ಸಿಎಂ ಸ್ಥಾನ ಕೇವಲ ಜವಾಬ್ದಾರಿಯಲ್ಲ, ಕೋಟ್ಯಂತರ ಕನ್ನಡಿಗರ ಕನಸುಗಳನ್ನು ನನಸು ಮಾಡುವ ಪವಿತ್ರ ಕರ್ತವ್ಯ: ಡಿಕೆ ಶಿವಕುಮಾರ್

Published : June 3, 2026 at 12:54 PM IST
|Updated : June 3, 2026 at 9:03 PM IST
ಬೆಂಗಳೂರು: ಡಿ.ಕೆ.ಶಿವಕುಮಾರ್ ಅವರು ಇಂದು ಸಂಜೆ 4.05 ಗಂಟೆಗೆ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಸ್ವೀಕರಿಸಿದರು. ರಾಜ್ಯಪಾಲ ತಾವರ್‌ಚಂದ್ ಗೆಹ್ಲೋಟ್ ಅವರು ಡಿಕೆಶಿಗೆ ಪ್ರಮಾಣವಚನ ಬೋಧಿಸಿದರು. ಜಿ.ಪರಮೇಶ್ವರ್ ಅವರು ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದರು. ಉಳಿದಂತೆ ಕೆ.ಹೆಚ್. ಮುನಿಯಪ್ಪ, ಕೆ.ಜೆ. ಜಾರ್ಜ್ ದೇವರ ಹೆಸರಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದರು. ಉಳಿದವರು ಎಂ.ಬಿ.ಪಾಟೀಲ್, ರಾಮಲಿಂಗಾರೆಡ್ಡಿ, ಸತೀಶ್ ಜಾರಕಿಹೊಳಿ, ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ, ಯು.ಟಿ. ಖಾದರ್, ಈಶ್ವರ್ ಖಂಡ್ರೆ, ಯತೀಂದ್ರ ಸಿದ್ದರಾಮಯ್ಯ, ಬೈರತಿ ಸುರೇಶ್ ಮತ್ತು ಶರಣಪ್ರಕಾಶ್ ಪಾಟೀಲ್ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು.
LIVE FEED
ನೂತನ ಸಿಎಂ ಡಿಕೆಶಿ ಪ್ರಮಾಣವಚನ ಸ್ವೀಕಾರ: ಬೆಳಗಾವಿಯಲ್ಲಿ ಭರ್ಜರಿ ವಿಜಯೋತ್ಸವ
ಬೆಳಗಾವಿ: ರಾಜ್ಯದ ಮುಖ್ಯಮಂತ್ರಿ ಆಗಿ ಡಿ.ಕೆ.ಶಿವಕುಮಾರ್ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ಗಡಿನಾಡು ಬೆಳಗಾವಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಅದ್ಧೂರಿ ವಿಜಯೋತ್ಸವ ಆಚರಿಸಿದರು. ಡಿಕೆಶಿ ಅವರು ಪ್ರಮಾಣವಚನ ಸ್ವೀಕರಿಸಲು ವೇದಿಕೆಗೆ ಬರುತ್ತಿದ್ದಂತೆ ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಸೀಟಿ ಹೊಡೆದು ಸಂಭ್ರಮಿಸಿದರು. ನಗರದ ಕಾಂಗ್ರೆಸ್ ಭವನದ ಆವರಣದಲ್ಲಿ ಪ್ರಮಾಣವಚನ ಸ್ವೀಕಾರ ಸಮಾರಂಭದ ನೇರಪ್ರಸಾರವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ನೂರಾರು ಸಂಖ್ಯೆಯಲ್ಲಿ ಕೈ ಕಾರ್ಯಕರ್ತರು ನೆರೆದಿದ್ದರು. ಒಂದು ರೀತಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.
ಸಮಾರಂಭದ ಬಳಿಕ ರಾಣಿ ಚನ್ನಮ್ಮ ವೃತ್ತಕ್ಕೆ ಆಗಮಿಸಿದ ಕೈ ಪಡೆ ಭರ್ಜರಿ ಸಂಭ್ರಮಾಚರಣೆ ನಡೆಸಿತು. ಈ ವೇಳೆ ಮೃಣಾಲ್ ಚನ್ನಮ್ಮಾಜಿ ಮೂರ್ತಿಗೆ ಮಾಲಾರ್ಪಣೆ ಮಾಡಿದರು. ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂತಸ ಪಟ್ಟರು. ಕೈಯಲ್ಲಿ ನೂತನ ಸಿಎಂ ಡಿಕೆಶಿ, ಸಚಿವ ಸತೀಶ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ಅವರ ಭಾವಚಿತ್ರದ ಪೋಸ್ಟರ್ ಹಿಡಿದು ಕುಣಿದು ಕುಪ್ಪಳಿಸಿದರು. ಡಿಕೆಶಿ ಅವರ ಭಾವಚಿತ್ರ ಬ್ಯಾನರ್ಗೆ ಹಾಲಿನ ಅಭಿಷೇಕ ಮಾಡಿದರು.
ಇದೇ ವೇಳೆ ಈಟಿವಿ ಭಾರತ ಜೊತೆಗೆ ಮಾತನಾಡಿದ ಮೃಣಾಲ್ ಹೆಬ್ಬಾಳ್ಕರ್, 2019ರಲ್ಲಿ ಇಡಿ, ಐಟಿ ಮೂಲಕ ನಮ್ಮ ನಾಯಕ ಡಿ.ಕೆ.ಶಿವಕುಮಾರ್ ಅವರಿಗೆ ಸಾಕಷ್ಟು ಕಿರುಕುಳ ನೀಡಲಾಗಿತ್ತು. ಆದರೆ, ಅದೆಲ್ಲವನ್ನು ಮೆಟ್ಟಿ ನಿಂತು ಇಂದು ಸಿಎಂ ಆಗಿದ್ದಾರೆ. ಪಕ್ಷನಿಷ್ಠೆ ಅವರ ಕೈ ಹಿಡಿದಿದೆ. ಇದು ಕಾಂಗ್ರೆಸ್ ಪಕ್ಷದ ಎಲ್ಲ ಕಾರ್ಯಕರ್ತರಿಗೆ ದೊಡ್ಡ ಸಂದೇಶವಾಗಿದೆ. ಬರುವ ಎರಡು ವರ್ಷಗಳಲ್ಲಿ ರಾಜ್ಯವು ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದಲಿದೆ. ಕಳೆದ ಮೂರು ವರ್ಷಗಳಲ್ಲಿ ಬೆಳಗಾವಿಯಲ್ಲೂ ಸಾಕಷ್ಟು ಕೆಲಸಗಳು ಆಗಿವೆ. ಭವಿಷ್ಯದಲ್ಲಿ ಮತ್ತಷ್ಟು ಕೆಲಸಗಳನ್ನು ಡಿ.ಕೆ.ಶಿವಕುಮಾರ, ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್, ಆಸೀಫ್ ಸೇಠ್ ಅವರ ನೇತೃತ್ವದಲ್ಲಿ ಆಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮುಂದಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಂತಾ ಅವರ ಮೇಲಿನ ಅಭಿಮಾನಕ್ಕೆ ನಾನು ಬ್ಯಾನರ್ ಹಾಕಿದ್ದೆ. ದೇವರ ಆಶೀರ್ವಾದ ಮತ್ತು ಹೈಕಮಾಂಡ್ ಇಚ್ಛೆ ಅಂತೆ ಇಂದು ಕಾಲ ಕೂಡಿ ಬಂದಿತು ಅಂತಾ ಮೃಣಾಲ್ ಹರ್ಷ ವ್ಯಕ್ತಪಡಿಸಿದರು.
ನಮ್ಮ ತಾಯಿಯವರು ಕಳೆದ ಮೂರು ವರ್ಷಗಳಲ್ಲಿ ಸಚಿವರಾಗಿ ಅತ್ಯುತ್ತಮ ಕೆಲಸ ಮಾಡಿದ್ದಾರೆ. ಬರುವ ದಿನಗಳಲ್ಲಿ ಹೈಕಮಾಂಡ್ ಅವರಿಗೆ ಒಳ್ಳೆಯ ಸ್ಥಾನ ನೀಡಲಿದ್ದಾರೆ. ದೇವರು ಮತ್ತು ಹೈಕಮಾಂಡ್ ಆಶೀರ್ವಾದದಿಂದ ಎರಡನೇ ಪಟ್ಟಿಯಲ್ಲೆ ಸಚಿವ ಸ್ಥಾನ ಸಿಗಲಿದೆ ಎಂದು ಮೃಣಾಲ್ ಹೆಬ್ಬಾಳ್ಕರ್ ಅಭಿಪ್ರಾಯ ಪಟ್ಟರು.
ಬೆಂಗಳೂರು: ನೂತನ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಡಿಕೆ ಶಿವಕುಮಾರ್ ಅವರು ರಾಜ್ಯದ ಜನತೆಗೆ ಧನ್ಯವಾದ ಹೇಳಿದ್ದಾರೆ.
ಜನರಿಂದ, ಜನರಿಗಾಗಿ, ಜನರಿಗೋಸ್ಕರ... ನನ್ನ ಬದುಕಿನ ಪ್ರತಿಯೊಂದು ಏಳುಬೀಳುಗಳಲ್ಲೂ ಧೈರ್ಯ ತುಂಬಿ, ನನ್ನನ್ನು ಹೆಗಲ ಮೇಲೆ ಹೊತ್ತು ಮುನ್ನಡೆಸಿದ ನನ್ನ ಪ್ರೀತಿಯ ಕರ್ನಾಟಕದ ಕೋಟ್ಯಂತರ ಜನತೆ ಹಾಗೂ ಕಾರ್ಯಕರ್ತ ಬಂಧುಗಳ ಆಶೀರ್ವಾದದಿಂದ ಲೋಕಭವನದಲ್ಲಿ ಇಂದು ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದೆ. ಈ ಕ್ಷಣದಲ್ಲಿ ನಾನು ನಿಮ್ಮೆಲ್ಲರ ಪ್ರೀತಿ ಹಾಗೂ ವಿಶ್ವಾಸಕ್ಕೆ ತಲೆಬಾಗುತ್ತೇನೆ.
ಇಂದು ನನ್ನ ಹೆಗಲ ಮೇಲಿರುವುದು ಕೇವಲ ಮುಖ್ಯಮಂತ್ರಿಯ ಜವಾಬ್ದಾರಿಯಲ್ಲ, ಬದಲಿಗೆ ಕೋಟ್ಯಂತರ ಕನ್ನಡಿಗರ ಕನಸುಗಳನ್ನು ನನಸು ಮಾಡುವ ಪವಿತ್ರ ಕರ್ತವ್ಯ. ಈ ಅವಕಾಶವನ್ನು ನನಗೆ ಕರುಣಿಸಿದ ಹಿರಿಯರಿಗೆ, ಮಾರ್ಗದರ್ಶಕರಿಗೆ ಹಾಗೂ ನನ್ನ ಶಕ್ತಿಯಾಗಿ ನಿಂತ ಪ್ರತಿಯೊಬ್ಬರಿಗೂ ನನ್ನ ಹೃದಯಪೂರ್ವಕ ಕೃತಜ್ಞತೆಗಳು.
ವೇಗವಾಗಿ ಬದಲಾಗುತ್ತಿರುವ ಇಂದಿನ ತಂತ್ರಜ್ಞಾನದ ಯುಗದಲ್ಲಿ, ಹೊಸ ಆಲೋಚನೆಗಳೊಂದಿಗೆ ನಮ್ಮ ಹೆಮ್ಮೆಯ ಕರ್ನಾಟಕವನ್ನು ಅಭಿವೃದ್ಧಿಯ ಅತ್ಯುನ್ನತ ಶಿಖರಕ್ಕೆ ಕೊಂಡೊಯ್ಯಬೇಕಿದೆ. ಈ ಸರ್ವತೋಮುಖ ಪ್ರಗತಿಯ ದಾರಿಯಲ್ಲಿ ರೈತರು, ಶ್ರಮಿಕರು, ಮಹಿಳೆಯರು, ವಿದ್ಯಾರ್ಥಿಗಳು, ಯುವಜನರು ಹಾಗೂ ಪ್ರತಿಯೊಬ್ಬ ನಾಗರಿಕರ ಸಹಭಾಗಿತ್ವ ನಮಗೆ ಮುಖ್ಯ.
ಯಾವುದೇ ಒಬ್ಬ ವ್ಯಕ್ತಿಯಿಂದ ಬದಲಾವಣೆ ಸಾಧ್ಯವಿಲ್ಲ, ಆದರೆ ನಾವೆಲ್ಲರೂ ಕೈಜೋಡಿಸಿದರೆ ಅಸಾಧ್ಯವಾದುದು ಯಾವುದೂ ಇಲ್ಲ. ಬನ್ನಿ, ನಮ್ಮ ಭವಿಷ್ಯದ ಪೀಳಿಗೆ ಹೆಮ್ಮೆ ಪಡುವಂತಹ ಸುಂದರ, ಸಮೃದ್ಧ ಮತ್ತು ಪ್ರಗತಿಪರ ಕರ್ನಾಟಕವನ್ನು ಕಟ್ಟೋಣ. ಜೈ ಹಿಂದ್! ಜೈ ಕರ್ನಾಟಕ! ಎಂದು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.
ವಿಧಾನಸೌಧದ ಮೆಟ್ಟಿಲುಗಳಿಗೆ ನಮಸ್ಕರಿಸಿದ ಸಿಎಂ ಡಿ.ಕೆ.ಶಿವಕುಮಾರ್
ಬೆಂಗಳೂರು: ವಿಧಾನಸೌಧ ಪ್ರವೇಶಕ್ಕೆ ಮುನ್ನ ನೂತನ ಸಿಎಂ ಡಿ.ಕೆ.ಶಿವಕುಮಾರ್ ವಿಧಾನಸೌಧ ಮುಂಭಾಗ ಇರುವ ನಾಡಪ್ರಭು ಕೆಂಪೇಗೌಡ ಪ್ರತಿಮೆ, ಬಸವಣ್ಣನ ಪ್ರತಿಮೆ, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಪ್ರತಿಮೆ, ಜವಹಾರಲಾಲ್ ನೆಹರೂ ಪ್ರತಿಮೆಗೆ ಪುಷ್ಪಾರ್ಚನೆ ಸಲ್ಲಿದರು.
ಬಳಿಕ ವಿಧಾನಸೌಧ ಆವರಣದಲ್ಲಿನ ಮಹಾತ್ಮಾ ಗಾಂಧಿ ಪ್ರತಿಮೆಗೆ ಪುಷ್ಪಾರ್ಚನೆ ಸಲ್ಲಿಸಿದರು. ಬಳಿಕ ವಿಧಾನಸೌಧದ ಉತ್ತರ ದ್ವಾರದಿಂದ ಸಂಪುಟ ಸಭೆಗೆ ಪ್ರವೇಶಿಸಿದರು. ವಿಧಾನಸೌಧ ಪ್ರವೇಶಿಸುವಾಗ ಸಿಎಂ ಡಿ.ಕೆ.ಶಿವಕುಮಾರ್ ಮೆಟ್ಟಿಲುಗಳಿಗೆ ನಮಸ್ಕರಿಸಿದರು.
ಗೀತೆಯ ಶ್ಲೋಕ ಉಲ್ಲೇಖಿಸಿ ಡಿಕೆಶಿ ಪೋಸ್ಟ್
ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ | ಮಾ ಕರ್ಮಫಲಹೇತುರ್ಭೂರ್ ಮಾ ತೇ ಸಂಗೋಸ್ತ್ವ ಕರ್ಮಣಿ || ಎಂದು ಗೀತೆಯ ಶ್ಲೋಕ ಉಲ್ಲೇಖಿರುವ ನೂತನ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ನೂತನ ಮುಖ್ಯಮಂತ್ರಿ ಕೊಠಡಿಗೆ ಹೂವಿನ ಅಲಂಕಾರ
ಬೆಂಗಳೂರು: ನೂತನ ಸಿಎಂ ಡಿ.ಕೆ.ಶಿವಕುಮಾರ್ ಸ್ವಾಗತಕ್ಕಾಗಿ ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಮುಖ್ಯಮಂತ್ರಿ ಕೊಠಡಿಗೆ ಹೂವಿನ ಅಲಂಕಾರ ಮಾಡಲಾಗಿದೆ. ಇದೇ ವೇಳೆ ವಿಧಾನಸೌಧ ಸಿಬ್ಬಂದಿಗಳು ಸಿಎಂ ಕೊಠಡಿಯ ನಿರ್ಗಮಿತ ಸಿಎಂ ಸಿದ್ದರಾಮಯ್ಯರ ನಾಮಫಲಕವನ್ನು ತೆರವುಗೊಳಿಸಿದರು. ಬಳಿಕ ನೂತನ ಸಿಎಂ ಡಿ.ಕೆ.ಶಿವಕುಮಾರ್ ನಾಮಫಲಕ ಅಳವಡಿಸಲಾಯಿತು. ವಿಧಾನಸೌಧ ನಾಲ್ಕು ಧ್ವಾರಗಳಿಗೆ ಪುಷ್ಪಾರ್ಚನೆ ಮಾಡಿ ಅಲಂಕಾರ ಮಾಡಲಾಗಿದೆ.
ವಿಧಾನಸೌಧಕ್ಕೆ ಆಗಮಿಸಿದ ನೊಣವಿನಕೆರೆ ಸ್ವಾಮೀಜಿ
- ವಿಧಾನಸೌಧಕ್ಕೆ ಆಗಮಿಸಿದ ನೊಣವಿನಕೆರೆ ಸ್ವಾಮೀಜಿ
- ಕೆಂಗಲ್ ಗೇಟ್ನ ಮೂಲಕ ಸ್ವಾಮೀಜಿ ವಿಧಾನಸೌಧ ಪ್ರವೇಶ
- ಈ ವೇಳೆ ವಿಧಾನಸೌಧ ಮೆಟ್ಟಿಲುಗಳಿಗೆ ನೀರು ಪ್ರೋಕ್ಷಿಸಿದ ಸ್ವಾಮೀಜಿ
- ವಿಧಾನಸೌಧ ಸಿಎಂ ಕೊಠಡಿಯಲ್ಲಿ ಪೂಜೆ ಸಲ್ಲಿಸಲಿರುವ ನೊಣವಿನಕೆರೆ ಶ್ರೀ
ಡಿ.ಕೆ. ಶಿವಕುಮಾರ್ಗೆ ಪ್ರಧಾನಿ ಮೋದಿ ಅಭಿನಂದನೆ
ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಡಿ.ಕೆ. ಶಿವಕುಮಾರ್ ಅವರಿಗೆ ಅಭಿನಂದನೆಗಳು. ಅವರ ಅಧಿಕಾರಾವಧಿಗೆ ಶುಭಾಶಯಗಳು. ಕೇಂದ್ರವು ಕರ್ನಾಟಕ ಸರ್ಕಾರದೊಂದಿಗೆ ಜನರ ಕಲ್ಯಾಣಕ್ಕಾಗಿ ನಿಕಟವಾಗಿ ಕಾರ್ಯನಿರ್ವಹಿಸಲಿದೆ ಎಂದು ಪ್ರಧಾನಿ ಮೋದಿ ಅವರು ಶುಭಾಶಯ ತಿಳಿಸಿದ್ದಾರೆ.
ಸ್ವಕ್ಷೇತ್ರ ರಾಮನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮಾಚಣೆ
ರಾಮನಗರ: ಸಿಎಂ ಆಗಿ ಡಿಕೆ ಶಿವಕುಮಾರ್ ಅವರು ಪ್ರಮಾಣ ವಚನ ಸ್ವೀಕಾರ ಮಾಡುತ್ತಿದ್ದಂತೆ ಇತ್ತ ಸ್ವಕ್ಷೇತ್ರ ರಾಮನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚಣೆ ಮಾಡಿದರು. ನಗರದ ಐಜೂರು ವೃತ್ತ ಹಾಗೂ ಚನ್ನಪಟ್ಟಣದಲ್ಲಿ ಬಸ್ ನಿಲ್ದಾಣದ ಮುಂಭಾಗದಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿಸಿ ಸಂಭ್ರಮ ಆಚರಿಸಿಕೊಂಡರು.
ಉಪ ಮುಖ್ಯಮಂತ್ರಿಯಾಗಿ ಜಿ. ಪರಮೇಶ್ವರ್ ಪ್ರಮಾಣವಚನ ಸ್ವೀಕಾರ
ಬೆಂಗಳೂರು: ಕಾಂಗ್ರೆಸ್‌ನ ಹಿರಿಯ ಮುಖಂಡ ಡಾ. ಜಿ. ಪರಮೇಶ್ವರ್ ಅವರು ಉಪ ಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದರು. ಡಾ. ಬಿ.ಆರ್. ಅಂಬೇಡ್ಕರ್ ಅವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಉಳಿದಂತೆ ಕೆ.ಹೆಚ್. ಮುನಿಯಪ್ಪ, ಕೆ.ಜೆ. ಜಾರ್ಜ್ ದೇವರ ಹೆಸರಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದರು. ಉಳಿದವರು ಎಂ.ಬಿ.ಪಾಟೀಲ್, ರಾಮಲಿಂಗಾರೆಡ್ಡಿ, ಸತೀಶ್ ಜಾರಕಿಹೊಳಿ, ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ, ಯು.ಟಿ. ಖಾದರ್, ಈಶ್ವರ್ ಖಂಡ್ರೆ, ಯತೀಂದ್ರ ಸಿದ್ದರಾಮಯ್ಯ, ಬೈರತಿ ಸುರೇಶ್ ಮತ್ತು ಶರಣಪ್ರಕಾಶ್ ಪಾಟೀಲ್ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು.
ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಪ್ರಮಾಣವಚನ ಸ್ವೀಕಾರ
ಬೆಂಗಳೂರು: ಕರ್ನಾಟಕ ರಾಜ್ಯದ 34ನೇ ಮುಖ್ಯಮಂತ್ರಿಯಾಗಿ ಡಿ. ಕೆ. ಶಿವಕುಮಾರ್ ಅವರು ಇಂದು ಸಂಜೆ ಪ್ರಮಾಣವಚನ ಸ್ವೀಕರಿಸಿದರು. ಬೆಂಗಳೂರಿನ ಲೋಕಭವನದ ಗಾಜಿನ ಮನೆಯಲ್ಲಿ ಸಂಜೆ ನಿಗದಿತ ಸಮಯ 4:05 ಗಂಟೆಗೆ ನಡೆದ ಅದ್ಧೂರಿ ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಪ್ರಮಾಣವಚನ ಸ್ವೀಕರಿಸಿದರು. ರಾಜ್ಯಪಾಲ ತಾವರ್‌ಚಂದ್ ಗೆಹ್ಲೋಟ್ ಅವರು ಡಿಕೆಶಿಗೆ ಪ್ರಮಾಣವಚನ ಬೋಧಿಸಿದರು.
ಗಂಗಾಧರಯ್ಯ ಅಜ್ಜನವರ ಹೆಸರಿನಲ್ಲಿ ಡಿ.ಕೆ. ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಿದರು. ಅದಕ್ಕೂ ಮುನ್ನ ಅಜ್ಜನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಪ್ರಮಾಣವಚನ ಕಾರ್ಯಕ್ರಮಕ್ಕೆ ಸಿನಿಮಾ ತಾರೆಯರ ಮೆರಗು
ಪ್ರಮಾಣವಚನ ಕಾರ್ಯಕ್ರಮಕ್ಕೆ ಸಿನಿಮಾ ತಾರೆಯರಾದ ರವಿಚಂದ್ರನ್, ಸುದೀಪ್, ನಟಿ ರಾಗಿಣಿ ಸೇರಿದಂತೆ ಸರ್ವಧರ್ಮ ಗುರುಗಳು ಕಾರ್ಯಕ್ರಮಕ್ಕೆ ಆಹ್ವಾನಿತರಾಗಿದ್ದಾರೆ.
ಲೋಕಭವನಕ್ಕೆ ಆಗಮಿಸಿದ ನಿಯೋಜಿತ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ನಿಯೋಜಿತ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಹೈಕಮಾಂಡ್ ನಾಯಕರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ವೇಣುಗೋಪಾಲ್, ಸುರ್ಜೇವಾಲಾ, ಸಿದ್ದರಾಮಯ್ಯ, ಜಿ.ಪರಮೇಶ್ವರ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಲೋಕಭವನಕ್ಕೆ ಆಗಮಿಸಿದ್ದಾರೆ.
ಸಿದ್ಧಾಂತ ನಿಷ್ಠರಿಗೆ ಹಾದಿ ಯಾವಾಗಲೂ ಕಠಿಣವೇ: ಹೆಚ್ ಕೆ ಪಾಟೀಲ್
ಮಹಾಜನತೆ, ನನ್ನ ಮೇಲಿಟ್ಟಿರುವ ಪ್ರೀತಿ, ವಿಶ್ವಾಸ ಮತ್ತು ಅಭಿಮಾನಕ್ಕೆ ನಾನು ಸದಾ ಚಿರಋಣಿ. ಸಿದ್ಧಾಂತ ನಿಷ್ಠರಿಗೆ ಹಾದಿ ಯಾವಾಗಲೂ ಕಠಿಣವೇ, ಹೈಕಮಾಂಡ್ ನಿರ್ಧಾರಕ್ಕೆ ಒಪ್ಪೋಣ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಹೆಚ್ ಕೆ ಪಾಟೀಲ್ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.
ಮತ್ತೊಂದೆಡೆ ಇಂದು ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿರುವ ಈಶ್ವರ ಬಿ ಖಂಡ್ರೆ ಅವರನ್ನು ಅವರ ಶ್ರೀಮತಿ ಡಾ. ಗೀತಾ ಖಂಡ್ರೆ ಸಿಹಿ ತಿನ್ನಿಸಿ ಅಭಿನಂದಿಸಿದರು.
ಡಿ.ಕೆ.ಶಿವಕುಮಾರ್ ಪ್ರಮಾಣವಚನ ರಾಜ್ಯದ 230 ಬಸ್ ನಿಲ್ದಾಣಗಳಲ್ಲಿ ನೇರಪ್ರಸಾರ
ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಇಂದು ಸಂಜೆ 4.05ಕ್ಕೆ ಪ್ರಮಾಣ ವಚನ ಸ್ವೀಕರಿಸಲಿದ್ದು, 230 ಸರ್ಕಾರಿ ಬಸ್ ನಿಲ್ದಾಣಗಳಲ್ಲಿ ಈ ಕಾರ್ಯಕ್ರಮ ನೇರಪ್ರಸಾರವಾಗಲಿದೆ. ಬೆಂಗಳೂರಿನ ಲೋಕ ಭವನದ ಗಾಜಿನ ಮನೆಯಲ್ಲಿ ಆಯೋಜಿಸಲಾಗಿರುವ ಸಮಾರಂಭದಲ್ಲಿ ಮುಖ್ಯಮಂತ್ರಿ ಹಾಗೂ ಅವರ ಸಂಪುಟದ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ರಾಜ್ಯದ ಜನತೆಗೆ ಈ ಕಾರ್ಯಕ್ರಮವನ್ನು ತಲುಪಿಸುವ ಉದ್ದೇಶದಿಂದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ 'ವೃತ್ತಿ ಸೊಲ್ಯೂಷನ್ಸ್ ಲಿಮಿಟೆಡ್' ಸಂಸ್ಥೆಯ ಸಹಯೋಗದಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿದೆ.
ಡಿಕೆಶಿ ಪದಗ್ರಹಣ ಸಮಾರಂಭ: ಪೊಲೀಸ್ ತಿಮ್ಮಯ್ಯ ಸರ್ಕಲ್ ಬಳಿ ತಮಟೆ ಬ್ಯಾಂಡ್, ಡೊಳ್ಳು ಕುಣಿತ
ಡಿ.ಕೆ.ಶಿವಕುಮಾರ್ ಅವರ ಪದಗ್ರಹಣ ಕಾರ್ಯಕ್ರಮಕ್ಕೆ ನಡೆದುಕೊಂಡು ಹೋಗಲು ಆಗದವರಿಗೆ ಪೊಲೀಸರು ಎಲೆಕ್ಟ್ರಿಕ್ ಬಗ್ಗಿ ವಾಹನದ ಮೂಲಕ ಬಿಡುತ್ತಿದ್ದಾರೆ. ನಡೆದುಕೊಂಡು ಹೋಗುವವರಿಗೆ ಬ್ಯಾರಿಕೇಡ್ ಹಾಕಿರುವ ಫುಟ್ ಪಾತ್ ಮೂಲಕ ಅವಕಾಶ ನೀಡಲಾಗಿದೆ. ಪೊಲೀಸ್ ತಿಮ್ಮಯ್ಯ ಸರ್ಕಲ್ ಮೂಲಕ ಒಳಗಡೆ ಬಿಡಲಾಗುತ್ತಿದೆ. ಇನ್ನೊಂದೆಡೆ, ಪೊಲೀಸ್ ತಿಮ್ಮಯ್ಯ ಸರ್ಕಲ್ ಬಳಿ ಕಲಾವಿದರು ತಮಟೆ ಬ್ಯಾಂಡ್ ಹಾಗೂ ಡೊಳ್ಳು ಕುಣಿತದಲ್ಲಿ ತೊಡಗಿದ್ದರು.
ಸ್ಪೀಕರ್ ಸ್ಥಾನಕ್ಕೆ ಯು.ಟಿ.ಖಾದರ್ ರಾಜೀನಾಮೆ
ವಿಧಾನಸಭೆ ಸ್ಪೀಕರ್ ಸ್ಥಾನಕ್ಕೆ ಯು.ಟಿ.ಖಾದರ್ ರಾಜೀನಾಮೆ ಸಲ್ಲಿಸಿದ್ದಾರೆ. ಡಿ.ಕೆ.ಶಿವಕುಮಾರ್ ನೇತೃತ್ವದ ನೂತನ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಹಿನ್ನೆಲೆಯಲ್ಲಿ ಖಾದರ್ ಅವರು ರಾಜೀನಾಮೆ ನೀಡಿದ್ದಾರೆ.
ಡಿಕೆ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಗಮಿಸಿದ ಹಿಮಾಚಲಪ್ರದೇಶ ಸಿಎಂ ಸುಖು
ಬೆಂಗಳೂರು: ಡಿಕೆ ಶಿವಕುಮಾರ್ ಅವರ ಪ್ರಮಾಣವಚನ ಸಮಾರಂಭದಲ್ಲಿ ಭಾಗಿಯಾಗಲು ಹಿಮಾಚಲ ಪ್ರದೇಶದ ಸಿಎಂ ಸುಖ್ವಿಂದರ್ ಸಿಂಗ್ ಸುಖು ಬೆಂಗಳೂರಿಗೆ ಆಗಮಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ಕಾಂಗ್ರೆಸ್ ಕರ್ನಾಟಕದಲ್ಲಿ ಕಳೆದ ಮೂರು ವರ್ಷಗಳಿಂದ ಅಧಿಕಾರದಲ್ಲಿದೆ. ಡಿಕೆ ಶಿವಕುಮಾರ್ ಕೂಡ ಸಿದ್ದರಾಮಯ್ಯ ಸರ್ಕಾರದ ನೀತಿಗಳನ್ನೇ ಅನುಸರಿಸುತ್ತಾರೆ. ಇದಲ್ಲದೇ, ಕಾಂಗ್ರೆಸ್‌ನ ನೀತಿಗಳು ಕೇವಲ 1-2 ವರ್ಷಗಳಿಗೆ ಸೀಮಿತವಾಗಿಲ್ಲ. ಅವು ಇಡೀ ಐದು ವರ್ಷಗಳವರೆಗೂ ಮುಂದುವರೆಯುತ್ತವೆ ಎಂದು ಹೇಳಿದ್ದಾರೆ.
ಬೆಂಗಳೂರಿಗೆ ಆಗಮಿಸಿದ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ
ಕರ್ನಾಟಕ ಎಐಸಿಸಿ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಕರ್ನಾಟಕದ ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಲೋಕಭವನದಲ್ಲಿ ಜನರ ಜಮಾವಣೆ: ಪಾಸ್ ಇದ್ದವರಿಗಷ್ಟೇ ಪ್ರವೇಶ ಕಲ್ಪಿಸುತ್ತಿರುವ ಪೊಲೀಸರು
ಬೆಂಗಳೂರು: ಸಿಎಂ ಆಗಿ ಡಿ.ಕೆ.ಶಿವಕುಮಾರ್ ಪ್ರಮಾಣವಚನಕ್ಕೆ ಕ್ಷಣಗಣನೆ ಆರಂಭವಾಗಿದೆ. ಲೋಕಭವನದಲ್ಲಿ ನಿಧಾನವಾಗಿ ಜನರು ಜಮಾವಣೆಯಾಗುತ್ತಿದ್ದಾರೆ. ದೂರದ ಊರಿನಿಂದ ಬಂದಿರುವ ಜನರು ವಿಐಪಿ ಪಾಸ್ ತೋರಿಸಿ ಲೋಕಭವನ ಪ್ರವೇಶಿಸುತ್ತಿದ್ದಾರೆ.
ಪಾಸ್ ಹೊಂದಿರುವವರಿಗೆ ಪೊಲೀಸ್ ತಿಮ್ಮಯ್ಯ ಜಂಕ್ಷನ್ ಮೂಲಕ ಪ್ರವೇಶ ಕಲ್ಪಿಸಲಾಗಿದೆ. ಪ್ರತಿಯೊಬ್ಬರ ಪಾಸ್ ಪರಿಶೀಲಿಸಿ ಸಹಿ ಹಾಕಿ, ಸ್ಕ್ಯಾನ್ ಮಾಡಿ ಪೊಲೀಸರು ಒಳ ಬಿಡುತ್ತಿದ್ದಾರೆ. ಬ್ಯಾರಿಕೇಡ್ ಗಳನ್ನ ಹಾಕಿ ಪಾದಚಾರಿ ರಸ್ತೆ ಮೂಲಕ ಲೋಕಭವನಕ್ಕೆ ಬೀಡಲಾಗುತ್ತಿದೆ. ಒಂದು ಪಾಸ್ಗೆ ಒಬ್ಬರೇ ಪ್ರವೇಶವಿದೆ. ಪಾಸ್ ಇಲ್ಲದವರನ್ನ ಪೊಲೀಸರು ವಾಪಸ್ ಕಳುಹಿಸುತ್ತಿದ್ದಾರೆ.
ಈಗಾಗಲೇ ಲೋಕಭವನದ ರಸ್ತೆ ಬಂದ್ ಮಾಡಿರುವ ಸಂಚಾರ ಪೊಲೀಸರು ಇಂಡಿಯನ್ ಎಕ್ಸ್ ಪ್ರೆಸ್ -ಕನ್ನಿಂಗ್ ಹಾಮ್ ರಸ್ತೆ ಮೂಲಕ ಗಾಲ್ಫ್ ರಸ್ತೆ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದಾರೆ
ಡಿ.ಕೆ.ಶಿವಕುಮಾರ್ ಸಿಎಂ ಆಗಿ ಉತ್ತಮ ಕಾರ್ಯನಿರ್ವಹಿಸಲೆಂದು ಪೂಜೆ, ಹಯಗ್ರೀವ ಪ್ರಸಾದ ವಿತರಣೆ
ಶಿವಮೊಗ್ಗ: ಇಂದು ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿರುವ ಡಿ.ಕೆ.ಶಿವಕುಮಾರ್ ಅವರು ಉತ್ತಮ ಆಡಳಿತ ನಡೆಸಲಿ, ಸರ್ಕಾರಕ್ಕೆ ಯಾವುದೇ ವಿಘ್ನಗಳು ಬಾರದಂತೆ ಅವರ ಆವಧಿಯಲ್ಲಿ ಇನ್ನಷ್ಟು ಅಭಿವೃದ್ಧಿಯಾಗಲೆಂದು ಪ್ರಾರ್ಥಿಸಿ ಶಿವಮೊಗ್ಗ ಜಿಲ್ಲಾ ಒಕ್ಕಲಿಗರ ಒಕ್ಕೂಟದವರು ಶರಾವತಿ ನಗರದಲ್ಲಿನ ಕಾಲಭೈರವೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಡಿ.ಕೆ.ಶಿವಕುಮಾರ್ ಅವರಿಗೆ ಕಾಲಭೈರವ ಆಯಸ್ಸು, ಆರೋಗ್ಯ ಕರುಣಿಸಲೆಂದು ಪ್ರಾರ್ಥಿಸಿದರು. ವಿಶೇಷ ಪೂಜೆ ನಂತರ 101 ಈಡುಗಾಯಿ ಒಡೆಯುವ ಮೂಲಕ ಶಿವಕುಮಾರ್ ಅವರಿಗೆ ಶುಭ ಕೋರಿದರು.
ಹಯಗ್ರೀವ ಪ್ರಸಾದ ವಿತರಣೆ: ಶಿವಮೊಗ್ಗದ ಶಿವಪ್ಪ ನಾಯಕ ವೃತ್ತದಲ್ಲಿ ಡಿ.ಕೆ.ಶಿವಕುಮಾರ್ ಅಭಿಮಾನಿಗಳು ಹಯಗ್ರೀವ ಪ್ರಸಾದವನ್ನು ವಿತರಣೆ ಮಾಡಿದರು. ಹಯಗ್ರೀವ ಪ್ರಸಾದವನ್ನು ವಿಶೇಷ ಸಂದರ್ಭಗಳಲ್ಲಿ ಮಾತ್ರ ಮಾಡಲಾಗುತ್ತದೆ. ಈ ಪ್ರಸಾದವು ಇಷ್ಟಾರ್ಥ ಈಡೇರಿಕೆಗಾಗಿ ಮಾಡಲಾಗುತ್ತದೆ. ಡಿಕೆಶಿ ಮುಖ್ಯಮಂತ್ರಿಯಾಗಿ ರಾಜ್ಯವನ್ನು ಅಭಿವೃದ್ದಿಯ ದಿಕ್ಕಿನೆಡೆಗೆ ತೆಗೆದುಕೊಂಡು ಹೋಗಲಿ ಎಂದು ಪ್ರಾರ್ಥಿಸಿ, ದೇವರಿಗೆ ಪ್ರಸಾದ ಅರ್ಪಿಸಿ, ಅಭಿಮಾನಿಗಳು ಹಾಗೂ ಸಾರ್ವಜನಿಕರಿಗೆ ಕಾಂಗ್ರೆಸ್ ಮುಖಂಡ ಕೆ.ದೇವೆಂದ್ರಪ್ಪ ಹಾಗೂ ಅವರ ತಂಡ ಹಯಗ್ರೀವ ಪ್ರಸಾದ ಹಂಚಿದರು.

ಪ್ರಮಾಣವಚನ ಸಮಾರಂಭಕ್ಕೆ ಹಿಮಾಚಲ ಪ್ರದೇಶ ಸಿಎಂ ಆಗಮನ
ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಲು ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರು ಬೆಂಗಳೂರಿಗೆ ಆಗಮಿಸಿದ್ದಾರೆ. ಈ ವೇಳೆ ಮಾಧ್ಯಮದವೊಂದಿಗೆ ಮಾತನಾಡಿದ ಅವರು, "ರಾಜ್ಯದಲ್ಲಿ ಮೂರು ವರ್ಷಗಳಿಂದ ಕಾಂಗ್ರೆಸ್ ಸರ್ಕಾರ ಇದೆ. ಡಿ.ಕೆ.ಶಿವಕುಮಾರ್ ಕೂಡ ಕಾಂಗ್ರೆಸ್ ರೂಪಿಸಿದ ನೀತಿಗಳನ್ನೇ ಅನುಸರಿಸುತ್ತಾರೆ. ಇದಲ್ಲದೆ, ಕಾಂಗ್ರೆಸ್‌ನ ನೀತಿಗಳು ಕೇವಲ 1-2 ವರ್ಷಗಳಿಗಲ್ಲ, ಇಡೀ ಐದು ವರ್ಷಗಳಿಗಾಗಿದೆ. ಅವರು ಖಂಡಿತವಾಗಿಯೂ ಉತ್ತಮವಾಗಿ ನಿರ್ವಹಿಸುತ್ತಾರೆ" ಎಂದು ಹೇಳಿದ್ದಾರೆ.
ನಮ್ಮ ಗುರಿ 2028ರ ಚುನಾವಣೆ: ಮಾಜಿ ಸಚಿವ ಸತೀಶ್ ಜಾರಕಿಹೊಳಿ
ಡಿ.ಕೆ.ಶಿವಕುಮಾರ್ ಅವರ ಪ್ರಮಾಣವಚನ ಸಮಾರಂಭದ ಕುರಿತು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, "ಡಿಕೆ ಶಿವಕುಮಾರ್ ಬಗ್ಗೆ ಹೈಕಮಾಂಡ್ ನಿರ್ಧಾರ ತೆಗೆದುಕೊಂಡಿದೆ. ಅವರ ತಂಡವನ್ನು ಅವರು, ಹೈಕಮಾಂಡ್ ಮತ್ತು ಸಿದ್ದರಾಮಯ್ಯ ಸಹ ನಿರ್ಧರಿಸುತ್ತಾರೆ. ಅದಾದ ನಂತರ, ಉತ್ತಮ ಸರ್ಕಾರ ಉತ್ತಮ ಕೆಲಸ ಮಾಡುತ್ತದೆ ಎಂದು ನಾವು ಭಾವಿಸುತ್ತೇವೆ. ನಮ್ಮ ಗುರಿ 2028ರ ಚುನಾವಣೆ" ಎಂದು ಹೇಳಿದ್ದಾರೆ.
ದೇವೇಗೌಡರ ಆಶೀರ್ವಾದ ಪಡೆದ ಡಿ.ಕೆ.ಶಿವಕುಮಾರ್
ನಿಯೋಜಿತ ಸಿಎಂ ಡಿ.ಕೆ.ಶಿವಕುಮಾರ್ ಅವರು ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡರು. ಈ ವೇಳೆ ದೇವೇಗೌಡರು, ಶಾಲು ಹೊದೆಸಿ ಡಿಕೆಶಿ ಅವರಿಗೆ ಅಭಿನಂದಿಸಿದರು. ಬಳಿಕ ಮಾತನಾಡಿದ ಶಿವಕುಮಾರ್, ನೋಡಿ, ನಾನು ಇಂದು ದೇವೇಗೌಡ ಅವರನ್ನು ಭೇಟಿಯಾಗಬೇಕಿತ್ತು. ಅವರಿಗೀಗ ಡಯಾಲಿಸಿಸ್ ನಡೆಯುತ್ತಿದೆ, ಆದರೂ ನಂತರ ನನ್ನನ್ನು ಭೇಟಿಯಾಗಲು ಒಪ್ಪಿಕೊಂಡಿದ್ದಾರೆ. ಕರ್ನಾಟಕದ ರಾಜಕೀಯ ಶಕ್ತಿಯ ಎರಡು ಪ್ರಮುಖ ಸ್ತಂಭಗಳೆಂದರೆ ಬಿ.ಎಸ್.ಯಡಿಯೂರಪ್ಪ ಮತ್ತು ದೇವೇಗೌಡರು. ಖಂಡಿತವಾಗಿಯೂ, ಅವರು ರಾಜ್ಯಕ್ಕೆ ಮಾರ್ಗದರ್ಶನ ನೀಡಿದ್ದಾರೆ. ಕೆಲಸ ಮಾಡಿ, ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಇಂದು 13 ಜನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ತಿಳಿಸಿದರು.

ಯಡಿಯೂರಪ್ಪ ಭೇಟಿಯಾದ ಡಿಕೆಶಿ
ನಿಯೋಜಿತ ಸಿಎಂ ಡಿಕೆ ಶಿವಕುಮಾರ್ ಅವರು ಇಂದು ಬೆಳಗ್ಗೆ ಬಿಜೆಪಿ ನಾಯಕ ಮತ್ತು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಡಾಲರ್ಸ್ ಕಾಲೊನಿಯಲ್ಲಿ ಅವರ ನಿವಾಸದಲ್ಲಿ ಭೇಟಿಯಾಗಿ ಆಶೀರ್ವಾದ ಪಡೆದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಯಡಿಯೂರಪ್ಪ ಅವರು ರಾಜ್ಯಕ್ಕೆ ಮಾರ್ಗದರ್ಶನ ನೀಡಿದ್ದಾರೆ ಮತ್ತು ಕೆಲಸ ಮಾಡಿದ್ದಾರೆ. ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು" ಎಂದು ಹೇಳಿದರು.


