ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆಯಲ್ಲಿ ಮಿರ್ಚಿ ಘಮಲು: 20 ದಿನವೂ ದಾಸೋಹ
ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆಯಲ್ಲಿ ಮಿರ್ಚಿ ಖಾದ್ಯ ಮಾಡಲಾಗಿದೆ. ಇಲ್ಲಿಗೆ ಲಕ್ಷಾಂತರ ಭಕ್ತರು ಆಗಮಿಸಿ, ಗವಿಸಿದ್ದೇಶ್ವರನ ಆಶೀರ್ವಾದ ಪಡೆದು ದಾಸೋಹದಲ್ಲಿ ಪ್ರಸಾದ ಸ್ವೀಕರಿಸುತ್ತಾರೆ.

Published : January 6, 2026 at 7:10 PM IST
|Updated : January 6, 2026 at 7:29 PM IST
ಕೊಪ್ಪಳ : ದಕ್ಷಿಣ ಭಾರತದ ಕುಂಭಮೇಳ ಎಂದೇ ಹೆಸರಾದ ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆಯಲ್ಲಿ ದಾಸೋಹಕ್ಕೆ ತನ್ನದೇ ಆದ ಇತಿಹಾಸ, ಪರಂಪರೆ ಇದೆ. ಜಾತ್ರೆಯ ಎರಡೇ ದಿನವಾದ ಇಂದು ಉತ್ತರ ಕರ್ನಾಟಕದ ಫೇಮಸ್ ಖಾದ್ಯ ಮಿರ್ಚಿ ಮಾಡಲಾಗಿದ್ದು, ಜಾತ್ರೆಗೆ ಬಂದ ಲಕ್ಷಾಂತರ ಭಕ್ತರು ಪ್ರಸಾದದಲ್ಲಿ ಮಿರ್ಚಿರುಚಿ ಸವಿದಿದ್ದಾರೆ.
20 ದಿನಗಳ ಕಾಲ ನಿರಂತರ ದಾಸೋಹ : ನಿರಂತರವಾಗಿ ಜಾತ್ರೆಯಲ್ಲಿ 20 ದಿನಗಳ ಕಾಲ ದಾಸೋಹ ನಡೆಯುತ್ತದೆ. ಲಕ್ಷಾಂತರ ಭಕ್ತರು ಗವಿಸಿದ್ದೇಶ್ವರನ ಆಶೀರ್ವಾದ ಪಡೆದು ದಾಸೋಹದಲ್ಲಿ ಪ್ರಸಾದ ಸ್ವೀಕಾರ ಮಾಡುತ್ತಾರೆ. ದಾಸೋಹದಲ್ಲಿ ಜೋಳದ ರೊಟ್ಟಿ, ಮಾದಲಿ, ಜಿಲೆಬಿ, ಕರಚಿಕಾಯಿ ಸೇರಿದಂತೆ ನಾನಾ ಖಾದ್ಯಗಳನ್ನು ಪ್ರಸಾದದ ರೂಪದಲ್ಲಿ ಉಣ ಬಡಿಸಲಾಗುತ್ತದೆ. ಇವೆಲ್ಲವುಗಳನ್ನು ಭಕ್ತರೇ ಶ್ರೀಮಠಕ್ಕೆ ಅರ್ಪಿಸಿರುತ್ತಾರೆ. ನಂತರ ಇವುಗಳನ್ನು ಜಾತ್ರೆಗೆ ಬಂದ ಭಕ್ತರಿಗೆ ನೀಡಲಾಗುತ್ತದೆ.
ಮಿರ್ಚಿ ತಯಾರಿಗೆ ಬೇಕಾದ ವಸ್ತುಗಳ ಲಿಸ್ಟ್ ಹೀಗಿದೆ: ಕೊಪ್ಪಳದ ಸಮಾನ ಮನಸ್ಕರ ಬಳಗ ಮಿರ್ಚಿ ಸಿದ್ದತೆ ಜವಾಬ್ದಾರಿ ಹೊತ್ತುಕೊಂಡಿದ್ದು, ಇವರೊಂದಿಗೆ ಜಾತ್ರೆಗೆ ಭಂದ ಭಕ್ತರು ಕೈಜೋಡಿಸಿದ್ದಾರೆ. ಈ ಬಾರಿ ಮಿರ್ಚಿಗೆ ಸುಮಾರು 25 ಕ್ವಿಂಟಾಲ್ ಹಸಿಹಿಟ್ಟು, 22 ಕ್ವಿಂಟಾಲ್ ಹಸಿ ಮೆಣಸಿನಕಾಯಿ, 25 ಕೆಜಿ ಅಜವಾನ, 25 ಕೆಜಿ ಸೋಡಾಪುಡಿ, 60 ಕೆಜಿ ಉಪ್ಪು, 60 ಸಿಲಿಂಡರ್, 12 ಬ್ಯಾರೆಲ್ ಒಳ್ಳೆಎಣ್ಣೆ ಬಳಕೆ ಮಾಡಿಕೊಂಡು ಮಿರ್ಚಿ ತಯಾರಿಕೆ ಮಾಡುತ್ತಿದ್ದಾರೆ. ಸುಮಾರು 6 ರಿಂದ 8 ಲಕ್ಷ ಖರ್ಚು ಮಾಡಿ ಜಾತ್ರೆಗೆ ಬಂದ ಭಕ್ತರಿಗೆ ಮಿರ್ಚಿಯನ್ನ ಉಣ ಬಡಿಸುತ್ತಿದ್ದಾರೆ.
ದಾಸೋಹದಲ್ಲಿ ಸುಮಾರು 6 ಲಕ್ಷ ಮಿರ್ಚಿ : ಈ ಕುರಿತು ಸಮಾನ ಮನಸ್ಕ ಗೆಳೆಯರ ಬಳಗದ ಸದಸ್ಯ ರಮೇಶ್ ತುಪ್ಪದ ಅವರು ಮಾತನಾಡಿದ್ದು, 'ಕಳೆದ 11 ವರ್ಷಗಳಿಂದ ಸಮಾನ ಮನಸ್ಕರ ಬಳಗದ ತಂಡದಿಂದ ಮಹಾ ದಾಸೋಹದಲ್ಲಿ ಮಿರ್ಚಿಯನ್ನು ಉಣಬಡಿಸುತ್ತಿದ್ದೇವೆ. ಈ ನಿಟ್ಟಿನಲ್ಲಿ ಇಂದು ಸುಮಾರು 6 ಲಕ್ಷ ಮಿರ್ಚಿಯನ್ನು ದಾಸೋಹಕ್ಕೆ ಸಮರ್ಪಿಸುತ್ತಿದ್ದೇವೆ. ಸುಮಾರು 500 ರಿಂದ 600 ಜನರು ಬೆಳಗ್ಗೆ 5:30 ರಿಂದ ರಾತ್ರಿ 10:30 ರವರೆಗೆ ಮಿರ್ಚಿಯನ್ನು ದಾಸೋಹಕ್ಕೆ ಸಮರ್ಪಿಸುತ್ತಿದ್ದೇವೆ' ಎಂದಿದ್ದಾರೆ.
ಆಯೋಜಕರು ಹೇಳುವುದಿಷ್ಟು: 'ಕಳೆದ 11 ವರ್ಷದ ಹಿಂದೆ ಸಣ್ಣದಾಗಿ ಆರಂಭವಾದ ಮಿರ್ಚಿ ದಾಸೋಹ, ಇಂದು ಲಕ್ಷ ಲಕ್ಷ ಮಂದಿಗೆ ತಲುಪುತ್ತಿದೆ. ಯಾರಿಂದಲೂ ಹಣ ಪಡೆಯದೇ, ಸಮಾನ ಮನಸ್ಕರ ತಂಡದ ಸದಸ್ಯರು ಸ್ವಂತ ಹಣ ಹಾಕಿ ಮಿರ್ಚಿಯನ್ನ ಉಣಬಡಿಸುತ್ತಿದ್ದಾರೆ. ಉತ್ತರ ಕರ್ನಾಟಕದಲ್ಲಿ ಮಿರ್ಚಿ ಮಂಡಕ್ಕಿ ಅಂದರೆ ಬಲು ಇಷ್ಟ. ಊಟದಲ್ಲಿ ಮಿರ್ಚಿಯಿಲ್ಲದೇ ಊಟ ಮಾಡೋದು ಇಲ್ಲ. ನಾವು ಏಕೆ ಗವಿ ಮಠದ ಜಾತ್ರೆಯಲ್ಲಿ ಮಿರ್ಚಿ ಕೊಡಬಾರದು ಅನ್ನೋ ಉದ್ದೇಶದಿಂದ ಮಿರ್ಚಿ ದಾಸೋಹ ಸೇವೆಯನ್ನ ಆರಂಭಿಸಿದ್ದೇವೆ' ಎನ್ನುತ್ತಾರೆ ಆಯೋಜಕರು.
ಮಠದ ಭಕ್ತೆ ಮಂಜುಳಾ ಬನ್ನಿಕೊಪ್ಪ ಅವರು ಮಾತನಾಡಿ, 'ನಾವು ಅಜ್ಜನ ಸೇವೆಗೆ ಬರಲು ಪ್ರಾರಂಭಿಸಿ 15 ರಿಂದ 16 ವರ್ಷವಾಯ್ತು. ಮಿರ್ಚಿ ಹಾಕಲು ಪ್ರಾರಂಭಿಸಿ 5 ವರ್ಷವಾಯ್ತು. ಬೆಳಗ್ಗೆ ಇಲ್ಲಿಗೆ ಬಂದಾಗ 10 ಗಂಟೆ ಆಗಿತ್ತು. ಮಿರ್ಚಿ ಮುಗಿಯುವರೆಗೂ ಇರುತ್ತೇವೆ. ಅಜ್ಜರ ಆಶೀರ್ವಾದ ಇದೆ ಎಂದು ಅನಿಸುತ್ತಿದೆ' ಎಂದು ಹೇಳಿದ್ದಾರೆ.
ಕೊಪ್ಪಳದ ಗವಿ ಸಿದ್ದೇಶ್ವರನ ಜಾತ್ರೆಯ ದಾಸೋಹದ ತುಂಬೆಲ್ಲ ಮಿರ್ಚಿ ಘಮಲು ಜೋರಾಗಿದೆ. ಕಳೆದ ಕೆಲ ವರ್ಷಗಳ ಹಿಂದೆ ಅಜ್ಜನ ಜಾತ್ರೆ ಅಂದರೆ ರೊಟ್ಟಿ ಜಾತ್ರೆ ಅಂತಿದ್ರು. ಇದೀಗ ಅಜ್ಜನ ಜಾತ್ರೆಯನ್ನ ಮಿರ್ಚಿ ಜಾತ್ರೆ ಅಂತಲೂ ಕರೆಯುವಂತಾಗಿದೆ.
ಇದನ್ನೂ ಓದಿ : ಲಕ್ಷ ಲಕ್ಷ ಭಕ್ತರ ಮಧ್ಯೆ ಜರುಗಿದ ಗವಿಸಿದ್ದೇಶ್ವರ ಮಹಾರಥೋತ್ಸವ: ಮೇಘಾಲಯ ರಾಜ್ಯಪಾಲರಿಂದ ಚಾಲನೆ

