ETV Bharat / state

ಮಂಗಳೂರು: ಸಮುದ್ರದ ಅಲೆಗಳ ಹೊಡೆತಕ್ಕೆ ಅಳಿವೆ ಬಾಗಿಲಿನಲ್ಲಿ ಎರಡು ಬೋಟ್‌ಗಳು ಮುಳುಗಡೆ, 12 ಮಂದಿ ರಕ್ಷಣೆ

ಸಮುದ್ರದ ಅಲೆಗಳು ಬಲವಾಗಿ ಅಪ್ಪಳಿಸಿದ ಪರಿಣಾಮ ಮಂಗಳೂರಿನ ಅಳಿವೆಬಾಗಿಲಿನಲ್ಲಿ ಎರಡು ಬೋಟ್‌ಗಳು ಮುಳುಗಡೆಯಾಗಿದ್ದು, ಇದರಲ್ಲಿದ್ದ 12 ಮಂದಿ ಮೀನುಗಾರರನ್ನು ರಕ್ಷಿಸಲಾಗಿದೆ.

MANGALURU: TWO FISHING BOATS SINK NEAR ALIVE BAGILU, 12 RESCUED
ಮುಳುಗಡೆಯಾದ ಬೋಟ್​ಗಳು (ETV Bharat)
author img

By ETV Bharat Karnataka Team

Published : September 2, 2026 at 8:55 PM IST

2 Min Read
Choose ETV Bharat

ಮಂಗಳೂರು: ಇಲ್ಲಿನ ಅಳಿವೆ ಬಾಗಿಲಿನಲ್ಲಿ ಮಂಗಳವಾರ ಸಂಜೆ ಎರಡು ಮೀನುಗಾರಿಕಾ ಬೋಟ್‌ಗಳು ದುರಂತಕ್ಕೀಡಾಗಿ ಮುಳುಗಡೆಯಾಗಿದ್ದು, ಸಮಯಪ್ರಜ್ಞೆ ಮೆರೆದ ಇತರ ದೋಣಿಗಳ ಸಿಬ್ಬಂದಿ ಎರಡೂ ಬೋಟ್‌ಗಳಲ್ಲಿದ್ದ 12 ಮೀನುಗಾರರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಉಳ್ಳಾಲದ ಆಲೇಕಲದ ಶರೀಫ್ ಎಂಬವರಿಗೆ ಸೇರಿದ 'ಮರ್ಮೇಡ್ II' (ಟ್ರಾಲರ್ ಬೋಟ್) ಹಾಗೂ ಕೂಳೂರಿನ ಬೆಂಗ್ರೆ ಕಸಬಾದ ಅಬೂಬಕ್ಕರ್ ಅಜ್ಮಲ್ ಅವರಿಗೆ ಸೇರಿದ 'ಅನಿಕ್' (ಸಣ್ಣ ಮರದ ಬೋಟ್) ಮೀನುಗಾರಿಕೆಗೆ ತೆರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.

ಘಟನೆಯ ಕುರಿತು ಈಟಿವಿ ಭಾರತ ಜೊತೆ ಮಾಹಿತಿ ಹಂಚಿಕೊಂಡ ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕಿ ದರ್ಶನಾ ಕೆ.ಟಿ. ಅವರು, "ಅಳಿವೆ ಬಾಗಿಲಿನಲ್ಲಿ ಸಮುದ್ರದ ಅಲೆಗಳು ಬಲವಾಗಿ ಅಪ್ಪಳಿಸಿದ ಪರಿಣಾಮ ಬೋಟ್‌ಗಳು ಎತ್ತರಕ್ಕೆ ಜಿಗಿದು ಕೆಳಗೆ ಬಿದ್ದಿವೆ. ಇವೆರಡೂ ಮರದ ಬೋಟ್‌ ಆಗಿದ್ದರಿಂದ ಕೆಳಭಾಗದ ಹಲಗೆಗಳು ತುಂಡಾಗಿವೆ. ಒಡೆದು ಒಳಗೆ ರಭಸವಾಗಿ ನೀರು ನುಗ್ಗಲು ಪ್ರಾರಂಭವಾಗಿದೆ. 13 ಮೀಟರ್ ಉದ್ದದ 'ಮರ್ಮೇಡ್' ಟ್ರಾಲ್ ಬೋಟ್‌ನ ತಳಭಾಗದ ಹಲಗೆ ತುಂಡಾಗಿ ನೀರು ತುಂಬಿಕೊಂಡರೆ, ಸಣ್ಣ ಬೋಟ್ ಆಗಿರುವ 'ಅನಿಕ್'ನ ಒಂದು ಪಾರ್ಶ್ವ ಒಡೆದು ಮುಳುಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಮರ್ಮೇಡ್ ಬೋಟ್‌ನಲ್ಲಿದ್ದ 7 ಮಂದಿ ಹಾಗೂ ಅನಿಕ್ ಬೋಟ್‌ನಲ್ಲಿದ್ದ 5 ಮಂದಿ ಸೇರಿದಂತೆ ಎಲ್ಲರನ್ನೂ ಇತರ ಮೀನುಗಾರರು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಆದರೆ, ಬೋಟ್‌ಗಳಿಗೆ ಹಾನಿಯಾಗಿದೆ" ಎಂದು ತಿಳಿಸಿದ್ದಾರೆ.

ಮಂಗಳವಾರ ಸಂಜೆ ಈ ಎರಡೂ ಬೋಟ್‌ಗಳು ಬಂದರಿನಿಂದ ಸಮುದ್ರಕ್ಕಿಳಿದಿದ್ದವು. ಅಳಿವೆ ಬಾಗಿಲಿನಲ್ಲಿ ಅಲೆಗಳ ಹೊಡೆತಕ್ಕೆ ಸಿಲುಕಿ ಮುಳುಗುತ್ತಿದ್ದವು. ತಕ್ಷಣ, ಸಮೀಪದಲ್ಲಿದ್ದ ಇತರ ಮೀನುಗಾರರು ನೆರವಿಗೆ ಧಾವಿಸಿ ಎಲ್ಲರನ್ನೂ ರಕ್ಷಿಸಿದ್ದಲ್ಲದೇ ತಮ್ಮ ದೋಣಿಗಳಿಗೆ ಹತ್ತಿಸಿಕೊಂಡಿದ್ದಾರೆ. ನಂತರ ಮುಳುಗಡೆಯಾಗುತ್ತಿದ್ದ ದೋಣಿಗಳನ್ನು ದಡಕ್ಕೆ ಎಳೆಯುವ ಕಾರ್ಯಾಚರಣೆ ನಡೆಸಲಾಯಿತು. ಆದರೆ, ಈ ಪೈಕಿ ಒಂದು ಬೋಟನ್ನು ಹಗ್ಗ ಕಟ್ಟಿ ಸುರಕ್ಷಿತವಾಗಿ ದಡಕ್ಕೆ ಎಳೆದು ತರುವಲ್ಲಿ ಯಶಸ್ವಿಯಾದರೆ, ಮತ್ತೊಂದು ಬೋಟನ್ನು ಎಳೆದುತರುವಾಗ ಹಗ್ಗ ತುಂಡಾಗಿದ್ದರಿಂದ ಅದು ಪೂರ್ಣಪ್ರಮಾಣದಲ್ಲಿ ಸಮುದ್ರದಲ್ಲಿ ಮುಳುಗಡೆಯಾಗಿದೆ ಎಂದು ಮೀನುಗಾರರು ಹೇಳಿದ್ದಾರೆ.

ಇದನ್ನೂ ಓದಿ: ಅಂಜದೀವ್ ದ್ವೀಪದ ಬಳಿ ಮೀನುಗಾರಿಕಾ ಬೋಟ್ ಮುಳುಗಡೆ: 25 ಮೀನುಗಾರರ ರಕ್ಷಣೆ

ಎರಡು ದಿನಗಳ ಹಿಂದೆಯಷ್ಟೇ ಕಾರವಾರದ ಅರಬ್ಬೀ ಸಮುದ್ರದ ಅಂಜದೀವ್ ದ್ವೀಪದ ಸಮೀಪ ಮೀನುಗಾರಿಕಾ ಬೋಟ್‌ವೊಂದು ಅವಘಡಕ್ಕೀಡಾಗಿದ್ದು, ಅದೃಷ್ಟವಶಾತ್ ಬೋಟ್‌ನಲ್ಲಿದ್ದ 25 ಮಂದಿ ಮೀನುಗಾರರು ಅಪಾಯದಿಂದ ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದರು.

ಬೆಳಾಂಬರ ಮೂಲದ ನೀಲಕಂಠ ಖಾರ್ವಿ ಅವರಿಗೆ ಸೇರಿದ ಶ್ರೀ ಮಾತಾ ಹೆಸರಿನ ಮೀನುಗಾರಿಕಾ ಬೋಟ್ ಸಮುದ್ರದಲ್ಲಿ ಇದ್ದಕ್ಕಿದ್ದಂತೆ ಮುಳುಗಲಾರಂಭಿಸಿತ್ತು. ಈ ವೇಳೆ, ಬೋಟ್‌ನಲ್ಲಿದ್ದ 25 ಮೀನುಗಾರರು ಅಪಾಯಕ್ಕೆ ಸಿಲುಕಿದ್ದರು. ತಕ್ಷಣವೇ ಕಾರ್ಯಪ್ರವೃತ್ತರಾದ ಸಮೀಪದಲ್ಲಿದ್ದ ಐದು ಮೀನುಗಾರಿಕಾ ಬೋಟ್‌ಗಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಎಲ್ಲ ಮೀನುಗಾರರನ್ನು ಸುರಕ್ಷಿತವಾಗಿ ರಕ್ಷಿಸಿದ್ದರು.