ETV Bharat / state

ಮಧ್ಯಪ್ರಾಚ್ಯದ ಯುದ್ಧಪೀಡಿತ ದೇಶಗಳಲ್ಲಿ 109 ಕನ್ನಡಿಗರು ಸಿಲುಕಿದ್ದು, ರಕ್ಷಣೆಗಾಗಿ ವಿದೇಶಾಂಗ ಇಲಾಖೆ ಜೊತೆ ಸಂಪರ್ಕ: ಸಚಿವ ಕೃಷ್ಣ ಬೈರೇಗೌಡ

ಯುದ್ಧಪೀಡಿತ ಮಧ್ಯಪ್ರಾಚ್ಯದಲ್ಲಿ 109 ಕನ್ನಡಿಗರು ಸಿಲುಕಿದ್ದು, ಅವರ ರಕ್ಷಣೆಗಾಗಿ ವಿದೇಶಾಂಗ ಇಲಾಖೆ ಜೊತೆ ಸಂಪರ್ಕದಲ್ಲಿರುವುದಾಗಿ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ. ಇನ್ನೂ ಯಾರಾದರೂ ಅಲ್ಲಿ ಸಂಕಷ್ಟಕ್ಕೆ ಸಿಲುಕಿದವರಿದ್ದರೆ ಹೆಲ್ಪ್​ಲೈನ್​ ಮೂಲಕ ಸಂಪರ್ಕಿಸುವಂತೆ ಹೇಳಿದ್ದಾರೆ.

MINISTER KRISHNA BAIREGOWDA
ಯುದ್ಧಪೀಡಿತ ಮಧ್ಯಪ್ರಾಚ್ಯದಲ್ಲಿ ಸಿಲುಕಿದ ಕನ್ನಡಿಗರ ಮಾಹಿತಿ ನೀಡಿದ ಸಚಿವ ಕೃಷ್ಣ ಬೈರೇಗೌಡ (ETV Bharat)
author img

By ETV Bharat Karnataka Team

Published : March 2, 2026 at 3:39 PM IST

3 Min Read
Choose ETV Bharat

ಬೆಂಗಳೂರು: ಮಧ್ಯಪ್ರಾಚ್ಯದ ಯುದ್ಧಪೀಡಿತ ದೇಶಗಳಲ್ಲಿ ಸುಮಾರು 109 ಜನ ಕನ್ನಡಿಗರು ಸಿಲುಕಿದ್ದು, ಅವರ ರಕ್ಷಣೆಗಾಗಿ ವಿದೇಶಾಂಗ ಸಚಿವಾಲಯದ ಜೊತೆ ಸಂಪರ್ಕದಲ್ಲಿದ್ದೇವೆ ಎಂದು ಸಚಿವ ಕೃಷ್ಣಾ ಬೈರೇಗೌಡ ತಿಳಿಸಿದ್ದಾರೆ.

ವಿಧಾನಸೌಧದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಧ್ಯಪ್ರಾಚ್ಯದಲ್ಲಿ ಸಂಘರ್ಷದ ವಾತಾವರಣ ಇದೆ. ಮಿಡ್ಲ್ ಈಸ್ಟ್ ನಲ್ಲಿ ಕನ್ನಡಿಗರು ಸಿಲುಕಿದ್ದಾರೆ. ಅವರು ಸ್ವಲ್ಪ ಆತಂಕದಲ್ಲಿದ್ದಾರೆ. ಯಾರೂ ಆತಂಕ ಪಡುವುದು ಬೇಡ. ಶನಿವಾರ ರಾತ್ರಿಯಿಂದಲೇ ಹೆಲ್ಪ್​ಲೈನ್ ಆರಂಭಿಸಿದ್ದೇವೆ. ಇಲ್ಲಿವರೆಗೆ 109 ಜನ ಮಾಹಿತಿ ಕೊಟ್ಟಿದ್ದಾರೆ. ಸಿಎಂ ಸೂಚನೆ ಕೊಟ್ಟ ನಂತರ ಕಾರ್ಯಪ್ರವೃತ್ತರಾಗಿದ್ದೇವೆ.‌ ನಮ್ಮ ವಿಪತ್ತು ನಿರ್ವಹಣೆ ವಿಭಾಗ ಕಾರ್ಯಪ್ರವೃತ್ತವಾಗಿದೆ. ಶನಿವಾರ ರಾತ್ರಿಯಿಂದಲೇ ಕೆಲಸ ಮಾಡ್ತಿದ್ದೇವೆ. ವಿದೇಶಾಂಗ ಕಚೇರಿ ಜೊತೆ ಸಂಪರ್ಕದಲ್ಲಿದ್ದೇವೆ. ನಮ್ಮ ದೆಹಲಿ ರೆಸಿಡೆಂಡ್ ಕಮೀಷನರ್ ಸಂಪರ್ಕದಲ್ಲಿದ್ದಾರೆ ಎಂದರು.

ಯುದ್ಧಪೀಡಿತ ದೇಶಗಳಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ಕೈಗೊಂಡಿರುವ ಕ್ರಮಗಳ ಕುರಿತು ಸಚಿವರ ಮಾಹಿತಿ (ETV Bharat)

ವಿದೇಶಾಂಗ ಸಚಿವಾಲಯ ಅಲ್ಲಿರುವ ಕನ್ನಡಿಗರನ್ನು ಸಂಪರ್ಕಿಸ್ತಿದ್ದಾರೆ. ವಿಶೇಷ ವಿಮಾನಕ್ಕೆ ಕೇಳ್ತಿದ್ದಾರೆ. ನಮ್ಮನ್ನು ರಕ್ಷಣೆ ಮಾಡಿ ಅಂತ ಕೇಳ್ತಿದ್ದಾರೆ. ಕೇಂದ್ರದ ಜೊತೆ ನಾವು ಮಾತುಕತೆ ನಡೆಸ್ತಿದ್ದೇವೆ. ಅಲ್ಲಿ ವಿಮಾನ ಹಾರಾಟ ನಿಷೇಧವಿದೆ. ಹಾಗಾಗಿ ವಿಶೇಷ ವಿಮಾನ ಮಾಡೋಕೆ ಆಗಲ್ಲ. ಅಲ್ಲಿ ವಿಮಾನ ಹಾರಾಟಕ್ಕೆ ಅವಕಾಶ ಸಿಗಬೇಕು. ನಿಷೇಧ ತೆರವುಗೊಳ್ಳಬೇಕು. ಅಲ್ಲಿಯವರೆಗೆ ಶಾಂತವಾಗಿ ಇರಬೇಕು. ವಾರ ಆಗಬಹುದು, ನಾಲ್ಕು ದಿನ ಆಗಬಹುದು. ಎಲ್ಲಿಯವರೆಗೆ ಕದನ ವಿರಾಮ ಆಗಲ್ಲ. ಅಲ್ಲಿಯವರೆಗೆ ವಿಮಾನ ಹಾರಾಟ ಇರಲ್ಲ. ವಿಮಾನ ಹಾರಾಟ ಮಾಡಿದರೆ ಗಂಡಾಂತರ ಇರುತ್ತದೆ. ಅದಕ್ಕೆ ಎಲ್ಲರೂ ಶಾಂತಿವಾಗಿರಬೇಕು ಎಂದು ಸಚಿವರು ಮನವಿ ಮಾಡಿದರು.

ಕದನ ವಿರಾಮ ಆಗುವವರೆಗೆ ಶಾಂತವಾಗಿ ಇರಬೇಕು. ಆಗ ನಾವು ವಿಶೇಷ ವಿಮಾನ ಕಳಿಸಬಹುದು. ಕೆಲವರು ಏರ್​ಪೋರ್ಟ್​ಗೆ ತೆರಳಿದ್ದಾರೆ. ನಾವು ಅವರ ಸಂಪರ್ಕ ಮಾಡುತ್ತಿದ್ದೇವೆ. ಅವರನ್ನು ರಕ್ಷಿಸಲು ಹೆಲ್ಪ್​​ಲೈನ್ ಮಾಡಿದ್ದೇವೆ. 22253707 ಗೆ ಫೋನ್ ಮಾಡಬಹುದು. ಇದು ನಮ್ಮ‌ ಸಹಾಯವಾಣಿ ಕೇಂದ್ರವಾಗಿದೆ. ದುಬೈ, ಬಹ್ರೇನ್​ ಏರ್​ಪೋರ್ಟ್​ನಲ್ಲಿ ಕನ್ನಡಿಗರು ಸಿಲುಕಿದ್ದಾರೆ. ಏರ್​ಪೋರ್ಟ್​ನಲ್ಲಿ ಸೌಲಭ್ಯ ಇಲ್ಲ ಅಂತಿದ್ದಾರೆ. ಹೊರಗೆ ಹೋಗೋಕೆ ವೀಸಾ ಇಲ್ಲ ಅಂತಿದ್ದಾರೆ. ಹಾಗಾಗಿ ನಾವು ಅವರ ಮಾಹಿತಿ ಕೊಡ್ತಿದ್ದೇವೆ. ನಮ್ಮ ವಿದೇಶಾಂಗ ಇಲಾಖೆಗೆ ಕೊಡ್ತೇವೆ. ಅವರು ಸ್ಥಳೀಯ ಎಂಬೆಸಿಗೆ ತಿಳಿಸ್ತಾರೆ. ಸ್ಥಳೀಯ ಎಂಬೆಸಿ ಅಲ್ಲಿ ನೆರವಿಗೆ ಬರಲಿದೆ ಎಂದು ಮಾಹಿತಿ ನೀಡಿದರು.

ಯುಎಇ, ಕತಾರ್, ಬಹ್ರೇನ್ ಸಹಾಯವಾಣಿ ನಂಬರ್ ಕೊಡ್ತೇವೆ. ಅಲ್ಲಿ ಯಾರಾದ್ರೂ ಸಿಲುಕಿದ್ದರೆ, ಅಲ್ಲಿನ ಎಂಬೆಸಿ ಸಂಪರ್ಕ ಮಾಡಬೇಕು. ಅಲ್ಲಿ‌ ಸಿಲುಕಿರುವವರು ಸಹಾಯ ಯಾಚಿಸಬಹುದು. ಆಗ ಅಲ್ಲಿರುವವರಿಗೆ ವೀಸಾ ನೀಡುವ ಪ್ರಯತ್ನ ಆಗಲಿದೆ. ಆಗ ಅವರು ಹೊರಬಂದು ಹೋಟೆಲ್​ಗಳಲ್ಲಿ ತಂಗಬಹುದು. ನಾವು ಅಲ್ಲಿನ ಹೋಟೆಲ್​ಗಳ ಖರ್ಚು ಭರಿಸೋಕೆ ಅವಕಾಶವಿಲ್ಲ. ಕೇಂದ್ರದ ಮೂಲಕವೇ ಅವಕಾಶ ಕೊಡಬೇಕು. ನಾವು ನಮ್ಮ ಕನ್ನಡಿಗರಿಗೆ ಸಹಾಯ ಮಾಡ್ತೇವೆ. ಕೇಂದ್ರ ಮಾಡುವ ಖರ್ಚು ನಾವು ಭರಿಸ್ತೇವೆ. ಅದು ಎಷ್ಟೇ ಹಣ ಖರ್ಚಾದ್ರೂ‌ ಭರಿಸ್ತೇವೆ. ಆದರೆ ನೇರವಾಗಿ ನಾವು ಸಹಾಯ ಮಾಡಲು ಬರಲ್ಲ. ಕೇಂದ್ರದ ಮೂಲಕವೇ ಮಾಡಿಸಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದ್ರು.

ಯಾರೂ ಆತಂಕಕ್ಕೆ ಒಳಗಾಗಬಾರದು. ಇದು ಅನಿರೀಕ್ಷಿತವಾದ ಘಟನೆ. ಸರ್ಕಾರ ನಿಮ್ಮ‌ ನೆರವಿಗೆ ಬರಲಿದೆ.‌ ಅಲ್ಲಿ ಅವಕಾಶ ಸಿಗುವವರೆಗೆ ನೀವು ಕಾಯಬೇಕು. ಶಾಂತಿ, ತಾಳ್ಮೆಯಿಂದ ಕಾಯಬೇಕು. ನಾವು ಏನು ಮಾಡಬೇಕೋ ಮಾಡ್ತಿದ್ದೇವೆ. ನಿನ್ನೆಯಿಂದಲೂ ದೆಹಲಿ ಜೊತೆ ಸಂಪರ್ಕದಲ್ಲಿದ್ದೇವೆ. ಮುಂದಿನ ಯೋಜನೆಯನ್ನೂ ರೆಡಿ ಮಾಡಿಕೊಂಡಿದ್ದೇವೆ. 109 ಜನ ಮಾತ್ರ ನಮಗೆ ಕರೆ ಮಾಡಿದ್ದಾರೆ. ಅಪಾಯವಿಲ್ಲದಿದ್ದರೆ ಕರೆ ಮಾಡೋದು ಬೇಡ. ಸಂಕಷ್ಟದಲ್ಲಿದ್ದರೆ ಅವರು ಕರೆ ಮಾಡಲಿ. ಯುರೋಪ್, ಏಷ್ಯಾ, ಅಮೆರಿಕದಲ್ಲಿ ಇದ್ದರೆ ತೊಂದರೆಯಿಲ್ಲ. ಬೇರೆ ಮಾರ್ಗವಾಗಿ ಬರೋಕೆ ಅವಕಾಶವಿದೆ. ಕೆಲವರು ಯುರೋಪ್ ನಲ್ಲಿಯೇ ಇದ್ದಾರೆ. ಮಧ್ಯಪ್ರಾಚ್ಯ ಪ್ರದೇಶಕ್ಕೆ ಬಾರದೆ ಬೇರೆಡೆಯಿಂದ ಬರಬಹುದು. ಸಿಂಗಪುರ ವಿಮಾನಯಾನ ಮೂಲಕ ಬರಬಹುದು ಎಂದು ಅವರು ತಿಳಿಸಿದರು.

ಒಂದು ಸಣ್ಣ ಗಾಯವಾಗಿರುವ ಮಾಹಿತಿ ಇದೆ. ಗಂಭೀರ ಗಾಯಗೊಂಡವರ ಬಗ್ಗೆ ಮಾಹಿತಿ ಇಲ್ಲ. ಅಲ್ಲಿ ಕೆಲಸ ಮಾಡುವವರಿಗೆ ಮನವಿ ಮಾಡ್ತೇವೆ. ಸ್ಥಳೀಯ ಸರ್ಕಾರ ಏನು‌ ಸಲಹೆ ಕೊಡುತ್ತೆ, ಅದನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. ಅವರು ಕೊಡುವ ಮಾರ್ಗಸೂಚಿ ಪಾಲಿಸಬೇಕು. ಇನ್ನೂ ಎರಡು ವಾರ ಕಾಲ ಯುದ್ಧ ನಡೆಯುವ ಸಾಧ್ಯತೆ ಇದೆ. ಈಗಾಗಲೇ ಎಲ್ಲ ಸಹಾಯವಾಣಿ ಆರಂಭವಾಗಿದೆ. ಜಿಲ್ಲಾ ಸಹಾಯವಾಣಿ ಕೂಡ ಮಾಡ್ತಿದ್ದೇವೆ. ಯುದ್ಧದ ಸಮಯ ಇರೋದ್ರಿಂದ ಏನು ಹೇಳಲು ಆಗಲ್ಲ. 100 ಜನರು ದುಬೈನಲ್ಲಿದ್ದಾರೆ, 9 ಜನ ಬಹ್ರೇನ್ ನಲ್ಲಿದ್ದಾರೆ. ಇನ್ನೂ ಯಾರಾದರೂ ಇದ್ದರೆ ಕರೆ ಮಾಡಿ ಮಾಹಿತಿ ಕೊಡಿ ಎಂದು ಹೇಳಿದರು.

ಯುಎಇಯಲ್ಲಿ ಸಿಲುಕಿರುವವರ ಜಿಲ್ಲಾವಾರು ಮಾಹಿತಿ:

  • ಬಳ್ಳಾರಿ -32
  • ಬೆಂಗಳೂರು -25
  • ಚಿಕ್ಕಮಗಳೂರು -5
  • ಚಿಕ್ಕಬಳ್ಳಾಪುರ 2
  • ದಕ್ಷಿಣ ಕನ್ನಡ - 3
  • ಚಿತ್ರದುರ್ಗ - 2
  • ದಾವಣಗೆರೆ - 9
  • ಕೊಡಗು - 4
  • ವಿಜಯಪುರ - 4
  • ರಾಯಚೂರು - 3
  • ಶಿವಮೊಗ್ಗ - 3
  • ಉಡುಪಿ - 2
  • ಕಲಬುರಗಿ - 2
  • ಇತರೆ ಜಿಲ್ಲೆಗಳ 4 ಮಂದಿ ಕನ್ನಡಿಗರು ದುಬೈನಲ್ಲಿ ಸಿಲುಕಿದ್ದಾರೆ.

ಇದನ್ನೂ ಓದಿ:'ಕನ್ನಡಿಗರ ರಕ್ಷಣೆಗೆ ವಿದೇಶಾಂಗ ಸಚಿವಾಲಯದ ಜೊತೆ ನಿಕಟ ಸಮನ್ವಯ, ಜಿಲ್ಲಾವಾರು ಸಹಾಯವಾಣಿ ಆರಂಭ'