ನಿವೃತ್ತ ನೌಕರನಿಂದ 1 ಲಕ್ಷ ರೂ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಭದ್ರಾವತಿ ಬಿಇಓ
ನಿವೃತ್ತ ನೌಕರನಿಂದ 1 ಲಕ್ಷ ರೂ ಲಂಚ ಪಡೆಯುವಾಗ ಭದ್ರಾವತಿ ಬಿಇಓ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

Published : March 3, 2026 at 9:39 AM IST
ಶಿವಮೊಗ್ಗ: ತಮ್ಮ ಕಚೇರಿಯ ನಿವೃತ್ತ ನೌಕರನ ವಾರ್ಷಿಕ ಬಡ್ತಿ ಮತ್ತು ಭತ್ಯೆ ನೀಡಲು 4 ಲಕ್ಷ ರೂ ಲಂಚದ ಬೇಡಿಕೆಯಲ್ಲಿ 1 ಲಕ್ಷ ರೂ ಹಣ ಪಡೆಯುವಾಗ ಭದ್ರಾವತಿಯ ಬಿಇಓ ನಾಗೇಂದ್ರ ಎ.ಕೆ ಸೇರಿದಂತೆ ಖಾಸಗಿ ವ್ಯಕ್ತಿ ಮಂಜುನಾಥ್ ಎಂಬವರು ಶಿವಮೊಗ್ಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಭದ್ರಾವತಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಅಧೀಕ್ಷಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿರುವ ಲಿಂಗರಾಜು ಅವರು 2011ರಿಂದ 2023ರ ತನಕ ಶಿಕ್ಷಣ ಇಲಾಖೆಯಿಂದ ಬರಬೇಕಾದ ವಾರ್ಷಿಕ ವೇತನ ಬಡ್ತಿಗಳು ಮತ್ತು ಇತರೆ ಭತ್ಯೆಗಳು ಸೇರಿ ಆರ್ಥಿಕ ಸೌಲಭ್ಯಗಳನ್ನು ನೀಡುವಂತೆ ಅನೇಕ ಬಾರಿ ತಮ್ಮ ಮೇಲಾಧಿಕಾರಿಗಳಿಗೆ ಮನವಿ ಮಾಡಿದ್ದರು. ಆದರೆ ಬಿಇಓ ನಾಗೇಂದ್ರಪ್ಪ ಎ.ಕೆ ಅವರು ಹಾಗೂ ಮಧ್ಯವರ್ತಿ ಮಂಜುನಾಥ್ ಅವರು ಸೇರಿ ಲಿಂಗರಾಜು ಅವರಿಗೆ ಬರಬೇಕಾದ ಎಲ್ಲಾ ಹಣವನ್ನು ಮಾಡಿಕೊಡಲು 4 ಲಕ್ಷ ರೂ ಲಂಚದ ಬೇಡಿಕೆ ಇಟ್ಟಿದ್ದರು. ಈ ಕುರಿತು ಲಿಂಗರಾಜು ಅವರು ಲೋಕಾಯುಕ್ತರಿಗೆ ದೂರು ನೀಡಿದ್ದರು.
ಈ ದೂರಿನಂತೆ ಲೋಕಾಯುಕ್ತರು ಕಾರ್ಯಾಚರಣೆ ನಡೆಸಿದರು. ಬಿಇಓ ಕಚೇರಿಯ ಕೊಠಡಿಯಲ್ಲಿ ನಾಗೇಂದ್ರಪ್ಪ ಹಾಗೂ ಮಧ್ಯವರ್ತಿ ಮಂಜುನಾಥ್ ಅವರು ಲಿಂಗರಾಜು ಅವರಿಂದ ಸೋಮವಾರ ಒಂದು ಲಕ್ಷ ರೂ ಪಡೆದುಕೊಳ್ಳುವ ಸಮಯದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ಹಣದ ಸಮೇತ ಇಬ್ಬರನ್ನು ಬಂಧಿಸಿದ್ದಾರೆ. ಪ್ರಕರಣವನ್ನು ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ವೀರಬಸಪ್ಪ ಎಲ್.ಕುಸಲಾಪುರ ಅವರು ತನಿಖೆ ಕೈಗೊಂಡಿದ್ದಾರೆ.
ಶಿವಮೊಗ್ಗದ ಲೋಕಾಯುಕ್ತ ಎಸ್ಪಿ ಎಂ.ಎಸ್.ಕೌಲಾಪೊರೆ ಅವರ ಮಾರ್ಗದರ್ಶನದಲ್ಲಿ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರಾದ ಬಿ.ಪಿ.ಚಂದ್ರಶೇಖರ್ ಅವರ ನೇತೃತ್ವದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಗುರುರಾಜ್ ಎನ್.ಮೈಲಾರ ಮತ್ತು ಸಿಬ್ಬಂದಿಗಳಾದ ಯೋಗೇಶ್, ಮಂಜುನಾಥ್, ಟೀಕಪ್ಪ, ಸುರೇಂದ್ರ ಸೇರಿ ಕಾರ್ಯಾಚರಣೆ ಮಾಡಿದ್ದಾರೆ.
ಎಸ್ಡಿಎ ಲೋಕಾಯುಕ್ತ ಬಲೆಗೆ: ದಾರಿದೀಪ ಕಾಮಗಾರಿಯ ಬಿಲ್ ಪಾಸಿಗೆ ಲಂಚ ಬೇಡಿಕೆಯನ್ನಿಟ್ಟಿದ್ದ ಎಸ್ಡಿಎ ಸಿಬ್ಬಂದಿ ಸೋಮವಾರ ಮಂಗಳೂರಿನಲ್ಲಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಇಲ್ಲಿನ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕಚೇರಿಯ ವಿದ್ಯುತ್ ಉಪವಿಭಾಗದ ಎಸ್ಡಿಎ ಸಿಬ್ಬಂದಿ ಸಂಪತ್ ಬಂಧಿತ.
ಸಂಪತ್ ಅವರು ಉಡುಪಿ ಜಿಲ್ಲೆಯ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 2025ನೇ ಸಾಲಿನಲ್ಲಿ ದಾರಿ ದೀಪ ವಿಸ್ತರಣೆಯ ಸರ್ಕಾರಿ ಕಾಮಗಾರಿಗಳನ್ನು ನಿರ್ವಹಿಸಿದ್ದ ಕರ್ನಾಟಕ ಸರ್ಕಾರದ ಮಾನ್ಯತೆ ಪಡೆದ ಪ್ರಥಮ ದರ್ಜೆಯ ಇಲೆಕ್ಟ್ರಿಕಲ್ ಗುತ್ತಿಗೆದಾರರಿಂದ ಬಿಲ್ ಪಾಸು ಮಾಡುವ ಸಂಬಂಧ ಶೇ 4ರಷ್ಟು ಕಮಿಷನ್ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಸಲ್ಲಿಸಿದ್ದ ದೂರಿನ ಪ್ರಕಾರ, ದಾರಿ ದೀಪ ವಿಸ್ತರಣೆ ಕಾಮಗಾರಿಗಳ ಬಿಲ್‌ಗೆ 4 ಶೇಕಡಾ ಪ್ರಮಾಣದಲ್ಲಿ ಒಟ್ಟು ರೂ. 22,600 ಲಂಚ ನೀಡಬೇಕು ಎಂದು ಸಂಪತ್ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮಾರ್ಚ್ 2ರಂದು ಸಂಪತ್ ಅವರು 22,600 (ಇಪ್ಪತ್ತೆರಡು ಸಾವಿರದ ಆರು ನೂರು ರೂಪಾಯಿ) ಲಂಚದ ಹಣ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರ ತಂಡ ದಾಳಿ ನಡೆಸಿ ಅವರನ್ನು ಬಂಧಿಸಿದೆ. ಆರೋಪಿಯನ್ನು ವಶಕ್ಕೆ ಪಡೆದು ಮುಂದಿನ ತನಿಖೆ ಕೈಗೊಳ್ಳಲಾಗಿದೆ.
ಈ ಕಾರ್ಯಾಚರಣೆ ಪೊಲೀಸ್ ಅಧೀಕ್ಷಕರು, ಕರ್ನಾಟಕ ಲೋಕಾಯುಕ್ತ, ಮಂಗಳೂರು ವಿಭಾಗ ಅವರ ಮಾರ್ಗದರ್ಶನದಲ್ಲಿ ನಡೆಯಿತು. ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕರಾದ ಸುರೇಶ್ ಕುಮಾರ್ ಹಾಗೂ ಡಾ.ಗಾನ ಪಿ.ಕುಮಾರ್, ಪಿಐ ಭಾರತಿ ಜಿ ಅವರ ಉಸ್ತುವಾರಿಯಲ್ಲಿ ಪೊಲೀಸ್ ನಿರೀಕ್ಷಕ ಚಂದ್ರಶೇಖರ ಕೆ.ಎನ್., ಸಿಬ್ಬಂದಿಗಳಾದ ರಾಜಪ್ಪ, ಮಹೇಶ್, ಆದರ್ಶ್, ರಾಮ ನಾಯ್ಕ, ಗಂಗಣ್ಣ, ಮಹಾದೇವ, ಪವಿತ್ರ, ಲಕ್ಷ್ಮೀ, ರವಿ ಪವಾರ್ ಹಾಗೂ ನವೀನ್ ಅವರು ಕಾರ್ಯಾಚರಣೆ ನಡೆಸಿದರು.
ಇದನ್ನೂ ಓದಿ: ರೈತನಿಂದ ಲಂಚ ಪಡೆಯುತ್ತಿದ್ದ ಗ್ರಾಮ ಲೆಕ್ಕಾಧಿಕಾರಿ ಲೋಕಾಯುಕ್ತ ಬಲೆಗೆ

