ಗೃಹ ಜ್ಯೋತಿ ಮರು ಪರಿಶೀಲನೆ: ಬೆಸ್ಕಾಂ ನಿಂದ ಜುಲೈ ತಿಂಗಳ ಮೀಟರ್ ರೀಡಿಂಗ್ ಇಲ್ಲ
ಸರ್ಕಾರ ಗೃಹ ಜ್ಯೋತಿ ಯೋಜನೆಯ ಮರು ಪರಿಶೀಲನೆಗೆ ಮುಂದಾಗಿದೆ. ಇದರ ಸರ್ವೇ ಕಾರ್ಯದಲ್ಲಿ ಮೀಟರ್ ರೀಡರ್ಗಳು ಬ್ಯುಸಿಯಾಗಿದ್ದಾರೆ. ಹಾಗಾಗಿ ಈ ತಿಂಗಳ ಮೀಟರ್ ರೀಡಿಂಗ್ ಇರುವುದಿಲ್ಲ ಎಂದು ಬೆಸ್ಕಾಂ ಹೇಳಿದೆ.

Published : July 8, 2026 at 8:32 PM IST
ಬೆಂಗಳೂರು: ಗೃಹ ಜ್ಯೋತಿ ಫಲಾನುಭವಿಗಳ ಮನೆ-ಮನೆ ಪರಿಶೀಲನೆ ಕಾರ್ಯಕ್ಕೆ ಬೆಸ್ಕಾಂ ಮೀಟರ್ ರೀಡರ್ ಗಳು ನಿಯೋಜನೆಗೊಂಡಿರುವುದರಿಂದ ಜುಲೈ ತಿಂಗಳ ನಿಯಮಿತ ಮೀಟರ್ ರೀಡಿಂಗ್ ಇರುವುದಿಲ್ಲ ಎಂದು ಬೆಸ್ಕಾಂ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಈ ತಿಂಗಳಿನಲ್ಲಿ ವಿದ್ಯುತ್ ಮೀಟರ್ ರೀಡಿಂಗ್ ಇಲ್ಲದೆಯೇ ಗ್ರಾಹಕರಿಗೆ ಕರೆಂಟ್ ಬಿಲ್ ನೀಡಲು ಬೆಸ್ಕಾಂ ಮುಂದಾಗಿದೆ. ಗ್ರಾಹಕರ ಸರಾಸರಿ ವಿದ್ಯುತ್ ಬಳಕೆ ಆದಾರದ ಮೇಲೆ ಕರೆಂಟ್ ಬಿಲ್ ನೀಡಲಾಗುತ್ತದೆ ಎಂದು ಅದು ತಿಳಿಸಿದೆ.
ಜುಲೈ ತಿಂಗಳ ಬಿಲ್ಲಿಂಗ್ ಅವಧಿಯಲ್ಲಿ ಗ್ರಾಹಕರಿಗೆ ಕಳೆದ ಮೂರು ತಿಂಗಳ ಸರಾಸರಿ ವಿದ್ಯುತ್ ಬಳಕೆ ಆಧಾರದ ಮೇಲೆ ಸರಾಸರಿ ಬಿಲ್ ನೀಡಲಾಗುತ್ತದೆ ಎಂದು ತಿಳಿಸಿರುವ ಎಂದು ಬೆಸ್ಕಾಂ, ಹೆಚ್ ಟಿ ಗ್ರಾಹಕರು, 40 HP ಮತ್ತು ಅದಕ್ಕಿಂತ ಹೆಚ್ಚಿನ ಮಂಜೂರಾದ ಲೋಡ್ ಹೊಂದಿರುವ ಲೋ ಟೆನ್ಷನ್ (LT) ಗ್ರಾಹಕರು, ಸೋಲಾರ್ ರೂಫ್ಟಾಪ್ (SRTPV) ಗ್ರಾಹಕರು ಹಾಗೂ ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆದಿರುವ ಗ್ರಾಹಕರಿಗೆ ನೈಜ ಮೀಟರ್ ರೀಡಿಂಗ್ ಆಧಾರದ ಮೇಲೆಯೇ ಬಿಲ್ ನೀಡಲಾಗುವುದು ಎಂದು ಸ್ಪಷ್ಟಪಡಿಸಿದೆ.
ವಿದ್ಯುತ್ ಬಳಕೆ ಕುರಿತಂತೆ ಜುಲೈ ತಿಂಗಳ ಸರಾಸರಿ ಬಿಲ್ಗಳನ್ನು ಗ್ರಾಹಕರಿಗೆ ಎಸ್.ಎಂ. ಎಸ್ ಮತ್ತು ಇಮೇಲ್ ಮೂಲಕ ಕಳುಹಿಸಲಾಗುವುದು. ಗೃಹ ಬಳಕೆದಾರರಿಗೆ ಆಗಸ್ಟ್ ತಿಂಗಳಿನಿಂದ ಯಥಾಪ್ರಕಾರ ನಿಯಮಿತ ಮೀಟರ್ ರೀಡಿಂಗ್ ಮತ್ತು ನೈಜ ವಿದ್ಯುತ್ ಬಳಕೆಯ ಆಧಾರದ ಮೇಲೆ ಬಿಲ್ ನೀಡಲಾಗುತ್ತದೆ ಎಂದು ಇಲಾಖೆ ಹೇಳಿದೆ.
ಜುಲೈ ತಿಂಗಳ ಸರಾಸರಿ ಬಿಲ್ಲಿಂಗ್ ಅವಧಿಯಲ್ಲಿನ ವ್ಯತ್ಯಾಸದ ಯೂನಿಟ್ಗಳನ್ನು, ನೈಜ ಮೀಟರ್ ರೀಡಿಂಗ್ ಆರಂಭವಾದ ನಂತರ ಮುಂದಿನ ಬಿಲ್ಗಳಲ್ಲಿ ಸೂಕ್ತವಾಗಿ ಹೊಂದಾಣಿಕೆ (Adjust) ಮಾಡಲಾಗುವುದು. ಗ್ರಾಹಕರು ಜುಲೈ ಬಿಲ್ನ ಪಾವತಿಗೆ ಪ್ರಸ್ತುತ ಚಾಲ್ತಿಯಲ್ಲಿರುವ ಎಲ್ಲಾ ಪಾವತಿ ವಿಧಾನಗಳನ್ನು (ಉಪ ವಿಭಾಗದ ನಗದು ಕೌಂಟರ್ಗಳು, ಬೆಸ್ಕಾಂ ವೆಬ್ಸೈಟ್, ಬೆಸ್ಕಾಂ ಮಿತ್ರ ಆಪ್ ಹಾಗೂ ಥರ್ಡ್ ಪಾರ್ಟಿ ಆಪ್) ಬಳಸಿಕೊಳ್ಳಬಹುದಾಗಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

