ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ: ಡಿಸಿಎಂ ಡಿ.ಕೆ. ಶಿವಕುಮಾರ್
ಶಾಂತಿಯಿಂದಲೇ ಎಲ್ಲರನ್ನೂ ಉಳಿಸಿಕೊಳ್ಳಬೇಕು, ಯಾರ ಆಸ್ತಿ-ಪಾಸ್ತಿಯೂ ನಾಶವಾಗಬಾರದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.

Published : March 1, 2026 at 7:20 PM IST
ಚಿಕ್ಕಮಗಳೂರು: ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದು ರಂಭಾಪುರಿ ಅಜ್ಜರವರು ಸಂದೇಶ ನೀಡಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಎನ್.ಆರ್. ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿರುವ ಶ್ರೀ ರಂಭಾಪುರಿ ಪೀಠಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ಇರಾನ್ ಮೇಲೆ ಅಮೆರಿಕ - ಇಸ್ರೇಲ್ ದಾಳಿ ಬಗ್ಗೆ ಪ್ರತಿಕ್ರಿಯಿಸಿ, ಎಲ್ಲೇ ಆದರೂ ಮನುಷ್ಯರಿಗೆ ಈ ರೀತಿ ಆಗಬಾರದು, ಒಂದು ಬಾಂಬ್ಗೆ 70 ಮಕ್ಕಳು ಸಾವನ್ನಪ್ಪಿದ್ದಾರೆ. ಮಂತ್ರಿ ಕುಟುಂಬ ಸತ್ತಿದೆ, ಲಕ್ಷಾಂತರ ಜನ ಭಯದಿಂದ ನರಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಅರ್ಧ ಪ್ರಪಂಚದಲ್ಲಿ ಯಾರೂ ವಿಮಾನ ಪ್ರಯಾಣ ಮಾಡಲು ಆಗುತ್ತಿಲ್ಲ. ಶಾಂತಿ ಮೂಡಿಸಬೇಕು, ಶಾಂತಿಗಾಗಿ ಎಲ್ಲರೂ ಪಠಣ ಮಾಡಬೇಕು. ಶಾಂತಿಯಿಂದಲೇ ಎಲ್ಲರನ್ನೂ ಉಳಿಸಿಕೊಳ್ಳಬೇಕು, ಯಾರ ಆಸ್ತಿ-ಪಾಸ್ತಿಯೂ ನಾಶವಾಗಬಾರದು. ಭಾರತೀಯರಿಂದಲೇ ಇಂದು ಸೌದಿ ಅರೇಬಿಯಾ ಬದುಕುತ್ತಿದೆ. ಕೇರಳ-ಮಂಗಳೂರಿನ ಕುಟುಂಬದ ಒಬ್ಬರಾದರೂ ಅಲ್ಲಿ ಇರುತ್ತಾರೆ. ನಾನು ಫೋನಿನಲ್ಲಿ ಟ್ರೈ ಮಾಡುತ್ತಿದ್ದೇನೆ, ನಮ್ಮ ಸರ್ಕಾರ ಮಾರ್ಗಸೂಚಿ ಕೂಡ ನೀಡಿದೆ. ನಮ್ಮ ಕೇಂದ್ರದ ಸಂದೇಶ ಅಮೆರಿಕ ಸೇರಿ ಬೇರೆ ದೇಶಕ್ಕೂ ಹೋಗಬೇಕಿದೆ. ಅಮೆರಿಕ ಯುದ್ಧ ನಿಲ್ಲಿಸಬೇಕಿದೆ, ಶಾಂತಿ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕಿದೆ ಎಂದು ಅವರು ಹೇಳಿದರು.
ಮತ್ತೊಂದೆಡೆ, ಶ್ರೀ ರಂಭಾಪುರಿ ಮಠದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿಕೆ ನೀಡಿದ್ದು, ಅಲ್ಲಿನ ಪರಿಸ್ಥಿತಿ ತುಂಬಾ ಡಿಫಿಕಲ್ಟ್ ಆಗಿದೆ. ಕನ್ನಡಿಗರು ಸಿಲುಕಿರೋದು ನನ್ನ ಗಮನಕ್ಕೆ ಬಂದಿದೆ. ಇಂದು ದೆಹಲಿಗೆ ಹೋಗುತ್ತೇನೆ ಸಂಬಂಧಪಟ್ಟ ಮಂತ್ರಿಗಳ ಜೊತೆ ಮಾತನಾಡುತ್ತೇನೆ. ಅಲ್ಲಿರುವ ಭಾರತೀಯರನ್ನು ಸುರಕ್ಷಿತವಾಗಿ ಕರೆ ತರಲು ಎಲ್ಲಾ ಪ್ರಯತ್ನ ನಡೆಯಲಿದೆ ಎಂದರು.
ಯುದ್ಧದ ವೇಳೆ ಮೋದಿ ಸರ್ಕಾರದಲ್ಲಿ ಎಲ್ಲರನ್ನೂ ಯಶಸ್ವಿಯಾಗಿ ಕರೆತಂದಿದ್ದೇವೆ. ಸದ್ಯ ಅಲ್ಲಿ ಪ್ರಕ್ಷುಬ್ಧ ವಾತಾವರಣ ಇದೆ. ಅಲ್ಲಿ ವಿಮಾನ ಹಾರಿಸೋದು ಕೂಡ ಡೇಂಜರ್ ಆಗಿದೆ. ಸುರಕ್ಷಿತವಾಗಿ ಕರೆತರಲು ನಮ್ಮ ಪ್ರಯತ್ನ ನಿರಂತರವಾಗಿ ನಡೆಯಲಿದೆ. ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡರು ನಮ್ಮ ಸ್ಮೇಹಿತರು, ಅವರ ಜೊತೆ ಎಲ್ಲಾ ಪ್ರಯಾಣಿಕರ ಸುರಕ್ಷಿತವಾಗಿ ಕರೆತರಬೇಕು ಎಂದು ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಹಿಂದ ಹೆಸರಲ್ಲಿ ಅಧಿಕಾರಕ್ಕೆ ಬಂದು ಇಂದು ಅವರಿಗೆ ಅನ್ಯಾಯ ಮಾಡ್ತಿದ್ದಾರೆ. ಹಿಂದುಳಿದ ಸಮುದಾಯಗಳನ್ನು ಕಡೆಗಣಿಸಿ, ಯುವ ಸಮೂಹವನ್ನು ಕಡೆಗಣಿಸಿದ್ದಾರೆ. ಮೊನ್ನೆ ಧಾರವಾಡದಲ್ಲಿ ನೋಡಿದ್ದೀರಿ, ಖಾಲಿ ಉದ್ಯೋಗ ಭರ್ತಿ ಮಾಡಬೇಕು ಅಂತಾ ಯುವಕರು ಒತ್ತಾಯಿಸಿದ್ದಾರೆ. 2.80 ಲಕ್ಷಕ್ಕೂ ಹೆಚ್ಚು ಹುದ್ದೆಗಳು ನೇಮಕಾತಿ ಆಗದೆ ಖಾಲಿ ಇವೆ. ಬೇಗ ಹುದ್ದೆ ಭರ್ತಿ ಮಾಡಿ ಅಂತಾ ಕೇಳಿದರೇ ಅವರ ಮೇಲೆ ಲಾಠಿ ಚಾರ್ಜ್ ಮಾಡಿಸುತ್ತಾರೆ. ರೈತರು ಹತಾಶರಾಗಿದ್ದಾರೆ, ಯುವ ಜನತೆ ವಿಶ್ವಾಸ ಕಳೆದುಕೊಂಡಿದ್ದಾರೆ. ರಾಜ್ಯ ಸರ್ಕಾರದ ವಿರುದ್ಧ ಯುವ ಸಮೂಹ ದಂಗೆ ಏಳುತ್ತಾರೆ ಎಂದರು.
ಇವುಗಳನ್ನೂ ಓದಿ:

