ETV Bharat / state

ಒಳಮೀಸಲಾತಿಯೊಂದಿಗೆ ನೇಮಕಾತಿಗೆ ಮಾದಿಗ ಸಮುದಾಯ ಪಟ್ಟು; ಮಾ. 6 ರಂದು ಸಚಿವರುಗಳಿಗೆ ಘೇರಾವ್ ತೀರ್ಮಾನ

ಮಾದಿಗ ಸಮುದಾಯದವರು ಒಳ ಮೀಸಲಾತಿಯೊಂದಿಗೆ ನೇಮಕಾತಿ ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

madiga-community-demands-recruitment-with-internal-reservation
ಕರ್ನಾಟಕ ರಾಜ್ಯ ಮಾದಿಗರ ಸಂಘಟನೆಗಳ ಒಕ್ಕೂಟದಿಂದ ಸಭೆ ನಡೆಸಲಾಯಿತು (ETV Bharat)
author img

By ETV Bharat Karnataka Team

Published : March 3, 2026 at 6:21 PM IST

5 Min Read
Choose ETV Bharat

ಬೆಂಗಳೂರು: ಒಳಮೀಸಲಾತಿ ಇಲ್ಲದೆ ನೇಮಕಾತಿ ಆದೇಶವನ್ನು ತಕ್ಷಣ ಹಿಂಪಡೆಯಲು ಒತ್ತಾಯಿಸಿರುವ ರಾಜ್ಯ ಮಾದಿಗರ ಸಂಘಟನೆಗಳ ಒಕ್ಕೂಟ ಮಾರ್ಚ್ 6 ರಂದು ಸಚಿವರು, ಶಾಸಕರಿಗೆ ಮುತ್ತಿಗೆ ಹಾಗೂ ಮಾ.12ರಂದು ಬೃಹತ್ ಹೋರಾಟ ಕೈಗೊಳ್ಳಲು ತೀರ್ಮಾನಿಸಿದೆ.

ಕರ್ನಾಟಕ ರಾಜ್ಯ ಮಾದಿಗರ ಸಂಘಟನೆಗಳ ಒಕ್ಕೂಟ ಈ ಸಂಬಂಧ ಸಭೆ ನಡೆಸಿ, ಸರ್ಕಾರಕ್ಕೆ 12 ಅಂಶಗಳ ಹಕ್ಕೊತ್ತಾಯ ಮಾಡಿದೆ. ಸಭೆಯಲ್ಲಿ ಪರಿಶಿಷ್ಟ ಜಾತಿ, ಸಮುದಾಯಗಳ ಹಿತ ಕಾಪಾಡಲು ಅಸಮರ್ಥರಾದ ಮತ್ತು ಎಲ್ಲಾ ಸಮುದಾಯಗಳ ಹಿತ ಕಾಪಾಡುವುದಾಗಿ ಸಂವಿಧಾನದ ಮೇಲೆ ಪ್ರಮಾಣ ಮಾಡಿ, ಕೇವಲ ಬಲಗೈ ಸಮಾಜದ ಪ್ರತಿನಿಧಿಯಂತೆ ವರ್ತಿಸುತ್ತಿರುವ ಅಪ್ಪಟ ಜಾತಿವಾದಿ, ಬಾಬಾಸಾಹೇಬ್ ಡಾ. ಬಿ. ಆರ್. ಅಂಬೇಡ್ಕರ್ ಹಾಗೂ ಸಂವಿಧಾನ ವಿರೋಧಿ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ. ಹೆಚ್. ಸಿ ಮಹಾದೇವಪ್ಪ ಇವರ ರಾಜೀನಾಮೆಯನ್ನು ಪಡೆಯಲು ಮತ್ತು ಸಮಾಜ ಕಲ್ಯಾಣ ಇಲಾಖೆಯ ಹಾಗೂ ಡಿಪಿಎಆರ್ ಇಲಾಖೆಯ ಐ.ಎ.ಎಸ್/ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲು ಆಗ್ರಹಿಸಿದೆ.

ಸಾಮಾಜಿಕ ನ್ಯಾಯದ ಪರಿಶಿಷ್ಟ ಜಾತಿ ಒಳ ಮೀಸಲಾತಿಯಂತೆ ಹುದ್ದೆಗಳನ್ನು ಭರ್ತಿ ಮಾಡಲೆಂದೇ 28.10.2024ರಿಂದ ತಡೆ ಹಿಡಿಯಲಾದ ಹುದ್ದೆಗಳಿಗೆ ಒಳ ಮೀಸಲಾತಿ ತಪ್ಪಿಸಿ, ಬಾಯಿಗೆ ಬಂದ ಅನ್ನದ ತುತ್ತನ್ನು ಕಸಿದು, 17% ಅಥವಾ 15% ದಲ್ಲಿ ಒಳಮೀಸಲಾತಿ ಬೇಡಿಕೆ ಪರಿಗಣಿಸದೆ ತೀವ್ರ ವಿರೋಧದ ನಡುವೆ ಒಳ ಮೀಸಲಾತಿ ತಪ್ಪಿಸಿ, ನೇಮಕಾತಿ ಪ್ರಕ್ರಿಯೆ ಕೈಗೊಳ್ಳಲು 27.02.2026 ರಂದು ಹೊರಡಿಸಿರುವ ಆದೇಶ ಕೂಡಲೇ ಹಿಂಪಡೆಯಲು ಆಗ್ರಹಿಸಲಾಗಿದೆ.

ಕೂಡಲೇ ವಿಶೇಷ ಕ್ಯಾಬಿನೆಟ್ ಕರೆದು ಒಳ ಮೀಸಲಾತಿಯ 17% ಅಥವಾ 15%ರಲ್ಲಿ ಒಳಮೀಸಲಾತಿ ಕೋರುತ್ತಿರುವ ಮಾದಿಗ ಸಂಬಂಧಿತ ಜಾತಿಗೆ 15%, ಪ. ಜಾ ಮೀಸಲಾತಿಯಲ್ಲಿ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಹಿಂದುಳಿದಿರುವುವಿಕೆ ಆಧಾರದ ಮೇಲೆ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯ ಅಥವಾ ತಮ್ಮದೇ ಸರ್ಕಾರ ನೇಮಿಸಿ ಅಂಗೀಕರಿಸಿರುವ ನ್ಯಾಯಮೂರ್ತಿ ನಾಗಮೋಹನ ದಾಸ್ ಆಯೋಗದ ಶಿಫಾರಸ್ಸಿನ ಪ್ರಮಾಣದಂತೆ ಮಾದಿಗ ಮತ್ತು ಸಂಬಂಧಿತ ಜಾತಿಗಳಿಗೆ 6% ( ಗುಂಪು-ಎ) ಮತ್ತು ಅಲೆಮಾರಿ ಸಮುದಾಯಕ್ಕೆ 1% (ಗುಂಪು-ಬಿ) ಮತ್ತು ಬಲಗೈ ಸಮುದಾಯ ಹಾಗೂ ಕೊರಮ, ಕೊರಚ, ಲಂಬಾಣಿ, ಭೋವಿ ಸೇರಿ ಒಂದು ಗುಂಪು (ಗುಂಪು-ಸಿ) ಎಂದು ಮರು ವರ್ಗಿಕರಿಸಿ ಕೂಡಲೇ ಪರಿಷ್ಕೃತ ಒಳ ಮೀಸಲಾತಿ ಕಲ್ಪಿಸಿ ಆದೇಶಿಸಿ 27.02.2026ರಂದು ಹೊರಡಿಸಿರುವ ಡಿಪಿಎಆರ್ ಆದೇಶವನ್ನು ಕೂಡಲೇ ಹಿಂಪಡೆದು ಪರಿಷ್ಕೃತ ರೋಸ್ಟರ್ ಬಿಂದುಗಳನ್ನು ಗುರುತಿಸಿ, ಆದೇಶಿಸಿ 56,342 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭಿಸುವಂತೆ ಆಗ್ರಹಿಸಲಾಗಿದೆ.

ಮಾ.6ಕ್ಕೆ ಘೆರಾವ್, ಮಾ.12ರಂದು ಬೃಹತ್ ಹೋರಾಟ: ಪ್ರಸಕ್ತ ನೇಮಕಾತಿ ಆದೇಶ ಕೂಡಲೇ ಹಿಂಪಡೆದು ಒಳ ಮೀಸಲಾತಿ ಆದೇಶಿಸದಿದ್ದರೆ ರಾಜ್ಯಾದ್ಯಂತ ಏಕ ಕಾಲದಲ್ಲಿ ಮಾ.6ರಂದು ಬೃಹತ್ ಪ್ರತಿಭಟನೆ ಮಾಡಲು ನಿರ್ಣಯ ಮಾಡಲಾಗಿದೆ. ಅಂದು ಆಡಳಿತರೂಢ ಶಾಸಕರು, ಮಂತ್ರಿಗಳ ಮನೆಗೆ ಮುತ್ತಿಗೆ ಹಾಕಲು ತೀರ್ಮಾನಿಸಲಾಗಿದೆ. ಮಾ.11ರಂದು ಬೆಂಗಳೂರು ಚಲೋ ಬೃಹತ್ ಪ್ರತಿಭಟನೆ ಮಾಡಲು ನಿರ್ಣಯಿಸಲಾಗಿದೆ. ಅದೇ ರೀತಿ ಮಾ.12ರಂದು ಬೆಂಗಳೂರಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಒಕ್ಕೂಟದ ಮುಖಂಡರು ತಿಳಿಸಿದ್ದಾರೆ.

ಸಾಮಾಜಿಕ ನ್ಯಾಯದ ನೀತಿಯನ್ನು ನ್ಯಾಯಾಂಗೀಯ ಸವಾಲುಗಳಿಂದ ರಕ್ಷಿಸಲು 56% ಮೀಸಲಾತಿ ಸಂರಕ್ಷಣೆಗಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿ, ಸರ್ವ ಪಕ್ಷಗಳ ನಿಯೋಗದೊಂದಿಗೆ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿ ಸಂವಿಧಾನದ 9ನೇ ಅನುಸೂಚಿಯಲ್ಲಿ ಸೇರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಪರಿಶಿಷ್ಟ ಜಾತಿಗೆ ಮೀಸಲಿರುವ ಎಲ್ಲಾ ಕ್ಷೇತ್ರಗಳಲ್ಲಿ ಒಳ ಮೀಸಲಾತಿ ಅನುಷ್ಠಾನವಾಗಬೇಕು ಎಂದು ಹಕ್ಕೊತ್ತಾಯ ಮಾಡಲಾಗಿದೆ.

ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಪರಿಶಿಷ್ಠ ಜಾತಿಯ ಮಕ್ಕಳಿಗೆ ವರ್ಗಿಕರಣದ ಅನುಪಾತದಲ್ಲಿ ಒಳ ಮೀಸಲಾತಿ ಸೌಲಭ್ಯ ನೀಡಬೇಕು. ಎಲ್ಲಾ ಬಗೆಯ ನೇಮಕಾತಿಗಳನ್ನು ಆದಷ್ಟು ಬೇಗನೇ ಮಾಡಲು ಮತ್ತು ಮುಂಬಡ್ತಿಗೂ ಒಳ ಮೀಸಲಾತಿ ಕಲ್ಪಿಸಿ, ರೋಸ್ಟರ್ ನಿಗದಿಪಡಿಸಿ, ಸರ್ಕಾರದ ಆದೇಶ ಹೊರಡಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು.

2001ರಿಂದ ಭರ್ತಿ ಆಗದೆ ಉಳಿದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಬ್ಯಾಕ್​ಲಾಗ್ ಹುದ್ದೆಗಳ ನೇಮಕಾತಿಗಾಗಿ ವಿಶೇಷ ನಿಯಮ ಇಲ್ಲದ ಕಾರಣ, ಪಶು ವೈದ್ಯಾಧಿಕಾರಿ ಇತ್ಯಾದಿ ಹುದ್ದೆಗಳಲ್ಲಿ ದಲಿತರಿಗೆ ಅನ್ಯಾಯವಾಗಿದೆ. ಅವರಿಗೆ ನ್ಯಾಯ ನೀಡುವುದರ ಜೊತೆಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಬ್ಯಾಕ್ ಲಾಗ್ ಹುದ್ದೆಗಳ ನೇಮಕಾತಿಗೆ ವಿಶೇಷ ನಿಯಮವನ್ನು ರಚಿಸಿ, ಕೂಡಲೇ ಆದೇಶಿಸಬೇಕು ಎಂದು ಒಕ್ಕೂಟ ಹಕ್ಕೊತ್ತಾಯ ಮಾಡಿದೆ.

ಮುಂದಿನ ಚುನಾವಣೆಯಲ್ಲಿ ತಕ್ಕಪಾಠ: ಬೇಡಿಕೆ ಈಡೇರಿಸದೇ ಇದ್ದಲ್ಲಿ ಮಾದಿಗ ಸಮುದಾಯ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್​ ಪಕ್ಷಕ್ಕೆ ತಕ್ಕ ಪಾಠ ಕಲಿಸಲಿದೆ ಎಂದು ಸಮುದಾಯದ ನಾಯಕರು ಎಚ್ಚರಿಕೆ ನೀಡಿದರು. ಒಳಮೀಸಲಾತಿ ವರ್ಗೀಕರಣ ಮಾಡದೇ ಹೋದರೆ ಹೋರಾಟ ಯಾವ ರೂಪ ತಾಳುತ್ತೆ ಅನ್ನೋದು ಗೊತ್ತಿಲ್ಲ. ಅದಕ್ಕೆ ಸರ್ಕಾರ ಹೊಣೆಯಾಗಲಿದೆ. ಮಾದಿಗ ಹೋರಾಟವೇ ಕಾಂಗ್ರೆಸ್ ಪಕ್ಷದ ಸಾವು. ವೋಟ್ ಬ್ಯಾಂಕ್​ಗಾಗಿ ಮಾದಿಗರನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ.‌ ಮಾದಿಗರಿಂದ ಗೆದ್ದ ಶಾಸಕರು ಏನು ಮಾಡುತ್ತಿದ್ದಾರೆ. ಸಚಿವ ಹೆಚ್. ಸಿ. ಮಹದೇವಪ್ಪ ಸಮಾಜಕಲ್ಯಾಣ ಇಲಾಖೆಯನ್ನು ಒಂದು ಸಮುದಾಯಕ್ಕೆ ಸೀಮಿತ ಮಾಡಿದ್ದಾರೆ. ಅವರು ರಾಜೀನಾಮೆ‌ ಕೊಡಬೇಕು. ಸಿಎಂ ಸಿದ್ದರಾಮಯ್ಯ ಕೂಡ ಕೆಳಗಿಳಿಯಬೇಕು ಎಂದು ಒಕ್ಕೂಟದ ಪದಾಧಿಕಾರಿ ಕೇಶವಮೂರ್ತಿ ಆಗ್ರಹಿಸಿದ್ದಾರೆ.

ಸಂಘಟನೆಯ ಪದಾಧಿಕಾರಿ ಪ್ರೊ. ಹರಿರಾಮ್ ಅವರು ಮಾತನಾಡಿ, 'ಒಳಮೀಸಲಾತಿ ಹಿಂದೆ ಎರಡು ಮೂರು ತಲೆಮಾರು ಹೋರಾಟ ಇದೆ. ಧಾರವಾಡದಲ್ಲಿ ಯುವ ಸಮುದಾಯ ಪ್ರತಿಭಟನೆ ಮಾಡಿದಾಗ ಜನಪ್ರತಿನಿಧಿಗಳಿಗೆ ಭಾರಿ ನೋವಾಗುತ್ತದೆ. ನಿಮ್ಮ‌ ಮಕ್ಕಳಿಗೆ ಉದ್ಯೋಗ ಕೊಡುವ ಭರದಲ್ಲಿ ನಮ್ಮ ಮಕ್ಕಳ ಉದ್ಯೋಗ ಕಸಿಯುತ್ತಿದ್ದೀರಿ. ಮೀಸಲಾತಿ 50% ದಾಟುತ್ತೆ ಎಂಬ ಅಸಂಬದ್ಧ ವಾದ ಮಾಡುತ್ತಿದ್ದೀರಿ. 9ನೇ ಷೆಡ್ಯೂಲ್​ಗೆ ತಿದ್ದುಪಡಿ ಮಾಡಿ ಕೇಂದ್ರಕ್ಕೆ ಕಳುಹಿಸಿ. ಅದನ್ನು ಮಾಡಲಿಲ್ಲ. ಸಿಎಂ ನಮ್ಮ ನಾಯಕರನ್ನು ಅಗೌರವದಿಂದ ನೋಡಿದ್ದಾರೆ. ಒಳಮೀಸಲಾತಿ ಜಾರಿ ಮಾಡಲು ನಿಮಗೆ ಏನು ಕಷ್ಟ?. ಕಾಂಗ್ರೆಸ್ ಹಠಾವೋ ಒಳಮೀಸಲಾತಿ ಬಚಾವೋ ಹೋರಾಟ ಮಾಡಲಿದ್ದೇವೆ' ಎಂದು ತಿಳಿಸಿದರು.

ಮಾ.6 ರಂದು ಮಂತ್ರಿಗಳು ಆಡಳಿತ ಪಕ್ಷದ ಶಾಸಕರ ಮನೆ ಮುಂದೆ ಪ್ರತಿಭಟನೆ ಮಾಡಲಿದ್ದೇವೆ. ಮಾ.12ಕ್ಕೆ ಸಮುದಾಯದಿಂದ ಬೆಂಗಳೂರಲ್ಲಿ ದೊಡ್ಡ ಸಮಾವೇಶ ಮಾಡುತ್ತೇವೆ. ಅಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಮಾಡಬೇಕು‌. ಉಪ ಚುನಾವಣೆಯಲ್ಲಿ ನಾವು ಪಾಠ ಕಲಿಸುತ್ತೇವೆ. ರಾಜಕೀಯವಾಗಿ ನಿಮಗೆ ಪಾಠ ಕಲಿಸುತ್ತೇವೆ. ಬಿಜೆಪಿ ಸರ್ಕಾರನೂ ನಮಗೆ ದ್ರೋಹ ಮಾಡಿದೆ. ಕಾಂಗ್ರೆಸ್ ಸರ್ಕಾರವೂ ದ್ರೋಹ ಮಾಡಿದೆ. ನಮ್ಮ ಸಮುದಾಯದ ಶಾಸಕರು, ಮಂತ್ರಿಗಳು ರಾಜೀನಾಮೆ ಕೊಡಬೇಕು. ಮಾದಿಗರಿಗೆ ಅನ್ಯಾಯ ಮಾಡಿದರೆ ನಿಮ್ಮ ಪಕ್ಷಕ್ಕೆ ಉಳಿಗಾಲ ಇಲ್ಲ. ನಮ್ಮ ಸಮುದಾಯದ ಮಕ್ಕಳ ಕೆಲಸವನ್ನು ಕಿತ್ತುಕೊಳ್ಳುತ್ತಿದ್ದೀರಿ. ನಿಮ್ಮದು ಯಾವ ಸಾಮಾಜಿಕ ನ್ಯಾಯ?. ಮಾದಿಗ ಮಕ್ಕಳ ಕೆಲಸ ಕಿತ್ತುಕೊಳ್ಳುತ್ತೀರಿ, ಅದು ನ್ಯಾಯನಾ?. ತಿನ್ನುವ ಅನ್ನಕ್ಕೆ ಮಣ್ಣು ಹಾಕುತ್ತಿದ್ದೀರಿ. ಒಳಮೀಸಲಾತಿನೇ ನಮಗೆ ಹೊಟ್ಟೆ ತುಂಬಾ ಊಟ. ಅದನ್ನೇ ಕಸಿಯುತ್ತಿದ್ದೀರಿ‌. ಮುಂದಿನ ಚುನಾವಣೆಯಲ್ಲಿ ನಿಮ್ಮನ್ನು ಧೂಳಿಪಟ ಮಾಡಲಿದ್ದೇವೆ. ನಮ್ಮ ಶಕ್ತಿ ನೋಡಿ ಎಂದು ಎಚ್ಚರಿಕೆ ನೀಡಿದರು.

ಸಮುದಾಯದ ಮುಖಂಡ ಭಾಸ್ಕರ್ ಪ್ರಸಾದ್ ಅವರು ಮಾತನಾಡಿ, 'ಹೆಚ್. ಸಿ. ಮಹದೇವಪ್ಪ ದೊಡ್ಡ ಬ್ಲ್ಯಾಕ್ ಮೇಲರ್ ಆಗಿದ್ದಾರೆ. ದಾವಣಗೆರೆ, ಬಾಗಲಕೋಟೆ ಉಪಚುನಾವಣೆಯಲ್ಲಿ ನೀವು ಸರ್ವನಾಶ ಆಗುತ್ತೀರಿ. ಒಳ ಮೀಸಲಾತಿ ಕೊಟ್ಟರೆ ನಾವು ನಿಮ್ಮ ಕೈ ಹಿಡಿಯುವ ಕೆಲಸ ಮಾಡುತ್ತೇವೆ. ಮುಂದಿನ ಚುನಾವಣೆಯಲ್ಲಿ ದೊಡ್ಡ ಬ್ಲ್ಯಾಕ್ ಮೇಲರ್ ಆದ ಹೆಚ್. ಸಿ. ಮಹದೇವಪ್ಪ, ಜಿ. ಪರಮೇಶ್ವರ್, ಖರ್ಗೆಯನ್ನು ಸೋಲಿಸುವ ಸವಾಲು ಹಾಕುತ್ತೇವೆ. ನೇಮಕಾತಿ ಸಂಬಂಧ ಆದೇಶ ವಾಪಸ್ ಪಡೆಯಿರಿ. ಇಲ್ಲವಾದರೆ ಅದು ನಿಮ್ಮ ಶಾಸಕರ ಮರಣ ಶಾಸನವಾಗಲಿದೆ. ನಮ್ಮ ಪ್ರತಿಭಟನೆ ಹತ್ತಿಕ್ಕಿದರೂ ನಾವೂ ತಲೆಕೆಡಿಸಿಕೊಳ್ಳಲ್ಲ. ಏನಾದರು ಆದರೆ ಅದಕ್ಕೆ ನೀವೇ ಹೊಣೆಯಾಗಲಿದ್ದೀರಿ' ಎಂದು ಎಚ್ಚರಿಸಿದರು.

ಇದನ್ನೂ ಓದಿ : ರಾಜ್ಯ ಬಜೆಟ್​ನಲ್ಲಿ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯ ಜನತೆಯ ನಿರೀಕ್ಷೆಗಳೇನು?