ETV Bharat / state

AC ನ್ಯಾಯಾಲಯಗಳಲ್ಲಿ 13 ಸಾವಿರ ಪ್ರಕರಣ ದಾಖಲು: ಶೀಘ್ರ ವಿಲೇವಾರಿಗೆ ಸಚಿವ ಕೃಷ್ಣ ಬೈರೇಗೌಡ ಸೂಚನೆ

ಬೆಂಗಳೂರು ಸೇರಿದಂತೆ ಈ ನಾಲ್ಕು ಜಿಲ್ಲೆಗಳಲ್ಲಿ ಎ.ಸಿ. ನ್ಯಾಯಾಲಯಗಳಲ್ಲಿ 13 ಸಾವಿರ ಪ್ರಕರಣ ದಾಖಲಾಗಿದ್ದು, ಶೀಘ್ರವಾಗಿ ವಿಲೇವಾರಿ ಮಾಡುವಂತೆ ಸಚಿವ ಕೃಷ್ಣ ಬೈರೇಗೌಡ ಸೂಚನೆ ನೀಡಿದ್ದಾರೆ.

MINISTER KRISHNA BYRE GOWDA INSTRUCTS TO DISPOSE OF PENDING CASES IN A.C. COURTS
ವಿಕಾಸಸೌಧದಲ್ಲಿ ನಡೆದ ಉಪ ವಿಭಾಗಾಧಿಕಾರಿಗಳ ಕೋರ್ಟ್​ ಕೇಸ್ ಸಂಬಂಧಿಸಿದ ಮಾಸಿಕ ಪ್ರಗತಿ ಪರಿಶೀಲನಾ ಸಭೆ (ETV Bharat)
author img

By ETV Bharat Karnataka Team

Published : January 7, 2026 at 6:27 PM IST

2 Min Read
Choose ETV Bharat

ಬೆಂಗಳೂರು: ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು ಹಾಗೂ ರಾಮನಗರ ಜಿಲ್ಲೆ ಉಪ ವಿಭಾಗಾಧಿಕಾರಿಗಳ (ಎಸಿ) ವ್ಯಾಪ್ತಿಯ ನ್ಯಾಯಾಲಯಗಳಲ್ಲಿ ಪ್ರಕರಣಗಳು ಅತಿ ಹೆಚ್ಚು ಸಂಖ್ಯೆಯಲ್ಲಿ ಬಾಕಿ ಇದ್ದು, ಶೀಘ್ರ ವಿಲೇವಾರಿ ಮಾಡುವಂತೆ ಸಚಿವ ಕೃಷ್ಣ ಬೈರೇಗೌಡ ಅವರು ಸೂಚಿಸಿದ್ದಾರೆ.

ಬುಧವಾರ ವಿಕಾಸಸೌಧದಲ್ಲಿ ನಡೆದ ಉಪ ವಿಭಾಗಾಧಿಕಾರಿಗಳ ಕೋರ್ಟ್​ ಕೇಸ್ ಸಂಬಂಧಿಸಿದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಮಹತ್ವದ ಸೂಚನೆ ನೀಡಿದ ಅವರು, "ಉಪ ವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ರಾಜ್ಯಾದ್ಯಂತ ಒಟ್ಟು 19 ಸಾವಿರ ಪ್ರಕರಣಗಳು ಬಾಕಿಯಿವೆ. ಈ ಪೈಕಿ ಸುಮಾರು 13 ಸಾವಿರ ಪ್ರಕರಣಗಳು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು ಹಾಗೂ ರಾಮನಗರ ಜಿಲ್ಲೆಗಳಲ್ಲೇ ಬಾಕಿ ಇವೆ" ಎಂದು ಬೇಸರ ವ್ಯಕ್ತಪಡಿಸಿದರು.

MINISTER KRISHNA BYRE GOWDA INSTRUCTS TO DISPOSE OF PENDING CASES IN A.C. COURTS
ವಿಕಾಸಸೌಧದಲ್ಲಿ ನಡೆದ ಉಪ ವಿಭಾಗಾಧಿಕಾರಿಗಳ ಕೋರ್ಟ್​ ಕೇಸ್ ಸಂಬಂಧಿಸಿದ ಮಾಸಿಕ ಪ್ರಗತಿ ಪರಿಶೀಲನಾ ಸಭೆ (ETV Bharat)

"ಬೆಂಗಳೂರು ಸುತ್ತಮುತ್ತಲ ಜಿಲ್ಲೆಗಳಲ್ಲೇ ಹೆಚ್ಚು ಸಂಖ್ಯೆಯಲ್ಲಿ ನ್ಯಾಯಾಲಯ ಪ್ರಕರಣಗಳು ಬಾಕಿಯಿದ್ದರೆ ರಾಜ್ಯದ ಇತರ ಭಾಗಗಳ ಅಧಿಕಾರಿಗಳೊಂದಿಗೆ ಏನೆಂದು ಸಭೆ ನಡೆಸಲಿ. ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಕೇವಲ 6 ಸಾವಿರ ಪ್ರಕರಣಗಳು ಮಾತ್ರ ಬಾಕಿ ಇದ್ದು, ಈ ನಾಲ್ಕು ಜಿಲ್ಲೆಗಳ ಅಧಿಕಾರಿಗಳು ತಮ್ಮ ಕೆಲಸಕ್ಕೆ ವೇಗ ನೀಡಿದರೆ ಮಾತ್ರ ರಾಜ್ಯಮಟ್ಟದಲ್ಲಿ ಪ್ರಶ್ನಿಸಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.

"ಸಭೆಯಲ್ಲಿ ನಾಲ್ಕೂ ಜಿಲ್ಲೆಗಳ ಪ್ರಗತಿಯ ವಿವರಗಳನ್ನು ಪರಿಶೀಲಿಸಿದ ಸಚಿವರು, ಕಳೆದ ಅಕ್ಟೋಬರ್​ನಲ್ಲಿ ಈ ನಾಲ್ಕು ಜಿಲ್ಲೆಗಳಲ್ಲಿ 15,364 ಪ್ರಕರಣಗಳು ಬಾಕಿ ಇದ್ದದ್ದು ಈಗ 13,610ಕ್ಕೆ ಇಳಿದಿರುವುದು ಉತ್ತಮ ಬೆಳವಣಿಗೆ. ಆದರೂ, ಮಿಸ್ಸಿಂಗ್​ ರೆಕಾರ್ಡ್​ಗಳು, ಆರ್ ಸಿಸಿಎಂಎಸ್ ನಲ್ಲಿ ವಿಲೇವಾರಿ ಆಗದ ಪ್ರಕರಣಗಳು ಹಾಗೂ ಅನರ್ಹ ಪ್ರಕರಣಗಳು ಹಾಗೂ ಆದೇಶಕ್ಕಾಗಿ ಕಾಯ್ದಿರಿಸಿದ ಪ್ರಕರಣಗಳನ್ನು ಜನವರಿ ಅಂತ್ಯದೊಳಗೆ ಮುಗಿಸಿದರೆ ಈ ಸಂಖ್ಯೆ ಮತ್ತಷ್ಟು ಸುಧಾರಿಸುತ್ತದೆ" ಎಂದು ಸಲಹೆ ನೀಡಿದರು.

"ಉಪ ವಿಭಾಗಾಧಿಕಾರಿಗಳಿಗೆ ತಮ್ಮ ಮುಂದಿರುವ ಸವಾಲುಗಳು ಹಾಗೂ ಪರಿಹಾರಗಳ ಬಗ್ಗೆ ಅರಿವಿದೆ. ಹೀಗಾಗಿ ಸುಲಭವಾಗಿ ಇತ್ಯರ್ಥಗೊಳಿಸಬಹುದಾದ ಪ್ರಕರಣಗಳನ್ನು ಮೊದಲು ಕೈಗೆತ್ತಿಕೊಳ್ಳಿ. ಮಾರ್ಚ್ ಅಂತ್ಯದೊಳಗೆ ಆರು ತಿಂಗಳು ಮೀರಿದ ಎಲ್ಲಾ ಕೇಸ್​ಗಳನ್ನು ಕಡ್ಡಾಯವಾಗಿ ಮುಗಿಸಿ. ಫೆಬ್ರವರಿ ಮೊದಲ ವಾರದಲ್ಲಿ ಈ ನಾಲ್ಕು ಜಿಲ್ಲೆಗಳ ಮತ್ತೊಂದು ಸಭೆ ನಡೆಸಿ, ಅದರ ಆಧಾರದಲ್ಲಿ ರಾಜ್ಯಾದ್ಯಂತದ ಎಲ್ಲಾ ಎಸಿ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆಗೆ ದಿನಾಂಕ ನಿಗದಿಪಡಿಸಲಾಗುವುದು" ಎಂದು ತಿಳಿಸಿದರು.

"ಈ ಜಿಲ್ಲೆಗಳಲ್ಲಿ ಸುಧಾರಣೆ ಕಾಣದಿದ್ದರೆ, ಇಡೀ ರಾಜ್ಯದ ಎಲ್ಲಾ ಉಪ ವಿಭಾಗಧಿಕಾರಿಗಳ ಸಭೆ ವ್ಯರ್ಥವಾಗುತ್ತದೆ ಎಂದು ಎಚ್ಚರಿಸಿದ ಅವರು, ಪ್ರತಿ ಶನಿವಾರ ಎಸಿ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳ ಕುರಿತು ಮೇಲ್ವಿಚಾರಣೆ ನಡೆಸುವಂತೆ" ಕೃಷ್ಣಬೈರೇಗೌಡ ತಿಳಿಸಿದರು.

ಇದನ್ನೂ ಓದಿ: ರಾಜ್ಯದ ಎ.ಸಿ. ನ್ಯಾಯಾಲಯಗಳಲ್ಲಿದ್ದ 62,857 ಪ್ರಕರಣಗಳ ಪೈಕಿ ಶೇ.80ರಷ್ಟು ಪ್ರಕರಣಗಳು ಇತ್ಯರ್ಥ: ಕೃಷ್ಣ ಬೈರೇಗೌಡ