ಬೆಂಗಳೂರಿನಲ್ಲಿ ಡ್ರಗ್ಸ್ ಕಾರ್ಖಾನೆಗಳು ಪತ್ತೆ! ಮಹಾರಾಷ್ಟ್ರ ಪೊಲೀಸರ ದಾಳಿ; ₹55 ಕೋಟಿಗೂ ಹೆಚ್ಚು ಮೌಲ್ಯದ ಮಾದಕ ದ್ರವ್ಯ ಜಪ್ತಿ
4.1 ಕೆ.ಜಿ ಘನ ರೂಪದ ಎಂಡಿಎಂಎ ಮತ್ತು 17 ಕೆ.ಜಿ ದ್ರವ ರೂಪದ ಎಂಡಿಎಂ ಸೇರಿ ಒಟ್ಟು 55.88 ಕೋಟಿ ರೂ. ಮೌಲ್ಯದ ಡ್ರಗ್ಸ್ ಅನ್ನು ಮಹಾರಾಷ್ಟ್ರ ಪೊಲೀಸರು ಬೆಂಗಳೂರಿನಲ್ಲಿ ಕಾರ್ಯಾಚರಣೆ ಕೈಗೊಂಡು ವಶಪಡಿಸಿಕೊಂಡಿದ್ದಾರೆ.

Published : December 28, 2025 at 11:35 AM IST
ಬೆಂಗಳೂರು: ನಗರದ ವಿವಿಧೆಡೆ ದಾಸ್ತಾನು ಮಾಡಲಾಗಿದ್ದ 55.88 ಕೋಟಿ ರೂಪಾಯಿ ಮೌಲ್ಯದ ಮಾದಕ ಪದಾರ್ಥಗಳನ್ನು ಮಹಾರಾಷ್ಟ್ರದ ಕೊಂಕಣ್ ವಿಭಾಗದ ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ (ATNF) ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಡ್ರಗ್ಸ್ ತಯಾರಿಕಾ ಘಟಕಗಳೇ ಪತ್ತೆ!: ಮಹಾರಾಷ್ಟ್ರದಲ್ಲಿ ದಾಖಲಾಗಿದ್ದ ಪ್ರಕರಣವೊಂದರ ಸಂಬಂಧ ನಾಲ್ವರನ್ನು ಬಂಧಿಸಲಾಗಿದ್ದು, ಆರೋಪಿಗಳು RJ ಈವೆಂಟ್ ಹೆಸರಿನಲ್ಲಿ ಮಾದಕ ಪದಾರ್ಥಗಳ ತಯಾರಿಕಾ ಘಟಕಗಳನ್ನು ನಡೆಸುತ್ತಿದ್ದುದು ಬೆಳಕಿಗೆ ಬಂದಿದೆ.
ಪ್ರಕರಣವೊಂದರಲ್ಲಿ ಮುಂಬೈನಲ್ಲಿ ಇತ್ತೀಚೆಗೆ 1.5 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಬಂಧಿತನಾಗಿದ್ದ ಅಬ್ದುಲ್ಲಾ ಖಾದರ್ ಶೇಕ್ ಎಂಬಾತ ವಿಚಾರಣೆ ವೇಳೆ ಹಲವು ವಿಷಯ ಬಾಯ್ಬಿಟ್ಟಿದ್ದ. ಅದರನ್ವಯ ಮತ್ತೋರ್ವ ಆರೋಪಿಯಾಗಿದ್ದ ಬೆಳಗಾವಿಯ ಪ್ರಶಾಂತ್ ಯಲ್ಲಪ್ಪ ಪಾಟೀಲ್ ಎಂಬಾತನನ್ನು ಬಂಧಿಸಲಾಗಿತ್ತು.
ಆರೋಪಿ ಪಾಟೀಲ್ ತಿಳಿಸಿದ ಮಾಹಿತಿ ಮೇರೆಗೆ ಬೆಂಗಳೂರಿನ ಹೊರಮಾವು, ಯರಪ್ಪನಹಳ್ಳಿ, ಕಣ್ಣೂರು ಬಳಿ ಮಹಾರಾಷ್ಟ್ರ ಪೊಲೀಸರು ದಾಳಿ ನಡೆಸಿದ್ದರು.
ಈ ಸಂದರ್ಭದಲ್ಲಿ 4.1 ಕೆ.ಜಿ ಘನ ರೂಪದ ಎಂಡಿಎಂಎ ಮತ್ತು 17 ಕೆಜಿ ದ್ರವ ರೂಪದ ಎಂಡಿಎಂ ಸೇರಿದಂತೆ ಒಟ್ಟು 55.88 ಕೋಟಿ ರೂಪಾಯಿ ಮೌಲ್ಯದ 21.4 ಕೆ.ಜಿ ಡ್ರಗ್ಸ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರಾಜಸ್ಥಾನದ ಸೂರಜ್ ರಮೇಶ್ ಯಾದವ್, ಮಲ್ಖಾನ್ ರಾಮಲಾಲ್ ಬಿಷ್ಣೋಯ್ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ ಎಂಬ ಮಾಹಿತಿ ಪೊಲೀಸ್ ಮೂಲಗಳಿಂದ ಲಭ್ಯವಾಗಿದೆ.
ಡ್ರಗ್ಸ್ ಸಾಗಿಸುತ್ತಿದ್ದ ವಿದೇಶಿ ಯುವತಿ ಬಂಧನ: ಹೊಸ ವರ್ಷ ಸಮೀಪಿಸುತ್ತಿದ್ದು, ಡ್ರಗ್ಸ್ ಪೆಡ್ಲರ್ಸ್ ವಿರುದ್ಧ ಸಮರ ಸಾರಿರುವ ಬೆಂಗಳೂರು ಪೊಲೀಸರು ಇತ್ತೀಚೆಗೆ ಅಕ್ರಮವಾಗಿ ಡ್ರಗ್ಸ್ ಸಾಗಿಸುತ್ತಿದ್ದ ವಿದೇಶಿ ಯುವತಿಯನ್ನು ಬಂಧಿಸಿದ್ದರು. ಬ್ರೆಡ್ ಪ್ಯಾಕೆಟ್ನಲ್ಲಿ ಡ್ರಗ್ಸ್ ಅವಿತಿಟ್ಟು ಮುಂಬೈನಿಂದ ಬೆಂಗಳೂರಿಗೆ ಸಾಗಿಸುತ್ತಿದ್ದಾಗ, ಆಕೆಯಿಂದ ಸಿಸಿಬಿ ಪೊಲೀಸರು 1.20 ಕೋಟಿ ರೂ ಮೌಲ್ಯದ ಕೊಕೇನ್ ವಶಕ್ಕೆ ಪಡೆದಿದ್ದರು.
ನೈಜೀರಿಯಾದ ಒಲಾಜಿಡೆ ಎಸ್ತಾರ್ ಬಂಧಿತ ವಿದೇಶಿ ಪ್ರಜೆ. ಈಕೆಯಿಂದ 1.20 ಕೋಟಿ ಮೌಲ್ಯದ 121 ಗ್ರಾಂ ಕೊಕೇನ್ ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ಮೊಬೈಲ್ ವಶಕ್ಕೆ ಪಡೆಯಲಾಗಿತ್ತು. ಆರೋಪಿಯ ವಿರುದ್ಧ ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಕೊಂಡು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಬಂಧಿತ ಯುವತಿ ವಿದ್ಯಾರ್ಥಿ ವೀಸಾದಡಿ 2024ರಲ್ಲಿ ದೆಹಲಿಗೆ ಬಂದಿದ್ದಳು. ಕಾಲೇಜಿಗೆ ದಾಖಲಾಗದೆ, ಡ್ರಗ್ಸ್ ದಂಧೆಕೋರರ ನಂಟು ಬೆಳೆಸಿಕೊಂಡು ಮುಂಬೈನ ಹಲವು ಕಡೆಗಳಲ್ಲಿ ವಾಸವಾಗಿದ್ದಳು. ಮುಂಬೈನಲ್ಲಿದ್ದ ಸ್ನೇಹಿತ ನೀಡುವ ಮಾದಕವಸ್ತುಗಳನ್ನು ಹೇಳಿದ ಜಾಗಕ್ಕೆ ಡ್ರಗ್ಸ್ ಪೆಡ್ಲಿಂಗ್ ಮಾಡಿ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದಳು. ಅದೇ ರೀತಿ ಬೆಂಗಳೂರಿಗೆ ಕೊಕೇನ್ ಸಾಗಿಸುವ ಸಲುವಾಗಿ ಖಾಸಗಿ ಬಸ್ ಮೂಲಕ ಮುಂಬೈನಿಂದ ಬೆಂಗಳೂರಿಗೆ ಬಂದಿದ್ದಳು. ಯಾರಿಗೂ ಅನುಮಾನ ಬರದಂತೆ ತುಂಡು ಮಾಡಿದ್ದ ಬ್ರೆಡ್ನಲ್ಲಿ 121 ಗ್ರಾಂ ಕೊಕೇನ್ ಅನ್ನು ಕವರ್ನಲ್ಲಿ ಬಚ್ಚಿಟ್ಟಿದ್ದಳು. ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ಕೈಗೊಂಡ ಸಿಸಿಬಿಯ ಮಾದಕದ್ರವ್ಯ ನಿಗ್ರಹ ದಳದ ಇನ್‌ಸ್ಪೆಕ್ಟರ್ ರಕ್ಷಿತ್ ನೇತೃತ್ವದ ತಂಡ ಯುವತಿಯನ್ನು ಬಂಧಿಸಿತ್ತು.
ಇದನ್ನೂ ಓದಿ: 4.20 ಕೋಟಿ ರೂ. ಮೌಲ್ಯದ ಮಾದಕ ಪದಾರ್ಥ ಜಪ್ತಿ: ವಿದೇಶಿ ಪ್ರಜೆಗಳ ಸಹಿತ ಮೂವರ ಬಂಧನ

