ETV Bharat / state

ಬೆಳ್ಳಂಬೆಳಗ್ಗೆ 5.30ಕ್ಕೆ ತೆರಳಿ ಕಸ ಸಂಗ್ರಹ, ಪೌರ ಕಾರ್ಮಿಕರ ಕಾರ್ಯನಿರ್ವಹಣೆ ಪರಿಶೀಲಿಸಿದ ಸಚಿವ ಕೃಷ್ಣ ಬೈರೇಗೌಡ

ಬೆಂಗಳೂರು ಸ್ವಚ್ಛತಾ ಅಭಿಯಾನ ಕೈಗೊಂಡಿರುವ ಸಚಿವ ಕೃಷ್ಣಬೈರೇಗೌಡ ಅವರು ಮಂಗಳವಾರ ಬೆಳಗ್ಗೆ 5.30 ಕ್ಕೆ ತೆರಳಿ ಕಸ ಸಂಗ್ರಹಣೆ ವಿಧಾನವನ್ನು ಪರಿಶೀಲಿಸಿದರು.

GARBAGE COLLECTION
ಮಲ್ಲಸಂದ್ರ ವಾರ್ಡ್​​ಗೆ ಭೇಟಿ ನೀಡಿದ ಸಚಿವ ಕೃಷ್ಣಬೈರೇಗೌಡ, ಅಧಿಕಾರಿಗಳು. (ETV Bharat)
author img

By ETV Bharat Karnataka Team

Published : September 1, 2026 at 8:33 PM IST

2 Min Read
Choose ETV Bharat

ಬೆಂಗಳೂರು: ಬೆಂಗಳೂರು ನಗರವನ್ನು ಇನ್ನಿಲ್ಲದಂತೆ ಕಾಡುತ್ತಿರುವ ಕಸ, ಫುಟ್​ಪಾತ್​ ಒತ್ತುವರಿ, ವಾಹನ ನಿಲುಗಡೆ ಸ್ಥಳ ಸೇರಿದಂತೆ ಹಲವು ಸಮಸ್ಯೆಗಳ ವಿರುದ್ಧ ಸಮರ ಸಾರಿರುವ ಸಚಿವ ಕೃಷ್ಣ ಬೈರೇಗೌಡ ಅವರು, ಇಂದು ಘನತ್ಯಾಜ್ಯ ನಿರ್ವಹಣಾ ಕಾರ್ಯಗಳ ಕುರಿತು ದಿಢೀರ್ ತಪಾಸಣೆ ನಡೆಸಿದರು.

ಇಂದು ಬೆಳ್ಳಂಬೆಳಗ್ಗೆ 5.30 ಗಂಟೆಗೆ ಬೆಂಗಳೂರು ಉತ್ತರ ಮಹಾನಗರ ಪಾಲಿಕೆ ವ್ಯಾಪ್ತಿಗೆ ಬರುವ ದಾಸರಹಳ್ಳಿ ವಿಭಾಗದ ಮಲ್ಲಸಂದ್ರ ವಾರ್ಡ್​​ನಲ್ಲಿರುವ ಆಟೋ ಮಸ್ಟರಿಂಗ್​ ಪಾಯಿಂಟ್​ಗೆ ಭೇಟಿ ನೀಡಿದ ಅವರು, ಅಲ್ಲಿನ ಕಸ ಸಂಗ್ರಹ ವಾಹನಗಳ ಚಾಲಕರು ಮತ್ತು ಸಹಾಯಕರ ಹಾಜರಾತಿ, ಕಸ ಸಂಗ್ರಹಣೆ ವಾಹನಗಳ ಆರ್​ಎಫ್​ಐಡಿ ಸ್ಕ್ಯಾನಿಂಗ್​ ಹಾಗೂ ಅವುಗಳ ಕಾರ್ಯನಿರ್ವಹಣೆ ಪರಿಶೀಲಿಸಿದರು.

ಪೌರ ಕಾರ್ಮಿಕರ ಜೊತೆ ಸಂವಾದ ನಡೆಸಿದ ಸಚಿವ ಕೃಷ್ಣ ಬೈರೇಗೌಡ.
ಪೌರ ಕಾರ್ಮಿಕರ ಜೊತೆ ಸಂವಾದ ನಡೆಸಿದ ಸಚಿವ ಕೃಷ್ಣ ಬೈರೇಗೌಡ. (ETV Bharat)

ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ಅದು ರಸ್ತೆಗಳ ಮೇಲೆ ಬೀಳದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳು ಮತ್ತು ಪೌರಕಾರ್ಮಿಕರಿಗೆ ನಿರ್ದೇಶನ ನೀಡಿದರು. ಈ ವೇಳೆ, ಬಿಎನ್​ಸಿಸಿ ಆಯುಕ್ತ ಪೊಮ್ಮಾಲ ಸುನಿಲ್​ ಕುಮಾರ್​ ಜೊತೆಗಿದ್ದರು.

ಬಳಿಕ ಮಲ್ಲಸಂದ್ರದಲ್ಲಿನ ಪೌರಕಾರ್ಮಿಕರ ಮಸ್ಟರಿಂಗ್ ಪಾಯಿಂಟ್‌ಗೆ ಬಂದ ಸಚಿವರು, ಪೌರಕಾರ್ಮಿಕರ ಹಾಜರಾತಿ, ಸಮವಸ್ತ್ರ, ಕೈಗವಸುಗಳ ಬಳಕೆ ಮತ್ತು ಅವರ ಕೆಲಸ ವಿಧಾನವನ್ನು ಪರಿಶೀಲಿಸಿದರು. ಇದೇ ವೇಳೆ, ಪೌರ ಕಾರ್ಮಿಕರೊಂದಿಗೆ ಸಂವಾದ ನಡೆಸಿ ಅವರ ಕುಂದುಕೊರತೆಗಳನ್ನು ಆಲಿಸಿದರು.

ನಂತರ ಸಚಿವರು ಮತ್ತು ಆಯುಕ್ತರು ಮಲ್ಲಸಂದ್ರದ ವಸತಿ ಪ್ರದೇಶಗಳಿಗೆ ಭೇಟಿ ನೀಡಿ ಮನೆ - ಮನೆ ಕಸ ಸಂಗ್ರಹಣೆ, ಮೂಲದಲ್ಲೇ ಹಸಿ ಮತ್ತು ಒಣ ತ್ಯಾಜ್ಯ ವಿಂಗಡಣೆ, ಅದರ ಸಂಗ್ರಹಣೆಯ ವಿಧಾನ ಮತ್ತು ರಸ್ತೆಗಳ ಸ್ವಚ್ಛತೆಯನ್ನು ಖುದ್ದಾಗಿ ಪರಿಶೀಲಿಸಿದರು.

ಜನರಿಗೆ ಸಚಿವರ ಸಲಹೆ: ಕಸ ಸಂಗ್ರಹಣೆಯ ನಿಗದಿತ ಸಮಯಕ್ಕಿಂತ ಮೊದಲು ಮನೆಯಿಂದ ಹೊರಡುವ ನಿವಾಸಿಗಳು, ಸರಿಯಾಗಿ ವಿಂಗಡಿಸಿದ ತ್ಯಾಜ್ಯವನ್ನು ತಮ್ಮ ಮನೆಗಳ ಗೇಟ್‌ ಹೊರಗೆ ನೈರ್ಮಲ್ಯ ಕಾರ್ಮಿಕರಿಗೆ ಸುಲಭವಾಗಿ ಸಿಗುವಂತೆ ಇಡಲು ಸಚಿವರು ಸೂಚಿಸಿದರು. ಸಾಧ್ಯವಿದ್ದ ಕಡೆ, ಕಸದ ಬ್ಯಾಗ್​, ಡಬ್ಬಿಗಳನ್ನು ಗೇಟ್‌ಗಳಿಗೆ ತೂಗು ಹಾಕಬೇಕು. ಗೇಟ್‌ಗಳಿಲ್ಲದ ಮನೆಗಳವರು ನಾಯಿಗಳು ಮತ್ತು ಇತರ ಪ್ರಾಣಿಗಳು ತ್ಯಾಜ್ಯವನ್ನು ಹರಡುವುದನ್ನು ತಡೆಯಲು ಎತ್ತರದ ಸ್ಥಳದಲ್ಲಿ ಅಥವಾ ಸೂಕ್ತವಾದ ಸ್ಟ್ಯಾಂಡ್‌ ಮೇಲೆ ಇಡಬೇಕು ಎಂದು ಸಲಹೆ ನೀಡಿದರು.

ಕಸ ಸಂಗ್ರಹಣಾ ವಾಹನಗಳು ಬಂದಾಗ ಮನೆಯವರೇ ಬಂದು ಕಸ ನೀಡಬೇಕು ಎಂದು ಪೌರಕಾರ್ಮಿಕರು ನಿರೀಕ್ಷಿಸಬಾರದು. ಮನೆ ದ್ವಾರದ ಹೊರಗೆ ಇರಿಸಿದ ವಿಂಗಡಿಸಲಾದ ತ್ಯಾಜ್ಯವನ್ನು ನೈರ್ಮಲ್ಯ ಸಿಬ್ಬಂದಿಗಳೇ ಸಂಗ್ರಹಿಸಬೇಕು" ಎಂದು ಸಚಿವರು ನಿರ್ದೇಶಿಸಿದರು.

ಖಾಲಿ ನಿವೇಶನ, ಅಪಾರ್ಟ್​ಮೆಂಟ್​ಗಳ ತಪಾಸಣೆ: ಇದೇ ವೇಳೆ, ಸುತ್ತಮುತ್ತಲಿನ ಕಸದ ರಾಶಿ ಹಾಗೂ ಸರಿಯಾದ ನಿರ್ವಹಣೆ ಇಲ್ಲದ ಖಾಲಿ ನಿವೇಶನಗಳನ್ನೂ ಸಹ ಸಚಿವರು ಪರಿಶೀಲಿಸಿದರು. ಆ ನಿವೇಶನಗಳ ಮಾಲೀಕರಿಗೆ ನೋಟಿಸ್ ನೀಡಿ ಸ್ಥಳಗಳನ್ನು ಸ್ವಚ್ಛಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಜಾಲಹಳ್ಳಿ ವಾರ್ಡ್‌ಗೂ ಭೇಟಿ ನೀಡಿದ ಸಚಿವರು ಮನೆಯ ತ್ಯಾಜ್ಯ ಸಂಗ್ರಹ ಕಾರ್ಯವನ್ನು ಪರಿಶೀಲಿಸಿದರು.

ಸಚಿವರ ಈ ದಿಢೀರ್​ ಪರಿಶೀಲನೆಯ ವೇಳೆ ಜಂಟಿ ಆಯುಕ್ತ ಮೊಹಮ್ಮದ್ ನಯೀಮ್ ಮೋಮಿನ್, ಕಾರ್ಯನಿರ್ವಾಹಕ ಎಂಜಿನಿಯರ್ ಸಚಿನ್, ಡಿಜಿಎಂ ರಶ್ಮಿ ಮತ್ತು ಇತರ ನಿಗಮ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.

ಇವುಗಳನ್ನೂ ಓದಿ: