ಪಹಲ್ಗಾಮ್ ದಾಳಿಯಲ್ಲಿ ಮಗ ತೀರಿಹೋಗಿ 1 ವರ್ಷ, ಅಗಲಿಕೆ ನೋವು ಇನ್ನೂ ಇದೆ: ಮಂಜುನಾಥ್ ತಾಯಿ
ಅಮಾಯಕ ಪ್ರವಾಸಿಗರನ್ನು ಬಲಿ ಪಡೆದಿದ್ದ ಪಹಲ್ಗಾಮ್ ಉಗ್ರರ ದಾಳಿ ನಡೆದು ಇಂದಿಗೆ ಒಂದು ವರ್ಷವಾಗಿದೆ.

Published : April 22, 2026 at 12:52 PM IST
ಶಿವಮೊಗ್ಗ: ನನ್ನ ಮಗ ಪಹಲ್ಗಾಮ್ ಉಗ್ರರ ದಾಳಿಯಲ್ಲಿ ಮೃತನಾಗಿ 1 ವರ್ಷವಾಗಿದೆ. ಮಗನ ಅಗಲಿಕೆಯ ನೋವು ನಮ್ಮಲ್ಲಿ ಇನ್ನೂ ಇದೆ ಎಂದು ಅತ್ಯಂತ ದುಃಖದಲ್ಲಿ ಮಂಜುನಾಥ ರಾವ್ ಅವರ ತಾಯಿ ಸುಮತಿ ರಾವ್ ಭಾವುಕರಾದರು.
ವಿಜಯನಗರದ ತಮ್ಮ ಮನೆಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಏನೂ ಮಾಡುವುದು ಎಲ್ಲರ ಬಳಿ ನಮ್ಮ ದುಃಖ ತೋರಿಸಲು ಆಗಲ್ಲ. ಅವನ ಸಮಯ ಆಯಿತು ಹೋದ. ಈಗ ನನ್ನ ಸಮಯಕ್ಕೆ ಕಾಯುತ್ತಿದ್ದೇನೆ. ಸೊಸೆ ಈಗ ಸಂಪೂರ್ಣ ಡ್ಯೂಟಿ ಕಡೆ ಇದ್ದಾರೆ. ಮೊಮ್ಮಗ ಬೆಂಗಳೂರಿನಲ್ಲಿ ಬಿ.ಕಾಂ ಓದುತ್ತಿದ್ದಾನೆ ಎಂದು ಹೇಳಿದರು.
ಆಪರೇಷನ್ ಸಿಂಧೂರ್ ನಡೆಸಿದಾಗ ಒಂದು ರೀತಿ ಖುಷಿ ಆಯಿತು. ನಮ್ಮ ದೇಶದ ಮೇಲೆ ದಾಳಿ ನಡೆಸಿದಾಗ ಸುಮ್ಮನಿರದೆ, ತಕ್ಕ ಉತ್ತರ ನೀಡಿದ್ದಾರೆಂದು ಸಮಾಧಾನವಾಯಿತು. ಮಗನ ಸ್ನೇಹಿತರು, ಬಂಧುಗಳು ಆಗಾಗ್ಗೆ ಬಂದು ಹೋಗುತ್ತಿರುತ್ತಾರೆ. 10 ದಿನದ ಹಿಂದೆ ಮಗನ ವರ್ಷದ ಕಾರ್ಯ ಮಾಡಿ ಮುಗಿಸಿದೆವು. ಮಗನನ್ನು ಕಳೆದುಕೊಂಡ ನೋವು ನಮ್ಮಲ್ಲಿ ಈಗಲೂ ಇದೆ ಎಂದು ತಾಯಿ ಸುಮತಿ ದುಃಖಿತರಾದರು.
ಕುಟುಂಬ ಸಮೇತ ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದ ಮಂಜುನಾಥ್ ರಾವ್ ಉಗ್ರರ ಗುಂಡಿಗೆ ಬಲಿಯಾಗಿದ್ದರು. ಮಂಜುನಾಥ್ ಅವರನ್ನು ಪಹಲ್ಗಾಮ್ ನಲ್ಲಿ ಅವರ ಪತ್ನಿ, ಮತ್ತು ಮಗನ ಎದುರೇ ತಲೆಗೆ ಗುಂಡಿಟ್ಟು ಭಯೋತ್ಪಾದಕರು ಹತ್ಯೆ ಮಾಡಿದ್ದರು. ಅವರ ಪತಿಯ ಅಂತ್ಯಕ್ರಿಯೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ್ದ ಮಂಜುನಾಥ್ ಅವರ ಅವರ ಪತ್ನಿ ಪಲ್ಲವಿ ರಾವ್ ಅವರು, ನಾವು ಒಬ್ಬಂಟಿ ಅಲ್ಲ, ಇಡೀ ದೇಶವೇ ನಮ್ಮ ಕುಟುಂಬದ ಜೊತೆ ಇದೆ ಎಂದಿದ್ದರು. ಉಗ್ರರನ್ನು ಮಟ್ಟಹಾಕಬೇಕು ಎಂದು ಅವರು ಆಗ್ರಹಿಸಿದ್ದರು.
ಈ ಘಟನೆಯಲ್ಲಿ ಇಬ್ಬರು ಕನ್ನಡಿಗರು ಪ್ರಾಣತೆತ್ತಿದ್ದರು. ಶಿವಮೊಗ್ಗದ ಮಂಜುನಾಥ್ ರಾವ್ ಮತ್ತು ಬೆಂಗಳೂರಿನ ಮತ್ತಿಕೆರೆಯ ಭರತ್ ಭೂಷಣ್ ಸಹ ಉಗ್ರರ ಅಟ್ಟಹಾಸಕ್ಕೆ ಬಲಿಯಾಗಿದ್ದರು. ಅವರಿಬ್ಬರ ಪಾರ್ಥಿವ ಶರೀರಗಳನ್ನು ಎಪ್ರಿಲ್ 24 ರಂದು ಕಾರ್ಗೋ ವಿಮಾನನದ ಮೂಲಕ ಬೆಂಗಳೂರಿಗೆ ತರಲಾಗಿತ್ತು.
ಮಗನ ಸಾವಿನಿಂದ ಆಘಾತ: ಕಾಶ್ಮೀರ ಪ್ರವಾಸ ಮುಗಿಸಿ ಮಗ ಇನ್ನೇನು ಮನೆಗೆ ಬರ್ತಾನೆ ಅಂದುಕೊಂಡಿದ್ದೆವು. ಆದ್ರೆ ಆತನ ಮೃತದೇಹ ಬಂದಿದೆ ಎಂದು ಭರತ್ ಭೂಷಣ್ ಅವರ ತಾಯಿ ಕಣ್ಣೀರಿಟ್ಟಿದ್ದರು. ಭರತ್ ಭೂಷಣ್ ತಾಯಿ ಮೃತದೇಹದ ಮುಂದೆ ಕಣ್ಣೀರಿಟ್ಟ ದೃಶ್ಯ ಮನಕಲಕುವಂತಿತ್ತು. ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು.
ಎಪ್ರಿಲ್ 22, 2025 ರಂದು ನಡೆದ ಪಹಲ್ಗಾಮ್ ಉಗ್ರರ ದಾಳಿಯಲ್ಲಿ ಒಟ್ಟು 26 ಜನರು ಹತ್ಯೆಗೀಡಾಗಿದ್ದರು. ಒಂದು ದಿನದ ಬಳಿಕ ಅವರೆಲ್ಲರ ಗುರುತು ಪತ್ತೆ ಹಚ್ಚಲಾಗಿತ್ತು. ಮೃತರಲ್ಲಿ 12 ವಿವಿಧ ರಾಜ್ಯಗಳಿಂದ ಕಾಶ್ಮೀರ ಪ್ರವಾಸಕ್ಕೆ ತೆರಳಿದವರಾಗಿದ್ದರು. ಈ ಪೈಕಿ ಬಹುತೇಕರು ಮಹಾರಾಷ್ಟ್ರ ರಾಜ್ಯಕ್ಕೆ ಸೇರಿದವರಾಗಿದ್ದರು.
ಹತ್ಯೆಗೀಡಾದವರಲ್ಲಿ ಐಎಎಫ್ ಕಾರ್ಪೋರಲ್, ನೌಕಾಪಡೆ ಮತ್ತು ಅಬಕಾರಿ ಅಧಿಕಾರಿ ಮತ್ತು ಕರ್ನಾಟಕದ ಉದ್ಯಮಿ ಸೇರಿದ್ದರು.
ಮೃತಪಟ್ಟವರಲ್ಲಿ ಮಹಾರಾಷ್ಟ್ರ, ಗುಜರಾತ್, ಕರ್ನಾಟಕ, ಆಂಧ್ರ ಪ್ರದೇಶ, ಕೇರಳ, ಹರಿಯಾಣ, ಒಡಿಶಾ, ಉತ್ತರ ಪ್ರದೇಶ, ಉತ್ತರಾಖಂಡ, ಅರುಣಾಚಲ ಪ್ರದೇಶ, ಬಿಹಾರ, ಮಧ್ಯ ಪ್ರದೇಶ ಮತ್ತು ಓರ್ವ ನೇಪಾಳಿ ಪ್ರಜೆ ಸೇರಿದ್ದರು. ಓರ್ವ ಪಹಲ್ಗಾಮ್ನ ಸ್ಥಳೀಯ ಸೈಯದ್ ಆದಿಲ್ ಹುಸೇನ್ ಷಾ ಎಂಬ ವ್ಯಕ್ತಿಯೂ ಹುತಾತ್ಮರಾಗಿದ್ದರು. ಈ ವ್ಯಕ್ತಿ ಉಗ್ರನೋರ್ವನಿಂದ ಬಂದೂಕು ಕಸಿದುಕೊಂಡು ಕೆಲ ಪ್ರವಾಸಿಗರ ಪ್ರಾಣ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದರು. ಆದ್ರೆ ದುರಾದೃಷ್ಟವಶಾತ್ ಉಗ್ರರ ಗುಂಡಿಗೆ ಬಲಿಯಾಗಿದ್ದರು.
ಪ್ರತ್ಯಕ್ಷದರ್ಶಿಗಳ ಹೇಳಿಕೆಗಳ ಪ್ರಕಾರ, ಸಾವನ್ನಪ್ಪಿದವರೆಲ್ಲರೂ ಪುರುಷರಾಗಿದ್ದು, ಭಯೋತ್ಪಾದಕರು ಒಬ್ಬೊಬ್ಬರನ್ನೇ ಆಯ್ಕೆ ಮಾಡಿ ಗುಂಡು ಹಾರಿಸಿ, ಕೊಂದಿದ್ದರು.
ಎಪ್ರಿಲ್ 22, 2025ರ ಮಧ್ಯಾಹ್ನ 2.30ರ ಸುಮಾರಿಗೆ, ದಕ್ಷಿಣ ಕಾಶ್ಮೀರದ ಪಹಲ್ಗಾಮ್‌ನಿಂದ 6 ಕಿಲೋಮೀಟರ್ ದೂರದಲ್ಲಿರುವ ಬೈಸರನ್ ಎಂಬಲ್ಲಿ ಭಯೋತ್ಪಾದಕರು ಪ್ರವಾಸಿಗರ ಮೇಲೆ ಈ ರೀತಿ ಅಟ್ಟಹಾಸ ಮೆರೆದಿದ್ದರು.
ಇದನ್ನೂ ಓದಿ: ಪಹಲ್ಗಾಮ್ ದಾಳಿಗೆ ವರ್ಷ; ಸಂತ್ರಸ್ತರ ನೆನೆದ ಪ್ರಧಾನಿ, ಭಯೋತ್ಪಾದನೆಗೆ ಎಂದಿಗೂ ಮಣಿಯುವುದಿಲ್ಲ ಎಂದ ಮೋದಿ

