ETV Bharat / state

ಖಾಸಗಿ ಬಸ್ಸುಗಳ ಪ್ರಾಬಲ್ಯದ ಮಂಗಳೂರಲ್ಲಿ ಇವಿ ಬಸ್ ಪ್ರಯೋಗ: ಕುಡ್ಲದಲ್ಲಿ ಮೊದಲ ಖಾಸಗಿ ಇವಿ ಬಸ್ ಸೇವೆಗೆ ರೆಡಿ

ಮಂಗಳೂರಲ್ಲಿ ಮೊದಲ ಬಾರಿಗೆ ಖಾಸಗಿ ವಲಯವು ಇವಿ ಬಸ್ ಪ್ರಯೋಗಕ್ಕೆ ಮುಂದಾಗಿದೆ. ಇದು ಯಶಸ್ವಿಯಾದರೆ ಇತರ ನಗರಗಳಿಗೂ ಮಾದರಿಯಾಗಲಿದೆ.

DAKSHINA KANNADA  MANGALURU PRIVATE BUS EV BUSES IN MANGALURU  ಮಂಗಳೂರಲ್ಲಿ ಇವಿ ಬಸ್ PRIVATE EV BUSES
ಕುಡ್ಲದಲ್ಲಿ ಮೊದಲ ಖಾಸಗಿ ಇವಿ ಬಸ್ ಸೇವೆಗೆ ರೆಡಿ (ETV Bharat)
author img

By ETV Bharat Karnataka Team

Published : February 26, 2026 at 10:30 AM IST

3 Min Read
Choose ETV Bharat

ವರದಿ: ವಿನೋದ್ ಪುದು

ಮಂಗಳೂರು: ಖಾಸಗಿ ಬಸ್ಸುಗಳ ಬಲಿಷ್ಠ ಜಾಲಕ್ಕೆ ಹೆಸರಾಗಿರುವ ಮಂಗಳೂರಿನಲ್ಲಿ ಇದೀಗ ಹೊಸ ಪ್ರಯೋಗ ಆರಂಭವಾಗುತ್ತಿದೆ. ನಗರದ ಸಾರಿಗೆ ಇತಿಹಾಸದಲ್ಲಿ ಮೊದಲ ಬಾರಿಗೆ ಖಾಸಗಿ ವಲಯದಿಂದ ಎಲೆಕ್ಟ್ರಿಕ್ ಬಸ್ ರಸ್ತೆಗಿಳಿಯಲಿದ್ದು, ಇದು ಕರಾವಳಿಯಲ್ಲಿ ಮೊದಲ ಖಾಸಗಿ ಇವಿ ಬಸ್ ಸೇವೆ ಎಂಬ ವಿಶೇಷತೆ ಪಡೆದುಕೊಂಡಿದೆ. ಮಾರ್ಚ್ ಮೊದಲ ವಾರದಿಂದ ಬಸ್ ನಿಯಮಿತ ಸಂಚಾರ ಆರಂಭಿಸುವ ನಿರೀಕ್ಷೆಯಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಸಾರಿಗೆ ವ್ಯವಸ್ಥೆ ಸಾಮಾನ್ಯ ಉದ್ಯಮವಲ್ಲ. ನೂರಕ್ಕೂ ಹೆಚ್ಚು ವರ್ಷಗಳ ಇತಿಹಾಸ ಹೊಂದಿರುವ ವ್ಯವಸ್ಥೆಯಾಗಿದೆ. ದೇಶದಲ್ಲಿ ಬಸ್ ಸೇವೆ ಆರಂಭವಾದ ಆರಂಭಿಕ ಕಾಲದಿಂದಲೇ ಈ ಭಾಗವು ಸಾರಿಗೆ ಕ್ಷೇತ್ರದಲ್ಲಿ ತನ್ನದೇ ಆದ ಗುರುತು ಮೂಡಿಸಿಕೊಂಡಿದೆ. 1914ರಿಂದಲೇ ಮಂಗಳೂರಿನಲ್ಲಿ ಖಾಸಗಿ ಬಸ್ ಸಂಚಾರ ಆರಂಭವಾಗಿದ್ದು, ಇಂದಿಗೂ ನೂರಾರು ಬಸ್ಸುಗಳು ನಗರ ಮತ್ತು ಗ್ರಾಮೀಣ ಭಾಗಗಳನ್ನು ಸಂಪರ್ಕಿಸುತ್ತಿವೆ. ರಾಜ್ಯದ ಇತರ ಭಾಗಗಳಲ್ಲಿ ಪ್ರಯಾಣಿಕರು ಬಸ್‌ಗಾಗಿ ಕಾಯುವ ಪರಿಸ್ಥಿತಿ ಇದ್ದರೆ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ನಿಮಿಷಕ್ಕೊಂದು ಬಸ್ ಸಿಗುವ ವ್ಯವಸ್ಥೆ ಇದೆ ಎನ್ನುವುದು ಇಲ್ಲಿ ಸಾರಿಗೆ ವ್ಯವಸ್ಥೆಯ ಬಲಕ್ಕೆ ಸಾಕ್ಷಿ.

ಕುಡ್ಲದಲ್ಲಿ ಮೊದಲ ಖಾಸಗಿ ಇವಿ ಬಸ್ ಸೇವೆಗೆ ರೆಡಿ (ETV Bharat)

ಸರ್ಕಾರದ ನೇರ ಸಬ್ಸಿಡಿ ಇಲ್ಲದೇ ಖಾಸಗಿ ಆಪರೇಟರ್‌ಗಳು ಹಲವು ಸವಾಲುಗಳನ್ನು ಎದುರಿಸಿ ಸೇವೆಯನ್ನು ನಿರಂತರವಾಗಿ ನಡೆಸಿಕೊಂಡು ಬಂದಿದ್ದಾರೆ. ಕಾಲಾನುಸಾರ ತಂತ್ರಜ್ಞಾನವನ್ನು ಅಳವಡಿಸಿಕೊಂಡು, ಡಿಜಿಟಲ್ ಪಾವತಿ ವ್ಯವಸ್ಥೆ, ಯುಪಿಐ ಮತ್ತು ಕಾರ್ಡ್ ಪಾವತಿ ಸೌಲಭ್ಯಗಳನ್ನು ಪರಿಚಯಿಸಿರುವುದು ಕೂಡ ಈ ಭಾಗದ ಬಸ್ ವ್ಯವಸ್ಥೆಯ ವಿಶೇಷತೆ. ಈಗ ಅದೇ ಸರಣಿಯಲ್ಲಿ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಬಸ್ ಸೇವೆ ಪರಿಚಯಿಸಲಾಗುತ್ತಿದೆ.

ಗೇರ್​ಲೆಸ್ ಎಲೆಕ್ಟ್ರಿಕ್​ ಬಸ್: ಪುಣೆ ಮೂಲದ ಕಂಪನಿ ತಯಾರಿಸಿದ ಲೋ-ಫ್ಲೋರ್, ಗೇರ್‌ಲೆಸ್ ಎಲೆಕ್ಟ್ರಿಕ್ ಬಸ್ ಅನ್ನು ಮಂಗಳೂರಿಗೆ ತರಲಾಗಿದೆ. ಇದು ನಗರ ಸಾರಿಗೆಗೆ ಹೊಂದುವಂತೆ ವಿನ್ಯಾಸಗೊಳಿಸಲ್ಪಟ್ಟಿದ್ದು, ಒಮ್ಮೆ ಪೂರ್ಣ ಚಾರ್ಜ್ ಮಾಡಿದರೆ ಸುಮಾರು 200 ಕಿಲೋಮೀಟರ್‌ಗಳವರೆಗೆ ಸಂಚರಿಸುವ ಸಾಮರ್ಥ್ಯ ಹೊಂದಿದೆ ಎಂದು ಕಂಪನಿ ತಿಳಿಸಿದೆ. ಫಾಸ್ಟ್ ಚಾರ್ಜಿಂಗ್ ಮೂಲಕ ಸುಮಾರು ಎರಡು ಗಂಟೆಗಳಲ್ಲಿ ಹಾಗೂ ಸಾಮಾನ್ಯ ಚಾರ್ಜಿಂಗ್ ಮೂಲಕ ಐದರಿಂದ ಆರು ಗಂಟೆಗಳಲ್ಲಿ ಬ್ಯಾಟರಿ ತುಂಬಿಸಬಹುದು. ನಗರದಲ್ಲಿರುವ ಚಾರ್ಜಿಂಗ್ ಸೌಲಭ್ಯಗಳನ್ನು ಬಳಸಿಕೊಂಡೇ ಬಸ್ ಚಾರ್ಜ್ ಮಾಡುವ ವ್ಯವಸ್ಥೆ ರೂಪಿಸಲಾಗಿದೆ.

ಇಂಧನ ವೆಚ್ಚದ ಏರಿಕೆ ಮತ್ತು ವಾಯು ಮಾಲಿನ್ಯ ಸಮಸ್ಯೆ ನಡುವೆಯಲ್ಲಿ ಎಲೆಕ್ಟ್ರಿಕ್ ಬಸ್ ಪರಿಚಯವು ಮಹತ್ವದ್ದಾಗಿದೆ. ಇವಿ ಬಸ್​ಗಳು ಡೀಸೆಲ್ ಬಸ್‌ಗಳಿಗಿಂತ ಶಬ್ದ ಮಾಲಿನ್ಯ ಕಡಿಮೆ, ಎಂಜಿನ್ ಆಯಿಲ್ ಬಳಕೆ ಇಲ್ಲ, ನಿರ್ವಹಣಾ ವೆಚ್ಚ ಕಡಿಮೆ ಇರಬಹುದು ಎಂಬ ನಿರೀಕ್ಷೆ ಇದೆ. ವಾಹನದ ಆರಂಭಿಕ ವೆಚ್ಚ ಡೀಸೆಲ್ ಬಸ್‌ಗಿಂತ ಹೆಚ್ಚು ಇದ್ದರೂ, ದೀರ್ಘಾವಧಿಯಲ್ಲಿ ವೆಚ್ಚ ಕಡಿಮೆಯಾಗುವ ಸಾಧ್ಯತೆಗಳಿವೆ ಎಂದು ವಲಯದವರು ಅಭಿಪ್ರಾಯಪಡುತ್ತಾರೆ.

ಡ್ರೈವರ್‌ಗಳಿಗೆ ಅಗತ್ಯ ತರಬೇತಿ ನೀಡಲಾಗುತ್ತಿದ್ದು, ಗೇರ್‌ಲೆಸ್ ವ್ಯವಸ್ಥೆಯ ಕಾರಣ ಚಾಲನೆ ಕಾರಿನಂತೆಯೇ ಸುಲಭವಾಗಿರುತ್ತದೆ ಎಂದು ತಿಳಿಸಲಾಗಿದೆ. ಅಗತ್ಯ ಸರ್ಕಾರಿ ನೋಂದಣಿ ಮತ್ತು ಪರ್ಮಿಟ್ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಮಾರ್ಚ್ ಮೊದಲ ವಾರದಲ್ಲೇ ರಸ್ತೆಗಿಳಿಸುವ ಯೋಜನೆ ಇದೆ.

ಈ ಬಗ್ಗೆ ಮಾತನಾಡಿದ ಗಣೇಶ ಟ್ರಾವೆಲ್ಸ್‌ನ ದಿಲ್ ರಾಜ್ ಆಳ್ವಾ, ದಕ್ಷಿಣ ಕನ್ನಡದ ಸಾರಿಗೆ ಇತಿಹಾಸವನ್ನು ಸ್ಮರಿಸಿ, ನಗರಕ್ಕೆ ಹೊಸ ತಂತ್ರಜ್ಞಾನ ನೀಡುವ ಅಗತ್ಯವನ್ನು ಒತ್ತಿಹೇಳಿದರು. "ದಕ್ಷಿಣ ಕನ್ನಡದಲ್ಲಿ ಸಾರಿಗೆ ಉದ್ಯಮ ನೂರು ವರ್ಷದ ಇತಿಹಾಸ ಹೊಂದಿದೆ. ರಾಜ್ಯಕ್ಕೆ ಮಾದರಿಯಾದ ವ್ಯವಸ್ಥೆ ನಮ್ಮದು. ಸರ್ಕಾರದ ಸಬ್ಸಿಡಿ ಇಲ್ಲದೇ ನಾವು ಸೇವೆ ನೀಡುತ್ತಾ ಬಂದಿದ್ದೇವೆ. ಕಾಲಕ್ಕೆ ತಕ್ಕಂತೆ ಡಿಜಿಟಲ್ ಪಾವತಿ ವ್ಯವಸ್ಥೆಗಳನ್ನು ಪರಿಚಯಿಸಿದ್ದೇವೆ. ಈಗ ಪರಿಸರ ಮಾಲಿನ್ಯ ಕಡಿಮೆ ಮಾಡುವ ದೃಷ್ಟಿಯಿಂದ ಎಲೆಕ್ಟ್ರಿಕ್ ಬಸ್ ತರಲಾಗಿದೆ. ಒಮ್ಮೆ ಚಾರ್ಜ್ ಮಾಡಿದರೆ ಸುಮಾರು 200 ಕಿಲೋಮೀಟರ್ ಓಡುತ್ತದೆ. ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆಯಿದೆ. ಖಾಸಗಿ ವಲಯದಿಂದ ನಗರ ಸಿಟಿ ಬಸ್ ವ್ಯವಸ್ಥೆಯಲ್ಲಿ ಎಲೆಕ್ಟ್ರಿಕ್ ಬಸ್ ಆರಂಭವಾಗುತ್ತಿರುವುದು ಕರಾವಳಿಯಲ್ಲಿ ಪ್ರಥಮ ಎಂಬ ನಂಬಿಕೆ ನಮ್ಮದು. ಇದು ಯಶಸ್ವಿಯಾದರೆ ಇನ್ನಷ್ಟು ಇವಿ ಬಸ್‌ಗಳನ್ನು ತರಲು ಸಿದ್ಧರಾಗಿದ್ದೇವೆ," ಎಂದು ಹೇಳಿದರು.

ಮಂಗಳೂರು ಸ್ಮಾರ್ಟ್ ಸಿಟಿ ಕನಸಿನ ದಾರಿಯಲ್ಲಿ ಸಾಗುತ್ತಿರುವ ಈ ಸಂದರ್ಭ, ಖಾಸಗಿ ವಲಯದಿಂದ ಪರಿಸರ ಸ್ನೇಹಿ ಸಾರಿಗೆಗೆ ಹೆಜ್ಜೆ ಇಡುವುದು ಗಮನಾರ್ಹ ಬೆಳವಣಿಗೆಯಾಗಿದೆ. ಪ್ರಯೋಗ ಯಶಸ್ವಿಯಾದರೆ, ಮುಂದಿನ ದಿನಗಳಲ್ಲಿ ರಾಜ್ಯದ ಇತರ ನಗರಗಳಿಗೂ ಇದು ಮಾದರಿಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಮಂಜೂರಾದ 100 ಎಲೆಕ್ಟ್ರಿಕ್ ಬಸ್​ಗಳಿಗೆ ಕಾಯುತ್ತಿದೆ ಬೆಳಗಾವಿ: ದೌಡ ಬಸ್ ಬಿಡ್ರಿ ಅಂತಿದಾರೆ ಜನ..!