ಮೀನಿನ ತ್ಯಾಜ್ಯಕ್ಕೂ ಇದೆ ಮೌಲ್ಯ: ಮೀನಿನ ಚರ್ಮದಿಂದ 'ಲೆದರ್' ಉತ್ಪಾದನೆ ಕುರಿತು ವಿಶೇಷ ಅಧ್ಯಯನ
ಈ ಅಧ್ಯಯನದಲ್ಲಿ ಸಂಶೋಧಕರು ಸುಮಾರು 10ರಿಂದ 15 ಜಾತಿಯ ಮೀನುಗಳ ಚರ್ಮವು ಮೌಲ್ಯವರ್ಧಿತ ವಸ್ತುಗಳ ತಯಾರಿಕೆಗೆ ಹೇಗೆ ಯೋಗ್ಯವಾಗಿದೆ ಎಂಬುದನ್ನು ಕಂಡುಕೊಂಡಿದ್ದಾರೆ.

Published : January 8, 2026 at 1:43 PM IST
ವರದಿ: ವಿನೋದ್ ಪುದು
ಮಂಗಳೂರು: ಮೀನು ಎಂದರೆ ಕೇವಲ ಆಹಾರವಷ್ಟೇ ಅಲ್ಲ, ಅದರ ಪ್ರತಿಯೊಂದು ಭಾಗವೂ ಆರ್ಥಿಕವಾಗಿ ಮೌಲ್ಯಯುತವಾದುದು ಎಂಬುದನ್ನು ಮಂಗಳೂರಿನ ಮೀನುಗಾರಿಕಾ ಕಾಲೇಜಿನ ಸಂಶೋಧಕರು ಸಾಬೀತುಪಡಿಸಿದ್ದಾರೆ.
ಮೀನು ತಿಂದ ನಂತರ ಸಾಮಾನ್ಯವಾಗಿ ಎಸೆಯಲ್ಪಡುವ ಅದರ ಚರ್ಮದಿಂದ ಈಗ ಅತ್ಯುತ್ತಮ ಗುಣಮಟ್ಟದ 'ಲೆದರ್' ಅಥವಾ ಚರ್ಮದ ಉತ್ಪನ್ನಗಳನ್ನು ತಯಾರಿಸುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ.
ಮಂಗಳೂರು ಮೀನುಗಾರಿಕಾ ಕಾಲೇಜಿನ ಮೀನು ಸಂಸ್ಕರಣಾ ತಂತ್ರಜ್ಞಾನ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾದ ಡಾ.ಬಿ. ಮಂಜ ನಾಯ್ಕ ಅವರ ನೇತೃತ್ವದಲ್ಲಿ ಮಹತ್ವದ ಸಂಶೋಧನೆ ನಡೆದಿದೆ. ಸುಮಾರು ಎಂಟು ಸಂಶೋಧಕರ ತಂಡ ಕಳೆದ ಐದು ವರ್ಷಗಳಿಂದ ನಿರಂತರ ಅಧ್ಯಯನ ನಡೆಸಿದ್ದು, ಈಗ ಯಶಸ್ಸು ಸಿಕ್ಕಿದೆ. ಸಂಶೋಧನಾ ವರದಿ ಅಂತಾರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ 'ಸ್ಪ್ರಿಂಗರ್ ನೇಚರ್' ಜರ್ನಲ್ನಲ್ಲಿ ಪ್ರಕಟವಾಗುವ ಮೂಲಕ ಜಾಗತಿಕ ಗಮನ ಸೆಳೆದಿದೆ.
ಯಾವ ಮೀನುಗಳ ಚರ್ಮ ಬಳಕೆ?: ಸಂಶೋಧಕರು ಸುಮಾರು 10ರಿಂದ 15 ಜಾತಿಯ ಮೀನುಗಳ ಮೇಲೆ ಈ ಅಧ್ಯಯನ ಮಾಡಿದ್ದಾರೆ. ವಿಶೇಷವಾಗಿ ಸಮುದ್ರದಲ್ಲಿ ಕಂಡುಬರುವ ಮಲಬಾರ್ ಗ್ರೂಪರ್, ಮೆಲುಗು, ಕೋಬಿಯಾ, ಕ್ಯಾಟ್ ಫಿಶ್ ಮತ್ತು ಸೈನಿಕ್ ಗ್ರೂಪರ್ ಮೀನುಗಳ ಚರ್ಮವು ಲೆದರ್ ತಯಾರಿಕೆಗೆ ಹೆಚ್ಚು ಪೂರಕವಾಗಿದೆ ಎಂದು ಕಂಡುಕೊಳ್ಳಲಾಗಿದೆ. ಈ ಮೀನುಗಳ ಚರ್ಮವು ಸಾಕಷ್ಟು ಗಟ್ಟಿಯಾಗಿದ್ದು, ಮೌಲ್ಯವರ್ಧಿತ ವಸ್ತುಗಳ ತಯಾರಿಕೆಗೆ ಯೋಗ್ಯವಾಗಿದೆ.

ಪರಿಸರಸ್ನೇಹಿ ತಂತ್ರಜ್ಞಾನ: ಪ್ರಸ್ತುತ ಚರ್ಮದ ಉದ್ಯಮವು ಹಸು, ಕುರಿ, ಒಂಟೆ ಮತ್ತು ಮೊಸಳೆಗಳಂತಹ ಪ್ರಾಣಿಗಳ ಚರ್ಮದ ಮೇಲೆ ಅವಲಂಬಿತವಾಗಿದೆ. ಈ ಪ್ರಾಣಿಗಳ ಚರ್ಮವನ್ನು ಹದಗೊಳಿಸುವ ಪ್ರಕ್ರಿಯೆಯಲ್ಲಿ ಕ್ರೋಮಿಯಂನಂತಹ ವಿಷಕಾರಿ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಇದು ಮಾನವನ ಆರೋಗ್ಯ ಮತ್ತು ಪರಿಸರಕ್ಕೆ ತೀವ್ರ ಹಾನಿ ಉಂಟುಮಾಡುತ್ತದೆ. ಅಲ್ಲದೆ, ಇದಕ್ಕೆ ಅಪಾರ ಪ್ರಮಾಣದ ನೀರಿನ ಅವಶ್ಯಕತೆಯೂ ಇರುತ್ತದೆ. ಆದರೆ ಮೀನಿನ ಚರ್ಮವನ್ನು ಹದಗೊಳಿಸುವ ಈ ಹೊಸ ವಿಧಾನವು ಪರಿಸರ ಮಾಲಿನ್ಯವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ಮತ್ತು ನೀರಿನ ಬಳಕೆಯನ್ನೂ ಮಿತಗೊಳಿಸುತ್ತದೆ.

ಉದ್ಯಮ ಮತ್ತು ಆರ್ಥಿಕತೆಯ ಮೇಲೆ ಪ್ರಭಾವ: ದಕ್ಷಿಣ ಕನ್ನಡ ಜಿಲ್ಲೆಯು ಮೀನುಗಾರಿಕೆಗೆ ಹೆಸರುವಾಸಿಯಾಗಿದ್ದು, ಇಲ್ಲಿ ಕಳೆದ ವರ್ಷಗಳಲ್ಲಿ ಮೀನಿನ ಉತ್ಪಾದನೆ ಉತ್ತಮವಾಗಿದೆ. ಸಂಸ್ಕರಣಾ ಘಟಕಗಳಿಂದ ಹೊರಬರುವ ಚರ್ಮದ ತ್ಯಾಜ್ಯವನ್ನು ಬಳಸಿಕೊಂಡು ಕೀ ಚೈನ್, ಪರ್ಸ್, ಬೆಲ್ಟ್ ಮತ್ತು ಇತರ ನಿತ್ಯೋಪಯೋಗಿ ವಸ್ತುಗಳನ್ನು ತಯಾರಿಸುವುದರಿಂದ ಮೀನುಗಾರಿಕಾ ಕ್ಷೇತ್ರಕ್ಕೆ ಹೊಸ ಆಯಾಮ ದೊರೆಯಲಿದೆ. ಇದು ಸಣ್ಣ ಮತ್ತು ಗುಡಿ ಕೈಗಾರಿಕೆಗಳಿಗೆ ಹೆಚ್ಚಿನ ಉತ್ತೇಜನ ನೀಡಲಿದ್ದು, ಪ್ರಾಣಿಗಳ ಚರ್ಮದ ಮೇಲಿನ ಅವಲಂಬನೆಯನ್ನು ತಗ್ಗಿಸಲು ಸಹಕಾರಿಯಾಗಲಿದೆ.

ಈ ಕುರಿತು ಮಾತನಾಡಿದ ಡಾ.ಬಿ. ಮಂಜ ನಾಯ್ಕ ಅವರು, "ಮೀನು ಸಂಸ್ಕರಣಾ ತಾಂತ್ರಿಕ ವಿಭಾಗದಿಂದ ಮೀನಿನಿಂದ ಲೆದರ್ ಉತ್ಪಾದಿಸುವ ಸಂಶೋಧನೆ ನಡೆಸಲಾಯಿತು. ಒಂದು ಕೆ.ಜಿ. ಮೀನಿನಲ್ಲಿ ಶೇ.35ರಿಂದ 40ರಷ್ಟು ತ್ಯಾಜ್ಯವಾಗಿ ಬಿಸಾಕಲಾಗುತ್ತದೆ. ಇದನ್ನು ಉತ್ತಮ ರೀತಿಯಲ್ಲಿ ಸಂಸ್ಕರಣೆ ಮಾಡಿದರೆ ಮೌಲ್ಯವರ್ಧಿತ ವಸ್ತುಗಳನ್ನು ತಯಾರಿಸಬಹುದು. ನಾವು ಮೀನಿನ ಚರ್ಮದಿಂದ ಲೆದರ್ ಮಾಡುವ ಪ್ರಯತ್ನ ಮಾಡಿದೆವು. ಮೆಲುಗು, ಕ್ಯಾಟ್ ಫಿಶ್, ಗ್ರೂಪರ್ ಮೀನುಗಳು ಅತೀ ಹೆಚ್ಚಿನ ಗಾತ್ರದಲ್ಲಿ ಬೆಳೆಯುತ್ತದೆ. ಈ ಮೀನಿನ ಚರ್ಮ ತೆಗೆದು ಮಾಂಸ ಸೇವನೆ ಮಾಡಲಾಗುತ್ತದೆ. ಈ ಚರ್ಮದಲ್ಲಿ ಹೆಚ್ಚು ನ್ಯೂಟ್ರಿಷಿಯನ್ ಇರುತ್ತದೆ. ಇದರಲ್ಲಿ ಕೊಲಾಜಿನ್ ಎಂಬ ಪ್ರೋಟೀನ್ ಇದೆ. ಇದು ಲೆದರ್ ಉತ್ಪಾದನೆಗೆ ಹೆಚ್ಚು ಸಹಾಯ ಮಾಡುತ್ತದೆ. ಸಾಮಾನ್ಯವಾಗಿ ಚರ್ಮದ ಇಂಡಸ್ಟ್ರಿ ಪ್ರಾಣಿಗಳ ಚರ್ಮವನ್ನು ಅವಲಂಬಿತವಾಗಿದೆ. ನಮ್ಮ ವಿದ್ಯಾ ಸಂಸ್ಥೆ ಮೀನಿನ ಚರ್ಮ ಬಳಸಿ ಕಡಿಮೆ ದರದಲ್ಲಿ ಲೆದರ್ ಆಗಿ ಪರಿವರ್ತಿಸಿದ್ದೇವೆ. ವಿವಿಧ ಹಂತಗಳಲ್ಲಿ ಇದನ್ನು ಸಂಸ್ಕರಿಸಿ ಮೀನಿನ ಚರ್ಮದಿಂದ ಲೆದರ್ ಆಗುವುದನ್ನು ಮಾಡಲಾಗಿದೆ. ಇದನ್ನು ವಿವಿಧ ಆಯಾಮದಲ್ಲಿ ಅಧ್ಯಯನ ಮಾಡಿದ್ದೇವೆ" ಎನ್ನುತ್ತಾರೆ.
ಈ ಸಂಶೋಧನೆ ಕಾರ್ಯಗತವಾದರೆ, ಮೀನುಗಳಿಂದ ಕೇವಲ ಮಾಂಸವಲ್ಲದೆ, ಈವರೆಗೆ ತ್ಯಾಜ್ಯವೆಂದು ಭಾವಿಸಲಾಗಿದ್ದ ಚರ್ಮದಿಂದಲೂ ಹೆಚ್ಚಿನ ಲಾಭ ಸಿಗಲಿದೆ.
ಇದನ್ನೂ ಓದಿ: ಕರಾವಳಿಯ ಗಡಿ ದಾಟಿದ ಕಂಬಳ!: ಇನ್ಮುಂದೆ ರಾಜ್ಯಾದ್ಯಂತ ಮೊಳಗಲಿದೆ ಕೋಣಗಳ ಹೆಜ್ಜೆ ಸದ್ದು

