ETV Bharat / state

ಖಾಲಿ ನಿವೇಶನ ಹರಾಜಿನ ಮೂಲಕ 1,000 ಕೋಟಿ ಸಂಪನ್ಮೂಲ ಕ್ರೂಢೀಕರಣಕ್ಕೆ ಎಂಡಿಎ ಪ್ಲಾನ್: ಅದು ಹೇಗೆ ?

ಮೈಸೂರು ಅಭಿವೃದ್ಧಿ ಪ್ರಾಧಿಕಾರವು ಖಾಲಿ ನಿವೇಶನ ಹರಾಜಿನ ಮೂಲಕ 1,000 ಕೋಟಿ ಸಂಪನ್ಮೂಲ ಕ್ರೂಢೀಕರಣಕ್ಕೆ ಮುಂದಾಗಿದೆ.

Mysuru Development Authority
ಮೈಸೂರು ಅಭಿವೃದ್ಧಿ ಪ್ರಾಧಿಕಾರ (ETV Bharat)
author img

By ETV Bharat Karnataka Team

Published : February 28, 2026 at 2:08 PM IST

2 Min Read
Choose ETV Bharat

ಮೈಸೂರು : ಆರ್ಥಿಕ ಸಂಕಷ್ಟದಲ್ಲಿರುವ ಮೈಸೂರು ಅಭಿವೃದ್ಧಿ ಪ್ರಾಧಿಕಾರ- ಎಂಡಿಎ ಸಂಪನ್ಮೂಲ ಕ್ರೂಢೀಕರಣಕ್ಕೆ ವಿವಿಧ ಬಡಾವಣೆಯಲ್ಲಿರುವ ಎಂಡಿಎ ನಿವೇಶನಗಳನ್ನ ಹರಾಜಿನ ಮೂಲಕ ಮಾರಾಟ ಮಾಡಿ, 1,000 ಕೋಟಿ ಆದಾಯ ಗಳಿಸುವ ಪ್ಲಾನ್ ಹಾಕಿಕೊಂಡಿದೆ. ಅದು ಹೇಗೆ ಎಂಬುದರ ವಿವರ ಇಲ್ಲಿದೆ.

ಮೈಸೂರು ಅಭಿವೃದ್ಧಿ ಪ್ರಾಧಿಕಾರ ಅಂದರೆ ಎಂಡಿಎ, ಈಗ ಅಭಿವೃದ್ಧಿಪಡಿಸಿ ನಿವೇಶನ ಮಾಡಲು ಹಾಗೂ ಖರ್ಚು ವೆಚ್ಚ ಸರಿದೂರಿಸಲು ಈಗ ಪ್ರಾಧಿಕಾರಕ್ಕೆ ಕಷ್ಟವಾಗಿದ್ದು, ಈಗ ಇದನ್ನ ಸರಿಪಡಿಸಲು, ನಿವೇಶನ ಹರಾಜಿಗೆ ಮುಂದಾಗಿದೆ.

ಆರ್ಥಿಕ ಸಂಕಷ್ಟದಲ್ಲಿ ಎಂಡಿಎ : ಈ ಹಿಂದೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಅಭಿವೃದ್ಧಿಪಡಿಸಿ ಇದೀಗ ಎಂಡಿಎ ವ್ಯಾಪ್ತಿಯಲ್ಲಿರುವ ಬಡಾವಣೆಗಳು ಸೇರಿದಂತೆ ಸುಮಾರು 700 ಬಡಾವಣೆಗಳನ್ನು ಈಗಾಗಲೇ ನಗರ ಪಾಲಿಕೆಯೂ ಸೇರಿದಂತೆ ವಿವಿಧ ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರಿಸಲಾಗಿದೆ.

mda-plans-to-mobilize-rs-1000-crore-through-vacant-land-auction
ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಕಚೇರಿ (ETV Bharat)

ಇದರ ಪರಿಣಾಮವಾಗಿ ಆಸ್ತಿ ತೆರಿಗೆ, ನಕ್ಷೆ ಅನುಮೋದನೆ ಶುಲ್ಕ, ಖಾತಾ ನೋಂದಣಿ ಮತ್ತು ವರ್ಗಾವಣೆ ಶುಲ್ಕ, ದಾಖಲೆಗಳ ಪ್ರಮಾಣಿತ ನಕಲು, ಭೂಸ್ವಾಧೀನ ಪ್ರಮಾಣ ಪತ್ರ, ಎನ್ಓಸಿ ಸೇರಿದಂತೆ ಪ್ರಮುಖ ದಾಖಲೆ ಶುಲ್ಕದಿಂದ ಬರುತ್ತಿದ್ದ ಆದಾಯ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದ್ದು, ಇದರಿಂದ ಅಧಿಕಾರಿಗಳು, ಸಿಬ್ಬಂದಿ ಮತ್ತು ಹೊರ ಗುತ್ತಿಗೆ ಸಿಬ್ಬಂದಿ ವೇತನ, ನಿವೃತ್ತಿ ವೇತನ, ವಾಹನಗಳ ನಿರ್ವಹಣೆ ಮತ್ತು ಕಚೇರಿ ವ್ಯವಹಾರಗಳಂತಹ ನಿತ್ಯದ ಖರ್ಚು-ವೆಚ್ಚಗಳನ್ನು ನಿರ್ವಹಿಸುವುದು ಈಗ ಪ್ರಾಧಿಕಾರಕ್ಕೆ ಕಷ್ಟಕರವಾಗಿದೆ.

ವಿಜಯನಗರ, ವಿಜಯಶ್ರೀಪುರ, ದಟ್ಟಗಳ್ಳಿ, ಶ್ರೀರಾಂಪುರ, ಜೆಪಿ ನಗರ, ದೇವನೂರು, ರಾಜೀವ್ ನಗರ, ಲಲಿತಾದ್ರಿನಗರ ಮತ್ತು ಹೆಬ್ಬಾಳು ಪ್ರದೇಶಗಳಲ್ಲಿ ಸುಮಾರು 150 ಎಕರೆ ಖಾಲಿ ಜಾಗ ಗುರುತಿಸಿದ್ದಾರೆ. ಇಲ್ಲಿ 20×30, 30×40, 40×60 ಹಾಗೂ 50×60 ಅಡಿ ಅಳತೆಯ ನಿವೇಶನಗಳನ್ನು ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ. ಸಾಮಾನ್ಯ ಹಂಚಿಕೆ ವಿಧಾನಕ್ಕೆ ಬದಲಾಗಿ ಈ ನಿವೇಶನಗಳನ್ನು ಹರಾಜು ಮೂಲಕ ಮಾರಾಟ ಮಾಡಲು ಎಂಡಿಎ ನಿರ್ಧರಿಸಿದೆ. ಇದರಿಂದ ಅಧಿಕ ಆದಾಯಗಳಿಸುವುದರ ಜೊತೆಗೆ ನಗರದಲ್ಲಿರುವ ಎಂಡಿಎ ಭೂಮಿಗಳ ಅಕ್ರಮ ದಂಧೆ, ಒತ್ತುವರಿ ತಡೆಗಟ್ಟಬಹುದು ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಇದೇ ವೇಳೆ, ಇಲವಾಲ ಹೋಬಳಿಯ ಬೊಮ್ಮನಹಳ್ಳಿ ಸಮೀಪ ಸುಮಾರು 2,000 ಎಕರೆ ಪ್ರದೇಶದಲ್ಲಿ ಹೊಸ ವಸತಿ ಬಡಾವಣೆ ಅಭಿವೃದ್ಧಿಪಡಿಸಲು ಎಂಡಿಎ ಚಿಂತನೆ ನಡೆಸಿದೆ. ಈ ಬಡಾವಣೆಯಲ್ಲಿ ನಿಯಮಾನುಸಾರ ಅರ್ಜಿದಾರರಿಗೆ ಕೈಗೆಟುಕುವ ದರದಲ್ಲಿ ನಿವೇಶನಗಳನ್ನು ಹಂಚಿಕೆ ಮಾಡುವ ಉದ್ದೇಶ ಹೊಂದಲಾಗಿದೆ.

ಹಳೆ ಬಡಾವಣೆಗಳಲ್ಲಿ ಅಭಿವೃದ್ಧಿಪಡಿಸಲಾಗುವ ನಿವೇಶನಗಳನ್ನು ಸಾರ್ವಜನಿಕ ಹರಾಜು ಮೂಲಕ ವಿಲೇವಾರಿ ಮಾಡಲು ಮುಖ್ಯಮಂತ್ರಿ ಅವರ ಅನುಮೋದನೆ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಹರಾಜು ಪ್ರಕ್ರಿಯೆಯಿಂದ 1,000 ಕೋಟಿಗೂ ಅಧಿಕ ಆದಾಯ ನಿರೀಕ್ಷಿಸಲಾಗಿದೆ.

ಎಂಡಿಎ ಆಯುಕ್ತರು ಹೇಳಿದ್ದೇನು? : ಎಂಡಿಎ ವ್ಯಾಪ್ತಿಯ ಬಡಾವಣೆಗಳಲ್ಲಿ ಇರುವ ನಮ್ಮ ನಿವೇಶನಗಳನ್ನ ಹರಾಜಿನ ಮೂಲಕ ಮಾರಾಟ ಮಾಡಿ ಸುಮಾರು 1,000 ಕೋಟಿ ಸಂಪನ್ಮೂಲವನ್ನ ಕ್ರೂಢೀಕರಿಸುವ ಬಗ್ಗೆ ಈಗಾಗಲೇ ಪ್ಲಾನ್ ಅನ್ನು ಸಿದ್ಧಪಡಿಸಲಾಗಿದೆ ಎಂದು ಎಂಡಿಎ ಆಯುಕ್ತ ರಕ್ಷಿತ್ ಈಟಿವಿ ಭಾರತ್​ಗೆ ತಿಳಿಸಿದ್ದಾರೆ.

ಇದನ್ನೂ ಓದಿ : 'ಕೆಎಸ್​ಐಸಿ ಫಿಲೇಚರ್ ಉಳಿಸಿ' ಹೋರಾಟ ಏಕೆ?: ಹಿನ್ನೋಟ