ETV Bharat / state

ವಿಚಾರಣಾಧೀನ ಕೈದಿಗೆ ಆಸ್ಪತ್ರೆಯಲ್ಲಿ ಪ್ರತ್ಯೇಕ ಚಿಕಿತ್ಸೆ ಪ್ರಕರಣ: ಮಂಡ್ಯ ಜಿಲ್ಲಾ ಕಾರಾಗೃಹದ ಅಧೀಕ್ಷಕಿ ಶಾಂತಮ್ಮ ವರ್ಗಾವಣೆ

ನ್ಯಾಯಾಧೀಶರ ತರಾಟೆಯ ಬೆನ್ನಲ್ಲೇ ಎಚ್ಚೆತ್ತುಕೊಂಡಿದ್ದ ಡಿಜಿಪಿ ಅಲೋಕ್ ಕುಮಾರ್ ಮಂಡ್ಯ ಜಿಲ್ಲಾ ಕಾರಾಗೃಹಕ್ಕೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

Mandya District Prison SP Shanthamma Transfer order
ಜಿಲ್ಲಾಸ್ಪತ್ರೆಗೆ ಜಿಲ್ಲಾನ್ಯಾಯಾಧೀಶರ ದಿಢೀರ್​ ಭೇಟಿ (ETV BHARAT)
author img

By ETV Bharat Karnataka Team

Published : August 31, 2026 at 1:12 PM IST

1 Min Read
Choose ETV Bharat

ಮಂಡ್ಯ: ವಿಚಾರಣಾಧೀನ ಕೈದಿಯೊಬ್ಬನಿಗೆ ಆಸ್ಪತ್ರೆಯಲ್ಲಿ ರಾಜಾತಿಥ್ಯ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡ್ಯ ಜಿಲ್ಲಾ ಕಾರಾಗೃಹದ ಅಧೀಕ್ಷಕಿ ಶಾಂತಮ್ಮ ಅವರನ್ನು ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ವರ್ಗಾವಣೆ ಮಾಡಿ ಜೈಲು ಇಲಾಖೆಯ ಡಿಜಿಪಿ ಅಲೋಕ್ ಕುಮಾರ್ ಆದೇಶ ಹೊರಡಿಸಿದ್ದಾರೆ.

ಭೂ ಅಕ್ರಮ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಜೈಲು ಸೇರಿದ್ದ ಮಹಮದ್ ಹುಸೇನ್ ಮಂಡ್ಯದ ಎಂಐಎಂಎಸ್ (MIMS) ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಂಡ್ಯ ಜಿಲ್ಲಾ ನ್ಯಾಯಾಧೀಶರಾದ ಸಿ ಚಂದ್ರಶೇಖರ್​​ ದಿಢೀರ್ ದಾಳಿ ವೇಳೆ, ಆರೋಪಿ ಯುವತಿ ಜೊತೆ ಸಿಕ್ಕಿಬಿದ್ದ ಪ್ರಕರಣ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ನ್ಯಾಯಾಲಯಕ್ಕೂ ಯಾವುದೇ ಪೂರ್ವ ಮಾಹಿತಿ ನೀಡದೇ ಕೈದಿಯನ್ನು ಆಸ್ಪತ್ರೆಗೆ ದಾಖಲಿಸಿರುವುದು ನ್ಯಾಯಾಧೀಶರ ತಪಾಸಣೆ ವೇಳೆ ಪತ್ತೆಯಾಗಿತ್ತು. ಈ ಕುರಿತು ವರದಿ ಸಲ್ಲಿಸುವಂತೆ ಕೂಡ ನ್ಯಾಯಾಧೀಶರು ಸೂಚಿಸಿದ್ದರು.

ನ್ಯಾಯಾಧೀಶರ ತರಾಟೆಯ ಬೆನ್ನಲ್ಲೇ ಎಚ್ಚೆತ್ತುಕೊಂಡಿದ್ದ ಡಿಜಿಪಿ ಅಲೋಕ್ ಕುಮಾರ್, ಮಂಡ್ಯ ಜಿಲ್ಲಾ ಕಾರಾಗೃಹಕ್ಕೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಈ ಕುರಿತು ಅಧಿಕೃತ ಆದೇಶ ಹೊರಡಿಸಿರುವ ಅವರು, ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸದರಿ ಕಾರಾಗೃಹದ ಅಧೀಕ್ಷಕರಾದ ಶ್ರೀಮತಿ ಶಾಂತಮ್ಮ ಅವರ ಕರ್ತವ್ಯ ಲೋಪವು ಮೇಲ್ನೋಟಕ್ಕೆ ಕಂಡುಬಂದಿದೆ. ತಕ್ಷಣವೇ ಜಾರಿಗೆ ಬರುವಂತೆ ಅವರನ್ನು ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ವರ್ಗಾವಣೆ ಮಾಡಲಾಗಿದೆ ಎಂದು ಅಧಿಕೃತ ಆದೇಶದಲ್ಲಿ ತಿಳಿಸಿದ್ದಾರೆ.

Mandya District Prison SP Shanthamma Transfer order
ಆದೇಶ ಪ್ರತಿ (ETV BHARAT)

ವಿವಿಧ ಮಾಧ್ಯಮಗಳಲ್ಲಿ ಮಂಡ್ಯ ಜಿಲ್ಲಾ ಕಾರಾಗೃಹದ ಆಡಳಿತದ ವಿರುದ್ಧ ಪ್ರಸಾರವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ವಿಚಾರಣಾ ವರದಿ ಸ್ವೀಕೃತವಾದ ಬಳಿಕ, ಸದರಿ ಕಾರಾಗೃಹದ ಅಧೀಕ್ಷಕರಾದ ಶ್ರೀಮತಿ ಶಾಂತಮ್ಮ ಎಂ. ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೂ ಬಳ್ಳಾರಿ ಕೇಂದ್ರ ಕಾರಾಗೃಹದ ವಿಶೇಷ ಕರ್ತವ್ಯದ ಮೇಲೆ ನಿಯೋಜಿಸಿ ಆದೇಶಿಸಿದೆ.

ಮೇಲ್ಕಂಡ ಅಧಿಕಾರಿಯು ಕರ್ತವ್ಯದಿಂದ ಬಿಡುಗಡೆಗೊಂಡ ಮತ್ತು ಕರ್ತವ್ಯಕ್ಕೆ ರಿಪೋರ್ಟ್​ ಮಾಡಿಕೊಂಡ ಬಗ್ಗೆ ಸಂಬಂಧಪಟ್ಟ ಕಾರಾಗೃಹಗಳ ಅಧೀಕ್ಷಕರು ಅನುಪಾಲನಾ ವರದಿಯನ್ನು ಪ್ರಧಾನ ಕಚೇರಿಗೆ ಸಲ್ಲಿಸುವಂತೆ ಕೂಡ ತಿಳಿಸಲಾಗಿದೆ.

ಇದನ್ನೂ ಓದಿ: ಜೈಲಿನಲ್ಲಿದ್ದ ಆರೋಪಿಗೆ ಆಸ್ಪತ್ರೆಯಲ್ಲಿ ಪ್ರತ್ಯೇಕ ಚಿಕಿತ್ಸೆ: ಜಿಲ್ಲಾ ನ್ಯಾಯಾಧೀಶರ ದಿಢೀರ್ ತಪಾಸಣೆ ವೇಳೆ ಪತ್ತೆ: ವರದಿ ನೀಡುವಂತೆ ಸೂಚನೆ!