ಬಡ ಮಕ್ಕಳ ಗುಣಮಟ್ಟ ಶಿಕ್ಷಣಕ್ಕಾಗಿ ಕೆಪಿಎಸ್ ಬದಲಿಗೆ ಮ್ಯಾಗ್ನೇಟ್ ಶಾಲೆ: ಸಚಿವ ಕೃಷ್ಣ ಬೈರೇಗೌಡ
ಬಡ ಮಕ್ಕಳ ಗುಣಮಟ್ಟ ಶಿಕ್ಷಣಕ್ಕಾಗಿ ಕೆಪಿಎಸ್ ಬದಲಿಗೆ ಮ್ಯಾಗ್ನೇಟ್ ಶಾಲೆಯಾಗಿ ಪರಿವರ್ತನೆ ಮಾಡಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.

Published : February 26, 2026 at 4:02 PM IST
ಹಾಸನ: "ಜಿಲ್ಲೆಯ ಕೆಪಿಎಸ್ ಶಾಲೆಗಳನ್ನು ಮ್ಯಾಗ್ನೆಟ್ ಶಾಲೆಗಳಾಗಿ ಪರಿವರ್ತಿಸುವ ಮೂಲಕ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ" ಎಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಜಿಲ್ಲಾ ಪಂಚಾಯತ್ ಹೊಯ್ಸಳ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಹಳ್ಳಿಗಳಲ್ಲಿ ಕೆಲವೆಡೆ ನಾಲ್ಕು-ಐದು ಮಕ್ಕಳು ಮಾತ್ರ ಶಾಲೆಗೆ ಬರುತ್ತಿದ್ದು, ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ನಾಮಕಾವಸ್ತೆಗೆ ಶಾಲೆಗಳು ನಡೆಯುತ್ತಿರುವ ಪರಿಸ್ಥಿತಿ ಇದೆ. ಇದರಿಂದ ಮಕ್ಕಳಿಗೆ ಸಮರ್ಪಕ ಶಿಕ್ಷಣ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕೆಪಿಎಸ್ ಶಾಲೆಗಳನ್ನು ಬಲಪಡಿಸಿ ಮ್ಯಾಗ್ನೆಟ್ ಶಾಲೆಗಳಾಗಿ ರೂಪಾಂತರಿಸುವ ಮೂಲಕ ಉತ್ತಮ ಸೌಕರ್ಯ, ಅರ್ಹ ಶಿಕ್ಷಕರು ಮತ್ತು ಗುಣಮಟ್ಟದ ಬೋಧನೆ ಒದಗಿಸುವ ಉದ್ದೇಶ ಸರ್ಕಾರದ್ದಾಗಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಪ್ರಸ್ತುತ 15 ಕೆಪಿಎಸ್ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, ಎಲ್ಲಾ ಶಾಲೆಗಳಲ್ಲೂ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದೆ ಎಂದು ಡಿಡಿಪಿಐ ರಂಗನಾಥ್ ಸಚಿವರಿಗೆ ಮಾಹಿತಿ ನೀಡಿದರು. ಇದೇ ವೇಳೆ ಬಿಪಿಎಲ್ ಕಾರ್ಡ್ ಆದಾಯ ಮಿತಿಯನ್ನು ಕೇವಲ 1.20 ಲಕ್ಷ ರೂ.ಗೆ ಸೀಮಿತಗೊಳಿಸಿರುವ ಬಗ್ಗೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಸಚಿವರ ಗಮನ ಸೆಳೆದರು. ಈ ನಿರ್ಧಾರದಿಂದ ಗ್ರಾಮೀಣ ಪ್ರದೇಶದ ಅನೇಕ ಬಡವರ ಬಿಪಿಎಲ್ ಕಾರ್ಡ್‌ಗಳು ರದ್ದಾಗುವ ಸಾಧ್ಯತೆ ಇದೆ. ಸಚಿವರು ಸಂಬಂಧಿತ ಅಧಿಕಾರಿಗಳಿಗೆ ವಿಷಯವನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಕೃಷಿ ಇಲಾಖೆಯಲ್ಲಿ ಯೋಜನೆಗಳ ಬಗ್ಗೆ ಅರಿವು ಮೂಡಿಸಬೇಕು ಅಗತ್ಯವಿರುವ ರೈತರಿಗೆ ಆದ್ಯತೆ ಮೇಲೆ ಯೋಜನೆಗಳನ್ನು ನೀಡಬೇಕು. ಮೆಕ್ಕೆಜೋಳ ಬಿಳಿ ಸುಳಿ ರೋಗ ಹೆಚ್ಚುತ್ತಿರುವುದರಿಂದ ಮಣ್ಣಿನ ಫಲವತ್ತತೆ ಪರೀಕ್ಷೆ ಮಾಡಿಸಲು ಮಾಹಿತಿ ನೀಡಬೇಕು. ತೆಂಗು ಬೆಳೆಗೆ ಬಂದಿರುವ ಕಪ್ಪು ತಲೆ ಹುಳು ರೋಗ ತಡೆಗಟ್ಟುವಿಕೆ ಗೋನಿಯೋಜಸ್ ಸೇರಿದಂತೆ ವಿವಿಧ ರೀತಿಯ ರೋಗಗಳನ್ನು ನಿಯಂತ್ರಣಕ್ಕೆ ಹೆಚ್ಚಿನ ಪ್ರಚಾರವನ್ನು ನೀಡಬೇಕು ಪರೋಪ ಜೀವಿಯ ಉತ್ಪಾದನೆಯನ್ನು ಸ್ಥಳೀಯ ಲ್ಯಾಬ್‌ಗಳ ಜೊತೆಗೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಲ್ಯಾಬ್‌ಗಳಲ್ಲಿ ಕೈಗೊಳ್ಳುವಂತೆ ತಿಳಿಸಿದರು.
ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಮಾತನಾಡಿ, ಸರ್ಕಾರ ಇದಕ್ಕಾಗಿ ವಿಶೇಷ ಅನುದಾನ ಕೊಡಬೇಕು, ಕಂದಾಯ ಗ್ರಾಮಗಳ ಪ್ರಸ್ತಾವನೆ ಕೂಡಲೇ ಸಲ್ಲಿಸಬೇಕು. ಹೇಮಾವತಿ ಜಲಾಶಯ ಯೋಜನೆಯಡಿಯಲ್ಲಿ ನೀಡಲಾಗಿರುವ ನಿವೇಶನಗಳಿಗೂ ದಾಖಲೆಗಳು ಸರಿಯಾಗಿ ಇಲ್ಲದಿದ್ದರೆ ಇಂತಹ ಪ್ರದೇಶಗಳಲ್ಲಿ 10 ಮನೆಗಳಿಗೂ ಹೆಚ್ಚು ಇದ್ದರೆ ಹಕ್ಕು ಪತ್ರವನ್ನು ನೀಡಲು ಕಂದಾಯ ಗ್ರಾಮಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿಲ್ಲಿರುವ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಫಲಿತಾಂಶವನ್ನು ಹೆಚ್ಚಳ ಮಾಡಬೇಕು, ವಿದ್ಯಾರ್ಥಿ ವೇತನ ಸಲ್ಲಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಪಾವತಿಯಾಗಬೇಕು ಎಂದರು.
ಸರ್ಕಾರಿ ಆಸ್ತಿಗಳನ್ನು ತಂತ್ರಾಂಶದಲ್ಲಿ ನಮೂದಿಸಬೇಕು, ಎಲ್ಲಾ ಇಲಾಖೆಯವರು ನಮೂದಿಸಬೇಕು. 2 ಲಕ್ಷ ಪೌತಿ ಖಾತೆಗಳು ಬಾಕಿ ಇವೆ. ಇವುಗಳನ್ನು ಕೂಡಲೇ ವಾರಸುದಾರರಿಗೆ ಖಾತೆ ಮಾಡಿಕೊಡಬೇಕು. ಜಿಲ್ಲೆಯಲ್ಲಿ 17,856 ದುರಸ್ತಿ ಬಾಕಿ ಇದೆ ಕೂಡಲೇ ದುರಸ್ತಿ ಕೆಲಸ ಮಾಡಬೇಕು ಎಂದು ತಿಳಿಸಿದರು.
ಶಾಸಕರಾದ ಸಿಮೆಂಟ್ ಮಂಜು ಅವರು ಮಾತನಾಡಿ, ಜೆ.ಜೆ. ಎಂ ಕುಡಿಯುವ ಯೋಜನೆಯಡಿ ರಸ್ತೆಗಳನ್ನು ಅಗೆದು ಬಿಡುತ್ತಿದ್ದು, ಇದರ ಬಗ್ಗೆ ಕ್ರಮ ವಹಿಸುವಂತೆ ಆಗ್ರಹಿಸಿದರು. ಕಾಮಗಾರಿ ಪೂರ್ಣ ಪ್ರಮಾಣದಲ್ಲಿ ಮುಗಿಯದೆ ಅಧಿಕಾರಿಗಳು ಗುತ್ತಿಗೆದಾರರಿಂದ ರಸ್ತೆಗಳನ್ನು ತಮ್ಮ ವಶಕ್ಕೆ ಪಡೆಯಬಾರದು ಎಂದರು.
ಶಾಸಕರಾದ ಹುಲ್ಲಹಳ್ಳಿ ಸುರೇಶ್ ಮಾತನಾಡಿ, ಬೇಸಿಗೆಯಲ್ಲಿ ವಿದ್ಯುತ್ ಅಭಾವ ಹೆಚ್ಚಾದಂತೆ ಗಮನಹರಿಸಬೇಕು. ಇನ್ನೇನು ಮಳೆಗಾಲ ಆರಂಭವಾಗುತ್ತಿದೆ. ವಿದ್ಯುತ್ ಇಲಾಖೆ ಅಧಿಕಾರಿಗಳು ಮಲೆನಾಡು ಭಾಗವಾದ ಬೇಲೂರು, ಸಕಲೇಶಪುರ ಭಾಗದಲ್ಲಿ ಮರದ ರೆಂಬೆಕೊಂಬೆಗಳು ಬಿದ್ದು ವಿದ್ಯುತ್ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಆದುದರಿಂದ ಮುಂಜಾಗ್ರತಾ ಕ್ರಮವಾಗಿ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಡೀಮ್ಡ್ ಫಾರೆಸ್ಟ್ ಪಟ್ಟಿಯನ್ನು ಪರಿಷ್ಕರಣೆ ನಡೆಯುತ್ತಿದ್ದು, ಪರಿಶೀಲನೆ ವೇಳೆಯಲ್ಲಿ ಸರ್ಕಾರಿ ಕಚೇರಿಗಳು, ಸರ್ಕಾರಿ ಜಮೀನು, ಶಾಲೆಗಳನ್ನು, ಕೃಷಿ ಭೂಮಿಗಳನ್ನು ಕೈ ಬಿಡುವಂತೆ ಪರಿಶೀಲನೆ ನಡೆಸುವಂತೆ ತಿಳಿಸಿದರು.
ಹೊಸದಾಗಿ ಗೆದ್ದ ಶಾಸಕರಿಗೆ ಸಚಿವ ಸ್ಥಾನ ನೀಡುವಂತೆ ಕಾಂಗ್ರೆಸ್ ನಾಯಕರಿಗೆ ಪತ್ರ ಬರೆದ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಪ್ರತಿಕ್ರಿಯೆ ನೀಡಿ, ನಮ್ಮದೇನು ವಿಶೇಷ ಅಭಿಪ್ರಾಯ ಇಲ್ಲ. ಹಿಂದೆ ನನ್ನ ಅಭಿಪ್ರಾಯ ಎಲ್ಲ ಹೇಳಿದ್ದೇನೆ, ಹೊಸದಾಗಿ ಹೇಳುವಂತಹದ್ದೇನಿಲ್ಲ. ಪುನರುಚ್ಚಾರ ಮಾಡುವ ಅವಶ್ಯಕತೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಇನ್ನು ಸಚಿವ ಸ್ಥಾನ ಹಂಚಿಕೆ ಕುರಿತು ಮಾತನಾಡಿದ ಅವರು, ಎಲ್ಲರಿಗೂ ಅವಕಾಶ ಸಿಗಬೇಕು ಎನ್ನುವುದು ನನ್ನ ಅಭಿಪ್ರಾಯ ಅಷ್ಟೇ. ಎಲ್ಲರಿಗೂ ಸಿಗಬೇಕು, ಅದರ ಬಗ್ಗೆ ಜಾಸ್ತಿ ಇನ್ನೇನು ಹೇಳಲ್ಲ ಎಂದು ಹೇಳಿದರು.
ಸಭೆಯಲ್ಲಿ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಹೆಚ್ಎಂ ರೇವಣ್ಣ, ಸಂಸದರಾದ ಶ್ರೇಯಸ್ ಪಟೇಲ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ಜಿಲ್ಲಾಧಿಕಾರಿ ಕೆ. ಎಸ್ ಲತಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭನ್ವಿತ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೂರ್ಣಿಮಾ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸೌರಭ್ ಕುಮಾರ್, ನಾಮ ನಿರ್ದೇಶಿತ ಸದಸ್ಯರಾದ ಗೋಪಾಲಸ್ವಾಮಿ, ಸುಲೋಚನಾ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ: ಖಾಸಗಿ ಬಸ್ಸುಗಳ ಪ್ರಾಬಲ್ಯದ ಮಂಗಳೂರಲ್ಲಿ ಇವಿ ಬಸ್ ಪ್ರಯೋಗ: ಕುಡ್ಲದಲ್ಲಿ ಮೊದಲ ಖಾಸಗಿ ಇವಿ ಬಸ್ ಸೇವೆಗೆ ರೆಡಿ

