ETV Bharat / state

ಬಜೆಟ್ ನಂತರ ಸಿಎಂ ಬದಲಾವಣೆ ವಿಚಾರ ಮಾತಾಡೋಣ: ಸಚಿವ ಸತೀಶ್ ಜಾರಕಿಹೊಳಿ

ಅಧಿಕಾರ ಹಸ್ತಾಂತರದ ಬಗ್ಗೆ ಪಕ್ಷದಲ್ಲಿ ಗೊಂದಲ ಇದ್ದರೆ ಎಲ್ಲಾ ಕಾರ್ಯಕರ್ತರಲ್ಲಿ ಮತ್ತು ಶಾಸಕರಲ್ಲಿ ಗೊಂದಲ ಇರುತ್ತೆ. ಹೈಕಮಾಂಡ್ ಯಾವುದಾದರೂ ಒಂದು ನಿರ್ಧಾರ ತೆಗೆದುಕೊಳ್ಳಬೇಕು ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

SATISH JARKIHOLI
ಸಚಿವ ಸತೀಶ್ ಜಾರಕಿಹೊಳಿ (ETV Bharat)
author img

By ETV Bharat Karnataka Team

Published : March 2, 2026 at 7:34 PM IST

|

Updated : March 2, 2026 at 9:17 PM IST

3 Min Read
Choose ETV Bharat

ದಾವಣಗೆರೆ: ಅಮೆರಿಕ ಏನ್ ಬೇಕಾದ್ರೂ ಮಾಡುತ್ತದೆ, ಯುದ್ಧದಿಂದ ಯಾರಿಗೂ ಒಳಿತಾಗುವುದಿಲ್ಲ, ಲಾಭ ಕೂಡ ಆಗೋದಿಲ್ಲ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದುಬೈನಲ್ಲಿ ಸಾಕಷ್ಟು ಜನ ಕನ್ನಡಿಗರು ಸಿಲುಕಿಕೊಂಡಿದ್ದಾರೆ. ಕರೆತರುವುದು ಸದ್ಯ ಕಷ್ಟ. ಎಲ್ಲಾ ಕಡೆ ಯುದ್ಧ ನಡೆಯುತ್ತಿರುವುದರಿಂದ ವಿಮಾನಗಳ ಹಾರಾಟ ಬಂದ್ ಮಾಡಿದ್ದಾರೆ. ಅಲ್ಲೇ ಕೆಲಸ ಮಾಡುವ ಲಕ್ಷಾಂತರ ಜನರು ಇದ್ದಾರೆ. ಪ್ರವಾಸಿಗರಿಗೆ ಹೋಟೆಲ್​​ನಲ್ಲಿ ಕೆಲವರು ಉಳಿದುಕೊಂಡಿದ್ದಾರೆ. ಇರಾನ್​ನವರು ಎಲ್ಲಿಯವರೆಗೂ ಯುದ್ಧ ಮಾಡ್ತಾರೋ ಅಲ್ಲಿಯವರೆಗೂ ಹೊರ ಬರೋದು ಕಷ್ಟ. ಆದಷ್ಟು ಬೇಗ ವಿಶ್ವಸಂಸ್ಥೆಯವರು ಯುದ್ಧವನ್ನು ನಿಲ್ಲಿಸುವ ಪ್ರಯತ್ನ ಮಾಡಬೇಕು ಎಂದು ತಿಳಿಸಿದರು.

ಸಚಿವ ಸತೀಶ್ ಜಾರಕಿಹೊಳಿ (ETV Bharat)

ಬಜೆಟ್ ಮಂಡನೆಯನ್ನು ಸಿಎಂ ಮಾಡುತ್ತಾರೆ. ಹೊಸ ಯೋಜನೆಗಳ ಬಗ್ಗೆ ಪಟ್ಟಿ ನೀಡಲಾಗಿದೆ. ಪಿಪಿಪಿ ಮಾಡೆಲ್​ ರಸ್ತೆ ಟೆಂಡರ್ ಕರೆಯಲಾಗಿದೆ. ಟ್ರಯಲ್​​ ಆಗಿ ನಾಲ್ಕು ರಸ್ತೆಗಳನ್ನು ತೆಗೆದುಕೊಳ್ಳುತ್ತೇವೆ. ಹೆಚ್ಚು ಟ್ರಾಫಿಕ್ ಇರುವ ನಾಲ್ಕು ವಿಭಾಗದ ಒಂದೊಂದು ರಸ್ತೆ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.

ಕರ್ನಾಟಕ ಕಾಂಗ್ರೆಸ್​ ಉಸ್ತುವಾರಿ ಸುರ್ಜೇವಾಲಾ ಜೊತೆ ಸಾಮಾನ್ಯವಾಗಿ ಸಿಎಂ, ಡಿಸಿಎಂ ಸಭೆಗಳು ಇದ್ದೇ ಇರುತ್ತವೆ. ದಿನ ಫೋನ್​ನಲ್ಲಿ ಇಲ್ಲ, ಮೀಟಿಂಗ್ ನಲ್ಲಿ ಮಾತನಾಡುತ್ತಲೇ ಇರ್ತಾರೆ ಎಂದ ಅವರು, ಸಿಎಂ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸಿ ಬಜೆಟ್​​ ಆಗಬೇಕು ಆಮೇಲೆ ಮಾತಾಡೋಣ. ಸಿದ್ದರಾಮಯ್ಯನವರು ಐದು ವರ್ಷ ಸಿಎಂ ಆಗಿ ಮುಂದುವರೆಯುತ್ತಾರಾ ಎನ್ನುವುದರ ಬಗ್ಗೆ ಹೇಳಲು ನಮ್ಮ ಕಡೆ ಏನೂ ಇಲ್ಲ. ಬಜೆಟ್ ಆದ ಮೇಲೆ ಮಾಡ್ತಾರೋ ಇಲ್ಲ, ಬಜೆಟ್​​ಗಿಂತ ಮೊದಲೇ ಮಾಡುತ್ತಾರೋ ಹೈಕಮಾಂಡ್​​​ಗೆ ಬಿಟ್ಟದ್ದು ಎಂದು ತಿಳಿಸಿದರು.

ಕೆಪಿಸಿಸಿ ಅದ್ಯಕ್ಷ ಸ್ಥಾನದ ಬದಲಾವಣೆ ಏನು ಇಲ್ಲ. ಈ ಗೊಂದಲ ಮೊದಲು ನಿವಾರಣೆಯಾಗಬೇಕಿದೆ. ಪಕ್ಷದಲ್ಲಿ ಗೊಂದಲ ಇದ್ದರೆ ಎಲ್ಲಾ ಕಾರ್ಯಕರ್ತರಲ್ಲಿ, ಶಾಸಕರಲ್ಲಿ ಗೊಂದಲ ಇರುತ್ತೆ. ಹೈಕಮಾಂಡ್ ಯಾವುದಾದರೂ ಒಂದು ನಿರ್ಧಾರ ತೆಗೆದುಕೊಳ್ಳಬೇಕು. ಎಲ್ಲಾ ಹೈಕಮಾಂಡ್ ಮೇಲೆ ಇದೆ, ಇದೆಲ್ಲ ಗೊಂದಲ ನಿಲ್ಲಿಸುವ ಅಸ್ತ್ರ ಅವರ ಬಳಿ ಇದೆ. ಇವರೇ ಮುಂದುವರೆಯುತ್ತಾರೋ ಇಲ್ಲ, ಬೇರೆಯವರು ಆಗುತ್ತಾರೋ ಎನ್ನುವುದನ್ನು ಸ್ಪಷ್ಟಪಡಿಸಲಿ. ಅರ್ಧ ಅಂತ ಇವ್ರು, ಪೂರ್ತಿ ಅಂತ ಅವರು. ಈ ಗೊಂದಲವೇ ಇರೋದಿಲ್ಲ. ಅವರೇ ಸ್ಪಷ್ಟಪಡಿಸಿದರೆ ಒಳ್ಳೆಯದು ಎಂದರು.

ಉಪ ಚುನಾವಣೆ ಟಿಕೆಟ್​​ ವಿಚಾರವಾಗಿ ಮಾತನಾಡಿ, ಹೈಕಮಾಂಡ್​​ ತೀರ್ಮಾನ ಮಾಡುತ್ತಾರೆ. ಅಂತಿಮವಾಗಿ ಸಿಎಂ, ಡಿಸಿಎಂ, ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಬಾಗಲಕೋಟೆ ಉಪ ಚುನಾವಣೆ ಟಿಕೆಟ್ ಅಹಿಂದಗೆ ಕೊಡ್ತಿವಿ, ಅದರಲ್ಲಿ ಏ‌ನು ಗೊಂದಲ ಇಲ್ಲ. ದಾವಣಗೆರೆ ದಕ್ಷಿಣದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯದ ಮತದಾರರು ಇದ್ದಾರೆ. ಅವರು ಟಿಕೆಟ್ ಕೇಳುವುದರಲ್ಲಿ ತಪ್ಪೇನು ಇಲ್ಲ. ಯಾರಿಗೆ ಟಿಕೆಟ್ ಸಿಗುತ್ತದೆಯೋ ಅವರ ಪರ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಒಳ ಮೀಸಲಾತಿ ಜಾರಿ ಕುರಿತು ಪ್ರತಿಕ್ರಿಯಿಸಿ, ಒಳ‌ ಮೀಸಲಾತಿ ವಿಚಾರ ಕೋರ್ಟ್​ನಲ್ಲಿ ಇತ್ಯರ್ಥ ಆಗೋವರೆಗೂ ಯಾರಿಗೆ ಕೇಳಬೇಕು ಹೇಳಿ. 9ನೇ ಶಡ್ಯೂಲ್​​ಗೆ ಸೇರಿಸುವಂತೆ ಬಿಜೆಪಿಯವರು ಕೂಡ ಒತ್ತಾಯಿಸಬೇಕಿದೆ ಎಂದರು.

ಎರಡೂವರೆ ವರ್ಷದಿಂದ ಕಾಂಗ್ರೆಸ್ ಸರ್ಕಾರ ಏನು ಮಾಡಿಲ್ಲ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಮಾತನಾಡಿ, ಕುಮಾರಸ್ವಾಮಿ ಹೇಳಿಕೆಗೆ ನಾವೇನು ಹೇಳೋದು ಹೇಳಿ. ಜನ ತೀರ್ಮಾನ ಮಾಡಬೇಕು, ನಾವು ಕೆಲಸ ಮಾಡಿದ್ದೇವೋ ಇಲ್ವೋ ಅಂತ. ಗ್ಯಾರಂಟಿ ಯೋಜನೆ ಹೊರೆ ಆಗುತ್ತದೆ. 50 ರಿಂದ 60 ಸಾವಿರ ಕೋಟಿ ಅಂದರೆ ಹೊರೆ ಆಗೇ ಆಗುತ್ತದೆ. ಹಾಗಂತ ಸುಮ್ನೆ ಇಲ್ಲ, ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದೇವೆ ಎಂದು ತಿರುಗೇಟು ನೀಡಿದರು.

ಬಿಲ್ ಬಾಕಿ ಬಗ್ಗೆ ಗುತ್ತಿಗೆದಾರರು ಮಾಡುವ ಆರೋಪದ ಬಗ್ಗೆ ಗೊತ್ತಿಲ್ಲ. ಅವರ ಡಿಮ್ಯಾಂಡ್ ಅವರು ಹೇಳುತ್ತಿದ್ದಾರೆ‌. ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡುತ್ತಾರೆ. ಸಿಎಂ ಗಮನಕ್ಕೆ ತಂದರೆ ಸರಿಪಡಿಸುವ ಕೆಲಸ ಮಾಡುತ್ತಾರೆ. ಅವರ ಬಾಕಿ ಹಣ ಬಿಡುಗಡೆ ಮಾಡೇ ಮಾಡುತ್ತಾರೆ ಎಂದು ಸಚಿವ ಜಾರಕಿಹೊಳಿ ತಿಳಿಸಿದರು.

ಇವುಗಳನ್ನೂ ಓದಿ:

Last Updated : March 2, 2026 at 9:17 PM IST