ಮನೆ ಕಟ್ಟಿಸಿಕೊಡುವುದಾಗಿ ನಂಬಿಸಿ ವಂಚನೆ: ಆರೋಪಿಗೆ ರೂ 15.60 ಲಕ್ಷ ದಂಡ ವಿಧಿಸಿದ ಮಂಗಳೂರು ವಿಶೇಷ ನ್ಯಾಯಾಲಯ
ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ವಿಶೇಷ) ನ್ಯಾಯಾಲಯದ ನ್ಯಾಯಾಧೀಶರಾದ ಜಗದೀಶ ವಿ. ಭಟ್, ಆರೋಪಿ ಮೇಲಿನ ಅಪರಾಧ ಸಾಬೀತಾಗಿದೆ ಎಂದು ತೀರ್ಮಾನಿಸಿ ದೋಷಿ ಎಂದು ತೀರ್ಪು ನೀಡಿದ್ದಾರೆ.


Published : August 31, 2026 at 7:13 PM IST
ಮಂಗಳೂರು: ಸ್ವಂತ ಜಾಗದಲ್ಲಿ ಮನೆ ನಿರ್ಮಿಸಿಕೊಡುವುದಾಗಿ ನಂಬಿಸಿ ಮುಂಗಡ ಹಣ ಪಡೆದು ವಂಚಿಸಿದ್ದಲ್ಲದೇ, ಹಣ ವಾಪಸ್ ಕೇಳಲು ಬಂದಾಗ ಜಾತಿ ನಿಂದನೆ ಮಾಡಿದ್ದ ಪ್ರಕರಣದಲ್ಲಿ ಆರೋಪಿಗೆ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ವಿಶೇಷ) ನ್ಯಾಯಾಲಯವು 15.60 ಲಕ್ಷ ರೂ.ಗಳ ಭಾರಿ ದಂಡ ವಿಧಿಸಿ ತೀರ್ಪು ನೀಡಿದೆ ಎಂದು ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕಿ ಶ್ರೀಮತಿ ಜ್ಯೋತಿ ಪ್ರಮೋದ ನಾಯಕ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮೂಡುಬಿದಿರೆ ತಾಲೂಕಿನ ಪುತ್ತಿಗೆ ಗ್ರಾಮದ ಮಿತ್ತಬೈಲು ಎಲ್‌ನಾಥನ್ ಕಾಯರ್‌ಪುಂಡು ನಿವಾಸಿ ಸಿಪ್ರಿಯಾನ್ ಡಿ.ಸೋಜಾ ಶಿಕ್ಷೆಗೆ ಗುರಿಯಾದ ಆರೋಪಿ.
ಪ್ರಕರಣದ ಹಿನ್ನೆಲೆ: ಆರೋಪಿ ಸಿಪ್ರಿಯಾನ್ ಡಿ.ಸೋಜಾ ತನ್ನದೇ ಜಾಗದಲ್ಲಿ 1,250 ಚದರ ಅಡಿಯ ಮನೆ ನಿರ್ಮಿಸಿಕೊಡುವುದಾಗಿ ನಂಬಿಸಿ, ಜಾಗ ಮತ್ತು ಮನೆಗೆ ಒಟ್ಟು ರೂ 30 ಲಕ್ಷ ಮೊತ್ತ ನಿಗದಿಪಡಿಸಿದ್ದರು. ಈ ಸಂಬಂಧ ದಿನಾಂಕ 28.06.2017 ರಂದು ಜಯಂತ್ ನಾಯ್ಕ, ಮನೋಜ್ ಮತ್ತು ವಾಸುದೇವ ಅವರೊಂದಿಗೆ ವಿಕ್ರಯ ಕರಾರು ಪತ್ರ ಮಾಡಿಕೊಂಡು, ಒಂದು ವರ್ಷದೊಳಗೆ ಮನೆ ನಿರ್ಮಿಸಿಕೊಡುವ ಭರವಸೆ ನೀಡಿದ್ದರು. ಬಳಿಕ ಜಯಂತ್ ನಾಯ್ಕ, ಮನೋಜ್ ಮತ್ತು ವಾಸುದೇವ ಅವರಿಂದ ಹಂತ ಹಂತವಾಗಿ ಚೆಕ್ ಹಾಗೂ ಬ್ಯಾಂಕ್ ವರ್ಗಾವಣೆ ಮೂಲಕ ಲಕ್ಷಾಂತರ ರೂಪಾಯಿ ಮುಂಗಡ ಹಣ ಪಡೆದುಕೊಂಡಿದ್ದರು. ಆದರೆ, ವರ್ಷ ಕಳೆದರೂ ಮನೆ ನಿರ್ಮಿಸಿಕೊಡದಿದ್ದಾಗ ಸಂತ್ರಸ್ತರು ಹಣ ವಾಪಸ್ ನೀಡುವಂತೆ ಒತ್ತಾಯಿಸಿದ್ದರು. ಆಗ ಆರೋಪಿ 07.09.2019 ರೊಳಗೆ ಹಣ ಮರಳಿಸುವುದಾಗಿ ಮತ್ತೊಂದು ಕರಾರು ಮಾಡಿಕೊಟ್ಟಿದ್ದರೂ ಹಣ ವಾಪಸ್ ನೀಡಿರಲಿಲ್ಲ.
ದಿನಾಂಕ 20.01.2021 ರಂದು ಬೆಳಗ್ಗೆ ಸಂತ್ರಸ್ತರು ಆರೋಪಿಯ ಮನೆಗೆ ತೆರಳಿ ತಮ್ಮ ಹಣ ಮರಳಿಸುವಂತೆ ಕೇಳಿದಾಗ, ಆಕ್ರೋಶಗೊಂಡ ಆರೋಪಿ ಸಾರ್ವಜನಿಕ ಸ್ಥಳದಲ್ಲೇ ಅವಾಚ್ಯ ಶಬ್ದಗಳಿಂದ ನಿಂದಿಸಿ ಜಾತಿ ನಿಂದನೆ ಮಾಡಿದ್ದ. ಈ ಕುರಿತು ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಅ.ಕ್ರ: 18/2021 ರಂತೆ ಭಾ.ದಂ.ಸಂ ಕಲಂ 406, 504 ಹಾಗೂ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಅಂದಿನ ಸಹಾಯಕ ಪೊಲೀಸ್ ಆಯುಕ್ತರಾದ ಎಸ್. ಮಹೇಶ್ ಕುಮಾರ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ವಿಶೇಷ) ನ್ಯಾಯಾಲಯದ ನ್ಯಾಯಾಧೀಶರಾದ ಜಗದೀಶ ವಿ. ಭಟ್ ಅವರು ಆರೋಪಿ ಮೇಲಿನ ಅಪರಾಧ ಸಾಬೀತಾಗಿದೆ ಎಂದು ತೀರ್ಮಾನಿಸಿ, ಭಾ.ದಂ.ಸಂ ಕಲಂ 406 (ನಂಬಿಕೆ ದ್ರೋಹ) ಅಡಿಯಲ್ಲಿ ದೋಷಿ ಎಂದು ತೀರ್ಪು ನೀಡಿದ್ದಾರೆ.
ಆರೋಪಿಗೆ ಒಟ್ಟು ರೂ 15,60,000/- (ಹದಿನೈದು ಲಕ್ಷದ ಅರವತ್ತು ಸಾವಿರ ರೂ.) ದಂಡ ವಿಧಿಸಲಾಗಿದ್ದು, ದಂಡ ಪಾವತಿಸಲು ತಪ್ಪಿದಲ್ಲಿ 3 ವರ್ಷಗಳ ಸಾದಾ ಸಜೆ ವಿಧಿಸಿ ಆದೇಶಿಸಲಾಗಿದೆ.
ಪರಿಹಾರ ವಿತರಣೆ: ವಸೂಲಾದ ದಂಡದ ಮೊತ್ತದಲ್ಲಿ ಜಯಂತ್ ಬಿ. ನಾಯ್ಕ ಅವರಿಗೆ ರೂ 6,00,000/-, ಮನೋಜ್ ಅವರಿಗೆ ರೂ 6,00,000/- ಹಾಗೂ ವಾಸುದೇವ ಅವರಿಗೆ ರೂ 3,50,000/- ಪರಿಹಾರ ರೂಪದಲ್ಲಿ ನೀಡಲು ಮತ್ತು ಉಳಿದ ರೂ 10,000/- ಹಣವನ್ನು ಸರ್ಕಾರಕ್ಕೆ ಜಮೆ ಮಾಡಲು ಆದೇಶಿಸಲಾಗಿದೆ.
ಆರೋಪಿಯ ಮನವಿಯ ಮೇರೆಗೆ ದಂಡ ಪಾವತಿಸಲು ನ್ಯಾಯಾಲಯವು ದಿನಾಂಕ 30.09.2026 ರವರೆಗೆ ಕಾಲಾವಕಾಶ ನೀಡಿದೆ.
ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕಿ ಜ್ಯೋತಿ ಪ್ರಮೋದ ನಾಯಕ ಅವರು ವಾದ ಮಂಡಿಸಿದ್ದರು.

