ಸಿಎಂ ಸಿದ್ದರಾಮಯ್ಯ ರಾಜೀನಾಮೆ; ಅಳುತ್ತಲೇ ತೆರಳಿದ ಸಚಿವ ಸಂತೋಷ್ ಲಾಡ್
ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಕ್ಕೆ ಸಚಿವ ಸಂತೋಷ್ ಲಾಡ್ ಅಳುತ್ತಲೇ ಮಾಧ್ಯಮಕ್ಕೆ ಪ್ರತಿಕ್ರಿಯಿಸದೆ, ಕಾವೇರಿ ನಿವಾಸದಿಂದ ತೆರಳಿದರು.

Published : May 28, 2026 at 1:42 PM IST
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆ ಘೋಷಣೆಯಿಂದ ಭಾವುಕರಾದ ಸಚಿವ ಸಂತೋಷ್ ಲಾಡ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಸದೆ ಕಾರಿನಲ್ಲಿ ಅಳುತ್ತಲೇ ತೆರಳಿದರು.
ಇಂದು ಬೆಳಗ್ಗೆ ಸರ್ಕಾರಿ ನಿವಾಸ ಕಾವೇರಿಯಲ್ಲಿ ಉಪಹಾರ ಸಭೆಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದರು. ಎರಡೂವರೆ ತಾಸು ನಡೆದ ಉಪಹಾರ ಕೂಟದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್, ಗೃಹಸಚಿವ ಜಿ.ಪರಮೇಶ್ವರ್, ಸಚಿವರಾದ ಎಂ.ಸಿ. ಸುಧಾಕರ್, ಬೈರತಿ ಸುರೇಶ್, ಸಂತೋಷ್ ಲಾಡ್, ಸಚಿವ ರಾಮಲಿಂಗ ರೆಡ್ಡಿ ಸೇರಿದಂತೆ ಇತರರು ಭಾಗವಹಿಸಿದ್ದರು. ಈ ವೇಳೆ ಸಿಎಂ ಸಿದ್ದರಾಮಯ್ಯ ಸಚಿವರುಗಳನ್ನು ಉದ್ದೇಶಿಸಿ ವಿದಾಯದ ಭಾಷಣ ಮಾಡಿದರು ಈ ವೇಳೆಯೂ ಸಚಿವ ಲಾಡ್ ಭಾವುಕರಾಗಿ ಕಣ್ಣೀರು ಹಾಕುತ್ತಿರುವುದು ಕಂಡುಬಂತು. ಸಚಿವ ಲಾಡ್ ಅಲ್ಲದೆ ಬ್ರೇಕ್ ಫಾಸ್ಟ್ ಮೀಟಿಂಗ್ ಮುಗಿಸಿ ಉಳಿದೆಲ್ಲ ಸಚಿವರು ವಾಪಸ್ ತೆರಳಿದರು.
ಗುತ್ತಿಗೆ ನೌಕರರಿಂದ ಕಣ್ಣೀರು: ಸಿಎಂ ಸ್ಥಾನಕ್ಕೆ ರಾಜೀನಾಮೆ ಘೋಷಣೆಗೂ ಮುನ್ನ ಬುಧವಾರ ಸಂಜೆ ಕುಮಾರಕೃಪಾ ರಸ್ತೆಯಲ್ಲಿರುವ ಸಿಎಂ ಅಧಿಕೃತ ನಿವಾಸ ಕಾವೇರಿ ಮುಂದೆ ಸೇರಿದ್ದ ನೂರಾರು ಅಭಿಮಾನಿಗಳು, ಕಾಂಗ್ರೆಸ್ ಹೈಕಮಾಂಡ್ ವಿರುದ್ದ ಘೋಷಣೆಗಳನ್ನು ಕೂಗಿದ್ದರಲ್ಲದೇ, 'ರಾಜೀನಾಮೆ ಕೊಡಬೇಡಿ ಸರ್'- ಎಂದು ಗುತ್ತಿಗೆ ನೌಕರರು ಕಣ್ಣೀರಿಟ್ಟರು.
3 ಗಂಟೆಗೆ ಸಿಎಂ ರಾಜೀನಾಮೆ: ಇನ್ನು ಇಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಸಿದ್ದರಾಮಯ್ಯ ರಾಜಭವನಕ್ಕೆ ತೆರಳಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಸಚಿವರೊಂದಿಗೆ ನಡೆದ ಉಪಹಾರ ಸಭೆಯಲ್ಲಿ ಸಿದ್ದರಾಮಯ್ಯ ಈ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಿಎಂ ಕೃತಜ್ಞತೆ: ನಾನು ಮಧ್ಯಾಹ್ನ ಲೋಕಭವನಕ್ಕೆ ತೆರಳಿ ರಾಜೀನಾಮೆ ನೀಡುತ್ತೇನೆ. ಕಳೆದ ಮೂರು ವರ್ಷ ನನ್ನ ನೇತೃತ್ವದಲ್ಲಿ ನಡೆಸಿದ ಆಡಳಿತಕ್ಕೆ ನೀವೆಲ್ಲರೂ ಸಹಕಾರ ನೀಡಿದ್ದೀರಿ. ಸಹಕಾರ ನೀಡಿದ್ದಕ್ಕೆ ನಿಮಗೆ ಕೃತಜ್ಞತೆಗಳನ್ನು ತಿಳಿಸಿದ್ದಾರೆ. ಜತೆಗೆ ನಾನು ಎರಡು ವರ್ಷ ಶಾಸಕನಾಗಿ ನಿಮ್ಮ ಜೊತೆಗೇ ಇರುತ್ತೇನೆ. ಹೈಕಮಾಂಡ್ ಡಿ. ಕೆ. ಶಿವಕುಮಾರ್ ಮುಂದಿನ ಸಿಎಂ ಅಂತ ಹೇಳಿದೆ. ಅದನ್ನು ನಿಮ್ಮ ಮುಂದೆ ಹೇಳುತ್ತಿದ್ದೇನೆ. ನಾನು ಇನ್ನೂ ರಾಜಕೀಯದಲ್ಲಿ ಸಕ್ರಿಯವಾಗಿಯೇ ಇರುತ್ತೇನೆ. 2028ರಲ್ಲೂ ಪಕ್ಷವನ್ನು ಅಧಿಕಾರಕ್ಕೆ ತರೋಣ. ನಾವೆಲ್ಲರೂ ಸೇರಿ ಕೆಲಸ ಮಾಡೋಣ ಎಂದು ವಿನಂತಿಸಿದರು.
ಒಗ್ಗಟ್ಟೇ ನಮ್ಮ ಶಕ್ತಿ ಎಂದ ಕಾಂಗ್ರೆಸ್: ಅಂದು, ಇಂದು, ಎಂದೆಂದೂ... ಒಗ್ಗಟ್ಟೇ ನಮ್ಮ ಶಕ್ತಿ! ಎಂದೆಂದಿಗೂ ಜನಸೇವೆಯೇ ನಮ್ಮ ಬದ್ಧತೆ! ಎಂದು ಕರ್ನಾಟಕ ಕಾಂಗ್ರೆಸ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ.

