ETV Bharat / state

ಎರಡು ತಿಂಗಳಲ್ಲಿ ಎಲ್‌ಪಿಜಿ ಬೆಲೆ ಶೇ.70ರಷ್ಟು ಏರಿಕೆ: ಬೆಂಗಳೂರಲ್ಲಿ ಊಟ, ತಿಂಡಿ ಮತ್ತಷ್ಟು ದುಬಾರಿ

ಗ್ಯಾಸ್​​ ಪೂರೈಕೆ ಕೊರತೆ ಮತ್ತು ಹೆಚ್ಚುತ್ತಿರುವ ವೆಚ್ಚಗಳಿಂದಾಗಿ ಹೋಟೆಲ್‌ಗಳು ಏಪ್ರಿಲ್‌ನಲ್ಲಿ ಈಗಾಗಲೇ ಬೆಲೆಗಳನ್ನು ಹೆಚ್ಚಿಸಿವೆ. ಈಗ, 993 ರೂ. ಹೆಚ್ಚಳವು ಅಡುಗೆ ಅನಿಲ ಗ್ರಾಹಕರಿಗೆ ತುಂಬಾ ದೊಡ್ಡ ಹೊಡೆತವಾಗಿದೆ.

lpg-prices-surge-eating-in-bengaluru-is-likely-to-become-more-expensive-in-the-coming-days
ಸಾಂದರ್ಭಿಕ ಚಿತ್ರ (IANS)
author img

By ETV Bharat Karnataka Team

Published : May 2, 2026 at 9:49 AM IST

2 Min Read
Choose ETV Bharat

ಬೆಂಗಳೂರು: ಕಳೆದ ಎರಡು ತಿಂಗಳುಗಳಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ದರದಲ್ಲಿ ತೀವ್ರ ಹೆಚ್ಚಳ ಮಾಡಿರುವುದರಿಂದ ನಗರದ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳಲ್ಲಿನ ಊಟ ಮತ್ತು ಬೀದಿ ಬದಿಯ ತಿಂಡಿ ತಿನಿಸುಗಳ ಬೆಲೆಯಲ್ಲಿ ಮತ್ತೊಂದು ಸುತ್ತಿನ ಏರಿಕೆ ಆಗಲಿದೆ.

ಏಪ್ರಿಲ್ 30ರಂದು 993 ರೂ. ಹೆಚ್ಚಳದ ಬಳಿಕ ಬೆಂಗಳೂರು ನಗರದಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಮೇ 1ರಿಂದ 3,152 ರೂ.ಗೆ ಏರಿದೆ. ಇದು ಬೆಂಗಳೂರಿನಲ್ಲಿ ಇದುವರೆಗಿನ ಅತ್ಯಧಿಕ ದರವಾಗಿದೆ. ಮಾರ್ಚ್ 1 ರಂದು 1,844 ರೂ.ಗಳಿದ್ದ ಸಿಲಿಂಡರ್ ಬೆಲೆ, ಏಪ್ರಿಲ್ 1ರಂದು 2,162ಕ್ಕೆ ಏರಿತು. ಈಗ ಪ್ರತಿ ಸಿಲಿಂಡರ್‌ಗೆ 1,308 ರೂ.ಗಳಷ್ಟು ಹೆಚ್ಚಿನ ಹಣ ಪಾವತಿಸಬೇಕಿದೆ. ಈ ಮೂಲಕ ಕೇವಲ 60 ದಿನಗಳಲ್ಲಿ ಶೇಕಡಾ 70ಕ್ಕಿಂತ ಹೆಚ್ಚಿನ ಏರಿಕೆ ಕಂಡುಬಂದಿದೆ. ಇದರಿಂದಾಗಿ ಬೆಲೆ ಏರಿಕೆಯಾಗಿದ್ದಲ್ಲದೆ, 150 ರೂ. ರಿಯಾಯಿತಿಯನ್ನೂ ಹಿಂಪಡೆಯಲಾಗಿದೆ.

ಜೊತೆಗೆ, ಹೋಟೆಲ್ ವಲಯಕ್ಕೆ ಸಾಕಷ್ಟು ಗ್ಯಾಸ್​ ಪೂರೈಕೆಯೂ ಇಲ್ಲದೆ, ಸಮಸ್ಯೆಗಳನ್ನು ಎದುರಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಎಲ್‌ಪಿಜಿ ಲಭ್ಯತೆಯು ಸುಮಾರು ಶೇಕಡಾ 60ಕ್ಕೆ ಇಳಿದಿದೆ. ಇದರಿಂದಾಗಿ ಹೋಟೆಲ್ ವ್ಯವಹಾರಗಳು ಪರ್ಯಾಯ ಮಾರ್ಗಗಳನ್ನು ಅನುಸರಿಸುವ ಮತ್ತು ಒತ್ತಡದಲ್ಲಿ ಕಾರ್ಯನಿರ್ವಹಿಸುವ ಅನಿವಾರ್ಯತೆ ಎದುರಾಗಿದೆ. ಅಲ್ಲದೆ, ಕೆಲವೆಡೆ ಸಿಲಿಂಡರ್‌ಗಳನ್ನು ಬ್ಲಾಕ್​​ ಮಾರ್ಕೆಟ್​ನಲ್ಲಿ 5,000ಕ್ಕೂ ಹೆಚ್ಚು ಹಣ ಕೊಟ್ಟು ಖರೀದಿಸಿರುವ ಘಟನೆಗಳೂ ವರದಿಯಾಗಿದೆ.

'ಈಟಿವಿ ಭಾರತ' ಜೊತೆ ಮಾತನಾಡಿದ ಕರ್ನಾಟಕ ಹೋಟೆಲ್‌ಗಳ ಸಂಘದ ಅಧ್ಯಕ್ಷ ಜಿ.ಕೆ.ಶೆಟ್ಟಿ, ಸಣ್ಣ ತಿನಿಸುಗಳು, ಟೀ ಅಂಗಡಿಗಳು ಮತ್ತು ಬೀದಿ ಬದಿ ವ್ಯಾಪಾರಿಗಳಿಗೆ ಬೆಲೆ ಏರಿಕೆಯು ಹೆಚ್ಚು ಪರಿಣಾಮ ಬೀರಿದೆ. ಒಂದು ಕಪ್ ಕಾಫಿಯಿಂದ ಹಿಡಿದು ಅಲ್ಯೂಮಿನಿಯಂ ಮತ್ತು ಕಟ್ಲರಿಯಂತಹ ಇನ್‌ಪುಟ್ ವಸ್ತುಗಳವರೆಗೆ ಎಲ್ಲದರ ಮೇಲೆಯೂ ಸಿಲಿಂಡರ್‌ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಅನೇಕ ಸಣ್ಣ ವ್ಯವಹಾರಗಳು ಸಂಕಷ್ಟಕ್ಕೆ ಸಿಲುಕಿವೆ ಎಂದು ಹೇಳಿದರು.

ಬೆಂಗಳೂರು ಹೋಟೆಲ್‌ಗಳ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಮಾತನಾಡಿ, ರೆಸ್ಟೋರೆಂಟ್‌ಗಳು ಮತ್ತು ತಿನಿಸುಗಳಲ್ಲಿನ ಎಲ್ಲಾ ಆಹಾರ ಪದಾರ್ಥಗಳ ಬೆಲೆ ಏರಿಕೆ ಅನಿವಾರ್ಯವಾಗಿದೆ. ಗ್ಯಾಸ್​​ ಪೂರೈಕೆ ಕೊರತೆ ಮತ್ತು ಹೆಚ್ಚುತ್ತಿರುವ ವೆಚ್ಚಗಳಿಂದಾಗಿ ಹೋಟೆಲ್‌ಗಳು ಏಪ್ರಿಲ್‌ನಲ್ಲಿ ಈಗಾಗಲೇ ಬೆಲೆಗಳನ್ನು ಹೆಚ್ಚಿಸಿವೆ. ಈಗ, 993 ರೂ. ಹೆಚ್ಚಳವು ಅಡುಗೆ ಅನಿಲ ಗ್ರಾಹಕರಿಗೆ ತುಂಬಾ ದೊಡ್ಡ ಹೊಡೆತವಾಗಿದೆ. ಆಹಾರದ ದರ ಹೆಚ್ಚಳದ ನಿರ್ಧಾರವನ್ನು ನಾವು ಹೋಟೆಲ್ ಉದ್ಯಮಿಗಳ ವಿವೇಚನೆಗೆ ಬಿಟ್ಟಿದ್ದೇವೆ ಎಂದು ತಿಳಿಸಿದರು.

ತೆರಿಗೆಯ ಬಗ್ಗೆಯೂ ಹೋಟೆಲ್ ಉದ್ಯಮಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ವಾಣಿಜ್ಯ ಎಲ್‌ಪಿಜಿಗೆ ಶೇ.18ರಷ್ಟು ಜಿಎಸ್‌ಟಿ ಹಾಗೂ ಗೃಹಬಳಕೆ ಸಿಲಿಂಡರ್‌ಗಳಿಗೆ ಶೇ.5ರಷ್ಟು ಜಿಎಸ್‌ಟಿ ವಿಧಿಸಲಾಗುತ್ತದೆ. ನಾವು 568 ರೂ. ಜಿಎಸ್‌ಟಿ ಪಾವತಿಸುತ್ತಿದ್ದೇವೆ. ಅದನ್ನು ಶೇ.5ಕ್ಕೆ ಇಳಿಸಿದರೆ, ನಮಗೆ ಪ್ರತಿ ಸಿಲಿಂಡರ್‌ ಮೇಲೆ ಸುಮಾರು 400 ರೂ. ಉಳಿತಾಯವಾಗಲಿದೆ. ಬೆಲೆಗಳು ಗಗನಕ್ಕೇರಿರುವಾಗ ಇಂತಹ ಪರಿಹಾರ ಮಾರ್ಗಗಳು ಅಗತ್ಯವಾಗಿದೆ ಎನ್ನುತ್ತಾರೆ ಪಿ.ಸಿ.ರಾವ್ ಅವರು.

ಸಿಲಿಂಡರ್​ ಬೆಲೆ ಏರಿಕೆಯನ್ನು ಟೀಕಿಸಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಈ ಹೊರೆ ಅಂತಿಮವಾಗಿ ಗ್ರಾಹಕರ ಮೇಲೆ ಬೀಳುತ್ತದೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಎದುರಿಸುತ್ತಿರುವ ಸಾರ್ವಜನಿಕರಿಗೆ ವಾಣಿಜ್ಯ ಸಿಲಿಂಡರ್‌ಗಳ ಬೆಲೆ ಏರಿಕೆಯೂ ಹೆಚ್ಚುವರಿ ಹೊಡೆತ ಎಂದು ಹೇಳಿದ್ದಾರೆ.

ತೆರಿಗೆ ಪರಿಹಾರ ಕೋರಿ ಕೈಗಾರಿಕಾ ಸಂಸ್ಥೆಗಳು ರಾಜ್ಯ ಮತ್ತು ಕೇಂದ್ರ ಸರ್ಕಾರಗಳನ್ನು ಸಂಪರ್ಕಿಸಲು ಮುಂದಾಗಿವೆ. ಇಂಧನ ವೆಚ್ಚಗಳು ಹೆಚ್ಚುತ್ತಲೇ ಇರುವುದರಿಂದ, ಮುಂಬರುವ ದಿನಗಳಲ್ಲಿ ಬೆಂಗಳೂರಿನಲ್ಲಿ ಒಂದು ಹೊತ್ತಿನ ಊಟವೂ ಸಹ ಭಾರಿ ದುಬಾರಿಯಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: ಮೇ 5ರಿಂದ 8ರ ವರೆಗೆ ಪೀಣ್ಯ ಮೇಲ್ಸೇತುವೆಯಲ್ಲಿ ಸಂಚಾರ ನಿರ್ಬಂಧ