ETV Bharat / state

ಚಂದ್ರ ಗ್ರಹಣ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನಿಶ್ಶಬ್ದ ವಾತಾವರಣ, ಭಕ್ತರ ಸಂಖ್ಯೆ ಗಣನೀಯ ಇಳಿಕೆ

ಮಂಗಳವಾರ ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ಪ್ರತಿನಿತ್ಯ ನಡೆಯುವ ಪೂಜೆಗಳನ್ನು ರದ್ದುಪಡಿಸಲಾಗಿತ್ತು.

Kukke Sri Subrahmanya temple
ಕುಕ್ಕೆ ಶ್ರೀ ಸುಬ್ರಹ್ಮಣ್ಯ (ETV Bharat)
author img

By ETV Bharat Karnataka Team

Published : March 4, 2026 at 9:16 AM IST

1 Min Read
Choose ETV Bharat

ಸುಬ್ರಹ್ಮಣ್ಯ(ದಕ್ಷಿಣ ಕನ್ನಡ): ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರಸಿದ್ಧ ಪುಣ್ಯಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಂಗಳವಾರ ಪೂಜೆ, ಸೇವೆ ಹಾಗೂ ದರ್ಶನ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದ್ದು, ದಿನವಿಡೀ ಕ್ಷೇತ್ರದಲ್ಲಿ ಭಕ್ತರ ಸಂಚಾರ ವಿರಳವಾಗಿತ್ತು.

ಹಿಂದೂ ಧಾರ್ಮಿಕ ಸಂಪ್ರದಾಯದ ಪ್ರಕಾರ ಗ್ರಹಣಕಾಲವನ್ನು 'ಸೂತಕ ಕಾಲ'ವೆಂದು ಪರಿಗಣಿಸಲಾಗುತ್ತದೆ. ಈ ಅವಧಿಯಲ್ಲಿ ದೇವಾಲಯಗಳಲ್ಲಿ ನಿತ್ಯಕರ್ಮ, ವಿಶೇಷ ಪೂಜೆ ಹಾಗೂ ಧಾರ್ಮಿಕ ವಿಧಿವಿಧಾನಗಳಲ್ಲಿ ತಾತ್ಕಾಲಿಕ ವ್ಯತ್ಯಯ ಮಾಡುವ ಪದ್ಧತಿ ಈ ಹಿಂದಿನಿಂದಲೂ ಸಾಂಪ್ರದಾಯಿಕವಾಗಿ ಇರುವುದರಿಂದ ದೇವಸ್ಥಾನದ ಆಡಳಿತ ಮಂಡಳಿ ಮುಂಚಿತವಾಗಿಯೇ ವೇಳಾಪಟ್ಟಿ ಬದಲಾವಣೆ ಘೋಷಿಸಿತ್ತು.

ಕುಕ್ಕೆ ಶ್ರೀ ಸುಬ್ರಹ್ಮಣ್ಯ (ETV Bharat)

ಸೇವೆಗಳು ಸ್ಥಗಿತ, ವೇಳಾಪಟ್ಟಿಯಲ್ಲಿ ಬದಲಾವಣೆ: ಗ್ರಹಣದ ಕಾರಣ ಸೋಮವಾರ ಹಾಗೂ ಮಂಗಳವಾರ ನಡೆಯಬೇಕಿದ್ದ ಸರ್ಪಸಂಸ್ಕಾರ ಪೂಜೆಗಳನ್ನು ರದ್ದುಪಡಿಸಲಾಗಿತ್ತು. ಮಂಗಳವಾರ ಯಾವುದೇ ವಿಶೇಷ ಸೇವೆಗಳು ನಡೆಯಲಿಲ್ಲ. ಸಾಮಾನ್ಯವಾಗಿ ಮಧ್ಯಾಹ್ನ ನಡೆಯುವ ಮಹಾಪೂಜೆ ಮಂಗಳವಾರ ಬೆಳಗ್ಗೆ 8 ಗಂಟೆಗೆ ಮುಂಚಿತವಾಗಿ ನೆರವೇರಿಸಲಾಯಿತು. ಬೆಳಗ್ಗೆ 9 ಗಂಟೆಯ ನಂತರ ಶ್ರೀ ದೇವರ ದರ್ಶನಕ್ಕೆ ಅವಕಾಶ ನೀಡಿಲಾಗಲಿಲ್ಲ. ದೇವಾಲಯದ ವತಿಯಿಂದ ನೀಡಲಾಗುವ ಬೆಳಗಿನ ಉಪಹಾರವನ್ನು 9 ಗಂಟೆಯವರೆಗೆ ಮಾತ್ರ ವಿತರಿಸಲಾಯಿತು. ಮಧ್ಯಾಹ್ನದ ಪ್ರಸಾದ ಭೋಜನ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿತ್ತು. ಇದರಿಂದ ಭಕ್ತರ ಸಂಚಾರ ಗಣನೀಯವಾಗಿ ಕಡಿಮೆಯಾಗಿತ್ತು.

ಗ್ರಹಣಾವಧಿ ಮುಗಿದ ಬಳಿಕ ರಾತ್ರಿ ಸುಮಾರು 7 ಗಂಟೆಗೆ ದೇವಸ್ಥಾನದ ಬಾಗಿಲುಗಳನ್ನು ಪುನಃ ತೆರೆಯಲಾಯಿತು. ಸಂಪ್ರದಾಯದಂತೆ ಶುದ್ಧೀಕರಣ ಕ್ರಮಗಳನ್ನು ನೆರವೇರಿಸಿ ನಂತರ ಶ್ರೀ ದೇವರ ಮಹಾಪೂಜೆ ವಿಧಿವಿಧಾನವಾಗಿ ನಡೆಸಲಾಯಿತು. ಬಳಿಕ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.

ಸಾಮಾನ್ಯವಾಗಿ ದಿನಂಪ್ರತಿ ಸಾವಿರಾರು ಭಕ್ತರಿಂದ ಕಂಗೊಳಿಸುವ ಕ್ಷೇತ್ರವು ಮಂಗಳವಾರ ಶಾಂತ ಹಾಗೂ ನಿಶ್ಶಬ್ದ ವಾತಾವರಣಕ್ಕೆ ಸಾಕ್ಷಿಯಾಯಿತು. ರಾಜ್ಯದ ವಿವಿಧ ಭಾಗಗಳು ಹಾಗೂ ಹೊರ ರಾಜ್ಯಗಳಿಂದ ಆಗಮಿಸುವ ಭಕ್ತರ ಸಂಖ್ಯೆಯಲ್ಲೂ ಸ್ಪಷ್ಟ ಇಳಿಕೆ ಕಂಡುಬಂತು. ದೇವಸ್ಥಾನ ಮೂಲಗಳ ಪ್ರಕಾರ, ಗ್ರಹಣದ ಹಿನ್ನೆಲೆಯಲ್ಲಿ ಪೂಜೆ-ಸೇವೆಗಳ ವ್ಯತ್ಯಯದ ಮಾಹಿತಿ ಮುಂಚಿತವಾಗಿ ಪ್ರಕಟಿಸಿದ್ದರಿಂದ ಯಾವುದೇ ಗೊಂದಲಗಳು ಉಂಟಾಗಿಲ್ಲ. ಗ್ರಹಣಾವಧಿ ಪೂರ್ಣಗೊಂಡ ನಂತರ ನಿಯಮಿತ ಪೂಜೆ ಹಾಗೂ ಸೇವೆಗಳು ಮರು ಪ್ರಾರಂಭಗೊಂಡಿವೆ. ಈ ಚಂದ್ರಗ್ರಹಣದ ದಿನದ ಧಾರ್ಮಿಕ ಪ್ರಭಾವ ಕುಕ್ಕೆ ಶ್ರೀ ಕ್ಷೇತ್ರದಲ್ಲಿ ಸ್ಪಷ್ಟವಾಗಿ ಗೋಚರಿಸಿದ್ದು, ಭಕ್ತರಲ್ಲಿ ಭಕ್ತಿಭಾವದೊಂದಿಗೆ ಸಂಪ್ರದಾಯ ಪಾಲನೆಯ ಜಾಗೃತಿ ಮತ್ತೊಮ್ಮೆ ಪ್ರತಿಫಲಿಸಿದಂತಾಯಿತು.

ಇದನ್ನೂ ಓದಿ: ಚಂದ್ರಗ್ರಹಣದ ವೇಳೆ ಉಪವಾಸವೇಕೆ? ಆರೋಗ್ಯ ಲಾಭವೇನು? ಆಯುರ್ವೇದ ತಜ್ಞರು ಹೇಳುವುದೇನು?