ದಾವಣಗೆರೆ: ಲಂಚ ಪಡೆಯುತ್ತಿದ್ದ ಸರ್ವೇ ಇಲಾಖೆಯ ಇಬ್ಬರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ
ಐದು ಸಾವಿರ ಲಂಚದ ಬೇಡಿಕೆ ಇಟ್ಟಿದ್ದ ಸರ್ವೇ ಇಲಾಖೆಯ ಇಬ್ಬರು ಅಧಿಕಾರಿಗಳನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

Published : July 4, 2026 at 10:03 PM IST
ದಾವಣಗೆರೆ: ಜಮೀನು ಅಳತೆ ಮಾಡಲು ರೈತನ ಬಳಿ ಲಂಚ ಪಡೆಯುವ ವೇಳೆ ಸರ್ವೇ ಇಲಾಖೆಯ ಇಬ್ಬರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಹರಿಹರ ತಾಲೂಕಿನ ಕಚೇರಿಯಲ್ಲಿ ನಡೆದಿದೆ.
ಐದು ಸಾವಿರ ಲಂಚದ ಬೇಡಿಕೆ ಇಟ್ಟಿದ್ದ ಅಧಿಕಾರಿಗಳು, ವ್ಯಕ್ತಿಯಿಂದ ಲಂಚ ಪಡೆಯುವ ವೇಳೆ ಸರ್ವೇ ಇಲಾಖೆ ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಹರಿಹರದ ಸರ್ವೇ ಇಲಾಖೆಯ ಸರ್ವೇ ಸೂಪರ್ವೈಸರ್ ರಾಮಪ್ಪ ಅಡಿವೆಪ್ಪ ದಾಸರ್ (51) ಹಾಗೂ ಸರ್ಕಾರಿ ಪರವಾನಿಗೆ ಭೂ ಮಾಪಕ ಆನಂದಪ್ಪ ನಾಯ್ಕ (49) ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಗಳು.
ಹರಿಹರದ ರೈತ ರುದ್ರೇಶ್ ಎಂಬವರು ತನ್ನ ಜಮೀನು ಅಳತೆಗೆ ಅರ್ಜಿ ಸಲ್ಲಿಸಿದ್ದರು. ಅಳತೆ ಮಾಡಬೇಕು ಎಂದರೆ ಐದು ಸಾವಿರ ರೂ. ನೀಡಬೇಕು ಎಂದು ಲಂಚದ ಬೇಡಿಕೆ ಇಟ್ಟಿದ್ದರು. ಇಂದು ಮಧ್ಯಾಹ್ನ ರೈತನಿಂದ ತಾಲೂಕು ಕಚೇರಿಯಲ್ಲಿರುವ ಎಡಿಎಲ್ಆರ್ ಕಚೇರಿಯಲ್ಲಿ ಲಂಚ ಪಡೆಯುವಾಗ ಲೋಕಾಯುಕ್ತ ಎಸ್ಪಿ ಎಂ.ಎಸ್.ಕೌಲಾಪುರೆ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು. ಲಂಚ ಪಡೆಯುತ್ತಿದ್ದ ಇಬ್ಬರನ್ನು ಅಧಿಕಾರಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚೆಗೆ, ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕು ಚಿಕ್ಕಯ್ಯನಛತ್ರ ಹೋಬಳಿ ಕೇಂದ್ರದಲ್ಲಿ ಜಯಪ್ರಕಾಶ್ ಎಂಬ ಸರ್ವೇಯರ್ ಜಮೀನು ಪೋಡಿ ಹಾಗೂ ದುರಸ್ತಿ ಮಾಡಲು ರೈತನಿಂದ ಲಂಚ ಪಡೆಯುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದರು.
ಕಡಕೊಳದ ನಾರಾಯಣ ಎಂಬವರಿಗೆ ಸೇರಿದ 9 ಗುಂಟೆ ಜಮೀನು ಪೋಡಿ, ದುರಸ್ತಿ ಮಾಡಲು 2 ಲಕ್ಷಕ್ಕೆ ಡೀಲ್ ಆಗಿತ್ತು. ಮುಂಗಡವಾಗಿ ನಾರಾಯಣ ಅವರು 80 ಸಾವಿರ ನೀಡಿದ್ದರು. ಉಳಿದ 1.20 ಲಕ್ಷ ಹಣಕ್ಕೆ ಜಯಪ್ರಕಾಶ್ ಡಿಮ್ಯಾಂಡ್ ಮಾಡಿದ್ದರು.
ಅಧಿಕಾರಿಯ ವರ್ತನೆಗೆ ಬೇಸತ್ತಿದ್ದ ನಾರಾಯಣ್ ಅವರು ಲೋಕಾಯುಕ್ತ ಪೊಲೀಸರ ಮೊರೆ ಹೋಗಿದ್ದರು. ಮೈಸೂರಿನ ಮೈಲಾರಿ ಹೋಟೆಲ್ನಲ್ಲಿ ಲಂಚದ ಹಣ ಪಡೆಯುವ ವೇಳೆ ದಾಳಿ ನಡೆಸಿದ ಪೊಲೀಸರು, ರೆಡ್ ಹ್ಯಾಂಡಾಗಿ ಜಯಪ್ರಕಾಶ್ ಅವರನ್ನು ಹಿಡಿದಿದ್ದಾರೆ.
ಲೋಕಾಯುಕ್ತ ಡಿವೈಎಸ್ಪಿ ಶೈಲೇಂದ್ರ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ನಂಜನಗೂಡು ತಾಲೂಕು ಕಚೇರಿಯಲ್ಲಿ ಆರೋಪಿಯನ್ನ ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ.
ಇದಕ್ಕೂ ಮುನ್ನ, ಲೇಔಟ್ ಪ್ಲಾನ್ ಡೆವಲಪ್‌ಮೆಂಟ್‌ಗೆ ಅನುಮೋದನೆ ನೀಡಲು ₹3.50 ಲಕ್ಷ ಲಂಚ ಪಡೆಯುತ್ತಿದ್ದ ವೇಳೆ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ (ಬೂಡಾ) ಸರ್ವೇಯರ್ ಶಾಂತಮೂರ್ತಿ ಎನ್ನುವವರು ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದರು.
ಈರೇಶ್ ಎಂಬವರಿಂದ ಸಲ್ಲಿಕೆಯಾಗಿದ್ದ ದೂರಿನ ಮೇರೆಗೆ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಲೇಔಟ್ ಪ್ಲಾನ್ ಡೆವಲಪ್‌ಮೆಂಟ್‌ಗೆ ಅನುಮೋದನೆ ನೀಡಲು ಶಾಂತಮೂರ್ತಿ ಹಣದ ಬೇಡಿಕೆ ಇಟ್ಟಿದ್ದಾರೆಂದು ದೂರಿನಲ್ಲಿ ಆರೋಪಿಸಲಾಗಿತ್ತು.
ಶಾಂತಮೂರ್ತಿ ಪರವಾಗಿ ಮೊಹಮ್ಮದ್ ಸಾಜೀದ್ ಎಂಬ ವ್ಯಕ್ತಿ ಈರೇಶ್ ಅವರಿಂದ ₹3.50 ಲಕ್ಷ ಹಣ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಇಬ್ಬರನ್ನೂ ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದರು.
ಇದನ್ನೂ ಓದಿ: ಪೋಡಿ ಮಾಡಲು 1.20 ಲಕ್ಷ ಲಂಚ ಪಡೆಯುವಾಗ ಲೋಕಾ ಬಲೆಗೆ ಬಿದ್ದ ಸರ್ವೆಯರ್

