ ದಾರಿ ಕೇಳುತ್ತಿದ್ದ ಮಕ್ಕಳನ್ನು ಅದೇ ಶಾಲೆಯ ಮತ್ತೊಬ್ಬ ವಿದ್ಯಾರ್ಥಿ ಗಮನಿಸಿ, ತಕ್ಷಣ ಪಾಲಕರಿಗೆ ವಿಷಯ ಮುಟ್ಟಿಸಿದ್ದಾನೆ. ಇದರಿಂದ ಕಾರ್ಯಾಚರಣೆ ನಡೆಸಿ, ಮಕ್ಕಳನ್ನು ಪತ್ತೆ ಹಚ್ಚಲಾಗಿದೆ.

ಮಕ್ಕಳು ಮನೆಗೆ ಬಾರದಿದ್ದಾಗ ವಿದ್ಯಾರ್ಥಿಯ ಮಾಹಿತಿ ಮೇರೆಗೆ ಪಾಲಕರು ಶಿರವಾಡ ರೈಲ್ವೆ ನಿಲ್ದಾಣಕ್ಕೆ ಧಾವಿಸಿದರು. ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಮಕ್ಕಳು ದೆಹಲಿ ಕಡೆಗೆ ಹೋಗುವ ರೈಲು ಹತ್ತಿರುವುದು ಖಚಿತವಾಯಿತು. ತಕ್ಷಣ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿ ಅಲರ್ಟ್ ಘೋಷಿಸಲಾಯಿತು.

ಪರಿಣಾಮಕಾರಿ ಕಾರ್ಯಾಚರಣೆ: ಮಾಹಿತಿ ಸಿಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ರೈಲ್ವೆ ಪೊಲೀಸರು, ಚಲಿಸುತ್ತಿದ್ದ ರೈಲಿನಲ್ಲಿ ತಪಾಸಣೆ ನಡೆಸಿ ಗೋವಾದ ಮಡಗಾಂವ್ ರೈಲ್ವೆ ನಿಲ್ದಾಣದಲ್ಲಿ ಮಕ್ಕಳನ್ನು ಸುರಕ್ಷಿತವಾಗಿ ವಶಕ್ಕೆ ಪಡೆದರು. ಮಕ್ಕಳ ಆರೋಗ್ಯ ತಪಾಸಣೆ ನಡೆಸಿ ಪಾಲಕರಿಗೆ ಹಸ್ತಾಂತರಿಸುವ ಪ್ರಕ್ರಿಯೆ ನಡೆದಿದೆ.

ಸಹಪಾಠಿಯ ಮಾಹಿತಿಯಿಂದ ತಪ್ಪಿದ ಅನಾಹುತ: ಸಹಪಾಠಿಯೊಬ್ಬನ ಸಮಯೋಚಿತ ಎಚ್ಚರಿಕೆ ಮತ್ತು ಪೊಲೀಸರ ಕ್ಷಿಪ್ರ ಕಾರ್ಯಾಚರಣೆಯಿಂದಾಗಿ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.

ಇದನ್ನೂ ಓದಿ: 15 ವರ್ಷದ ಹಿಂದೆ ನಾಪತ್ತೆ; ಸಾಮಾಜಿಕ ಜಾಲತಾಣದ ಮೂಲಕ ಮರಳಿ ಕುಟುಂಬ ಸೇರಿದ ವ್ಯಕ್ತಿ

ರಾಜ್ಯದಲ್ಲಿ ಹೆಚ್ಚುತ್ತಿರುವ ಮಕ್ಕಳ ಅಪಹರಣ ಪ್ರಕರಣಗಳು: ರಾಜ್ಯದಲ್ಲಿ ಕಳೆದ ಕೆಲ ವರ್ಷಗಳಲ್ಲಿ 14 ಸಾವಿರಕ್ಕಿಂತ ಹೆಚ್ಚು ಮಕ್ಕಳು ಅಪಹರಣವಾಗಿದ್ದಾರೆ. ಈ ಪೈಕಿ 1,336 ಮಕ್ಕಳು ಇನ್ನೂ ನಿಗೂಢವಾಗಿದ್ದಾರೆ. ಕಿಡ್ನಾಪ್ ಹಾಗೂ ನಿಗೂಢ ಆದವರ ಪೈಕಿ ಹೆಣ್ಣು ಮಕ್ಕಳೇ ಹೆಚ್ಚಿರುವುದು ಆತಂಕಕಾರಿಯಾಗಿದೆ.

2025ರ ಜುಲೈ ಅಂತ್ಯದ ವೇಳೆಗೆ ರಾಜ್ಯಾದ್ಯಂತ 2,170 ಮಕ್ಕಳು ನಾಪತ್ತೆಯಾಗಿದ್ದರು. ಕಾಣೆಯಾದವರ ಮಕ್ಕಳ ಪೈಕಿ ಬೆಂಗಳೂರು ನಗರ ಮೊದಲ ಸ್ಥಾನದಲ್ಲಿದೆ. ದಾವಣಗೆರೆ, ಉಡುಪಿ, ದಕ್ಷಿಣ ಕನ್ನಡ, ಹಾವೇರಿ, ಚಿತ್ರದುರ್ಗ, ತುಮಕೂರು, ಮೈಸೂರು ನಂತರ ಸ್ಥಾನದಲ್ಲಿವೆ.

2020ರಿಂದ 2025ರವರೆಗೆ ರಾಜ್ಯದಲ್ಲಿ 14,878 ಮಕ್ಕಳು ನಾಪತ್ತೆ ಪ್ರಕರಣ ದಾಖಲಾಗಿದ್ದವು. ಈ ಪೈಕಿ 13,542 ಪ್ರಕರಣಗಳಲ್ಲಿ ಮಕ್ಕಳು ಸುರಕ್ಷಿತವಾಗಿ ಪೋಷಕರನ್ನು ಸೇರಿದ್ದಾರೆ. ಬಾಕಿ 1,336 ಮಕ್ಕಳು ನಿಗೂಢವಾಗಿದ್ದಾರೆ. ಅಪಹರಣಕ್ಕೆ ಒಳಗಾದ 10,792 ಹೆಣ್ಣು ಮಕ್ಕಳ ಪೈಕಿ 1,003 ಕಾಣೆಯಾಗಿದ್ದಾರೆ. 4,086 ಗಂಡು ಮಕ್ಕಳ ಪೈಕಿ 333 ಮಕ್ಕಳು ನಿಗೂಢವಾಗಿದ್ದಾರೆ.