ಜಿ ರಾಮ್ ಜಿ ಕಾಯ್ದೆ ಬಗ್ಗೆ ಬಹಿರಂಗ ಚರ್ಚೆಗೆ ನಾವು ಸಿದ್ಧ, ವಿಶೇಷ ಅಧಿವೇಶನ ಬರೀ ಪ್ರಚಾರಕಷ್ಟೇ: ಹೆಚ್.ಡಿ. ಕುಮಾರಸ್ವಾಮಿ
ಜಿ ರಾಮ್ ಜಿ ಕಾಯ್ದೆ ಬಗ್ಗೆ ಬಹಿರಂಗ ಚರ್ಚೆಗೆ ನಾವು ಸಿದ್ಧರಿದ್ದೇವೆ, ನಾವು ಎಲ್ಲೂ ಕದ್ದು ಓಡಿ ಹೋಗುವುದಿಲ್ಲ ಎಂದು ಹೆಚ್ಡಿಕೆ ಟಾಂಗ್ ಕೊಟ್ಟಿದ್ದಾರೆ.

Published : January 10, 2026 at 8:07 PM IST
ಬೆಂಗಳೂರು: "ಜಿ. ರಾಮ್.ಜಿ. ಕಾಯ್ದೆ ಬಗ್ಗೆ ಬಹಿರಂಗ ಚರ್ಚೆಗೆ ನಾವು ಸಿದ್ಧರಿದ್ದೇವೆ. ನಾವು ಎಲ್ಲೂ ಕದ್ದು ಓಡಿ ಹೋಗುವುದಿಲ್ಲ. ಅಧಿವೇಶನ ಮಾಡಿ ಏನು ಮಾಡಲು ಹೊರಟಿದ್ದೀರ. ಏನು ಪ್ರಯೋಜನ ಇದೆ. ಬರೀ ಪ್ರಚಾರಕ್ಕೆ ಮಾಡುತ್ತಿದ್ದೀರಿ ಅಷ್ಟೇ" ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಖಾಸಗಿ ಹೊಟೇಲ್ನಲ್ಲಿ ಬಿಜೆಪಿ ಜೊತೆ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, "ಡಿಸಿಎಂ ಅವರು ಬಹಿರಂಗ ಚರ್ಚೆಗೆ ಬರಲು ಹೇಳಿದ್ದಾರೆ. ನಾವು ಸಿದ್ಧರಿದ್ದೇವೆ. ಕದ್ದು ಓಡಿ ಹೋಗುವುದಿಲ್ಲ. ಹೊಸ ಕಾಯ್ದೆಯಲ್ಲಿ ಯಾವ ರೀತಿ ಬದಲಾವಣೆ ತಂದಿದ್ದೇವೆ. ನರೇಗಾದಲ್ಲಿ ಯಾವ ದೋಷ ಇತ್ತು ಎಂಬ ಬಗ್ಗೆ ಚರ್ಚೆ ಮಾಡೋಣ. ರಾಜ್ಯ ಹಾಗೂ ರಾಷ್ಟ್ರದಲ್ಲಿ ಕೇಂದ್ರ ಸರ್ಕಾರ ಪ್ರಮುಖ ನಿರ್ಣಯ ಕೈಗೊಂಡಿದೆ. ವಿಬಿ ಜಿ. ರಾಮ್.ಜಿ ಕಾಯ್ದೆ ಜಾರಿ ಮಾಡಿದೆ. ರಾಜ್ಯದಲ್ಲಿ ಈ ಬಗ್ಗೆ ದೊಡ್ಡ ಮಡ್ಡದ ಅಪಪ್ರಚಾರ ನಡೆಯುತ್ತಿದೆ. 2005ರಲ್ಲಿ ಆರಂಭವಾದ ಮನರೇಗಾ ಯೋಜನೆಯಲ್ಲಿ ಕೆಲ ಬದಲಾವಣೆ ಮಾಡಲಾಗಿದೆ. ಮಹಾತ್ಮ ಗಾಂಧಿ ಹೆಸರು ತೆಗೆಯಲಾಗಿದೆ ಎಂದು ಕಾಂಗ್ರೆಸ್ ಅಪಪ್ರಚಾರ ನಡೆಸುತ್ತಿದೆ. ಕಾಂಗ್ರೆಸ್ ಸುದೀರ್ಘ ಆಡಳಿತ ನಡೆಸಿದೆ. ಯಾವುದಾದರು ಪ್ರಮುಖ ಯೋಜನೆಗಳಿಗೆ ಎಷ್ಟು ಮಹಾತ್ಮ ಗಾಂಧಿ ಹೆಸರು ಇಟ್ಟಿದ್ದಾರೆ. ಅವರಿಗೆ ಮಹಾತ್ಮ ಗಾಂಧಿ ಮೇಲೆ ಗೌರವ ಇದ್ದರೆ. ರಾಜ್ಯದಲ್ಲಿ ಎಷ್ಟು ಯೋಜನೆಗಳಿಗೆ ಹೆಸರು ಇಟ್ಟಿದ್ದಾರೆ" ಎಂದು ಪ್ರಶ್ನಿಸಿದರು.
"ರಾಜ್ಯ ಕಾಂಗ್ರೆಸ್ ಸರ್ಕಾರ ಎರಡು ದಿನದ ಅಧಿವೇಶನ ಕರೆಯುತ್ತೇವೆ ಅಂದಿದ್ದಾರೆ. ಕ್ಷೇತ್ರವಾರು 5-10 ಕಿ.ಮೀ. ಪಾದಯಾತ್ರೆ ಮಾಡಲು ಮುಂದಾಗಿದ್ದಾರೆ. ಯಾವ ರೀತಿಯಲ್ಲಿ ಜಿ. ರಾಮ್. ಜಿ. ಯೋಜನೆಯಿಂದ ಜನಸಾಮಾನ್ಯರಿಗೆ, ಕೂಲಿಕಾರ್ಮಿಕರಿಗೆ ಅನ್ಯಾಯ ಆಗುತ್ತದೆ?. 2005ರಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಯೋಜನೆ ತಂದಿರುವುದು ತಪ್ಪು ಅನ್ನೋದಿಲ್ಲ. ಅವತ್ತು ಬಡವರಲ್ಲಿ ನಿರುದ್ಯೋಗದ ಸ್ಥಿತಿ ಇತ್ತು. ಒಳ್ಳೆ ಉದ್ದೇಶದಿಂದಲೇ ತಂದಿದ್ದರು. ಆದರೆ ನಂತರದ ದಿನಗಳಲ್ಲಿ ಈ ಯೋಜನೆ ಎಷ್ಟರ ಮಟ್ಟಿಗೆ ಮಹಾತ್ಮ ಗಾಂಧಿಗೆ ಗೌರವ ತರುವಲ್ಲಿ ಭ್ರಷ್ಟ ರಹಿತವಾಗಿ ಯೋಜನೆ ಜಾರಿಗೆ ತರಲಾಗಿದೆ?".
"ಈ ಯೋಜನೆಗಳ ಹೆಸರಲ್ಲಿ ಕಳ್ಳ ಬಿಲ್ ಮಾಡಿ, ಕೆಲಸವನ್ನೇ ಮಾಡದೇ, ಎರಡೆರಡು ಬಾರಿ ಬಿಲ್ ಮಾಡಿ, ಉಳ್ಳವರು ಇದನ್ನು ನಿರುದ್ಯೋಗ ಹೆಸರಲ್ಲಿ ದುರ್ಬಳಕೆ ಮಾಡಿದ್ದಾರೆ. ಆ ವರದಿ ಆಧಾರದಲ್ಲಿ ಈ ತಿದ್ದುಪಡಿ ತಂದು ಜಾರಿ ಮಾಡಲಾಗಿದೆ. ಈಗ ಉತ್ತಮ ರೀತಿಯಲ್ಲಿ ಯೋಜನೆ ಅನುಷ್ಠಾನ ಮಾಡಲು ತೀರ್ಮಾನಿಸಲಾಗಿದೆ. ಮನರೇಗಾದಲ್ಲಿ ರಾಜ್ಯದಲ್ಲೇ ಹಲವು ಸಮಸ್ಯೆಗಳು ಆಗಿವೆ. ಕೊಪ್ಪಳದಲ್ಲಿ ಕೂಲಿ ಕೊಟ್ಟಿಲ್ಲ ಅಂತ ಗಲಾಟೆ ನಡೆದು ಬಳಿಕ ಪೊಲೀಸರು ಜೊತೆ ಲಾಠಿ ಚಾರ್ಜ್ ನಡೆಸಿದ್ದು. ನರೇಗಾ ಕೆಲಸಕ್ಕೆ ಎಂದು ಕಾರ್ಮಿಕರು ಟ್ರ್ಯಾಕ್ಟರ್ನಲ್ಲಿ ಹೋಗುತ್ತಿದ್ದರು. ಅದು ಅವಘಡ ಆಗಿ ಇಬ್ಬರು ಮೂವರು ಅಸುನೀಗುತ್ತಾರೆ. ಆದರೆ, ಅವರ ಹೆಸರಲ್ಲಿ ಯಾವುದೇ ಜಾಬ್ ಕಾರ್ಡ್ ಇದ್ದಿಲ್ಲ. ಜಾಬ್ ಕಾರ್ಡ್ನಲ್ಲಿ ಅವ್ಯವಹಾರ ಆಗಿದೆ. 60 ವರ್ಷ ಮೇಲ್ಪಟ್ಟವರಿಗೆ ಜಾಬ್ ಕಾರ್ಡ್ ಮಾಡಿಸಲಾಗಿದೆ. ಇದನ್ನೆಲ್ಲ ಪರಿಗಣಿಸಿ ಕೇಂದ್ರ ಈ ತಿದ್ದುಪಡಿ ಮಾಡಿದೆ".
ಯುಪಿಎ ಹಾಗೂ ಎನ್ ಡಿಎ ಕಾಲದಲ್ಲಿ ಮನರೇಗಾ: "2006 ರಿಂದ 2014ರ ಯುಪಿಎ ಅವಧಿಯಲ್ಲಿ ಮನರೇಗಾ ಅಡಿ 1660 ಮಾನವ ದಿನ ಸೃಜಿಸಲಾಗಿತ್ತು. ಮೋದಿ ನೇತೃತ್ವದ ಎನ್ಡಿಎ ಆಡಳಿತದಲ್ಲಿ 3,210 ಮಾನವ ದಿನಗಳನ್ನು ಸೃಜಿಸಲಾಗಿದೆ. ಯುಪಿಎ ಅವಧಿಯಲ್ಲಿ 2,13,220 ಕೋಟಿ ಹಣ ಬಿಡುಗಡೆ ಮಾಡಲಾಗಿತ್ತು. ಎನ್ ಡಿಎ ಅವಧಿಯಲ್ಲಿ 8,53,810 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ಯುಪಿಎ ಅವಧಿಯಲ್ಲಿ ನರೇಗಾದಡಿ ಒಟ್ಟು 153 ಲಕ್ಷ ಕಾಮಗಾರಿಗಳು ಪೂರ್ಣವಾಗಿದೆ. ಅದೇ ಎನ್ಡಿಎ ಅವಧಿಯಲ್ಲಿ 862 ಲಕ್ಷ ಕಾಮಗಾರಿಗಳು ಪೂರ್ಣವಾಗಿವೆ. ಯುಪಿಎ ಅವಧಿಯಲ್ಲಿ 17.6% ಆಸ್ತಿ ಸೃಜನೆ ಆಗಿದ್ದರೆ, ಎನ್ ಡಿಎ ಅವಧಿಯಲ್ಲಿ 62.95% ಆಸ್ತಿ ಸೃಜನೆ ಆಗಿದೆ. ಯುಪಿಎ ಅವಧಿಯಲ್ಲಿ ಕಾರ್ನಾಟಕದಲ್ಲಿ ಸುಮಾರು 58.46 ಕೋಟಿ ಮಾನವ ದಿನಗಳು ಸೃಜನೆಯಾಗಿದ್ದರೆ, ಎನ್ ಡಿಎ ಅವಧಿಯಲ್ಲಿ 126.8 ಕೋಟಿ ಮಾನವ ದಿನಗಳು ಸೃಜನೆಯಾಗಿದೆ. ಯುಪಿಎ ಅವಧಿಯಲ್ಲಿ ರಾಜ್ಯಕ್ಕೆ 8,739 ಕೋಟಿ ರೂ. ಹಣ ನರೇಗಾದಡಿ ಬಿಡುಗಡೆ ಮಾಡಿತ್ತು. ಅದೇ ಎನ್ ಡಿಎ ಅವಧಿಯಲ್ಲಿ ರಾಜ್ಯಕ್ಕೆ ಸುಮಾರು 48,306 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆ" ಎಂದು ವಿವರಿಸಿದರು.
ಡಿಸಿಎಂ ಗೊಂದಲ ಮಾಡಿ ಕೊಂಡಿದ್ದಾರೆ: ಪ್ರಹ್ಲಾದ್ ಜೋಶಿ ಮನರೇಗಾ ಯೋಜನೆಯಡಿ 11,03,876 ಕಾಮಗಾರಿಗಳಲ್ಲಿ ಅವ್ಯವಹಾರ ಆಗಿದೆ ಎಂದು ಹೇಳಿದ್ದಾರೆ. ಆದರೆ ಅದಮ್ಮು ಡಿಸಿಎಂ ಡಿ.ಕೆ.ಶಿವಕುಮಾರ್ ಅಷ್ಟು 11,03,876 ಕೋಟಿ ಹಣ ಅವ್ಯವಹಾರ ಅಂತ ತಪ್ಪು ತಿಳಿದು ಗೊಂದಲಕ್ಕೀಡಾಗಿದ್ದಾರೆ. ಜೋಶಿ ಅವರು ಹೇಳಿದ್ದು ಕಾಮಗಾರಿಗಳ ಸಂಖ್ಯೆ, ಅವರು ಅವ್ಯವಹಾರದ ಬಗ್ಗೆ ಮಾತನಾಡಿದ್ದಾರೆ. ಆದರೆ ಡಿಸಿಎಂ ಗೊಂದಲ ಮಾಡಿಕೊಂಡಿದ್ದಾರೆ" ಎಂದು ಸ್ಪಷ್ಟಪಡಿಸಿದರು.
"ಕೃಷಿ ಸಮಯದಲ್ಲಿ ಹಳ್ಳಿಗಳಲ್ಲಿ ಕೂಲಿಗೆ ಜನ ಸಿಕ್ಕಲ್ಲ ಎಂದು ದೂರುಗಳು ಬಂದಿತ್ತು. ಹಾಗಾಗಿ ಕೃಷಿ ಅವಧಿಯಲ್ಲಿ 60 ದಿನ ಕೂಲಿ ಕಾರ್ಮಿಕರಿಗೆ ರಜೆ ಕೊಡಲಾಗುತ್ತದೆ. ಆ ವೇಳೆ ರೈತರ ಕೃಷಿ ಭೂಮಿಯಲ್ಲಿ ಕೆಲಸ ಮಾಡಲು ಅವಕಾಶ ಕಲ್ಲಿಸಲಾಗಿದೆ. ರಾಜ್ಯದ ಕೊಡುಗೆ 40% ಇದ್ದರೂ, ಹೆಚ್ಚುವರಿಯಾಗಿ 17,000 ಕೋಟಿ ಹಣ ಹಲವಾರು ರಾಜ್ಯ ಸರ್ಕಾರಗಳಿಗೆ ಬರುತ್ತದೆ. ಹಲವು ರಾಜ್ಯಗಳಲ್ಲಿ ಕೂಲಿ ಕೊಟ್ಟಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ಈ ಬದಲಾವಣೆ ತರಲಾಗಿದೆ. ರಾಜ್ಯ ಸರ್ಕಾರದ ಜವಾಬ್ದಾರಿ ಏನಿದೆ ಎಂಬುದನ್ನು ತಿಳಿಸಲಾಗಿದೆ" ಎಂದರು.
"ಈ ಯೋಜನೆಯಲ್ಲಿ ಗ್ರಾಮ ಪಂಚಾಯಿತಿಗಳಿಗೂ ಅಧಿಕಾರ ಇದೆ. ಅದರ ಮೂಲಕ ಪ್ರತಿ ಮನೆಗೆ ಕೂಲಿ ಕೆಲಸ ಸಿಕ್ಕಿದೆಯೋ ಇಲ್ಲವೋ ಎಂಬುದನ್ನು ಅವರೇ ಪರಿಶೀಲಿಸಬೇಕು. ಗ್ರಾಮ ಪಂಚಾಯಿತಿಯಲ್ಲಿ ಪಾದಯಾತ್ರೆ ಮಾಡುತ್ತಾರೆ. ನಿಮ್ಮ ಯೋಗ್ಯತೆಗೆ ಗ್ರಾಮ ಪಂಚಾಯಿತಿಗಳ ಚುನಾವಣೆ ತಳ್ಳಿ ತಳ್ಳಿ 15ನೇ ಹಣಕಾಸು ಆಯೋಗದ ಹಣನೂ ಬರದ ರೀತಿ ಮಾಡಿದ್ದೀರ. ಪದೇ ಪದೆ ಕೇಂದ್ರದ ಜೊತೆ ಏಕೆ ಘರ್ಷಣೆ ಮಾಡಬೇಕು. ನಾನಿದ್ದಾಗ ರಾಜ್ಯ ಸರ್ಕಾರದಿಂದಲೇ ಮನರೇಗಾದ ಕೂಲಿ ಕಾರ್ಮಿಕರಿಗೆ ಹಣ ಕೊಟ್ಟಿದ್ದೇನೆ. ಆಗ 800 ಕೋಟಿ ರೂ. ಕೇಂದ್ರ ಹಣ ಕೊಟ್ಟಿರಲಿಲ್ಲ. ಮೊದಲಿಗೆ ನಾನು ಹಣ ಬಿಡುಗಡೆ ಮಾಡಿ ಬಳಿಕ ಕೇಂದ್ರದಿಂದ ಆ ಹಣ ಪಡೆದಿದ್ದೇನೆ" ಎಂದು ವಿವರಿಸಿದರು.
ಕಾಂಗ್ರೆಸ್ ರಾಮ ವಿರೋಧಿಯಾಗಿದೆ: "ರಾಜ್ಯದಲ್ಲಿ ಈ ಯೋಜನೆಯಡಿ ಹಲವಾರು ಹಣ ಲೂಟಿ ಆಗಿರುವ ಮಾಹಿತಿ ಇದೆ. ಜಿ. ರಾಮ್.ಜಿ. ಅಂದರೆ ರಾಮನ ಹೆಸರು ಅಂತ ತಿಳಿದುಕೊಳ್ಳಬೇಡಿ. ಅದಿ ವಿಕಸಿತ ಭಾರತದ ಪರಿಕಲ್ಪನೆ. ನೀವು ಮನರೇಗಾ ಅಂತ ಹೆಸರು ಇಟ್ಟಿಲ್ವಾ?. ಕೇಂದ್ರ ಸರ್ಕಾರದ ಜೊತೆ ನಿತ್ಯ ಸಂಘರ್ಷ ಮಾಡದೇ. ಗೌರವಯುತವಾಗಿ ವರ್ತನೆ ಮಾಡಿ. ಕಾಂಗ್ರೆಸ್ ನವರು ರಾಮ ವಿರೋಧಿಯಾಗಿದ್ದಾರೆ. ಬಿಜೆಪಿಯಾಗಲಿ, ಈ ಯೋಜನೆಯಾಗಲಿ ರಾಮನ ವಿರುದ್ಧ ಅಲ್ಲ" ಎಂದು ಟೀಕಿಸಿದರು.
ಸಿಎಂ ಸಿದ್ದರಾಮಯ್ಯ ಲೀಸ್ ಬೇಸ್ಡ್ ಸಿಎಂ: "ಸಿದ್ದರಾಮಯ್ಯ ದಾಖಲೆ ಮಾಡಿದ್ದಾರಲ್ಲ. ಹೈ - ಕಮಾಂಡ್ ಹೇಳುವವರೆಗೆ ಇರುತ್ತೇನೆ ಅಂತಿದ್ದಾರೆ. ನನ್ನ ಪ್ರಕಾರ ಅವರು ಲೀಸ್ ಬೇಸ್ಡ್ ಸಿಎಂ. ದೇವರಾಜು ಅರಸು ಅವರು ಇಂದಿರಾ ಗಾಂಧಿ ವಿರುದ್ಧಾನೇ ಹೋಗಿದ್ದರು. ಸಿದ್ದರಾಮಯ್ಯ ಅವರು ಹೈ ಕಮಾಂಡ್ ಹೇಳಿದರೆ ಸಿಎಂ ಆಗಿ ಮುಂದುವರಿಯುತ್ತೇನೆ ಅಂತಿದ್ದಾರೆ" ಎಂದು ಕುಟುಕಿದರು.
ಸ್ಕೀಂ ಬದಲು ಸ್ಕ್ಯಾಮ್ ಬಗ್ಗೆ ಯೋಚನೆ: ಬಿ.ವೈ. ವಿಜಯೇಂದ್ರ: ಇದೇ ವೇಳೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, "ಕೇಂದ್ರ ಸರ್ಕಾರದ ಯೋಜನೆಗಳ ಕುರಿತು ತಪ್ಪು ಮಾಹಿತಿ ನೀಡಿ ಜನರಲ್ಲಿ ತಪ್ಪು ಕಲ್ಪನೆ ಮೂಡಿಸುವ ಕೆಲಸವನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಜಿ ರಾಮ್ ಜಿ ಯೋಜನೆ ಜಾರಿಯ ಮೂಲಕ ಲಕ್ಷಾಂತರ ಕೋಟಿ ಹೂಡಿಕೆ ಮಾಡಿ ಗ್ರಾಮೀಣ ಅಭಿವೃದ್ಧಿ ಕನಸು ನನಸಾಗಿಸಲು ಮುಂದಾಗಿರುವುದು ತಪ್ಪೇ?. ಗಾಂಧೀಜಿ ಅವರ ಗ್ರಾಮ ಸ್ವರಾಜ್ಯದ ಕನಸು ನನಸಾಗಲು ಏಳೆಂಟು ಲಕ್ಷ ಕೋಟಿ ಖರ್ಚು ಮಾಡುವ ಈ ಯೋಜನೆ ಸುಲಲಿತವಾಗಿ ಸಾಗಬೇಕು. ಬಡವರಿಗೆ ತಲುಪಬೇಕೆಂದು ಪ್ರಧಾನಿಯವರು ಆಲೋಚಿಸಿದ್ದೇ ತಪ್ಪೇ ಹಾಗಿದ್ದರೆ. ಈ ದೇಶದಲ್ಲಿ 55ರಿಂದ 60 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷವು ಸ್ಕೀಂಗಳಲ್ಲಿ ನಂಬಿಕೆ ಇಟ್ಟಿರಲಿಲ್ಲ. ಅವರು ಸ್ಕ್ಯಾಮ್‍ಗಳಲ್ಲಿ (ಹಗರಣ) ನಂಬಿಕೆ ಇಟ್ಟಿದ್ದರು" ಎಂದು ಆರೋಪಿಸಿದರು.
ದ್ವೇಷಭಾಷಣ ಪ್ರತಿಬಂಧಕ ಮಸೂದೆ ಬಗ್ಗೆ ರಾಜ್ಯಪಾಲರಿಗೆ ಮನವರಿಕೆ-ವಿಪಕ್ಷ ನಾಯಕ: "ದ್ವೇಷಭಾಷಣ ಪ್ರತಿಬಂಧಕ ಮಸೂದೆ ವಾಕ್ ಸ್ವಾತಂತ್ರ್ಯವನ್ನು ಕಸಿಯಲಿದೆ. ಈ ಕುರಿತು ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಡುತ್ತೇವೆ" ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಹೇಳಿದರು.
ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ದ್ವೇಷಭಾಷಣ ಪ್ರತಿಬಂಧಕ ಮಸೂದೆಯ ಬಗ್ಗೆ ಅಧಿವೇಶನದಲ್ಲಿ ಚರ್ಚೆಗೆ ಅವಕಾಶ ನೀಡಬೇಕಿತ್ತು. ಇಂತಹ ಮಸೂದೆ ತರುವಾಗ ಅದು ಜನರ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂದು ನೋಡಬೇಕಾಗುತ್ತದೆ. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿದ ಸಂವಿಧಾನದಲ್ಲಿ ಮಸೂದೆ ಬಗ್ಗೆ ಚರ್ಚೆ ನಡೆಸಲು ಅವಕಾಶವಿದೆ. ವಿಧಾನಸಭೆ ಇರುವುದು ಮಸೂದೆ ಮಂಡನೆ ಹಾಗೂ ಚರ್ಚೆಗೇ ಹೊರತು ಗಲಾಟೆ ಮಾಡುವುದಕ್ಕಲ್ಲ. ಆದರೆ ಕಾಂಗ್ರೆಸ್ ಸರ್ಕಾರ ಇದರ ಚರ್ಚೆಗೆ ಅವಕಾಶ ನೀಡಲಿಲ್ಲ. ನಾನು ಮಸೂದೆಯ ಬಗ್ಗೆ ಚರ್ಚೆ ಮಾಡಲು ಮುಂದಾದಾಗ ಕಾಂಗ್ರೆಸ್ ಶಾಸಕರು, ಸಚಿವರು ಭಯಗೊಂಡು ತರಾತುರಿಯಲ್ಲಿ ಮಸೂದೆ ಮಂಡನೆ ಮಾಡಿದರು. ಈ ವಿಚಾರದಲ್ಲಿ ಸ್ಪೀಕರ್ ಯು.ಟಿ. ಖಾದರ್ ಅವರ ನಡೆಯೂ ನನಗೆ ಬೇಸರ ತಂದಿದೆ" ಎಂದರು.
"ಬಿಜೆಪಿಯಲ್ಲಿ 15 ಶಾಸಕರು ಈ ಬಗ್ಗೆ ಮಾತನಾಡುವುದಿತ್ತು. ಬಳಿಕ ಮಸೂದೆಯನ್ನು ಸದನ ಸಮಿತಿಗೆ ಒಪ್ಪಿಸಬೇಕೆಂದು ತೀರ್ಮಾನಿಸಿದ್ದೆವು. ಆದರೆ ಏಕಾಏಕಿ ಮಸೂದೆ ಪಾಸ್ ಮಾಡಲಾಗಿದೆ. ಈಗ ಅದು ರಾಜ್ಯಪಾಲರ ಬಳಿಗೆ ಹೋಗಿದೆ. ಸೋಮವಾರ ನಾನು, ರಾಜ್ಯಾಧ್ಯಕ್ಷರು ಹಾಗೂ ಇತರ ಮುಖಂಡರು ರಾಜ್ಯಪಾಲರ ಬಳಿಗೆ ಹೋಗಿ ಈ ಬಗ್ಗೆ ಮನವರಿಕೆ ಮಾಡಿಕೊಡುತ್ತೇವೆ. ಇದು ಜನರ ಹಾಗೂ ಮಾಧ್ಯಮಗಳ ಸ್ವಾತಂತ್ರ್ಯ ಕಸಿಯುವ ಮಸೂದೆ. ತುರ್ತು ಪರಿಸ್ಥಿತಿ ತಂದು ವಾಕ್ ಸ್ವಾತಂತ್ರ್ಯ ಕಸಿದುಕೊಂಡಂತೆಯೇ ಇಲ್ಲಿ ಮಸೂದೆ ಮೂಲಕ ಸ್ವಾತಂತ್ರ್ಯ ಕಸಿಯಲಾಗುತ್ತಿದೆ. ನಮ್ಮ ಅಹವಾಲಿಗೆ ಸರ್ಕಾರ ಅವಕಾಶ ನೀಡುವುದಿಲ್ಲ. ಆದ್ದರಿಂದ ರಾಜ್ಯಪಾಲರ ಬಳಿಗೆ ಹೋಗುತ್ತಿದ್ದೇವೆ. ರಾಜ್ಯಪಾಲರು ಮೀಸಲಾತಿಗೆ ಸಂಬಂಧಿಸಿದಂತೆ ಸ್ಪಷ್ಟೀಕರಣ ಕೇಳಿದ್ದಾರೆ. ಯಾವುದೇ ಕಾನೂನು ತರುವಾಗ ಹೀಗೆಯೇ ಚರ್ಚೆ ಮಾಡಬೇಕಾಗುತ್ತದೆ" ಎಂದರು.
ಕೇರಳದಲ್ಲಿ ಕನ್ನಡ ಭಾಷೆಗೆ ಧಕ್ಕೆ, ಇದು ಮೊದಲೇ ಆಗಿರುವ ಮ್ಯಾಚ್ ಫಿಕ್ಸಿಂಗ್: "ಕೇರಳದ ಕನ್ನಡ ಶಾಲೆಗಳಲ್ಲಿ ಕನ್ನಡಕ್ಕೆ ಆದ್ಯತೆ ನೀಡುತ್ತಿಲ್ಲ. ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಸಿಎಂ ಸಿದ್ದರಾಮಯ್ಯ ಆಪ್ತ ಪಾಲುದಾರರಾದ ಮುಖಂಡರೇ ಇದನ್ನು ಮಾಡಿದ್ದಾರೆ. ಇದರಲ್ಲಿ ಸಿಎಂ, ಡಿಸಿಎಂ ಕೈವಾಡ ಇದ್ದು, ಈ ಎಲ್ಲ ಬೆಳವಣಿಗೆಗಳು ಅವರಿಗೆ ಮೊದಲೇ ಗೊತ್ತಿತ್ತು. ನೀನು ಹೊಡೆದಂತೆ ಮಾಡು ನಾನು ಅತ್ತಂತೆ ಮಾಡುತ್ತೇನೆ ಎಂದು ಮೊದಲೇ ತೀರ್ಮಾನಿಸಿಕೊಂಡಿದ್ದರು. ಇವರ ಬ್ರದರ್‌ಗಳು ಎಲ್ಲವನ್ನೂ ಮೊದಲೇ ಚರ್ಚೆ ಮಾಡಿಕೊಂಡು ಮ್ಯಾಚ್ ಫಿಕ್ಸಿಂಗ್ ಮಾಡಿದ್ದಾರೆ".
"ಮುಖ್ಯಮಂತ್ರಿಗಳು ಕೇರಳಕ್ಕೆ ಪತ್ರ ಬರೆದಿರುವುದು ಕೂಡ ಮೊದಲೇ ಹೊಂದಾಣಿಕೆ ಮಾಡಿಕೊಂಡಿರುವುದರ ಭಾಗ. ಕೇರಳ ಸಿಎಂ ಬುಲ್ಡೋಜರ್ ಎಂದಾಗ ಅದಕ್ಕೆ ಸಿಎಂ ಸಿದ್ದರಾಮಯ್ಯ ಏನೂ ಹೇಳಲಿಲ್ಲ. ಇದು ಕನ್ನಡಕ್ಕೆ ದ್ರೋಹ ಬಗೆದ ಸರ್ಕಾರ. ವೇದಿಕೆಯಲ್ಲಿ ಕೇರಳ ಮುಖ್ಯಮಂತ್ರಿಯನ್ನು ಭೇಟಿ ಮಾಡಿದಾಗಲೇ ಈ ಬಗ್ಗೆ ಚರ್ಚೆ ಮಾಡಬೇಕಿತ್ತು. ಎಲ್ಲದಕ್ಕೂ ಮೋದಿಯಿಂದ ಅನ್ಯಾಯ ಎನ್ನುತ್ತಾರೆ. ಈಗ ಇದನ್ನು ಏಕೆ ಅನ್ಯಾಯ ಎಂದು ಹೇಳುತ್ತಿಲ್ಲ? ಸಿಎಂ ಸಿದ್ದರಾಮಯ್ಯ ಕನ್ನಡಕ್ಕೆ ಮಾರಕವಾದ ನಡೆ ಇಟ್ಟಿದ್ದಾರೆ. ಇದರ ವಿರುದ್ಧ ತೀವ್ರ ಪ್ರತಿಭಟನೆ ಮಾಡಲಿ. ಇಲ್ಲವಾದರೆ ಇದರಲ್ಲಿ ರಾಜ್ಯದ ಕಾಂಗ್ರೆಸ್ ನಾಯಕರು ಶಾಮೀಲಾಗಿದ್ದಾರೆ" ಎಂದೇ ಭಾವಿಸುತ್ತೇವೆ ಎಂದರು.
ಇದನ್ನೂ ಓದಿ: ಜ.12ಕ್ಕೆ ಕಲಬುರಗಿಗೆ ಸಿಎಂ ಆಗಮನ: 467 ಕಾಮಗಾರಿಗಳಿಗೆ ಅಡಿಗಲ್ಲು, ಉದ್ಘಾಟನೆ: ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ

