₹5.02 ಕೋಟಿ ಜಿಎಸ್‌ಟಿ ನೋಟಿಸ್ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಲಿಡ್ಕರ್
ಜಿಎಸ್‌ಟಿ ನೋಟಿಸ್ ಪ್ರಶ್ನಿಸಿ ಡಾ.ಬಾಬು ಜಗಜೀವನ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತವು ಹೈಕೋರ್ಟ್ ಮೊರೆ ಹೋಗಿದೆ.

Published : July 9, 2026 at 7:21 AM IST
ಬೆಂಗಳೂರು: ವಾಣಿಜ್ಯ ತೆರಿಗೆ ಇಲಾಖೆ 5.02 ಕೋಟಿ ರೂ.ಗಳ ಸರಕು ಸೇವಾ ತೆರಿಗೆ(ಜಿಎಸ್‌ಟಿ) ಪಾವತಿಸುವಂತೆ ಹೊರಡಿಸಿರುವ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರದ ಸ್ವಾಮ್ಯದ 'ಲಿಡ್ಕರ್' (ಡಾ.ಬಾಬು ಜಗಜೀವನ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ) ಸಂಸ್ಥೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿದೆ.
ವಾಣಿಜ್ಯ ತೆರಿಗೆ ಇಲಾಖೆ ಹೊರಡಿಸಿರುವ ಈ ಆದೇಶ ಏಕಪಕ್ಷೀಯ ಹಾಗೂ ಬ್ಯಾಂಕ್ ಖಾತೆಯಿಂದ ಜಪ್ತಿ ಮೂಲಕ ಹಣ ವಸೂಲಿ ಮಾಡಲು ಹೊರಡಿಸಿರುವ ನೋಟಿಸ್ ಪ್ರಶ್ನಿಸಿ ಲಿಡ್ಕರ್ ನಿಗಮ ಅರ್ಜಿ ಸಲ್ಲಿಸಿದ್ದು, ಇನ್ನೂ ವಿಚಾರಣೆಗೆ ನಿಗದಿಯಾಗಬೇಕಾಗಿದೆ.
ಅರ್ಜಿಯಲ್ಲೇನಿದೆ?: ಪರಿಶಿಷ್ಟ ಜಾತಿಯ ಚರ್ಮ ಕುಶಲಕರ್ಮಿಗಳ ಕಲ್ಯಾಣ ಹಾಗೂ ಚರ್ಮ ಕೈಗಾರಿಕೆಯ ಅಭಿವೃದ್ಧಿಗಾಗಿ 1976ರಲ್ಲಿ ಸ್ಥಾಪನೆಯಾದ ಲಿಡ್ಕರ್ ಸಂಸ್ಥೆಯ 2021-22ನೇ ಹಣಕಾಸು ವರ್ಷದ ದಾಖಲೆಗಳ ಆಡಿಟ್ ನಡೆಸಿದ್ದ ವಾಣಿಜ್ಯ ತೆರಿಗೆ ಇಲಾಖೆ 2025ರ ಡಿಸೆಂಬರ್ 18ರಂದು ಅಂತಿಮ ಆದೇಶ ಹೊರಡಿಸಿತ್ತು. ಇದರಲ್ಲಿ ಕೋಟ್ಯಂತರ ರೂಪಾಯಿ ತೆರಿಗೆ ಬಾಕಿ ಪಾವತಿಸುವಂತೆ ಸೂಚಿಸಲಾಗಿತ್ತು. ಆದರೆ, ಈ ಪ್ರಕ್ರಿಯೆಯ ಯಾವುದೇ ನೋಟಿಸ್ಗಳು ಲಿಡ್ಕರ್ ಅಧಿಕಾರಿಗಳ ಗಮನಕ್ಕೆ ಬಾರದ ಹಿನ್ನೆಲೆಯಲ್ಲಿ, ನಿಗಮವು ವಿಚಾರಣೆಯಲ್ಲಿ ಭಾಗವಹಿಸಿರಲಿಲ್ಲ. ಹೀಗಾಗಿ ಇಲಾಖೆಯು ಏಕಪಕ್ಷೀಯವಾಗಿ ಈ ಆದೇಶ ಹೊರಡಿಸಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಅಲ್ಲದೆ, ವಾಣಿಜ್ಯ ಇಲಾಖೆಯು 2,86,69,214 ರೂ. ಮೂಲ ತೆರಿಗೆ, 1,87,13,122 ರೂ. ಬಡ್ಡಿ ಹಾಗೂ 28,86,892 ರೂ. ದಂಡ ಸೇರಿ ಒಟ್ಟು 5,02,69,228 ರುಪಾಯಿಗಳನ್ನು ಪಾವತಿಸಬೇಕು ಎಂದು ಸೂಚನೆ ನೀಡಿದ್ದು, 2026ರ ಏಪ್ರಿಲ್ 21ರಂದು ಲಿಡ್ಕರ್ ಖಾತೆ ಹೊಂದಿರುವ ವಸಂತನಗರದ ಬ್ಯಾಂಕ್ ಆಫ್ ಬರೋಡಾ ಶಾಖೆಯ ಖಾತೆಯಿಂದ ನೇರವಾಗಿ ಹಣ ಮುಟ್ಟುಗೋಲು ಹಾಕಿಕೊಳ್ಳಲು ಮುಂದಾಗಿತ್ತು. ಏಪ್ರಿಲ್ 24ರಂದು ಬ್ಯಾಂಕ್ ವ್ಯವಸ್ಥಾಪಕರು ಈ ಬಗ್ಗೆ ಮಾಹಿತಿ ನೀಡಿದಾಗಲೇ ತಮಗೆ ಇಡೀ ಜಿಎಸ್‌ಟಿ ಆಡಿಟ್ ಮತ್ತು ದಂಡದ ಪ್ರಕ್ರಿಯೆಯ ಗೊತ್ತಾಗಿದೆ. ಆದ್ದರಿಂದ ನೋಟಿಸ್ ರದ್ದುಮಾಡಬೇಕು ಎಂದು ಲಿಡ್ಕರ್ ತನ್ನ ಅರ್ಜಿಯಲ್ಲಿ ತಿಳಿಸಿದೆ.
ಲಿಡ್ಕರ್ ಸಂಪೂರ್ಣವಾಗಿ ರಾಜ್ಯ ಸಾಮಾಜಿಕ ಕಲ್ಯಾಣ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುವ ಸರ್ಕಾರಿ ಸಂಸ್ಥೆಯಾಗಿದ್ದು, ತೆರಿಗೆ ವಂಚಿಸುವ ಯಾವುದೇ ಉದ್ದೇಶ ಹೊಂದಿಲ್ಲ. ಜಿಎಸ್‌ಟಿ ಪೋರ್ಟಲ್ನಲ್ಲಿ ನೋಟಿಸ್ಗಳನ್ನು ಅಪ್ಲೋಡ್ ಮಾಡಲಾಗಿದ್ದರೂ, ಅವು ಅಧಿಕಾರಿಗಳ ಗಮನಕ್ಕೆ ಬಾರದೇ ಹೋಗಿದ್ದರಿಂದ ನಿಗಮಕ್ಕೆ ತನ್ನ ವಾದ ಮಂಡಿಸಲು ಸೂಕ್ತ ಅವಕಾಶ ಸಿಕ್ಕಿಲ್ಲ. ಇಲಾಖೆಯು ಉಲ್ಲೇಖಿಸಿರುವ 'ಇತರ ಆದಾಯ' ವಹಿವಾಟು ವ್ಯತ್ಯಾಸ ಹಾಗೂ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ವಿಚಾರಗಳು ವಿವರವಾದ ದಾಖಲೆಗಳ ಮರುಪರಿಶೀಲನೆಗೆ ಒಳಪಡಬೇಕಾಗಿವೆ. ಈ ಸಂಬಂಧ ಮೇಲ್ಮನವಿ ಸಲ್ಲಿಸುವ ನಿಗದಿತ ಅವಧಿ ಮುಗಿದುಹೋಗಿರುವುದರಿಂದ ಬೇರೆ ದಾರಿಯಿಲ್ಲದೆ ಅರ್ಜಿ ಸಲ್ಲಿಸಲಾಗಿದೆ. ವಾಣಿಜ್ಯ ತೆರಿಗೆ ಇಲಾಖೆ ಹೊರಡಿಸಿರುವ 5.02 ಕೋಟಿಯ ತೆರಿಗೆ ಆದೇಶ ಹಾಗೂ ಬ್ಯಾಂಕ್ ಖಾತೆ ಮುಟ್ಟುಗೋಲು ನೋಟಿಸ್ಗೆ ತಕ್ಷಣವೇ ತಡೆ ನೀಡಬೇಕು. ಅಲ್ಲದೆ, ನಿಗಮದ ಕಲ್ಯಾಣ ಕಾರ್ಯಕ್ರಮಗಳಿಗೆ ತೊಂದರೆಯಾಗದಂತೆ ತಡೆಯಲು, ದಾಖಲೆಗಳನ್ನು ಒದಗಿಸಲು ಮತ್ತೊಮ್ಮೆ ನ್ಯಾಯೋಚಿತ ಅವಕಾಶ ನೀಡಿ, ಹೊಸದಾಗಿ ಮರುವಿಚಾರಣೆ ನಡೆಸಲು ಆದೇಶಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
ಇದನ್ನೂ ಓದಿ: ಸಾರಿಗೆ ನೌಕರರ ಬೇಡಿಕೆ ಈಡೇರಿಕೆ ಕುರಿತು ಜುಲೈ 15ಕ್ಕೆ ಸಭೆ: ನಿಗಮಗಳ ಪರ ವಕೀಲರಿಂದ ಹೈಕೋರ್ಟ್‌ಗೆ ಮಾಹಿತಿ

