ETV Bharat / state

ಖಮೇನಿ ಹತ್ಯೆ ಖಂಡಿಸಿ ಅಲೀಪುರದಲ್ಲಿ ಸಾವಿರಾರು ಜನರಿಂದ ಬೃಹತ್ ಮೆರವಣಿಗೆ; ಕಣ್ಣೀರಿಟ್ಟ ಪ್ರತಿಭಟನಾಕಾರರು

ಇರಾನ್ ದೇಶದ ನಾಯಕ ಖಮೇನಿ ಹತ್ಯೆ ಖಂಡಿಸಿ ಅಲೀಪುರದಲ್ಲಿ ಬೃಹತ್ ಮೆರವಣಿಗೆ ನಡೆಸಲಾಯಿತು.

massive-march-in-alipur-condemning-khameneis-assassination
ಖಮೇನಿ ಹತ್ಯೆ ಖಂಡಿಸಿ ಅಲೀಪುರದಲ್ಲಿ ಬೃಹತ್ ಮೆರವಣಿಗೆ (ETV Bharat)
author img

By ETV Bharat Karnataka Team

Published : March 1, 2026 at 8:32 PM IST

2 Min Read
Choose ETV Bharat

ಚಿಕ್ಕಬಳ್ಳಾಪುರ : ಇರಾನ್ ದೇಶದ ಸರ್ವೋಚ್ಚ ನಾಯಕ ಖಮೇನಿ ಹತ್ಯೆ ಖಂಡಿಸಿ ಗೌರಿಬಿದನೂರು ತಾಲೂಕಿನ ಅಲೀಪುರದಲ್ಲಿ ಬೃಹತ್ ಮೆರವಣಿಗೆ ಮಾಡಲಾಯಿತು. ಖಮೇನಿ ಫೋಟೋ ಹಿಡಿದು ಮೆರವಣಿಗೆಯಲ್ಲಿ ಸಾಗಿದ ಶಿಯಾ ಮುಸ್ಲಿಂ ಸಮುದಾಯದವರು ನಾಯಕನ ಸಾವಿಗೆ ಕಂಬನಿ ಮಿಡಿದರು.

ಗೌರಿಬಿದನೂರು ತಾಲೂಕಿನ ಅಲೀಪುರ ಶೋಕದಲ್ಲಿ ಮುಳುಗಿತು. ಶಿಯಾ ಮುಸ್ಲಿಂ ಸಮುದಾಯದ ನಾಯಕ ಅಯಾತೊಲ್ಲಾ ಅಲಿ ಖಮೇನಿ ಹತ್ಯೆ ಖಂಡಿಸಿ ಅಲೀಪುರದ ಗ್ರಾಮಸ್ಥರು ಮೂರು ದಿನಗಳ ಶೋಕಾಚರಣೆ ಘೋಷಣೆ ಮಾಡಿದ್ದಾರೆ. ಅಂಗಡಿಗಳನ್ನು ಬಂದ್ ಮಾಡುವ ಮೂಲಕ ಧಾರ್ಮಿಕ ನಾಯಕನ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ.

ಖಮೇನಿ ಹತ್ಯೆ ಖಂಡಿಸಿ ಅಲೀಪುರದಲ್ಲಿ ಪ್ರತಿಭಟನೆ (ETV Bharat)

ಖಮೇನಿ ಹತ್ಯೆ ಖಂಡಿಸಿ ಬೃಹತ್ ಮೆರವಣಿಗೆಯಲ್ಲಿ ಜನರು ಸಾಗಿದರು. ಈ ವೇಳೆ ಸುಮಾರು 20 ಸಾವಿರ ಜನರು ಭಾಗವಹಿಸಿದ್ದರು. ಕಪ್ಪು ಬಟ್ಟೆಯನ್ನು ಧರಿಸಿ ಬೃಹತ್ ಪಾದಯಾತ್ರೆಯನ್ನು ನಡೆಸಿದರು. ಮಸೀದಿಯಿಂದ ಬೆಂಗಳೂರು ವೃತ್ತದವರೆಗೂ ಮೆರವಣಿಗೆ ಸಾಗಿತು.

ಮೆರವಣಿಗೆಯಲ್ಲಿ ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ಮುರ್ದಾಬಾದ್ ಧಿಕ್ಕಾರ ಕೂಗಿದ ಜನರು, ಇರಾನ್ ಮತ್ತು ಹಿಂದೂಸ್ತಾನ್​ಗೆ ಜೈಕಾರ ಹಾಕಿದರು. ಎದೆಯನ್ನು ಬಡಿದುಕೊಳ್ಳುವ ಮೂಲಕ ಮೃತ ನಾಯಕನ ಆತ್ಮಕ್ಕೆ ಶಾಂತಿ ಕೋರಿದರು.

ಕಾಶ್ಮೀರದ ಹಲವಾರು ಭಾಗಗಳಲ್ಲಿ ಭಾನುವಾರ ಪ್ರತಿಭಟನೆ (ಜಮ್ಮು ಮತ್ತು ಕಾಶ್ಮೀರ): ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿಯನ್ನು ಇಸ್ರೇಲ್​ ಮತ್ತು ಅಮೆರಿಕದ ಪಡೆಗಳು ಜಂಟಿ ದಾಳಿ ನಡೆಸಿ ಹತ್ಯೆ ಮಾಡಿದ್ದು, ಇದರ ವಿರುದ್ಧ ಶ್ರೀನಗರ ಸೇರಿದಂತೆ ಕಾಶ್ಮೀರದ ಹಲವಾರು ಭಾಗಗಳಲ್ಲಿ ಭಾನುವಾರ ಪ್ರತಿಭಟನೆ ನಡೆದವು.

ಕೇಂದ್ರಾಡಳಿತ ಪ್ರದೇಶದಲ್ಲಿ ಸಾವಿರಾರು ಜನರು ಒಟ್ಟುಗೂಡಿ ವ್ಯಾಪಕ ಪ್ರತಿಭಟನೆ ನಡೆಸುತ್ತಿರುವುದರಿಂದ ಅಲ್ಲಿನ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಅವರು ಶಾಂತವಾಗಿರಲು ಮನವಿ ಮಾಡಿದ್ದಾರೆ.

ಶಿಯಾ ಜನಸಂಖ್ಯೆ ಹೆಚ್ಚಿರುವ ಪ್ರದೇಶಗಳಲ್ಲಿ ಈ ಪ್ರತಿಭಟನೆಗಳು ನಡೆದವು. ಬೀದಿಗಳಲ್ಲಿ ಮೆರವಣಿಗೆ ನಡೆಸಿ ಅಮೆರಿಕ ಮತ್ತು ಇಸ್ರೇಲ್ ವಿರೋಧಿ ಘೋಷಣೆಗಳನ್ನು ಕೂಗಿದರು. ಲಾಲ್ ಚೌಕ್, ಸೈದಾ ಕಡಲ್, ಬುಡ್ಗಾಮ್, ಬಂಡಿಪೋರಾ, ಅನಂತನಾಗ್ ಮತ್ತು ಪುಲ್ವಾಮಾ ಪ್ರದೇಶಗಳಲ್ಲಿ ಪ್ರತಿಭಟನೆಗಳು ನಡೆದಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸೋಮವಾರ ಬಂದ್​ಗೆ ಕರೆ : ಕಾಶ್ಮೀರದ ಧರ್ಮಗುರು ಮಿರ್ವೈಜ್ ಉಮರ್ ಫಾರೂಕ್ ತಮ್ಮ ಎಕ್ಸ್ ಖಾತೆಯಲ್ಲಿ ಖಮೇನಿ ಹತ್ಯೆಯನ್ನು ಖಂಡಿಸಿದ್ದಾರೆ. 'ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಸೈಯದ್ ಅಲಿ ಖಮೇನಿ ಅವರನ್ನು ಅಮೆರಿಕ ಮತ್ತು ಇಸ್ರೇಲ್ ಕ್ರೂರವಾಗಿ ಹತ್ಯೆಗೈದಿರುವುದು ಬೆಚ್ಚಿಬೀಳಿಸಿದೆ. ಜಮ್ಮು ಮತ್ತು ಕಾಶ್ಮೀರದ ಜನರು ಈ ಕ್ರೌರ್ಯವನ್ನು ಖಂಡಿಸುತ್ತಾರೆ' ಎಂದು ಬರೆದುಕೊಂಡಿದ್ದಾರೆ. ಅಲ್ಲದೆ, ಸೋಮವಾರ ಜಮ್ಮು ಕಾಶ್ಮೀರ್​ ಬಂದ್​ಗೆ ಕರೆ ನೀಡಿದ್ದಾರೆ.

ಇದನ್ನೂ ಓದಿ : ಖಮೇನಿ ಹತ್ಯೆ ವಿರೋಧಿಸಿ ಕಾಶ್ಮೀರದಲ್ಲಿ ಪ್ರತಿಭಟನೆ: ಶಾಂತಿ ಕಾಪಾಡಲು ಸಿಎಂ ಓಮರ್ ಮನವಿ