ETV Bharat / state

ಶಿರಸಿ: ಮದುವೆಯಾಗಲು ನಿರಾಕರಿಸಿದ ಯುವತಿಯ ಕೊಲೆಗೈದವ ಆತ್ಮಹತ್ಯೆ

ಮದುವೆಯಾಗಲು ನಿರಾಕರಿಸಿದ ಯುವತಿಯ ಕತ್ತು ಕೊಯ್ದು ಕೊಲೆಗೈದ ಆರೋಪಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Representative image
ಸಾಂದರ್ಭಿಕ ಚಿತ್ರ (IANS)
author img

By ETV Bharat Karnataka Team

Published : January 4, 2026 at 1:54 PM IST

1 Min Read
Choose ETV Bharat

ಶಿರಸಿ(ಉತ್ತರ ಕನ್ನಡ): ಜಿಲ್ಲೆಯ ಯಲ್ಲಾಪುರ ನಗರದ ಕಾಳಮ್ಮ ನಗರದ ಆಶ್ರಯ ಬಡಾವಣೆಯ ನಿವಾಸಿ ರಂಜಿತಾ ಎಂಬವರನ್ನು ಕತ್ತು ಕೊಯ್ದು ಹತ್ಯೆ ಮಾಡಿ, ಪರಾರಿಯಾಗಿದ್ದ ರಫೀಕ್ ಎಂಬಾತ ಅರಣ್ಯ ಇಲಾಖೆಗೆ ಸೇರಿದ ಅಕೇಶಿಯಾ ನಡುತೋಪಿನಲ್ಲಿ ಕುನ್ನೇರಲೆ ಮರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈ ಪ್ರಕರಣದ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎನ್ ಅವರು ಮಾಹಿತಿ ನೀಡಿ, "ಮೃತಳ ಸಹೋದರಿ ಅಕ್ಷತಾ ಮಲ್ಲಪ್ಪ ಬನಸೋಡೆ ಅವರು ಪೊಲೀಸರಿಗೆ ದೂರು ನೀಡಿದ್ದರು. ರಂಜಿತಾ ಅವರಿಗೆ ಕಳೆದ ಸುಮಾರು 12 ವರ್ಷಗಳ ಹಿಂದೆ ಸಚೀನ ಕಾಟೇರ ಎಂಬವರೊಂದಿಗೆ ಮದುವೆ ಆಗಿತ್ತು. 10 ವರ್ಷದ ಮಗ ಇದ್ದಾನೆ. ಗಂಡನ ಜೊತೆ ಹೊಂದಾಣಿಕೆ ಆಗದೇ ಸುಮಾರು 4-5 ವರ್ಷಗಳಿಂದ ಮನೆಯವರೊಂದಿಗೆ ವಾಸವಿದ್ದರು. ಬಳಿಕ ವಿಚ್ಛೇದನ ಪಡೆದಿದ್ದರು. ರಂಜಿತಾ ರಾಮಪುರ ಸರ್ಕಾರಿ ಶಾಲೆಯಲ್ಲಿ ಅಡುಗೆ ಸಹಾಯಕಿಯಾಗಿ ಕೆಲಸ ಮಾಡಿಕೊಂಡಿದ್ದರು. ರಫೀಕ್ ಇಮಾಮ್‌ ಸಾಬ ಯಳ್ಳೂರ ಎಂಬವ ರಂಜಿತಾರ ಕ್ಲಾಸ್‌ಮೇಟ್ ಆಗಿದ್ದ. ಆಗಾಗ ಮನೆಗೆ ಬಂದು ಹೋಗುತ್ತಿದ್ದ. ಫೋನ್‌ನಲ್ಲಿ ಇಬ್ಬರೂ ಮಾತನಾಡುತ್ತಿದ್ದರು. ರಫಿಕ್​ ನನ್ನನ್ನು ಮದುವೆಯಾಗು ಎಂದು ರಂಜಿತಾ ಅವರಿಗೆ ಹೇಳಿದಾಗ ಆಕೆ ಸಂಪರ್ಕ ನಿಲ್ಲಿಸಿದ್ದರು ಎಂದು ಸಹೋದರಿ ದೂರಿನಲ್ಲಿ ತಿಳಿಸಿದ್ದಾರೆ. ರಫೀಕ್ ದ್ವೇಷ ಸಾಧಿಸಿ ರಂಜಿತಾ ಕೆಲಸ ಮುಗಿಸಿ ಮನೆಗೆ ಬರುವ ದಾರಿಯಲ್ಲಿ ಅಡ್ಡಗಟ್ಟಿ ಹರಿತ ಆಯುಧದಿಂದ ಕುತ್ತಿಗೆ ಕೊಯ್ದಿದ್ದಾನೆ. ನಂತರ ಆಕೆಯ ಅಣ್ಣ, ನಾದಿನಿ ಎಲ್ಲರೂ ಸೇರಿ ಆಸ್ಪತ್ರೆಗೆ ಸೇರಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಕಿಮ್ಸ್​ಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟರು" ಎಂದು ತಿಳಿಸಿದರು.

ಪ್ರಕರಣದ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎನ್ ಮಾಹಿತಿ ನೀಡಿದರು. (ETV Bharat)

ಶನಿವಾರ ಘಟನೆ ನಡೆದ ಬಳಿಕ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ವಿಳಂಬವಾಗಿದೆ ಎಂದು ಹಿಂದೂ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದವು. ಪೊಲೀಸರು ಆರೋಪಿಯನ್ನು ಹುಡುಕಲು ತೀವ್ರ ಕಾರ್ಯಾಚರಣೆ ನಡೆಸುತ್ತಿದ್ದರು. ಆದರೆ ಭಾನುವಾರ ಬೆಳಿಗ್ಗೆ ಆರೋಪಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಕಮರಿದ ಭಟ್ಕಳದ ಪ್ರತಿಭೆ ರಶ್ಮಿ ಕನಸು: ಪ್ರಾಣಾಪಾಯದಿಂದ ಪಾರಾಗಿ ಬಂದ ಕುಮಟಾದ ವಿಜಯ್​