ಕೈಬರಹ ಸುಧಾರಣೆಗೆ ಶುರು ಮಾಡಿದ ಬರವಣಿಗೆ, ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ದಾಖಲೆ: 10 ಸಾವಿರ ಒಳ್ಳೆಯ ವಿಚಾರ ಬರೆದ ಎಂಜಿನಿಯರ್!
ಮೆಕ್ಯಾನಿಕ್ ಎಂಜಿನಿಯರ್ ಒಬ್ಬರು ಕೈಬರಹದ 10 ಸಾವಿರ ಒಳ್ಳೆಯ ವಿಚಾರಗಳು ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ದಾಖಲೆ ಬರೆಯುವಂತೆ ಮಾಡಿದೆ. ಈ ಕುರಿತು ಸಿದ್ದನಗೌಡ ಪಾಟೀಲ್ ಅವರ ವಿಶೇಷ ವರದಿ ಇಲ್ಲಿದೆ.

Published : September 2, 2026 at 5:15 PM IST
ಬೆಳಗಾವಿ: ಹೆದ್ದಾರಿ ಪಕ್ಕದ ಚಹಾ ಅಂಗಡಿಯಲ್ಲಿ ಬರೆದಿದ್ದ ಒಳ್ಳೆಯ ವಿಚಾರದ ಬರಹದಿಂದ ಸ್ಫೂರ್ತಿ ಪಡೆದುಕೊಂಡು, ಬರೆಯಲು ಶುರು ಮಾಡಿದ ಹವ್ಯಾಸವೊಂದು ಬೆಳಗಾವಿ ಎಂಜಿನಿಯರ್ ಒಬ್ಬರಿಗೆ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ದಾಖಲೆ ಬರೆಯುವಂತೆ ಮಾಡಿದೆ. ಸತತ ಮೂರು ವರ್ಷ ಬರೊಬ್ಬರಿ 10 ಸಾವಿರ ಒಳ್ಳೆಯ ವಿಚಾರಗಳು, ಪ್ರೇರಣಾದಾಯಕ ಹೇಳಿಕೆಗಳನ್ನು ಕನ್ನಡದಲ್ಲೇ ಬರೆದು, ಇಡೀ ರಾಷ್ಟ್ರದ ಗಮನ ಸೆಳೆದಿದ್ದಾರೆ.
ಬೆಳಗಾವಿಯ ಗೂಡ್ ಶೇಡ್ ರಸ್ತೆಯ ನಿವಾಸಿ ಗೋಪಾಲ್ ರಂಗರಾವ್ ದೇಶಪಾಂಡೆ ಅವರೇ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ತಮ್ಮ ಹೆಸರು ದಾಖಲಿಸಿಕೊಂಡವರು.
ಮೂಲತಃ ಬೆಳಗಾವಿ ತಾಲೂಕಿನ ಹುದಲಿ ಗ್ರಾಮದವರಾದ ಗೋಪಾಲ್, ತಮ್ಮ ಸ್ವಗ್ರಾಮದ ಸರ್ಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲೇ ಎಸ್ಎಸ್ಎಲ್ಸಿ ವರೆಗೆ ಶಿಕ್ಷಣ ಪಡೆದು, ಬಳಿಕ ಬೆಳಗಾವಿ ಸರ್ಕಾರಿ ಡಿಪ್ಲೋಮಾ ಕಾಲೇಜಿನಲ್ಲಿ ಮೆಕ್ಯಾನಿಕ್ ಎಂಜಿನಿಯರ್ ಪದವಿ ಪೂರ್ಣಗೊಳಿಸಿದ್ದಾರೆ.
ಮುಂದೆ ಮಚ್ಛೆ ಗ್ರಾಮದ ಬಳಿ ಇರುವ ಪಾಲಿ ಹೈಡ್ರಾನ್ ಸಮೂಹದ ಹೈಲಾಕ್ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿ, ಕಳೆದ 35 ವರ್ಷಗಳಿಂದ ಗೋಪಾಲ್ ಅವರು, ಅಲ್ಲಿಯೇ ಬದುಕು ಕಟ್ಟಿಕೊಂಡಿದ್ದಾರೆ. ತಮ್ಮ ಪ್ರತಿಭೆ ಮೂಲಕ ಸದ್ಯ ಮುಖ್ಯ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಭಾರತೀಯ ಮಾನಕ ಸಂಸ್ಥೆ (ಬಿಐಎಸ್) ಹಾಗೂ ಐಎಸ್‌ಒ ಸಮಿತಿಯ ಫ್ಲೂಯಿಡ್ ಪವರ್ ವಿಭಾಗದ ಕ್ರಿಯಾಶೀಲ ಸದಸ್ಯರೂ ಆಗಿದ್ದಾರೆ. ವೃತ್ತಿಯಲ್ಲಿ ಉನ್ನತ ಸ್ಥಾನದಲ್ಲಿದ್ದರೂ ಕನ್ನಡ ಭಾಷೆ ಮೇಲಿನ ಅವರ ಪ್ರೀತಿ ಮಾತ್ರ ಕಮ್ಮಿ ಆಗಿಲ್ಲ. ಈಗ ಅದೇ ಪ್ರೀತಿ ಅವರನ್ನು ಸಾಧನೆಯ ಶಿಖರವನ್ನು ಏರಿಸಿದೆ.

ಈಟಿವಿ ಭಾರತ ಜೊತೆಗೆ ಮಾತನಾಡಿದ ಗೋಪಾಲ್ ದೇಶಪಾಂಡೆ, ''ನಾನು ವೃತ್ತಿಯಲ್ಲಿ ಎಂಜಿನಿಯರ್ ಆದರೂ ಓದುವುದು, ಹೊಸ ವಿಚಾರ ಕಲಿಯುವುದರಲ್ಲಿ ನನಗೆ ಬಹಳ ಆಸಕ್ತಿ. ನಿತ್ಯ 10ಕ್ಕೂ ಅಧಿಕ ಕನ್ನಡ ದಿನಪತ್ರಿಕೆ ಓದುವ ಹವ್ಯಾಸ ರೂಢಿಸಿಕೊಂಡಿದ್ದೆ. ಪತ್ರಿಕೆಗಳಲ್ಲಿ ಪ್ರಕಟ ಆಗುವ ಸುಭಾಷಿತಗಳು, ಅಂಕಣ, ಸಣ್ಣಕಥೆಗಳನ್ನು ಆಸಕ್ತಿಯಿಂದ ಓದುತ್ತಿದೆ. ಎಸ್ಎಸ್ಎಲ್ಸಿ ಮುಗಿದ ಮೇಲೆ ಕನ್ನಡ ಬರೆಯುವುದು ಕ್ರಮೇಣ ಕಡಿಮೆ ಆಗಿ, ಕೈ ಬರಹ ತುಂಬಾ ಕೆಟ್ಟದಾಗಿತ್ತು. ನಾವು ಕನ್ನಡಿಗರಾಗಿ ನಮ್ಮ ಕೈ ಬರಹವೇ ಈ ರೀತಿ ಆದರೆ ಹೇಗೆ? ಹೇಗಾದರೂ ಮಾಡಿ ಸುಧಾರಿಸಿಕೊಳ್ಳಬೇಕು ಎಂದು ನಿರ್ಧರಿಸಿ, ಪತ್ರಿಕೆಯಲ್ಲಿ ಬರುತ್ತಿದ್ದ ಅಂಕಣವನ್ನು ಯಥಾಪ್ರಕಾರ ಬರೆಯಲು ಶುರು ಮಾಡಿದೆ. ಪ್ರತಿದಿನ ಒಂದು ಪುಟ ಬರೆಯುತ್ತಿದ್ದೆ. ಹೀಗೆ ಒಂದು ದಿನ 2023ರಲ್ಲಿ ಕಾರಿನಲ್ಲಿ ಬೆಂಗಳೂರಿಗೆ ಹೋಗುತ್ತಿದ್ದ ವೇಳೆ ರಾಷ್ಟ್ರೀಯ ಹೆದ್ದಾರಿ ಪಕ್ಕದ ಅಂಗಡಿಗೆ ಚಹಾ ಕುಡಿಯಲು ಹೋಗಿದ್ದೆ. ಆ ಅಂಗಡಿಯ ಫಲಕವೊಂದರಲ್ಲಿ ಬರೆದಿದ್ದ ಸುವಿಚಾರದ ಕಡೆ ನನ್ನ ಗಮನ ಹೋಯಿತು. ಕೂಡಲೇ ಮಾಲೀಕರನ್ನು ವಿಚಾರಿಸಿದಾಗ, ಅವರು ಪ್ರತಿದಿನ ಒಂದೊಂದು ಒಳ್ಳೆಯ ವಿಚಾರ ಬರೆಯುವುದಾಗಿ ತಿಳಿಸಿದರು. ನಾನು ಯಾಕೆ ಸುವಿಚಾರಗಳನ್ನೇ ಬರೆಯಬಾರದು ಅಂತಾ ನಿರ್ಧರಿಸಿ, ಅದನ್ನೆ ಸ್ಫೂರ್ತಿ ಆಗಿ ಪಡೆದುಕೊಂಡು ನನ್ನ ಬರೆಯುವ ಪಯಣ ಆರಂಭಿಸಿದೆ'' ಎಂದು ವಿವರಿಸಿದರು.
''ಹೀಗೆ ಡೈರಿಯಲ್ಲಿ ಕ್ರಮ ಸಂಖ್ಯೆ ಹಾಕುತ್ತಾ, ಸುವಿಚಾರಗಳನ್ನು ಬರೆಯಲು ಆರಂಭಿಸಿದೆ. ನಿತ್ಯ ಏನಿಲ್ಲ ಅಂದರೂ ಹತ್ತು ಒಳ್ಳೆಯ ವಿಚಾರಗಳನ್ನು ಬರೆಯುವ ಗುರಿ ಇಟ್ಟುಕೊಂಡೆ. ಹಲವು ಕನ್ನಡ ಪತ್ರಿಕೆಗಳು, ಪುಸ್ತಕಗಳಲ್ಲಿ ಪ್ರಕಟವಾಗುವ ಒಳ್ಳೆಯ ಸಂದೇಶ ನೀಡುವ, ಪ್ರೇರಣಾದಾಯಿ ವಿಚಾರಗಳನ್ನು ಓದಿ, ನನ್ನದೇ ಆದ ಹೇಳಿಕೆ ಬರೆಯುತ್ತಿದ್ದೆ. ಅಲ್ಲದೇ ದೇಶ, ವಿದೇಶಗಳ ತಜ್ಞರ, ಪ್ರಸಿದ್ಧ ವ್ಯಕ್ತಿಗಳ ಹೇಳಿಕೆಗಳನ್ನು ಬರೆಯುತ್ತಿದ್ದೆ. ಕೆಲಸದ ನಿಮಿತ್ತ ಬೆಂಗಳೂರು, ದೆಹಲಿ ಸೇರಿದಂತೆ ವಿದೇಶಗಳಿಗೆ ಹೋಗುವಾಗಲೂ ಜೊತೆಗೆ ಡೈರಿ ತೆಗೆದುಕೊಂಡೇ ಹೋಗುತ್ತಿದ್ದೆ. ರೈಲು, ವಿಮಾನದಲ್ಲಿ ಪ್ರಯಾಣಿಸುವಾಗ ಸಮಯ ವ್ಯರ್ಥ ಮಾಡದೇ ನನ್ನ ಬರವಣಿಗೆ ಕಾಯಕ ಮುಂದುವರಿಸಿದ್ದೆ'' ಎಂದು ಗೋಪಾಲ್ ಹೇಳಿದರು.

ನೋಡ ನೋಡುತ್ತಲೇ 2026ರ ಮೇ ತಿಂಗಳ ಮೊದಲ ವಾರದಲ್ಲಿ ನನ್ನ ಸುವಿಚಾರಗಳ ಬರವಣಿಗೆ 10 ಸಾವಿರ ಗಡಿ ದಾಟಿತು. ಮಹತ್ವದ ಮೈಲಿಗಲ್ಲು ತಲುಪಿದ್ದನ್ನು ಸ್ನೇಹಿತರಿಗೆ ತಿಳಿಸಿದೆ. ಆಗ ಅವರು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ಗೆ ನೀವು ಯಾಕೆ ಅರ್ಜಿ ಸಲ್ಲಿಸಬಾರದು ಅಂತಾ ಹೇಳಿದರು. ಅವರ ಮಾತಿನಂತೆ 6 ಡೈರಿಗಳ 1,430 ಪುಟಗಳ ಕೈಬರಹದ ಸಂಗ್ರಹವನ್ನು ಸ್ಕ್ಯಾನ್ ಮಾಡಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಂಸ್ಥೆಗೆ ಕಳಿಸಿದೆ. ಇದನ್ನು ಪರಿಶೀಲಿಸಿ, ಸಂದರ್ಶನ ಮಾಡಿದ ಬಳಿಕ ಹೀಗೆ ಕನ್ನಡ ಭಾಷೆಯಲ್ಲಿ 10 ಸಾವಿರ ಒಳ್ಳೆಯ ವಿಚಾರಗಳನ್ನು ಬರೆದವರು ನೀವೊಬ್ಬರೆ ಅಂತಾ ಹೇಳಿ, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ನನ್ನ ಹೆಸರು ಸೇರಿಸಿದರು. ಪ್ರಮಾಣಪತ್ರವನ್ನು ಕಳಿಸಿಕೊಟ್ಟರು. ಆರಂಭದ ನನ್ನ ಕೈಬರಹಕ್ಕೂ ಈಗಿನದ್ದಕ್ಕೂ ತುಂಬಾ ವ್ಯತ್ಯಾಸ ಇದೆ. ಸುಂದರವಾಗಿ, ಸುವಿಚಾರ ಬರೆಯುತ್ತಿದ್ದೇನೆ. ಇದರಲ್ಲಿ ನಾನು ದಾಖಲೆ ಬರೆದಿರುವುದು ನನಗೆ ಅತೀವ ಸಂತಸ ತಂದಿದೆ'' ಎಂದು ಗೋಪಾಲ್ ದೇಶಪಾಂಡೆ ಅಭಿಪ್ರಾಯ ಹಂಚಿಕೊಂಡರು.
ಯುವಕರಲ್ಲಿ ವಿಚಾರ ಶಕ್ತಿಯ ಕೊರತೆ: ''ಎಐ ಮುಂದೆ ಇಂದಿನ ಯುವಕರಲ್ಲಿ ವಿಚಾರ ಶಕ್ತಿಯೇ ಕಡಿಮೆ ಆಗುತ್ತಿದೆ. ಎಲ್ಲದಕ್ಕೂ ಚಾಟ್ ಜಿಪಿಟಿಯನ್ನೆ ಅವಲಂಬಿಸುವಂತಾಗಿದೆ. ಅದರಲ್ಲಿನ ವಿಷಯ ಸರಿ ಇದೆಯೇ..? ಇಲ್ಲವೇ..? ಎಂಬುದನ್ನು ನೋಡುವ ವ್ಯವದಾನವೂ ಇಲ್ಲದಂತಾಗಿದೆ. ಹಾಗಾಗಿ, ಯುವಕರು ಮತ್ತು ವಿದ್ಯಾರ್ಥಿಗಳು ಓದುವ ಹಂಬಲ ಬೆಳೆಸಿಕೊಳ್ಳಬೇಕು'' ಎಂದು ಗೋಪಾಲ್ ದೇಶಪಾಂಡೆ ಕಿವಿಮಾತು ಹೇಳಿದರು.
''ಒಂದು ಅಂತಾರಾಷ್ಟ್ರೀಯ ಭಾಷೆ ಮಾತನಾಡಲು ಮತ್ತು ಒಂದು ಸಂಗೀತ ವಾದ್ಯ ನುಡಿಸಲು ಕಲಿಯಬೇಕು ಎಂಬುದು ನನ್ನ ಕನಸಾಗಿತ್ತು. ನಾನು ವಿದೇಶಗಳಿಗೆ ಹೆಚ್ಚಾಗಿ ಹೋಗುತ್ತೇನೆ. ಅದರಲ್ಲೂ ಜರ್ಮನಿಗೆ ಅನೇಕ ಬಾರಿ ಭೇಟಿ ನೀಡುತ್ತೇನೆ. ಹಾಗಾಗಿ, ಜರ್ಮನ್ ಭಾಷೆ ವ್ಯಾಕರಣಬದ್ಧವಾಗಿ ಅಲ್ಲದಿದ್ದರೂ ಮ್ಯಾನೇಜ್ ಮಾಡುವಷ್ಟರ ಮಟ್ಟಿಗೆ ಮಾತನಾಡಲು ಕಲಿತಿದ್ದೇನೆ. ಹಾರ್ಮೋನಿಕಾ ನುಡಿಸಲು ಕಲಿತಿದ್ದು, ಸುಮಾರು 50ಕ್ಕೂ ಅಧಿಕ ಕನ್ನಡ, ಹಿಂದಿ ಹಾಡುಗಳಿಗೆ ಹಾರ್ಮೋನಿಕಾ ನುಡಿಸುತ್ತೇನೆ'' ಎಂದು ಗೋಪಾಲ್ ದೇಶಪಾಂಡೆ ಹೇಳಿದರು.

''ಗೋಪಾಲ್ ಅವರ ಸಾಧನೆ ನಮಗೆಲ್ಲ ಹರ್ಷ ತಂದಿದೆ. ಇಡೀ ಬೆಳಗಾವಿಗೆ ಇದು ಹೆಮ್ಮೆಯ ವಿಷಯ. ಜ್ಞಾನದ ಭಂಡಾರವನ್ನೆ ಅವರು ತುಂಬಿಕೊಂಡಿದ್ದಾರೆ. ಸದಾಕಾಲ ನಮಗೆ ಅವರು ಮಾರ್ಗದರ್ಶನ ನೀಡುತ್ತಾರೆ'' ಎಂದು ಅವರೊಂದಿಗೆ ಕೆಲಸ ಮಾಡುವ ಸಂಪತ್ ಗಡಕರಿ ಹರ್ಷ ವ್ಯಕ್ತಪಡಿಸಿದರು.
ಕೆಲ ಸುವಿಚಾರಗಳು:
- ''ಒಂಟಿಯಾಗಿರುವಾಗ ಆಲೋಚನೆಗಳ ಮೇಲೆ ಹಿಡಿತವಿರಬೇಕು. ಗುಂಪಿನಲ್ಲಿ ಇರುವಾಗ ಮಾತಿನ ಮೇಲೆ ಹಿಡಿತ ಇರಬೇಕು''
- ''ಶಿಕ್ಷಣದಲ್ಲಿ ಮೊದಲು ಪಾಠ, ನಂತರ ಪರೀಕ್ಷೆ ಇರುತ್ತದೆ. ಜೀವನದಲ್ಲಿ ಮೊದಲು ಪರೀಕ್ಷೆ, ನಂತರ ಪಾಠ ಇರುತ್ತದೆ''
- ''ನಿನ್ನನ್ನು ನೀನು ದುರ್ಬಲ ಎಂದುಕೊಳ್ಳುವುದೇ ಒಂದು ದೊಡ್ಡ ರೋಗ''
ಇದನ್ನೂ ಓದಿ: ಕೇವಲ ವಿದ್ಯುತ್ ಕಂಬಗಳಲ್ಲ, ಅಕ್ಷರ ಸ್ತಂಭಗಳು! ರಸ್ತೆಯನ್ನೇ ತೆರೆದ ಶಾಲೆಯನ್ನಾಗಿ ಪರಿವರ್ತಿಸಿದ ಪುಟ್ಟ ಗ್ರಾಮ

