ETV Bharat / state

ಲಂಚ ಸ್ವೀಕರಿಸುವಾಗ ರೆಡ್​ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ PSI, ಕಾನ್​ಸ್ಟೇಬಲ್

ಲಂಚ ಸ್ವೀಕರಿಸುವಾಗ ಪಿಎಸ್​ಐ ಮತ್ತು ಕಾನ್​ಸ್ಟೇಬಲ್ ರೆಡ್​ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

BAGALKOT  LOKAYUKTA RAID  ಪಿಎಸ್​ಐ ಮೇಲೆ ಲೋಕಾಯುಕ್ತ ದಾಳಿ  ಲೋಕಾ ದಾಳಿ  LOKAYUKTA RAID ON PSI
ಕೆರೂರ ಪೊಲೀಸ್ ಠಾಣೆ (ETV Bharat)
author img

By ETV Bharat Karnataka Team

Published : April 22, 2026 at 7:44 PM IST

2 Min Read
Choose ETV Bharat

ಬಾಗಲಕೋಟೆ: ಲಂಚಕ್ಕೆ ಬೇಡಿಕೆ ಇಟ್ಟ ಆರೋಪದ ಮೇಲೆ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ (ಪಿಎಸ್​ಐ) ಮತ್ತು ಪೊಲೀಸ್ ಕಾನ್​ಸ್ಟೇಬಲ್ ಮೇಲೆ ಲೋಕಾಯುಕ್ತ ಪೊಲೀಸರು ಇಂದು ದಾಳಿ ಮಾಡಿ, ರೆಡ್ ಹ್ಯಾಂಡ್​ ಆಗಿ ಹಿಡಿದಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರ ಪಟ್ಟಣದಲ್ಲಿ ನಡೆದಿದೆ.

ಕೆರೂರ ಪೊಲೀಸ್ ಠಾಣೆಯ ಕಾನೂನು ಸುವ್ಯವಸ್ಥೆ ವಿಭಾಗದ ಪಿಎಸ್​ಐ ಭೀಮಪ್ಪ ರಬಕವಿ ಹಾಗೂ ಪೊಲೀಸ್ ಸಿಬ್ಬಂದಿ ಸಂತೋಷ ಬಿರಾದಾರ ಅವರು ಲೋಕಾಯುಕ್ತ ಬಲೆಗೆ ಬಿದ್ದವರು. ಬೆಳಗಂಟಿ ಗ್ರಾಮದ ನಿವಾಸಿ ಮುತ್ತಪ್ಪ ಹುಲಪ್ಪ ನಾಯ್ಕರ ಅವರಿಂದ 1.70 ಲಕ್ಷ ರೂ ಲಂಚ ಸ್ವೀಕರಿಸುವಾಗ ಲೋಕಾಯಕ್ತರು ದಾಳಿ ಮಾಡಿದ್ದಾರೆ.

ಇಸ್ಪೀಟು ಹಾಗೂ ಬಡ್ಡಿ ವ್ಯವಹಾರದ ಬಗ್ಗೆ ಸುಳ್ಳು ಕೇಸ್ ಹಾಕುತ್ತೇನೆ ಎಂದು ಪಿಎಸ್​ಐ ಮತ್ತು ಸಿಬ್ಬಂದಿ ಬೆದರಿಕೆ ಹಾಕಿ, ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಬೈಕ್ ಸಮೇತ ಠಾಣೆಗೆ ಕರೆದೊಯ್ದು ಬೆದರಿಕೆ ಹಾಕಿದ್ದಾರೆ ಎಂದು ಮುತ್ತಪ್ಪ ಲೋಕಾಯುಕ್ತರಿಗೆ ದೂರು ನೀಡಿದ್ದರು.

1.70 ಲಕ್ಷ ರೂ ಹಣ ನೀಡಿದ್ರೆ ಬಿಟ್ಟು ಕಳಿಸುವುದಾಗಿ ಕಳೆದ ರಾತ್ರಿಯವರೆಗೆ ಠಾಣೆಯಲ್ಲೇ ಕೂರಿಸಿಕೊಂಡಿದ್ದರು. ಬಳಿಕ ಊರಿಗೆ ಹೋಗಿ ಹಣ ತರುವುದಾಗಿ ಹೇಳಿ ದೂರುದಾರು ರಾತ್ರಿ ತಮ್ಮ ಗ್ರಾಮಕ್ಕೆ ಬಂದಿದ್ದರು. ಆದರೆ ಹಣ ಕೂಡಿಸಲು ಸಾಧ್ಯವಾಗಿರಲಿಲ್ಲ. ಈ ಕುರಿತು ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತಕ್ಷಣವೇ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಕಾರ್ಯಾಚರಣೆ ನಡೆಸಿದ್ದಾರೆ.

ಲೋಕಾಯುಕ್ತ ಎಸ್​ಪಿ‌ ಎಂ.ಬಿ ನಂದಗಾಂವಿ ಅವರ ಮಾರ್ಗದರ್ಶನದಲ್ಲಿ ‌ಡಿವೈಎಸ್​ಪಿ ಸುರೇಶ ರೆಡ್ಡಿ ನೇತೃತ್ವದಲ್ಲಿ ಸಿಬ್ಬಂದಿಯ ನೇತೃತ್ವದಲ್ಲಿ ದಾಳಿ ಮಾಡಿದ್ದು, ಆರೋಪಿಗಳನ್ಙು ವಿಚಾರಣೆಗೆ ಒಳಪಡಿಸಿದ್ದಾರೆ.

ಇತ್ತೀಚೆಗೆ ಬೆಳಗಾವಿಯಲ್ಲಿ ಲೋಕಾಯಕ್ತರ ದಾಳಿ: ಬೆಳಗಾವಿಯ ನಗರಾಭಿವೃದ್ಧಿ ಕೋಶದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅಜಯಸಿಂಗ್ ರಜಪೂತ ಅವರ ಮನೆಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ, 14 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಆಸ್ತಿ ಪತ್ತೆ ಹಚ್ಚಿದ್ದರು. ಈ ಕುರಿತು ಅಧಿಕೃತವಾಗಿ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದರು.

ಭ್ರಷ್ಟಾಚಾರ ತಡೆ ಕಾಯ್ದೆ ಅಡಿ ಕರ್ನಾಟಕ ಲೋಕಾಯುಕ್ತ ಪೊಲೀಸ್ ಠಾಣೆ ಬೆಳಗಾವಿಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ಏಪ್ರಿಲ್ 9ರಂದು ಬೆಳಗಾವಿಯ ಆಂಜನೇಯ ನಗರದ ಮನೆ, ಕಚೇರಿ, ಬ್ಯಾಂಕ್​​ ಲಾಕರ್ ಸೇರಿದಂತೆ ಸೇರಿದಂತೆ ಒಟ್ಟು ಏಳು ಕಡೆಗಳಲ್ಲಿ ಏಕಕಾಲಕ್ಕೆ ಅಧಿಕಾರಿಗಳು ಶೋಧ ನಡೆಸಿದ್ದರು. ಅಧಿಕಾರಿಗಳ ಪರಿಶೀಲನೆ ಸಂದರ್ಭದಲ್ಲಿ 5 ಕೆಜಿ 960 ಗ್ರಾಂ ಚಿನ್ನಾಭರಣ, 5 ಕೆಜಿ ಬೆಳ್ಳಿ ಆಭರಣಗಳು ಪತ್ತೆಯಾಗಿದ್ದವು. ಅಲ್ಲದೇ 3.12 ಕೋಟಿ ರೂಪಾಯಿ ಬ್ಯಾಂಕ್ ಠೇವಣಿ ಇಟ್ಟಿರುವುದು ಬೆಳಕಿಗೆ ಬಂದಿತ್ತು. ಬೆಳಗಾವಿಯಲ್ಲಿ 3 ಮನೆ, ಸವದತ್ತಿ, ಹುಕ್ಕೇರಿ ಹಾಗೂ ಹುಬ್ಬಳ್ಳಿಯಲ್ಲಿ 5 ನಿವೇಶನಗಳನ್ನು ಅಜಯಸಿಂಗ್ ಖರೀದಿಸಿರುವುದು ದಾಖಲೆಗಳಿಂದ ಕಂಡುಬಂದಿತ್ತು. ಮನೆಯಲ್ಲಿ ಕಾರುಗಳು ಮತ್ತು ಬೈಕ್‌ ಸೇರಿ 14 ಕೋಟಿ ರೂ.ಗಿಂತ ಹೆಚ್ಚಿನ ಆಸ್ತಿ ಪತ್ತೆಯಾಗಿದೆ ಎಂದು ಎಸ್​ಪಿ ಮಾಹಿತಿ ನೀಡಿದ್ದರು.

ಇದನ್ನೂ ಓದಿ: ಬೆಳಗಾವಿ ಎಇಇ ಮನೆಯಲ್ಲಿ 5.9 ಕೆಜಿ ಚಿನ್ನ ಸೇರಿ 14 ಕೋಟಿ ಮೌಲ್ಯದ ಆಸ್ತಿ ಪತ್ತೆ: ಲೋಕಾಯುಕ್ತರ ಮಾಹಿತಿ