ETV Bharat / state

ಕಾಲು ಕೆರೆದು ಜಗಳಕ್ಕೆ ಬಂದಿರುವ ಉದ್ದೇಶವೇನು?: ಬಳ್ಳಾರಿಯಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ

ಬಳ್ಳಾರಿಯಲ್ಲಿಂದು ಕೇಂದ್ರ ಸಚಿವ ವಿ.ಸೋಮಣ್ಣ, ವಿಪಕ್ಷ ನಾಯಕ ಆರ್​. ಅಶೋಕ್, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ, ಶಾಸಕ ಜನಾರ್ದನ ರೆಡ್ಡಿ ಹಾಗೂ ಇತರ ನಾಯಕರು ಜಂಟಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದರು.

BALLARI  MINISTER V SOMANNA  ಆರ್​ ಅಶೋಕ್​ ಜನಾರ್ದನ ರೆಡ್ಡಿ
ಕೇಂದ್ರ ಸಚಿವ ವಿ.ಸೋಮಣ್ಣ (ETV Bharat)
author img

By ETV Bharat Karnataka Team

Published : January 4, 2026 at 3:24 PM IST

3 Min Read
Choose ETV Bharat

ಬಳ್ಳಾರಿ: "ಯಾರು ಸತೀಶ್ ರೆಡ್ಡಿ?, ಯಾರು ಭರತ್ ರೆಡ್ಡಿ? ಬಂದು ಸುಮ್ನೆ ಹೋಗ್ಬೇಕಿತ್ತು. ಕಾಲು ಕೆರೆದು ಜಗಳಕ್ಕೆ ಬಂದಿದ್ದೀರಿ, ಇದರ ಉದ್ದೇಶವೇನು?" ಎಂದು ಮಾಧ್ಯಮಗೋಷ್ಠಿಯಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ ಪ್ರಶ್ನಿಸಿದರು.

ಬಳ್ಳಾರಿಯ ಜನಾರ್ದನ ರೆಡ್ಡಿ ನಿವಾಸಕ್ಕೆ ವಿ.ಸೋಮಣ್ಣ ಆಗಮಿಸಿ, ಗಲಾಟೆ ಬಗ್ಗೆ ಜನಾರ್ದನ ರೆಡ್ಡಿ ಅವರಿಂದ ಮಾಹಿತಿ ಪಡೆದರು. ಬಳಿಕ ಬಿಜೆಪಿ ನಾಯಕರ ಜಂಟಿ ಮಾಧ್ಯಮಗೋಷ್ಠಿ ನಡೆಯಿತು.

ಬಳ್ಳಾರಿಯಲ್ಲಿ ಬಿಜೆಪಿ ನಾಯಕರ ಮಾಧ್ಯಮಗೋಷ್ಠಿ (ETV Bharat)

ಮೊದಲು ವಿ.ಸೋಮಣ್ಣ ಮಾತನಾಡಿ, "ಕಾಂಗ್ರೆಸ್​ ಕೆಟ್ಟ ಸಂದೇಶ ನೀಡಲು ಬಳ್ಳಾರಿಯನ್ನು ಊರುಗೋಲು ಮಾಡಿಕೊಂಡಿದ್ದಾರೆ. ಸಿದ್ದರಾಮಯ್ಯ ಅಧಿಕಾರಕ್ಕೆ ಬರಲು ಬಳ್ಳಾರಿ ಜನರೇ ಕಾರಣ. ಜನಾರ್ದನ ರೆಡ್ಡಿಯನ್ನು ಟಾರ್ಗೆಟ್ ಮಾಡಿಕೊಂಡು ಅವರ ಕುಟುಂಬ ನಿರ್ನಾಣ ಮಾಡಲು ಹೊರಟಿದ್ದಾರೆ. ಪಾಪದ ಕೊಡ ಇಲ್ಲಿಂದಲೇ ತುಂಬಿದೆ. ವಾಲ್ಮೀಕಿ ಪುತ್ಥಳಿ ನೆಪವಾಗಿಟ್ಟುಕೊಂಡು ಗಲಾಟೆ ಮಾಡಿದ್ದಾರೆ. ನನ್ನ 45 ವರ್ಷದ ರಾಜಕೀಯ ಇತಿಹಾಸದಲ್ಲಿ ಇಂತಹ ದುರ್ಘಟನೆಯನ್ನು ನೋಡಿಲ್ಲ" ಎಂದರು.

"ಬಳ್ಳಾರಿ ಜನರ ಆಶೀರ್ವಾದ ಪಡೆದ ಕಾಂಗ್ರೆಸ್,​ ಈಗ ಬಳ್ಳಾರಿಯನ್ನು ಮುಗಿಸಲು ಸಂಚು ಹಾಕುತ್ತಿದೆ. ಭರತ್ ರೆಡ್ಡಿ ನೀನು ಚಿಕ್ಕವ, ನಿನಗೆ ತಿಳುವಳಿಕೆ ಬೇಕು. ನನ್ನ ಹತ್ತಿರ ಬಂದರೆ ಟ್ರೈನಿಂಗ್ ಕೊಡುತ್ತೇನೆ. ಈಗಾಗಲೇ ನಾಲ್ಕು ಗನ್ ಮ್ಯಾನ್​ಗಳನ್ನು ಬಂಧಿಸಿದ್ದಾರೆ. ಕಾಂಗ್ರೆಸ್​ ಸರ್ಕಾರ ಸರಿಯಾಗಿ ತನಿಖೆ ನಡೆಸಲಿ. ಅಮಾಯಕ ಸಾವನ್ನಪ್ಪಿದ್ದಾನೆ, ಅದು ನಿಮ್ಮಿಂದಾಗಿದೆ. ಜನಾರ್ದನ ರೆಡ್ಡಿಯನ್ನು ಟಾರ್ಗೆಟ್ ಮಾಡಿದ್ದೀರಿ. ನೀವು ಉದ್ದಾರ ಆಗಲ್ಲ" ಎಂದು ವಾಗ್ದಾಳಿ ನಡೆಸಿದರು.

"ಜನಾರ್ದನ ರೆಡ್ಡಿ ಮೇಲೆ ಗುರಿ ಇಟ್ಟು ಹೋಡೆಯೋಕೆ ಹೋಗಿದ್ದರು. ಆ ಹುಡುಗನ ಮೇಲೆ ಬಿದ್ದಿದೆ. ಸಿಎಂ, ಗೃಹಮಂತ್ರಿಗಳಿಗೆ ಒತ್ತಾಯ ಮಾಡುತ್ತೇನೆ. ಕೂಡಲೇ ತನಿಖೆ ಮಾಡಿ. ಇಲ್ಲವಾದರೆ ಹೈಕೋರ್ಟ್​ ಸಿಟ್ಟಿಂಗ್ ಜಡ್ಜ್ ನೇತೃತ್ವದಲ್ಲಿ ತನಿಖೆ ಮಾಡಿಸಲಿ. ಜನಾರ್ದನ ರೆಡ್ಡಿಗೆ ಝಡ್ ಫ್ಲಸ್ ಭದ್ರತೆ ಚಿಂತನೆ ನಡೆದಿದೆ. ಕೇಂದ್ರ ಗೃಹ ಕಚೇರಿ ಸೂಕ್ಷ್ಮವಾಗಿ ಗಮನಿಸುತ್ತಿದೆ. ಅಗತ್ಯ ಬಿದ್ದಾಗ ಭದ್ರತೆ ನೀಡಲು ಮುಂದಾಗುತ್ತೇವೆ. ಅದಕ್ಕೂ ಮುನ್ನ ಇಲ್ಲಿನ ದೊಂಬರಾಟಕ್ಕೆ ಕಡಿವಾಣ ಬೀಳಬೇಕು. ಗೃಹಮಂತ್ರಿದು ಪಾಪ ಏನೂ ನಡೆಯುತ್ತಿಲ್ಲ, ಅಮಾಯಕರು ಅವರು. ದ್ವೇಷ ಭಾಷಣ ಮಸೂದೆ ಅಡಿಯಲ್ಲಿ ಯಾಕೆ ಇವರನ್ನು ಅರೆಸ್ಟ್ ಮಾಡಿಲ್ಲ?. ಡಿಕೆಶಿ ಅವರೂ ಇಂತಹ ಸಮಯದಲ್ಲಿ ಅವರೊಂದಿಗೆ ನಿಲ್ಲಬಾರದು" ಎಂದರು.

ವಿಪಕ್ಷ ನಾಯಕ ಆರ್​.ಅಶೋಕ್​ ಅವರು ಮಾತನಾಡಿ, "ಹಾಲಿ ಶಾಸಕರ ಹತ್ಯೆಗೆ ಹಾಡಹಗಲೇ ಪ್ರಯತ್ನ ನಡೆದಿದೆ. ಕಾನೂನು ಸುವ್ಯವಸ್ಥೆ ಹಾಳಾಗಿದೆ. ಪೊಲೀಸರೊಂದಿಗೆ ಮಾಫಿಯಾ ಸೇರಿಕೊಂಡಿದೆ. ಡಿವೈಎಸ್ಪಿ ಬೆಂಗಾವಲಿನಿಂದ ಶಾಸಕರ ಮೇಲೆ ದಾಳಿಗೆ ಯತ್ನಿಸಿದ್ದಾರೆ. ಬೆಂಗಳೂರಲ್ಲಿ ಕೋಟ್ಯಂತರ ರೂ. ದರೋಡೆಗೆ ಯತ್ನಿಸಿದ್ದು ನೋಡಿದ್ದೆ‌. ಈಗ ಇಲ್ಲಿ ಹತ್ಯೆಗೆ ದಾಳಿ ನಡೆದಿದೆ. ಇಷ್ಟಾದರೂ ಸರ್ಕಾರ ಗನ್‌ಗಳನ್ನು ಮಾತ್ರ ವಶಪಡಿಸಿಕೊಂಡಿದೆ. ಜನಾರ್ದನರೆಡ್ಡಿ ಕೊಲೆಗೆ ಸಂಚು ರೂಪಿಸಿದ್ದಾರೆ" ಎಂದು ಆರೋಪಿಸಿದರು.

"ಬಳ್ಳಾರಿ ರಿಪಬ್ಲಿಕ್ ಎಂದಿರಿ, ಈಗ ಗುಂಡಿನ ರಿಪಬ್ಲಿಕ್ ಮಾಡಿದ್ದೀರಿ. ಇದು ಕಾಂಗ್ರೆಸ್ ಸಂಸ್ಕೃತಿ. ಡ್ರಗ್ಸ್ ಮಾಫಿಯಾ, ದರೋಡೆ ಇವೆಲ್ಲದರರ ನಡುವೆ ಶಾಸಕರ ಮೇಲೆ ಪ್ರೈವೇಟ್ ಗನ್ ಮ್ಯಾನ್ ದಾಳಿಯಾಗಿದೆ. ಇದು ಕಾಂಗ್ರೆಸ್​ಗೆ ತಿರುಗುಬಾಣವಾಗಲಿದೆ. ಇಲ್ಲಿನ ಪೊಲೀಸರ ಮೇಲೆ ನಂಬಿಕೆಯಿಲ್ಲ. ಸಿಬಿಐ ಅಥವಾ ನ್ಯಾಯಾಂಗ ತನಿಖೆಗೆ ವಹಿಸಿ. ಜ.5.ರಂದು ಬೆಂಗಳೂರಿನಲ್ಲಿ ಕೋಗಿಲು ಲೇಔಟ್ ಹಾಗೂ ಈ ಪ್ರಕರಣದ ತನಿಖೆಗಾಗಿ ಹೋರಾಟ ನಡೆಸಲಾಗುವುದು. ರಾಜ್ಯದಲ್ಲಿ ಗುಪ್ತಚಾರ ಇಲಾಖೆ ಸತ್ತು ಹೋಗಿದೆ. ಬಿಜೆಪಿ ರಾಮನ ಭಕ್ತರು. ವಾಲ್ಮೀಕಿ ರಾಮಾಯಣ ಬರೆದಿದ್ದಾರೆ. ಕಾಂಗ್ರೆಸ್‌ಗೆ ರಾಮನ ಕಂಡರೆ ಆಗಲ್ಲ" ಎಂದು ವಾಗ್ದಾಳಿ ನಡೆಸಿದರು.

ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಅವರು ಮಾತನಾಡಿ, "ಕಾಂಗ್ರೆಸ್​ ನಾಟಕ ಕಂಪನಿಯ ಚೇರ್‌ಮನ್ ಡಿಸಿಎಂ ಡಿ.ಕೆ.ಶಿವಕುಮಾರ್. ಗೃಹ ಸಚಿವರು ಪಾರ್ಟ್ ಟೈಂ ಮಂತ್ರಿಯಾಗಿದ್ದಾರೆ. ಉಳಿದ ಶಾಸಕರು ಹಾಗೂ ಸಚಿವರು ಗೃಹ ಮಂತ್ರಿಯಾಗಿದ್ದಾರೆ. ಕಾಂಗ್ರೆಸ್ ಪಕ್ಷ ನೈತಿಕತೆಯಿದ್ದರೆ ಶಾಸಕನನ್ನು ವಜಾಗೊಳಿಸಲಿ. ಕರ್ನಾಟಕ ರಾಜ್ಯ ಗಂಧದ ನಾಡಿನಿಂದ, ಗಾಂಜಾ ಬೀಡಾಗಿ ಮಾರ್ಪಟ್ಟಿದೆ. ಕೆಪಿಸಿಸಿಯ ಸತ್ಯ ಶೋಧನಾ ಸಮಿತಿ, ಸತ್ಯ ಮುಚ್ಚಿಡುವ ಶೋಧ ಸಮಿತಿಯಾಗಿದೆ. ಗುಂಡು ಹೊಡೆಯವುದು ಸಿನಿಮಾದಲ್ಲಿ ನೋಡಿದ್ದೆ. ನೇರವಾಗಿ ನೋಡಬೇಕು ಎಂದರೆ ಬಳ್ಳಾರಿಗೆ ಬರಬೇಕು. ಈ ಎಲ್ಲ ಹೊಣೆಗಾರಿಕೆ ಹೊತ್ತು ಶಾಸಕರನ್ನು ಬಂಧಿಸಬೇಕು" ಎಂದು ಕಿಡಿಕಾರಿದರು.

ಶಾಸಕ ಜನಾರ್ದನ ರೆಡ್ಡಿ ಅವರು ಮಾತನಾಡಿ, "ಕಾರ್ಯಕ್ರಮ ಸಿದ್ಧತೆಗಾಗಿ ಭರತ್ ರೆಡ್ಡಿ ತಮ್ಮ‌ ಪ್ಯಾಮಿಲಿ ಭದ್ರತೆಗಾಗಿ ಖಾಸಗಿ ಗನ್​ಮ್ಯಾನ್​ಗಳನ್ನು ಇಟ್ಟುಕೊಂಡಿದ್ದಾರೆ. ಅವರ ಗನ್‌ಮ್ಯಾನ್​ಗಳನ್ನು ಸತೀಶ್ ರೆಡ್ಡಿ ಇಟ್ಕೊಂಡಿದ್ದರು. ಗುಂಡು ಹಾರಿಸಿದ್ದು ಅವರ ಕಡೆಯವರೇ. ಹಾಗಾಗಿ ಭರತ್ ರೆಡ್ಡಿಯನ್ನು ಅರೆಸ್ಟ್ ಮಾಡಬೇಕು" ಎಂದು ಆಗ್ರಹಿಸಿದರು.

ಇದನ್ನೂ ಓದಿ: ಹತ್ಯೆ ಸಂಚು ಆರೋಪ: 'Z' ಶ್ರೇಣಿಯ ಭದ್ರತೆ ಕೋರಿ ಜನಾರ್ದನ್​ ರೆಡ್ಡಿಯಿಂದ ಸಿಎಂ, ಅಮಿತ್ ಶಾ, ಪರಮೇಶ್ವರ್, ಡಿಜಿಐಜಿಪಿಗೆ ಪತ್ರ