ಮಾನವ-ವನ್ಯಜೀವಿ ಸಂಘರ್ಷ ನಿಯಂತ್ರಣಕ್ಕೆ ಕ್ರಮ: ಸಮಗ್ರ ಕಮಾಂಡ್ ಸೆಂಟರ್ ಉದ್ಘಾಟಿಸಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ
ಮಾನವ ಮತ್ತು ವನ್ಯಜೀವಿ ಸಂಘರ್ಷ ನಿಯಂತ್ರಿಸಲು ರಾಜ್ಯ ಸರ್ಕಾರ ಹೊಸ ಹೆಜ್ಜೆ ಇಟ್ಟಿದೆ. ಇದಕ್ಕಾಗಿ ತಂತ್ರಜ್ಞಾನದ ಮೊರೆಹೋಗಿದೆ.


Published : January 3, 2026 at 10:48 PM IST
ಬೆಂಗಳೂರು: ಮಾನವ-ವನ್ಯಜೀವಿ ಸಂಘರ್ಷ ನಿಯಂತ್ರಿಸಲು ಬೆಂಗಳೂರಿನ ಅರಣ್ಯ ಭವನದಲ್ಲಿ ಕಮಾಂಡ್ ಸೆಂಟರ್ ಹಾಗೂ 7 ವಿಭಾಗಗಳ ಪ್ರಾದೇಶಿಕ ನಿಯಂತ್ರಣ ಕೇಂದ್ರಗಳನ್ನು ಅರಣ್ಯ ಸಚಿವ ಈಶ್ವರ್ ಖಂಡ್ರೆ ಉದ್ಘಾಟಿಸಿದರು.
ರಾಜ್ಯದಲ್ಲಿ ಹೆಚ್ಚುತ್ತಿರುವ ಮಾನವ-ವನ್ಯಜೀವಿ ಸಂಘರ್ಷ ನಿಯಂತ್ರಿಸಲು ತಂತ್ರಜ್ಞಾನ ಆಧಾರಿತ ಪರಿಹಾರ ನೀಡುವಲ್ಲಿ ರಾಜ್ಯಮಟ್ಟದ ಸಮಗ್ರ ನಿರ್ದೇಶನ ಮತ್ತು ನಿಯಂತ್ರಣ ಕೇಂದ್ರ (Integrated Command and Control Centre) ಮಹತ್ವದ ಪಾತ್ರ ವಹಿಸಲಿದೆ. ಬೆಂಗಳೂರಿನ ಅರಣ್ಯ ಭವನದಲ್ಲಿಂದು ಕಮಾಂಡ್ ಸೆಂಟರ್ ಹಾಗೂ 7 ವಿಭಾಗಗಳ ಪ್ರಾದೇಶಿಕ ನಿಯಂತ್ರಣ ಕೇಂದ್ರ ಉದ್ಘಾಟನೆ ನೆರವೇರಿಸಿದರು. ಬಳಿಕ ಮಾತನಾಡಿದ ಸಚಿವರು, ಕಾಡಿನಂಚಿನ ಜನರು ಮತ್ತು ಸಾರ್ವಜನಿಕರು ವನ್ಯಜೀವಿಗಳ ಸಂಚಾರದ ಅಥವಾ ಅರಣ್ಯ ಅಪರಾಧಗಳ ಬಗ್ಗೆ, ಚಲನವಲನದ ಬಗ್ಗೆ ಇಲಾಖೆಯ ದೂರವಾಣಿ ಸಂಖ್ಯೆ 1926ಗೆ ಕರೆ ಮಾಡಿ ತಿಳಿಸಿದರೆ ಕಮಾಂಡ್ ಸೆಂಟರ್ ನಿಂದ ಸಂಬಂಧಿತ ವಿಭಾಗಕ್ಕೆ ಮಾಹಿತಿ ಹೋಗುತ್ತದೆ ಮತ್ತು ಸಾರ್ವಜನಿಕರು ನೀಡಿದ ಮಾಹಿತಿ ಅಥವಾ ದೂರು ಇತ್ಯರ್ಥವಾಗುವ ತನಕ ಹಿರಿಯ ಅಧಿಕಾರಿಗಳು ಅದರ ನಿಗಾ ವಹಿಸಲಿದ್ದಾರೆ ಎಂದು ಹೇಳಿದರು.
ಇದರ ಜೊತೆಗೆ ಅರಣ್ಯ ಇಲಾಖೆ ವಿವಿಧ ಅರಣ್ಯ ಪ್ರದೇಶಗಳಲ್ಲಿ ಮತ್ತು ಅರಣ್ಯದ ಅಂಚಿನಲ್ಲಿ ಅಳವಡಿಸಿರುವ ಎ.ಐ. ಕ್ಯಾಮರಾಗಳ ವಿಡಿಯೋ ಮತ್ತು ಬಾಹ್ಯಾಕಾಶ ಚಿತ್ರಗಳನ್ನು ಕಮಾಂಡ್ ಸೆಂಟರ್ ನಲ್ಲಿ ಪರಾಮರ್ಶಿಸಲು ಅವಕಾಶ ಕಲ್ಪಿಸಲಾಗಿದ್ದು ಇದರಿಂದ ವನ್ಯಜೀವಿಗಳ ಚಲನವಲನದ ಬಗ್ಗೆ ಸಕಾಲಿಕ ಮಾಹಿತಿಯನ್ನು ಸಂಬಂಧಿತ ಇಲಾಖೆಗೆ ತಲುಪಿಸಿ ಕ್ರಮ ವಹಿಸಲೂ ನೆರವಾಗಲಿದೆ ಎಂದರು.
ವನ್ಯಜೀವಿಗಳ ಸಂರಕ್ಷಣೆ ಮತ್ತು ವನ್ಯಜೀವಿಗಳಿಂದ ಮಾನವರಿಗೆ ಹೆಚ್ಚಿನ ಹಾನಿ ಆಗದ ರೀತಿಯಲ್ಲಿ ರಾಜ್ಯ ಅರಣ್ಯ ಇಲಾಖೆ ಹಲವು ಉಪಕ್ರಮಗಳನ್ನು ಕೈಗೊಂಡಿದ್ದು, ಕಮಾಂಡ್ ಕೇಂದ್ರ ಸಹ ಇಂತಹ ಒಂದು ವಿಶಿಷ್ಟ ಉಪಕ್ರಮವಾಗಿದೆ. ರಾಜ್ಯದಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ನ್ನು ಕಟ್ಟುನಿಟ್ಟಾಗಿ ಜಾರಿ ಮಾಡಿರುವ ಪರಿಣಾಮವಾಗಿ ರಾಜ್ಯದಲ್ಲಿ ವನ್ಯಜೀವಿಗಳ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿದೆ 6395 ಆನೆಗಳೊಂದಿಗೆ ರಾಜ್ಯ ಗಜಪಡೆಯಲ್ಲಿ ಪ್ರಥಮ ಸ್ಥಾನದಲ್ಲಿದ್ದರೆ, 563 ಹುಲಿಗಳೊಂದಿಗೆ ರಾಷ್ಟ್ರೀಯ ಪ್ರಾಣಿಯ ಗಣತಿಯಲ್ಲಿ 2ನೇ ಸ್ಥಾನ ಪಡೆದಿದೆ. ಅದೇ ರೀತಿ ಕಾಡೆಮ್ಮೆ, ಕಾಡುಕೋಣ, ಕರಡಿ, ಚಿರತೆ, ಜಿಂಕೆ, ಕಾಡುಹಂದಿಗಳ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ. ಈ ವನ್ಯಮೃಗಗಳಿಂದ ಮಾನವ ಜೀವಹಾನಿ, ಬೆಳೆಹಾನಿ ಆಗುತ್ತಿದ್ದು, ಇದರ ನಿಯಂತ್ರಣಕ್ಕೆ ತಂತ್ರಜ್ಞಾನ ಆಧಾರಿತ ಪರಿಹಾರ ಒದಗಿಸಲು ಈ ಕೇಂದ್ರ ತೆರೆಯಲಾಗಿದೆ ಎಂದು ಅವರು ತಿಳಿಸಿದರು.
ಐಸಿಸಿಸಿ–ಡಿಸಿಸಿಸಿ ಜಾಲ: ಬೆಂಗಳೂರು ಅರಣ್ಯ ಭವನದಲ್ಲಿ ಆರಂಭಿಸಲಾಗಿರುವ ಈ ಸಂಯೋಜಿತ ನಿರ್ದೇಶನ ಮತ್ತು ನಿಯಂತ್ರಣ ಕೇಂದ್ರವು ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಾಗಿರುವ 11 ವಿಭಾಗಗಳಲ್ಲಿ ಸ್ಥಾಪಿಸಲಾಗಿರುವ ಮತ್ತು ಸ್ಥಾಪಿಸಲಾಗುವ ವಿಭಾಗೀಯ ನಿರ್ದೇಶನ ಮತ್ತು ನಿಯಂತ್ರಣ ಕೇಂದ್ರ (DCCC) ಗಳೊಂದಿಗೆ ನೇರ ಸಂಪರ್ಕದಲ್ಲಿರುತ್ತದೆ ಇದು ವನ್ಯಜೀವಿ ಮಾನವ ಸಂಘರ್ಷ ನಿಯಂತ್ರಿಸಲು ನೆರವಾಗಲಿದೆ ಎಂದು ಸಚಿವರು ಹೇಳಿದರು.
ಕಳೆದ ಡಿಸೆಂಬರ್ 3ರಂದು, ಎಂಎಂ ಹಿಲ್ಸ್ ವನ್ಯಜೀವಿ ವಿಭಾಗ, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ, ಕಾಳಿ ಹುಲಿ ಸಂರಕ್ಷಿತ ಪ್ರದೇಶ ಮತ್ತು ಮಡಿಕೇರಿ ವಿಭಾಗಗಳಲ್ಲಿ ವಿಭಾಗೀಯ ನಿಯಂತ್ರಣ ಕೇಂದ್ರ ಉದ್ಘಾಟಿಸಲಾಗಿತ್ತು. ಶನಿವಾರ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ, ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶ, ಭದ್ರಾ ಹುಲಿ ಸಂರಕ್ಷಿತ ಪ್ರದೇಶ, ಹಾಸನ ವಿಭಾಗ, ಚಿಕ್ಕಮಗಳೂರು ವಿಭಾಗ ಮತ್ತು ಮಂಗಳೂರು ವಿಭಾಗದ ಕಮಾಂಡ್ ಕೇಂದ್ರಗಳನ್ನೂ ಉದ್ಘಾಟಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಸಾರ್ವಜನಿಕ ದೂರಿಗೆ ಸ್ಪಂದನೆ: ಕ್ಷೇತ್ರ ಮಟ್ಟದ ಮಾಹಿತಿ ಮತ್ತು ಸಾರ್ವಜನಿಕ ದೂರುಗಳನ್ನು ಕಮಾಂಡ್ ಕೇಂದ್ರ ಮೌಲ್ಯೀಕರಿಸಲಿದ್ದು, ಕ್ಷಿಪ್ರ ಕಾರ್ಯಾಚರಣೆಯ ತಂಡಗಳನ್ನು ನಿಯೋಜಿಸಿ ಸಮಸ್ಯೆ ಇತ್ಯರ್ಥವಾಗುವ ತನಕ ನಿಗಾ ಇಡಲಿದೆ. ವಿಭಾಗೀಯ ಮಟ್ಟದಲ್ಲಿ ಮೇಲ್ವಿಚಾರಣೆ ಮಾಡಲು, ಮುಂಚಿತವಾಗಿ ಎಚ್ಚರಿಕೆ ಸಂದೇಶಗಳನ್ನು ರವಾನಿಸಲು ಮತ್ತು ವಿಭಾಗಗಳಿಗೆ ಏಕೀಕೃತ ಡ್ಯಾಶ್ ಬೋರ್ಡ್ ನಿರ್ವಹಣೆಯನ್ನೂ ಕಮಾಂಡ್ ಕೇಂದ್ರ ಮಾಡಲಿದೆ ಎಂದು ಮಾಹಿತಿ ನೀಡಿದರು.
ಇದರ ಜೊತೆಗೆ ಇ-ಗಸ್ತು- ಜಿಪಿಎಸ್-ಆಧಾರಿತ ಗಸ್ತು ತಂಡಗಳ ಮೇಲ್ವಿಚಾರಣೆ ಮಾಡಲಿರುವ ಕಮಾಂಡ್ ಕೇಂದ್ರ ಮಾನವ ವನ್ಯಜೀವಿ ಸಂಘರ್ಷ ಇರುವ ಸೂಕ್ಷ್ಮ ತಾಣಗಳನ್ನು ಗುರುತಿಸಿ ಕೇಂದ್ರ ಕಚೇರಿಯಿಂದಲೇ ನೇರವಾಗಿ ಸಂಬಂಧಿತ ವಲಯ ಅಧಿಕಾರಿಗಳಿಗೆ ನಿರ್ದೇಶನ ನೀಡುತ್ತದೆ. ರೇಡಿಯೋ ಕಾಲರ್ ಅಳವಡಿಸಿದ ಆನೆಗಳ ಚಲನವಲನದ ಬಗ್ಗೆ ನಿಗಾ ಇಟ್ಟು ಸಂಬಂಧಿತ ವಲಯಕ್ಕೆ ಸಕಾಲಿಕ ಮಾಹಿತಿ ರವಾನಿಸುತ್ತದೆ. ಇದರಿಂದ ಅಮೂಲ್ಯ ಜೀವಹಾನಿ, ಬೆಳೆ ಹಾನಿ ತಡೆಯಲು ಸಾಧ್ಯವಾಗುವ ವಿಶ್ವಾಸವಿದೆ ಎಂದು ಸಚಿವರು ಹೇಳಿದರು.
ರಾಜ್ಯದಲ್ಲಿ 43 ಸಾವಿರ ಚದರ್ ಕಿಲೋ ಮೀಟರ್ ಗೂ ಹೆಚ್ಚು ಅರಣ್ಯವಿದ್ದು ಇಷ್ಟು ವಿಶಾಲ ಕಾನನ ಪ್ರದೇಶವನ್ನು ಕೇವಲ ಸಿಬ್ಬಂದಿಯಿಂದ ಮಾತ್ರ ಕಾಯಲು ಸಾಧ್ಯವಿಲ್ಲ. ಹೀಗಾಗಿ ತಂತ್ರಜ್ಞಾನ ಆಧಾರಿತ ಪರಿಹಾರ ಅತ್ಯಗತ್ಯ ಎಂಬುದನ್ನು ಮನಗಂಡು ತಾವು ರಾಜ್ಯಮಟ್ಟದ ಸಮಗ್ರ ಕಮಾಂಡ್ ಕೇಂದ್ರ ಮತ್ತು ಪ್ರಾದೇಶಿಕ ಕೇಂದ್ರ ಆರಂಭಿಸಲು ಸೂಚಿಸಿದ್ದೇವೆ. ಅದಕ್ಕೆ ಅಗತ್ಯ ಹಣ ಬಿಡುಗಡೆ ಮಾಡಿದ್ದು, ಈಗ ಅದು ಸಾಕಾರವಾಗಿದೆ ಎಂದು ಈಶ್ವರ್ ಖಂಡ್ರೆ ವಿವರಿಸಿದರು.
ರೈಲ್ವೆ ಬ್ಯಾರಿಕೇಡ್, ಸೌರಬೇಲಿ, ಆನೆ ಕಂದಕಗಳ ನಿರ್ವಹಣೆ ಮತ್ತು ಅರಣ್ಯದಲ್ಲಿ ಕೈಗೊಳ್ಳುವ ಕಾಮಗಾರಿಗಳ ಸಕಾಲಿಕ ನಿಗಾಕ್ಕೂ ಈ ಕಮಾಂಡ್ ಸೆಂಟರ್ ತಾಂತ್ರಿಕ ಪರಿಹಾರ ಒದಗಿಸಲಿದೆ. ಉಪಗ್ರಹ ಮತ್ತು ಕೃತಕ ಬುದ್ಧಿಮತ್ತೆಯ ಬಳಕೆ ಮಾಡಿಕೊಂಡು ಕಮಾಂಡ್ ಕೇಂದ್ರವನ್ನು ಮತ್ತಷ್ಟು ಪರಿಣಾಮಕಾರಿಗೊಳಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದರು.

