ಸಂಪುಟದಲ್ಲಿ ತೀರ್ಮಾನಿಸಿದ್ದರೂ ಒಳಮೀಸಲಾತಿ ಇಲ್ಲದೇ ನೇಮಕಾತಿ ಆದೇಶ ಹೊರಡಿಸಿರುವುದರಿಂದ ಆಘಾತವಾಗಿದೆ: ಸಚಿವ ಕೆ.ಹೆಚ್.ಮುನಿಯಪ್ಪ
ಸಂಪುಟ ಸಭೆಯಲ್ಲಿ ತೀರ್ಮಾನಿಸಿದ್ದರೂ ಒಳಮೀಸಲಾತಿ ಇಲ್ಲದೇ ನೇಮಕಾತಿ ಆದೇಶ ಹೊರಡಿಸಿರುವುದರಿಂದ ಆಘಾತವಾಗಿದೆ ಎಂದು ಸಚಿವ ಕೆ.ಹೆಚ್.ಮುನಿಯಪ್ಪ ಬೇಸರ ವ್ಯಕ್ತಪಡಿಸಿದರು.

Published : March 3, 2026 at 8:12 PM IST
ಬೆಂಗಳೂರು: ಮಾ.5ರಂದು ನಡೆಯುವ ಸಂಪುಟ ಸಭೆಯಲ್ಲಿ ಒಳಮೀಸಲಾತಿಯೊಂದಿಗೆ ನೇಮಕಾತಿ ಆದೇಶ ಹೊರಡಿಸುವ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವ ಕೆ.ಹೆಚ್.ಮುನಿಯಪ್ಪ ತಿಳಿಸಿದರು.
ಖಾಸಗಿ ಹೊಟೇಲ್ನಲ್ಲಿ ಸಚಿವ ಆರ್.ಬಿ.ತಿಮ್ಮಾಪುರ, ಸಮುದಾಯದ ನಾಯಕರ ಜೊತೆಗೂಡಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಅವರು, 35-40 ವರ್ಷದ ಹೋರಾಟ ಇದಾಗಿದೆ. ಸರ್ಕಾರ ಸುಪ್ರೀಂ ಕೋರ್ಟ್ ತೀರ್ಮಾನದಿಂದಾಗಿ ಒಳಮೀಸಲಾತಿ ಕಲ್ಪಿಸಲು ಮುಂದಾಗಿದೆ. ಒಳಮೀಸಲಾತಿ ವರದಿ ಬಂದ ಬಳಿಕ ಎಸ್‌ಸಿ, ಎಸ್‌ಟಿ ವಿಭಾಗದ ನಾಯಕರು ಅಧ್ಯಯನ ಮಾಡಿ ಸಮ್ಮತಕ್ಕೆ ಬಂದಿದ್ದೆವು.ಶೇ17ರಷ್ಟು ಎಸ್‌ಸಿ ಮೀಸಲಾತಿಯಲ್ಲಿ 6:6:5 ರಂತೆ ವರ್ಗೀಕರಣ ಮಾಡಲು ತೀರ್ಮಾನ ಆಯಿತು. ಈ ಸಂಬಂಧ ರಾಜ್ಯಪಾಲರು ಮಸೂದೆಗೆ ಅಂಕಿತ ಹಾಕಿದ್ದಾರೆ. ಫೆ.26ರ ಸಚಿವ ಸಂಪುಟ ಸಭೆಯಲ್ಲಿ ಧಾರವಾಡದಲ್ಲಿ ಜನರಲ್ ಅಭ್ಯರ್ಥಿಗಳು ನೇಮಕಾತಿ ಮಾಡುವಂತೆ ಹೋರಾಟ ಮಾಡಿರುವ ಬಗ್ಗೆ ಚರ್ಚಿಸಲಾಯಿತು. ಈ ಸಂಬಂಧ ಸಿಎಂ ಸಿದ್ದರಾಮಯ್ಯ ಎಸ್‌ಸಿ, ಎಸ್‌ಟಿ ಸಭೆ ನಡೆಸಿದರು. ನೇಮಕಾತಿ ಆರಂಭಿಸುವಂತೆ ಆ ಸಭೆಯಲ್ಲಿ ತೀರ್ಮಾನಿಸಲಾಯಿತು. ಆಗ ನಾವು ಒಳಮೀಸಲಾತಿ ಅಳವಡಿಸಿ ನೇಮಕಾತಿ ಮಾಡಿವಂತೆ ಬೇಡಿಕೆ ಇಟ್ಟಿದ್ದೆವು. ಕೋರ್ಟ್ನಲ್ಲಿ ಶೇ 50ರಷ್ಟು ಮಿತಿ ಇರುವುದರಿಂದ ಎಸ್‌ಸಿ ಮೀಸಲಾತಿಯನ್ನು ಶೇ 17ರ ಬದಲು ಶೇ15ಕ್ಕೆ ಇಳಿಸಲು ಸಮ್ಮತಿಸಲಾಯಿತು. ನೇಮಕಾತಿಯಲ್ಲಿ ಒಳಮೀಸಲಾತಿ ಸೇರ್ಪಡೆಗೊಳಿಸಬೇಕು ಎಂದು ಮನವಿ ಮಾಡಿದ್ದೆವು ಎಂದು ವಿವರಿಸಿದರು.
ಆದೇಶದಿಂದ ನಮಗೆ ಆಘಾತವಾಗಿದೆ: ಸಂಪುಟ ಸಭೆಯಲ್ಲಿ ನೇಮಕಾತಿ ಪ್ರಕ್ರಿಯೆ ಆರಂಭಿಸಿದಾಗ ಕೋರ್ಟ್ನಲ್ಲಿ ಸ್ಟೇ ಆದರೆ ಸಾಮಾನ್ಯ ವರ್ಗದವರಿಗೆ ಗೊಂದಲ ಆಗಲಿದೆ ಎಂದು ಅಭಿಪ್ರಾಯ ವ್ಯಕ್ತವಾಯಿತು. ಸಂಪುಟ ಸಭೆಯಲ್ಲಿ ಕೋರ್ಟ್ ಆದೇಶಕ್ಕೆ ಒಳಪಟ್ಟು ಒಳಮೀಸಲಾತಿಯೊಂದಿಗೆ ನೇಮಕಾತಿ ಮಾಡಲು ಒತ್ತಾಯಿಸಿದ್ದೆವು. ಆದರೆ, ಕಾರಣಾಂತರದಿಂದ ಅದು ಆಗಲಿಲ್ಲ. ಒಳಮೀಸಲಾತಿ ಬಿಟ್ಟು ನೇಮಕಾತಿ ಮಾಡುವ ಸಂಬಂಧ ಆದೇಶ ಹೊರಡಿಸಲಾಗಿದೆ. ಈ ಆದೇಶದಿಂದ ನಮಗೆ ಆಘಾತವಾಗಿದೆ. ಸರ್ಕಾರ ತೆಗೆದುಕೊಂಡ ತೀರ್ಮಾನವನ್ನು ರಿವರ್ಸ್ ಆಗುವ ತೀರ್ಮಾನ ಆಯಿತಲ್ಲ ಎಂಬ ಬಗ್ಗೆ ನಮಗೆ ಬೇಸರ ಇದೆ ಎಂದು ವಿಷಾದಿಸಿದರು.
ನೇಮಕಾತಿ ಪ್ರಕ್ರಿಯೆ ನಡೆಯಲಿ ಎಂದು ಕೋರ್ಟ್ ಹೇಳಿತ್ತು. ಅಲೆಮಾರಿ ಸಮುದಾಯಕ್ಕೆ ಶೇ1ರಷ್ಟು ಮೀಸಲಾತಿ ಸಂಬಂಧ ಆಮೇಲೆ ತೀರ್ಮಾನ ಕೈಗೊಳ್ಳಲಾಗುವುದು ಎಂದಿತ್ತು. ಈ ಸಂಬಂಧ ಎಜಿಯವರನ್ನು ಭೇಟಿ ಮಾಡಿದ್ದೇವೆ. ಒಳಮೀಸಲಾತಿ ಅನುಷ್ಠಾನಕ್ಕೆ ಯಾವುದೇ ತಕರಾರಿಲ್ಲ ಎಂದಿದ್ದಾರೆ. ಮುಂದಿನ ಸಂಪುಟ ಸಭೆಯಲ್ಲಿ ಆದೇಶ ಪರಿಷ್ಕರಣೆ ಮಾಡಿ ತೀರ್ಮಾನಿಸುವುದಾಗಿ ಸಿಎಂ ಭರವಸೆ ನೀಡಿದ್ದಾರೆ. ಈಗ ಮಾ.5ರಂದು ನಡೆಯುವ ಸಂಪುಟ ಸಭೆಯಲ್ಲಿ ಈ ವಿಚಾರದ ಬಗ್ಗೆ ಚರ್ಚಿಸಿ ತೀರ್ಮಾನಿಸಲು ನಿರ್ಧರಿಸಲಾಗಿದೆ. ಶೇ 15ರಷ್ಟು ಮೀಸಲಾತಿಯೊಳಗೆ ವರ್ಗೀಕರಣ ಮಾಡಿ ಒಳಮೀಸಲಾತಿ ಕೊಡಲು ನಿರ್ಧರಿಸಲಾಗುವುದು. ಅದಕ್ಕನುಗುಣವಾಗಿ ಯಾವ ಪ್ರಮಾಣದಲ್ಲಿ ವರ್ಗೀಕರಣ ಪರಿಷ್ಕರಣೆ ಮಾಡಲಾಗುವುದು ಎಂಬ ಬಗ್ಗೆ ಸಚಿವ ಸಂಪುಟ ತೀರ್ಮಾನಿಸಲಿದೆ ಎಂದರು.
ಮಾದಿಗ ಸಮುದಾಯದ ಸಂಘಟನೆಗಳಿಗೆ ಮನವಿ ಮಾಡುತ್ತೇವೆ. ಯಾವುದೇ ಕಾರಣಕ್ಕೂ ಗೊಂದಲ ಉಂಟು ಮಾಡಬೇಡಿ. ಹೋರಾಟ ಮಾಡುವ ಅಗತ್ಯ ಇಲ್ಲ. ಈ ಬಗ್ಗೆ ಸರ್ಕಾರ ಆದಷ್ಟು ಬೇಗ ತೀರ್ಮಾನ ಕೈಗೊಳ್ಳುತ್ತೇವೆ. ಯಾವುದೇ ಅನುಮಾನ ಬೇಡ. ಕಾಂಗ್ರೆಸ್ ಸರ್ಕಾರ ಈ ಬಗ್ಗೆ ದಿಟ್ಟ ನಿರ್ಧಾರ ಕೈಗೊಳ್ಳಲಿದೆ. ಸರ್ಕಾರ ಈ ಬಗ್ಗೆ ಕಂಕಣ ಬದ್ಧವಾಗಿದೆ ಎಂದು ಅವರು ಭರವಸೆ ನೀಡಿದರು.
ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನದ ವಿಶ್ವಾಸ: ಸಚಿವ ಆರ್.ಬಿ.ತಿಮ್ಮಾಪುರ ಮಾತನಾಡಿ, ಪ್ರಣಾಳಿಕೆಯಲ್ಲಿ ಒಳಮೀಸಲಾತಿ ಕೊಡುವುದಾಗಿ ಭರವಸೆ ನೀಡಿದ್ದೆವು. ಅದರಂತೆ ಕಾನೂನು ರಚಿಸಿ ವಿಧಾನಸಭೆಯಲ್ಲಿ ಸರ್ವಾನುಮತದಿಂದ ಅಂಗೀಕಾರ ಆಯಿತು. ಮೊನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ ನೇಮಕಾತಿ ಆರಂಭಿಸುವ ಬಗ್ಗೆ ತೀರ್ಮಾನ ಆಯಿತು. ಆದರೆ, ನೇಮಕಾತಿ ಆದೇಶದಲ್ಲಿ ಒಳಮೀಸಲಾತಿ ಅಂಶ ಇದ್ದಿಲ್ಲ. ಈ ಬಗ್ಗೆ ಗೊಂದಲ ನಿವಾರಣೆ ಬಗ್ಗೆ ಚರ್ಚಿಸಿ ತೀರ್ಮಾನಿಸೋಣ ಎಂದು ಸಿಎಂ ಭರವಸೆ ನೀಡಿದ್ದಾರೆ. ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಆಗಲಿದೆ ಎಂಬ ಭರವಸೆ ಇದೆ. ಸಮುದಾಯದವರು ಗಲಾಟೆ ಮಾಡುವುದು, ಗೊಂದಲ ಸೃಷ್ಟಿಸುವುದು ಬೇಡ. ಸರ್ಕಾರ ಸಮುದಾಯದ ಪರವಾಗಿ ತೀರ್ಮಾನ ಕೈಗೊಳ್ಳಲಿದೆ ಎಂದರು.
ಮಾಜಿ ಸಂಸದ ಎನ್.ಹನುಮಂತಯ್ಯ ಮಾತನಾಡಿ, ಯಾವುದೇ ಕಾರಣಕ್ಕೂ ಒಳಮೀಸಲಾತಿ ಕಲ್ಪಿಸದೇ ನೇಮಕಾತಿ ಆಗಬಾರದೆಂಬುದು ನಮ್ಮ ಆಗ್ರಹ. ಎಜಿಯವರು ಶೇ 15ರಲ್ಲಿ ಒಳಮೀಸಲಾತಿ ನೀಡಲು ಯಾವುದೇ ಸಮಸ್ಯೆ ಇಲ್ಲ ಅಂದಿದ್ದಾರೆ. 15ರಲ್ಲಿ ಒಳಮೀಸಲಾತಿ ಜಾರಿ ಮಾಡಿ ನೇಮಕಾತಿ ಮಾಡಬೇಕು ಎಂಬು ನಮ್ಮ ಆಗ್ರಹವಾಗಿದೆ ಎಂದರು.
ಮಾಜಿ ಸಚಿವ ಹೆಚ್.ಆಂಜನೇಯ ಮಾತನಾಡಿ, ಫೆ.26 ನಡೆದ ಸಂಪುಟ ಸಭೆಯಲ್ಲಿ ನೇಮಕಾತಿ ಮಾಡಲು ತೀರ್ಮಾನ ಮಾಡಲಾಗಿದೆ. ಆದರೆ, ನೇಮಕಾತಿ ಆದೇಶ ದುರದೃಷ್ಟಕರವಾಗಿದೆ. ಚುನಾವಣಾ ಪ್ರಣಾಳಿಕೆಯಲ್ಲಿ ನೀವೇ ಭರವಸೆ ನೀಡಿದ್ದೀರಿ. ಶಾಸನಬದ್ಧವಾಗಿ ಒಳಮೀಸಲಾತಿ ಅನುಷ್ಠಾನ ಆಗಿದೆ. ಈಗ ದಿಢೀರ್ ಶೇ56ಕ್ಕೆ ಮೀಸಲಾತಿ ಮಾಡಲು ಆಗಲ್ಲ ಎಂದಿದ್ದಾರೆ. ಧಾರವಾಡದಲ್ಲಿ ನಡೆದ ಪ್ರತಿಭಟನೆ ಹಿನ್ನೆಲೆ ಒಳ ಮೀಸಲಾತಿ ವರ್ಗೀಕರಣ ಇಲ್ಲದೇ ಶೇ 50ರಷ್ಟು ಮೀಸಲಾತಿ ಮಿತಿಯಲ್ಲಿ ನೇಮಕಾತಿ ಮಾಡಲು ಆದೇಶ ಹೊರಡಿಸಲಾಗಿದೆ. ಈಗ ನಮಗೆ ಅನ್ಯಾಯವಾಗಿದೆ. ನಮಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: ನೇಮಕಾತಿಯಲ್ಲಿ ಜನಸಂಖ್ಯೆಗೆ ತಕ್ಕಂತೆ ಎಸ್‌ಸಿ, ಎಸ್‌ಟಿ ಮೀಸಲಾತಿ ನೀಡಿ: ವಿ.ಎಸ್. ಉಗ್ರಪ್ಪ

