ಶಿವಮೊಗ್ಗ: ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಗಾಜು ಪುಡಿ ಪುಡಿ, ಕಿಡಿಗೇಡಿಗಳ ಕೃತ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ
ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಗಾಜುಗಳನ್ನು ಕಿಡಿಗೇಡಿಗಳಿಬ್ಬರು ಪುಡಿ ಪುಡಿ ಮಾಡಿ ಕಾರನ್ನು ಜಖಂಗೊಳಿಸಿರುವ ಘಟನೆ ಶಿವಮೊಗ್ಗದ ಹಂದಿ ಗೊಲ್ಲರ ಕ್ಯಾಂಪ್ನಲ್ಲಿ ನಡೆದಿದೆ.

Published : March 4, 2026 at 4:01 PM IST
ಶಿವಮೊಗ್ಗ: ಶರಾವತಿ ನಗರದ ಹಂದಿ ಗೊಲ್ಲರ ಕ್ಯಾಂಪ್ನಲ್ಲಿ ತಡರಾತ್ರಿ ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಗಾಜುಗಳನ್ನು ಕಿಡಿಗೇಡಿಗಳಿಬ್ಬರು ಪುಡಿ ಪುಡಿ ಮಾಡಿ ಕಾರನ್ನು ಜಖಂಗೊಳಿಸಿದ್ದಾರೆ. ಕಿಡಿಗೇಡಿಗಳ ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಶರಾವತಿ ನಗರದ ಲೋಕೇಶ್ ಅವರು ಕಳೆದ ನಾಲ್ಕು ತಿಂಗಳ ಹಿಂದಷ್ಟೇ ಹೊಸ ಸ್ವಿಫ್ಟ್ ಕಾರನ್ನು ಖರೀದಿಸಿದ್ದರು. ಲೋಕೇಶ್ ಅವರ ಅಕ್ಕನ ಅನಾರೋಗ್ಯ ಸಂಬಂಧ ಆಗಾಗ್ಗೆ ಮಣಿಪಾಲ್ಗೆ ಹೋಗಬೇಕಾದ ಅನಿವಾರ್ಯತೆಗೆ ಕಾರನ್ನು ಖರೀದಿಸಿದ್ದರು. ತಮ್ಮ ಮನೆಯ ಮುಂದೆ ಒಂದು ಶೆಡ್ ಅನ್ನು ಮಾಡಿ ಅದರಲ್ಲಿ ಮೂರು ಸಿಸಿ ಕ್ಯಾಮರಾಗಳನ್ನು ಅಳವಡಿಸಿದ್ದರು. ಕಿಡಿಗೇಡಿಗಳಿಬ್ಬರು ಹೊಸಮನೆ ಕಡೆಯಿಂದ ಬೈಕ್ನಲ್ಲಿ ಬಂದು ಬೈಕ್ ಅನ್ನು ದೂರದಲ್ಲಿ ನಿಲ್ಲಿಸಿದ್ದು, ಇದರಲ್ಲಿ ಓರ್ವ ಮಾತ್ರ ಕಾರಿನ ಬಳಿ ಬಂದು ಕಬ್ಬಿಣದ ವಸ್ತುವಿಂದ ಕಾರಿನ ಹಿಂದಿನ ಹಾಗೂ ಮುಂದಿನ ಗಾಜನ್ನು ಪುಡಿ ಮಾಡಿದ್ದಾನೆ. ನಂತರ ಕಾರಿನ ಡೋರ್ ಜಖಂ ಮಾಡಿದ್ದಾರೆ. ಕಾರನ್ನು ಜಖಂ ಮಾಡಿದ ನಂತರ ಕಿಡಿಗೇಡಿಗಳು ಪರಾರಿಯಾಗಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ಕಾರಿನ ಮಾಲೀಕರು ಬಂದು ನೋಡಿದಾಗ ಕಾರಿನ ಗಾಜು ಪುಡಿ ಪುಡಿಯಾಗಿತ್ತು. ತಕ್ಷಣ ದೊಡ್ಡಪೇಟೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಸ್ಥಳ ಮಹಜರು ನಡೆಸಿದ್ದಾರೆ. ಕಾರನ್ನು ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಲಾಗಿದೆ. ಈ ಕುರಿತು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಕುರಿತು ಲೋಕೇಶ್ ಮಾತನಾಡಿ, ನಿನ್ನೆ 11:45ರ ಸುಮಾರಿಗೆ ಇಬ್ಬರು ಬೈಕ್ನಲ್ಲಿ ಬಂದಿದ್ದಾರೆ. ಇದರಲ್ಲಿ ಓರ್ವ ಕಾರಿನ ಬಳಿ ಬಂದು ಮಚ್ಚಿನ ರೀತಿಯಲ್ಲಿರುವ ಕಬ್ಬಿಣದ ವಸ್ತುವಿನಿಂದ ಕಾರಿನ ಹಿಂದಿನ ಹಾಗೂ ಮುಂದಿನ ಗಾಜುಗಳನ್ನು ಪುಡಿ ಮಾಡಿದ್ದಾರೆ. ನಮ್ಮ ಕಾರಿನ ಗಾಜು ಪುಡಿ ಪುಡಿ ಮಾಡಿದವನು ಗಾಂಜಾ ಅಮಲಿನಲ್ಲಿ ಮಾಡಿದನೋ ಅಥವಾ ಬೇರೆ ಯಾವ ದೃಷ್ಟಿಯಿಂದ ಮಾಡದನೋ ಗೂತ್ತಿಲ್ಲ. ಆದರೆ ಯಾರೇ ಕಾರಿನ ಗಾಜು ಪುಡಿ ಮಾಡಿ, ಕಾರನ್ನು ಜಖಂ ಮಾಡಿದ್ದರೂ ಅವರನ್ನು ಹಿಡಿದು ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ನಮ್ಮ ಅಕ್ಕನಿಗೆ ಕಾಲು ನೋವಿದೆ. ಇವರನ್ನು ತೋರಿಸಲು ನಾವು ಮಣಿಪಾಲ್ಗೆ ಹೋಗಬೇಕು. ಆದರೆ ಪ್ರತಿ ಸಲ ಬಾಡಿಗೆ ಕಾರು ತೆಗೆದುಕೊಂಡು ಹೋಗಿ ಸುಸ್ತಾದ ಕಾರಣಕ್ಕೆ ನಾವೇ ಒಂದು ಹೊಸ ಕಾರನ್ನು ಕಳೆದ 4 ತಿಂಗಳ ಹಿಂದೆ ಖರೀದಿಸಿದ್ದೆವು. ಆದರೆ ಕಳೆದ ರಾತ್ರಿ ಹೀಗೆ ಕಿಡಿಗೇಡಿಗಳು ಕೃತ್ಯವೆಸಗಿದ್ದಾರೆ. ಕಿಡಿಗೇಡಿಗಳು ಕಾರನ್ನು ಪುಡಿ ಮಾಡುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದನ್ನು ಪಡೆದು ಪೊಲೀಸರು ಸೂಕ್ತ ತನಿಖೆ ನಡೆಸಿ ಕಿಡಿಗೇಡಿಗಳನ್ನು ಬಂಧಿಸಿ ಅವರಿಗೆ ಕಾನೂನು ರೀತಿಯಲ್ಲಿ ಶಿಕ್ಷೆ ಕೊಡಿಸಿಬೇಕು ಎಂದು ಆಗ್ರಹಿಸಿದ್ದಾರೆ. ನಮ್ಮ ಕಾರು ಸುಮಾರು ಎರಡು ಲಕ್ಷ ರೂಪಾಯಿನಷ್ಟು ಡ್ಯಾಮೇಜ್ ಆಗಿದೆ. ಅದನ್ನು ತುಂಬಿ ಕೊಡಬೇಕು. ಅವರಿಗೆ ಭಯನೇ ಇಲ್ಲ, ಹಾಗೆ ಹೊಡೆದು ಹಾಕಿದ್ದಾರೆ. ಇಂದು ಕಾರಿಗೆ ಹೊಡೆದಿದ್ದಾರೆ. ನಾಳೆ ಮನುಷ್ಯನಿಗೆ ಹೊಡೆದ್ರೆ ಏನ್ ಮಾಡೋದು ಅಂತ ಪ್ರಶ್ನಿಸಿದರು.
ನಾಗವೇಣಿ ಮಾತನಾಡಿ, ನಿನ್ನೆ ರಾತ್ರಿ ನಮ್ಮ ಕಾರನ್ನು ಜಖಂ ಮಾಡಿದ್ದಾರೆ. ಅವರು ಬಂದು ಕಾರಿನ ಕಿಟಕಿ ಗಾಜು ಪುಡಿ ಮಾಡಿ, ಕಾರನ್ನು ಜಖಂ ಮಾಡಿ, ಒಂದು ಸೆಕೆಂಡ್ ಸಹ ಅವರು ಇಲ್ಲಿ ನಿಂತಿಲ್ಲ ಪರಾರಿಯಾಗಿದ್ದಾರೆ. ಅವರು ಮುಖಕ್ಕೆ ಮಾಸ್ಕ್ ಹಾಕಿ ಕೊಂಡಿದ್ರು, ಅವರು ಯಾರು ಅಂತ ಗೂತ್ತಾಗಲಿಲ್ಲ. ಇಲ್ಲಿ ಕೆಲ ಕಿಡಿಗೇಡಿಗಳಿಂದ ಹೆಣ್ಮಕ್ಕಳು ಒಬ್ಬರೇ ಓಡಾಡಲು ಆಗುವುದಿಲ್ಲ. ಅಷ್ಟು ಭಯ ಇದೆ. ಬೈಕ್ನಲ್ಲಿ ಜೋರಾಗಿ ಹೋಗುವುದು, ಇದೇ ಮೊದಲ ಬಾರಿ ಇಂತಹ ಘಟನೆ ನಡೆದಿದೆ. ಈ ರೀತಿ ಘಟನೆ ಮುಂದೆ ನಡೆಯಬಾರದು. ಈ ಏರಿಯಾದಲ್ಲಿ ಒಂದು ರೀತಿ ಭಯದ ವಾತಾವರಣ ಉಂಟಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಇವುಗಳನ್ನೂ ಓದಿ:

