ETV Bharat / state

ಮಂಗಳೂರಿನಲ್ಲಿ ''ಊಟಕ್ಕಿಲ್ಲದ ಉಪ್ಪಿನಕಾಯಿ'' ಆದ ವಂದೇ ಭಾರತ್: ಬೆಂಗಳೂರು – ಗೋವಾ ರೈಲಿಗೆ ನಿಲ್ದಾಣವೇ ಇಲ್ಲವೆಂದು ಅಸಮಾಧಾನ

ವಂದೇ ಭಾರತ್ ಸೇವೆಯು ಜಿಲ್ಲಾ ಕೇಂದ್ರಗಳಲ್ಲಿ ಮಾತ್ರ ನಿಲ್ದಾಣ ನೀಡುವುದಾಗಿದೆ. ಆ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯಕ್ಕೆ ನಿಲ್ದಾಣ ನೀಡಿರುವುದನ್ನು ಧಾರ್ಮಿಕ ಕ್ಷೇತ್ರದ ಮಹತ್ವದಿಂದ ಅರ್ಥೈಸಬಹುದು. ಆದರೆ, ಮಂಗಳೂರು, ಉಡುಪಿ, ಕಾರವಾರಗಳಂತಹ ಜಿಲ್ಲೆ ಕೇಂದ್ರಗಳನ್ನು ಬಿಟ್ಟುಹೋಗಿರುವುದು ಪ್ರಶ್ನಾರ್ಥಕವಾಗಿದೆ.

VANDE BHARAT
ಮಂಗಳೂರು ರೈಲ್ವೆ ನಿಲ್ದಾಣ (ETV Bharat)
author img

By ETV Bharat Karnataka Team

Published : February 25, 2026 at 12:03 PM IST

3 Min Read
Choose ETV Bharat

ಮಂಗಳೂರು: ಕರಾವಳಿಗೆ ವಂದೇ ಭಾರತ್ ರೈಲು ನೀಡುವುದಾಗಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭರವಸೆ ನೀಡಿದ ಬಳಿಕ ಮೂಡಿದ್ದ ನಿರೀಕ್ಷೆಗಳು ಇದೀಗ ಭಾರಿ ನಿರಾಸೆಯಾಗಿ ಮಾರ್ಪಟ್ಟಿವೆ. ಯಶವಂತಪುರ – ಮಡಗಾಂವ್ ನಡುವೆ ಪ್ರಸ್ತಾವಿತ ವಂದೇ ಭಾರತ್ ರೈಲು ಮಂಗಳೂರು ವ್ಯಾಪ್ತಿಯಲ್ಲಿ ಹಾದು ಹೋಗುತ್ತಿದ್ದರೂ, ನಗರದಲ್ಲಿ ನಿಲ್ದಾಣ ನೀಡದಿರುವುದು ಸ್ಥಳೀಯರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ''ಮಂಗಳೂರಿಗೆ ಊಟಕ್ಕಿಲ್ಲದ ಉಪ್ಪಿನಕಾಯಿ'' ಎಂಬ ಟೀಕೆಗಳು ಸಾರ್ವಜನಿಕ ವಲಯಗಳಲ್ಲಿ ಕೇಳಿಬರುತ್ತಿವೆ.

ದಕ್ಷಿಣ ಪಶ್ಚಿಮ ರೈಲ್ವೆಯ ಕಾರ್ಯಾಚರಣೆ ವಿಭಾಗದಿಂದ 9 ಫೆಬ್ರವರಿ 2026ರಂದು ಹೊರಡಿಸಿದ ಅಧಿಕೃತ ಪತ್ರದ ಪ್ರಕಾರ, ಯಶವಂತಪುರ (YPR) ಮತ್ತು ಮಡಗಾಂವ್ (MAO) ನಡುವೆ ವಂದೇ ಭಾರತ್ ರೈಲು ಸೇವೆಗೆ ತಾತ್ಕಾಲಿಕ ವೇಳಾಪಟ್ಟಿ ರೂಪಿಸಲಾಗಿದೆ. ಪ್ರಸ್ತಾವನೆಯಂತೆ ರೈಲು ಬೆಳಗ್ಗೆ 6.05ಕ್ಕೆ ಯಶವಂತಪುರದಿಂದ ಹೊರಟು ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರಸ್ತೆ ಮಾರ್ಗವಾಗಿ ಪಡೀಲ್ ಹಾಗೂ ತೋಕೂರು ಮೂಲಕ ಸಂಜೆ 7.15ಕ್ಕೆ ಮಡಗಾಂವ್ ತಲುಪಲಿದೆ. ಮರಳಿ ಮಡಗಾಂವ್‌ನಿಂದ ಬೆಳಗ್ಗೆ 5.30ಕ್ಕೆ ಹೊರಟು ಸಂಜೆ 6.40ಕ್ಕೆ ಯಶವಂತಪುರ ತಲುಪುವಂತೆ ಯೋಜಿಸಲಾಗಿದೆ. ಆದರೆ, ಈ ವೇಳಾಪಟ್ಟಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಬ್ರಹ್ಮಣ್ಯ ರಸ್ತೆ ನಿಲ್ದಾಣಕ್ಕೆ ಮಾತ್ರ ನಿಲುಗಡೆ ಸೂಚಿಸಲಾಗಿದೆ. ಮಂಗಳೂರು ಜಂಕ್ಷನ್ ಅಥವಾ ಮಂಗಳೂರು ಸೆಂಟ್ರಲ್ ನಿಲ್ದಾಣಗಳಲ್ಲಿ ಯಾವುದೇ ನಿಲುಗಡೆ ಇಲ್ಲ. ಪಡೀಲ್ ಮೂಲಕ ರೈಲು ಹಾದು ಹೋಗಲಿದೆ.

ಪ್ರಸ್ತಾವಿತ ವಂದೇ ಭಾರತ್ ರೈಲು ಬಗ್ಗೆ ಪಶ್ಚಿಮ ಕರಾವಳಿ ರೈಲ್ವೆ ಯಾತ್ರಿ ಸಮಿತಿ ಅಧ್ಯಕ್ಷ ಹನುಮಂತ ಕಾಮತ್ ಮಾತನಾಡುತ್ತಿದ್ದಾರೆ. (ETV Bharat)

ರೈಲ್ವೆ ನೋಟಿಫಿಕೇಶನ್​ನಲ್ಲಿ ಹಾಸನ – ತೋಕೂರು ನಡುವೆ ವಿದ್ಯುದೀಕರಣ ಪೂರ್ಣಗೊಂಡಿರುವುದಾಗಿ ಉಲ್ಲೇಖಿಸಿ, ಸರಾಸರಿ ವೇಗವನ್ನು ಹೆಚ್ಚಿಸುವ ಮೂಲಕ ಪ್ರಯಾಣ ಸಮಯ ಕಡಿಮೆ ಮಾಡುವ ಕುರಿತು ಪರಿಶೀಲನೆ ನಡೆಸಲು ಸೂಚಿಸಲಾಗಿದೆ. ಈ ಸೇವೆಗೆ ಎರಡು ವಂದೇ ಭಾರತ್ ರೇಕ್‌ಗಳನ್ನು ನಿಯೋಜಿಸುವ ಅಗತ್ಯವಿರುವುದೂ ದಾಖಲಾಗಿದೆ. ಅಂತಿಮ ವೇಳಾಪಟ್ಟಿಗೆ ಮುನ್ನ ಪ್ರಯೋಗಾತ್ಮಕ ಸಂಚಾರ ನಡೆಸಲಾಗುವುದು ಎಂದು ತಿಳಿಸಲಾಗಿದೆ.

ಸ್ಥಳೀಯ ವಲಯಗಳ ಪ್ರಕಾರ, ವಂದೇ ಭಾರತ್ ಸೇವೆಯು ಜಿಲ್ಲೆಯ ಕೇಂದ್ರಗಳಲ್ಲಿ ಮಾತ್ರ ನಿಲ್ದಾಣ ನೀಡುವುದಾಗಿದೆ. ಆ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯಕ್ಕೆ ನಿಲ್ದಾಣ ನೀಡಿರುವುದನ್ನು ಧಾರ್ಮಿಕ ಕ್ಷೇತ್ರದ ಮಹತ್ವದಿಂದ ಅರ್ಥೈಸಬಹುದು. ಆದರೆ, ಮಂಗಳೂರು, ಉಡುಪಿ, ಕಾರವಾರಗಳಂತಹ ಜಿಲ್ಲೆ ಕೇಂದ್ರಗಳನ್ನು ಬಿಟ್ಟುಹೋಗಿರುವುದು ಪ್ರಶ್ನಾರ್ಥಕವಾಗಿದೆ.

ಪ್ರಯೋಜನವಿಲ್ಲದ ಸೇವೆ ಎಂದು ಟೀಕೆ: ಕರಾವಳಿಯ ಪ್ರಮುಖ ವಾಣಿಜ್ಯ, ಶಿಕ್ಷಣ ಹಾಗೂ ಆರೋಗ್ಯ ಕೇಂದ್ರವಾದ ಮಂಗಳೂರಿಗೆ ನಿಲ್ದಾಣ ನೀಡದಿರುವುದು ''ಪ್ರಯೋಜನವಿಲ್ಲದ ಸೇವೆ'' ಎಂಬ ಟೀಕೆಗೆ ಕಾರಣವಾಗಿದೆ. ಬೆಂಗಳೂರು–ಮಂಗಳೂರು ನಡುವಿನ ವೇಗ ರೈಲು ಬೇಡಿಕೆ ಹಲವು ವರ್ಷಗಳಿಂದ ಮುಂದುವರಿದಿದ್ದು, ಸಕಲೇಶಪುರ ಘಾಟ್ ವಿಭಾಗದ ವಿದ್ಯುದೀಕರಣ ಪೂರ್ಣಗೊಂಡ ನಂತರ ನಿರೀಕ್ಷೆಗಳು ಮತ್ತಷ್ಟು ಗಟ್ಟಿಯಾಗಿದ್ದವು. ಆದರೆ, ಇದೀಗ ಪ್ರಕಟವಾದ ಪ್ರಸ್ತಾವನೆ ಬೆಂಗಳೂರು–ಗೋವಾ ಸಂಪರ್ಕಕ್ಕೆ ಆದ್ಯತೆ ನೀಡಿರುವುದು ನಿರಾಸೆ ಮೂಡಿಸಿದೆ.

ಆಕ್ರೋಶ ಹೊರಹಾಕಿದ ಪಶ್ಚಿಮ ಕರಾವಳಿ ರೈಲ್ವೆ ಯಾತ್ರಿ ಸಮಿತಿ: ಪಶ್ಚಿಮ ಕರಾವಳಿ ರೈಲ್ವೆ ಯಾತ್ರಿ ಸಮಿತಿ ಅಧ್ಯಕ್ಷ ಹನುಮಂತ ಕಾಮತ್ ಅವರು ಈ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿ ''ಬೆಂಗಳೂರು – ಮಂಗಳೂರು ವಂದೇ ಭಾರತ್ ನೀಡುವುದಾಗಿ ಹೇಳಿ ಈಗ ಗೋವಾಕ್ಕೆ ಸೇವೆ ನೀಡುವುದು ನಮಗೆ ಉಪಯೋಗವಿಲ್ಲ. ಒಂದು ರೈಲು ನಮ್ಮ ಜಿಲ್ಲೆಯಲ್ಲಿ ಹಾದು ಹೋಗುವುದರಿಂದ ಮಾತ್ರ ಪ್ರಯೋಜನ ಆಗುವುದಿಲ್ಲ. ಮಂಗಳೂರು ಜಿಲ್ಲೆ ಕೇಂದ್ರವಾಗಿದ್ದು ಇಲ್ಲಿ ನಿಲ್ದಾಣ ನೀಡಬೇಕು. ಉಡುಪಿ, ಕಾರವಾರಗಳಿಗೂ ಅವಕಾಶ ಕೊಡಬೇಕು. ಈಗಿನ ವೇಳಾಪಟ್ಟಿಯಿಂದ ಇತ್ತಿಚಿನ ರೈಲುಗಳ ಸಮಯಕ್ಕೂ ತೊಂದರೆ ಆಗುವ ಸಾಧ್ಯತೆ ಇದೆ. ವಿದ್ಯಾರ್ಥಿಗಳು, ಉದ್ಯೋಗಸ್ಥರಿಗೆ ಸಮಸ್ಯೆಯಾಗಬಾರದು. ಅಂತಿಮ ನಿರ್ಧಾರಕ್ಕಿಂತ ಮುಂಚೆ ಮಂಗಳೂರು, ಉಡುಪಿ ಮತ್ತು ಕಾರವಾರ ರೈಲ್ವೆ ಹೋರಾಟಗಾರರೊಂದಿಗೆ ಸಮನ್ವಯ ಸಭೆ ನಡೆಸಿ ಸಮಯ ಹಾಗೂ ನಿಲ್ದಾಣಗಳನ್ನು ಪರಿಷ್ಕರಿಸುವುದು ಅಗತ್ಯ ಎಂದು ಹೇಳಿದರು.

ಪ್ರಸ್ತಾವಿತ ವೇಳಾಪಟ್ಟಿಯಿಂದ ಈಗಿರುವ ಬೆಂಗಳೂರು – ಕರಾವಳಿ ರೈಲುಗಳ ಸಂಚಾರ ಸಮಯಕ್ಕೂ ವ್ಯತ್ಯಯ ಉಂಟಾಗುವ ಸಾಧ್ಯತೆಗಳ ಬಗ್ಗೆ ಆತಂಕ ವ್ಯಕ್ತವಾಗುತ್ತಿದೆ. ವಿಶೇಷವಾಗಿ ಬೆಳಗ್ಗೆ ಮತ್ತು ಸಂಜೆ ವೇಳೆಯ ಕ್ರಾಸಿಂಗ್ ಸಮಸ್ಯೆಗಳು ವಿದ್ಯಾರ್ಥಿಗಳು, ಉದ್ಯೋಗಸ್ಥರು ಹಾಗೂ ನಿತ್ಯ ಪ್ರಯಾಣಿಕರಿಗೆ ತೊಂದರೆ ಉಂಟುಮಾಡಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಈ ಹಿನ್ನೆಲೆಯಲ್ಲಿ ಅಂತಿಮ ವೇಳಾಪಟ್ಟಿ ಪ್ರಕಟಿಸುವ ಮುನ್ನ ರೈಲ್ವೆ ಇಲಾಖೆ ಸ್ಥಳೀಯ ಜನಪ್ರತಿನಿಧಿಗಳು, ಹೋರಾಟಗಾರರು ಮತ್ತು ಸಾರ್ವಜನಿಕ ಅಭಿಪ್ರಾಯವನ್ನು ಪರಿಗಣಿಸಬೇಕೆಂಬ ಒತ್ತಾಯ ಕೇಳಿಬರುತ್ತಿದೆ.

ಇದನ್ನೂ ಓದಿ: ರಾಜ್ಯ ಕರಾವಳಿ ಭಾಗದ ಜನರಿಗೆ ಗುಡ್ ನ್ಯೂಸ್: ಶೀಘ್ರ ಬೆಂಗಳೂರು-ಕೋಸ್ಟಲ್ ಕರ್ನಾಟಕ ವಂದೇ ಭಾರತ್ ಸೇವೆ ಆರಂಭ: ರೈಲ್ವೆ ಸಚಿವ ಅಶ್ವಿನಿ ವೈಷ್ಣವ್