ETV Bharat / state

ಸಾರಿಗೆ ನೌಕರರ ಬೇಡಿಕೆ ಈಡೇರಿಕೆ ಕುರಿತು ಜುಲೈ 15ಕ್ಕೆ ಸಭೆ: ನಿಗಮಗಳ ಪರ ವಕೀಲರಿಂದ ಹೈಕೋರ್ಟ್​ಗೆ ಮಾಹಿತಿ

ಸಿ.ವೇದಾವತಿ ಮತ್ತು ಎಚ್‌.ವಿ.ಶೀಧರ್‌ ಮತ್ತಿತರರು ಸಲ್ಲಿಸಿರುವ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿಭು ಬಖ್ರು ಅವರಿದ್ದ ವಿಭಾಗೀಯ ಪೀಠಕ್ಕೆ ಸಾರಿಗೆ ನಿಗಮಗಳ ಪರ ವಕೀಲರು ಈ ಮಾಹಿತಿ ನೀಡಿದ್ದಾರೆ.

Meeting on July 15 regarding fulfillment of transport employees' demands
ಸಾರಿಗೆ ನೌಕರರ ಬೇಡಿಕೆ ಈಡೇರಿಕೆ ಕುರಿತು ಜುಲೈ 15ಕ್ಕೆ ಸಭೆ - ಹೈಕೋರ್ಟ್​ಗೆ ಮಾಹಿತಿ (ETV Bharat)
author img

By ETV Bharat Karnataka Team

Published : July 8, 2026 at 8:57 PM IST

1 Min Read
Choose ETV Bharat

ಬೆಂಗಳೂರು: ಸಾರಿಗೆ ನೌಕರರ ಮುಷ್ಕರ ಪರಿಹರಿಸುವ ಸಂಬಂಧ ಇದೇ 15 ರಂದು ಕಾರ್ಮಿಕ ಆಯುಕ್ತರು ಮತ್ತು ನೌಕರರೊಂದಿಗೆ ಸಂಧಾನ ಮಾತುಕತೆ ನಿಗದಿಯಾಗಿದೆ ಎಂದು ಸಾರಿಗೆ ನಿಗಮಗಳ ಪರ ವಕೀಲರು ಹೈಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ.

ನೌಕರರ ಮುಷ್ಕರ ಪ್ರಶ್ನಿಸಿ ನಗರದ ಮನೆ ಕೆಲಸಗಾರ್ತಿ ಸಿ.ವೇದಾವತಿ ಮತ್ತು ಕಟ್ಟಡ ಕಾರ್ಮಿಕ ಎಚ್‌.ವಿ.ಶೀಧರ್‌ ಮತ್ತಿತರರು ಸಲ್ಲಿಸಿರುವ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿಭು ಬಖ್ರು ಅವರಿದ್ದ ವಿಭಾಗೀಯ ಪೀಠಕ್ಕೆ ಸಾರಿಗೆ ನಿಗಮಗಳ ಪರ ವಕೀಲರು ಈ ಮಾಹಿತಿ ನೀಡಿದ್ದಾರೆ.

ಇದಕ್ಕೆ ಸಾರಿಗೆ ನೌಕರರ ಪರ ಕಾರ್ಮಿಕ ಸಂಘಟನೆಗಳ ವಕೀಲರು, ನ್ಯಾಯಾಲಯ ನಿರ್ದೇಶನ ನೀಡಿದ್ದರೂ ಸಹ ಸರ್ಕಾರ ಸಾರಿಗೆ ಇಲಾಖೆ ನೌಕರರ ಬೇಡಿಕೆಗೆ ಸ್ಪಂದಿಸಿಲ್ಲ. ಹಾಗಾಗಿ ಹೈಕೋರ್ಟ್‌ ಸಾರಿಗೆ ನೌಕರರ ಹಿತಾಸಕ್ತಿಯನ್ನೂ ಪರಿಗಣಿಸಬೇಕು ಎಂದು ಮನವಿ ಮಾಡಿದರು. ಈ ವೇಳೆ, ನಿಗಮಗಳ ಪರ ವಕೀಲರು ಉತ್ತರಿಸಿ, ಈಗಾಗಲೇ ಜು.15ರಂದು ಕಾರ್ಮಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ಸಭೆ ಕರೆಯಲಾಗಿದೆ. ಅದರಲ್ಲಿ ನೌಕರರ ಬೇಡಿಕೆಗಳ ಪರಿಹಾರದ ಬಗ್ಗೆ ಸಮಗ್ರವಾಗಿ ಮತ್ತು ಸೌದಾರ್ಹಯುತವಾಗಿ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.

ಆ ಹೇಳಿಕೆಯನ್ನು ದಾಖಲಿಸಿದ ನ್ಯಾಯಾಲಯ, ಸಂಧಾನ ಮಾತುಕತೆ ನಿಗದಿಯಾಗಿರುವ ಹಿನ್ನೆಲೆಯಲ್ಲಿ ವಿಚಾರಣೆ ಆ.5ಕ್ಕೆ ಮುಂದೂಡಿತು. ಅಲ್ಲದೇ, ಈ ಹಿಂದೆ ಮುಷ್ಕರ ನಡೆಸದಂತೆ ನೀಡಿದ್ದ ನಿರ್ಬಂಧ ಆದೇಶವನ್ನು ಮುಂದುವರಿಸಿತು.

ಪ್ರಕರಣ: ರಾಜ್ಯ ಸರಕಾರವು ಕರ್ನಾಟಕ ಅಗತ್ಯ ಸೇವೆಗಳ ನಿರ್ವಹಣಾ (ತಿದ್ದುಪಡಿ) ಕಾಯಿದೆಯಡಿ 2026ರ ಜ.1 ರಿಂದ ಜೂ.30 ರವರೆಗೆ ಮುಷ್ಕರ ನಿಷೇಧಿಸಿದೆ. ಈ ಕಾಯಿದೆಯ ಸೆಕ್ಷ ನ್‌ 4 ಮತ್ತು 5ರ ಅಡಿ ಮುಷ್ಕರದಲ್ಲಿ ಭಾಗವಹಿಸಿದರೆ ಮತ್ತು ಭಾಗವಹಿಸುವಂತೆ ಪ್ರಚೋದಿಸುವ ವ್ಯಕ್ತಿಯನ್ನು ಆರು ತಿಂಗಳು ಜೈಲಿನಲ್ಲಿ ಇಡಬಹುದಾಗಿದೆ. ಕೈಗಾರಿಕಾ ವಿವಾದಗಳ ಕಾಯಿದೆ ಅಡಿಯಲ್ಲೂ ಸಾರಿಗೆ ಸಂಸ್ಥೆಗಳ ಸೇವೆಯನ್ನು ಸಾರ್ವಜನಿಕ ಬಳಕೆ ಸೇವೆ ಎಂದು ಘೋಷಿಸಲಾಗಿದೆ. ಈ ಸಂಬಂಧ ಸಂಧಾನ ಪ್ರಕ್ರಿಯೆ ನಡೆಯುತ್ತಿರುವುದರ ನಡುವೆಯೇ ಮುಷ್ಕರಕ್ಕೆ ನೋಟಿಸ್‌ ನೀಡಿರುವುದು ಕಾನೂನು ಬಾಹಿರ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.

ಇದನ್ನು ಓದಿ: ಮಹದೇವಪುರದ ಕೆಲ ವಾರ್ಡ್​ಗ​ಳಲ್ಲಿ ಪರ್ಯಾಯ ಎಸ್ಐಆರ್: ರಾಜ್ಯ ಚುನಾವಣಾ ಆಯೋಗಕ್ಕೆ ಹೈಕೋರ್ಟ್ ನೋಟಿಸ್