ETV Bharat / state

ಚಿಕ್ಕಮಗಳೂರು: ಬೀರೂರು ಪಟ್ಟಣದಲ್ಲಿ ಚಿರತೆ ಪ್ರತ್ಯಕ್ಷ, ಸೆರೆ ಹಿಡಿಯುವ ಬಗ್ಗೆ ಉಪ ಅರಣ್ಯಾಧಿಕಾರಿ ಭರವಸೆ

ಚಿರತೆ ಬಂದಿರುವುದು ಸಿಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅರಣ್ಯ ಇಲಾಖೆಯವರು ಈಗಾಗಲೇ ಕ್ರಮ ಕೈಗೊಂಡಿದ್ದಾರೆ.

CHIKKAMAGALURU  ಚಿರತೆ  LEOPARD SIGHTED  BIRUR TOWN
ಬೀರೂರು ಪಟ್ಟಣದಲ್ಲಿ ಚಿರತೆ ಪ್ರತ್ಯಕ್ಷ (ETV Bharat)
author img

By ETV Bharat Karnataka Team

Published : January 10, 2026 at 4:13 PM IST

1 Min Read
Choose ETV Bharat

ಚಿಕ್ಕಮಗಳೂರು: ಚಿಕ್ಕಮಗಳೂರು ಮಲೆನಾಡು, ಅರೆ ಮಲೆನಾಡು, ಬಯಲು ಸೀಮೆ ಭಾಗವನ್ನು ಹೊಂದಿರುವ ವಿಶೇಷ ಜಿಲ್ಲೆ. ಮಲೆನಾಡು ಭಾಗದಲ್ಲಿ ಕಾಡಾನೆ ಹಾಗೂ ಕಾಡು ಕೋಣಗಳ ದಾಂಧಲೆ ಹೆಚ್ಚಾಗಿದ್ದರೆ, ಬಯಲುಸೀಮೆ ಭಾಗದಲ್ಲಿ ಚಿರತೆ ಹಾವಳಿಯೂ ಇತ್ತೀಚಿನ ದಿನಗಳಲ್ಲಿ ಅಧಿಕವಾಗಿದೆ.

ಕಡೂರು ತಾಲೂಕಿನ ಹತ್ತಾರು ಹಳ್ಳಿಗಳಲ್ಲಿ ಚಿರತೆಗಳು ಕಾಣಿಸಿಕೊಂಡು ಜನರಿಗೆ ಉಪಟಳ ನೀಡುತ್ತಿದೆ. ಅದರಲ್ಲೂ ತರೀಕೆರೆ ತಾಲೂಕಿನ ಅಜ್ಜಂಪುರದಲ್ಲಿ ಅತಿ ಹೆಚ್ಚು ಚಿರತೆ ಕಾಣಿಸಿಕೊಂಡಿವೆ. ಈಗ ಬೀರೂರು ನಗರಕ್ಕೆ ಈ ಚಿರತೆ ಹೆಜ್ಜೆ ಇಟ್ಟಿದ್ದು, ನಗರ ಪ್ರದೇಶದಲ್ಲಿ ನಾಯಿ ಹಿಡಿಯಲು ಬಂದು ಜನರಲ್ಲಿ ಆತಂಕದ ವಾತಾವರಣ ನಿರ್ಮಾಣ ಮಾಡಿದೆ. ಬೀರೂರು ಪಟ್ಟಣದ ಎಪಿಎಂಸಿ ಪಕ್ಕದಲ್ಲಿರುವ ಪುಟ್ಟಸ್ವಾಮಿ ಎಂಬುವರಿಗೆ ಸೇರಿದ ಕನಕ ಶುದ್ಧ ಕುಡಿಯುವ ನೀರಿನ ಘಟಕದ ಆವರಣಕ್ಕೆ ಬೆಳಗಿನ ಜಾವ ಚಿರತೆ ಬಂದಿರುವುದು ಸಿಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಚಿತ್ರ ನೋಡಿ ಇಡೀ ಏರಿಯಾ ಜನರೇ ರಸ್ತೆಯಲ್ಲಿ ಸಂಚಾರ ಮಾಡುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ.

ಚಿರತೆ ಪ್ರತ್ಯಕ್ಷದ ಸಿಸಿಟಿವಿ ದೃಶ್ಯ (ETV Bharat)

ಈ ವೇಳೆ ಚಿರತೆಯು ಪುಟ್ಟಸ್ವಾಮಿ ಅವರ ಮನೆಯ ಗೇಟ್​ ಒಳಗಿದ್ದ ನಾಯಿಯನ್ನು ಗಮನಿಸಿದೆ. ಚಿರತೆಯನ್ನು ನೋಡಿ ನಾಯಿ ಬೊಗಳ ತೊಡಗಿದ್ದು, ಕೂಡಲೇ ಮನೆಯವರು ಎಚ್ಚರಗೊಂಡು ಸಿಸಿ ಟಿ.ವಿ ವೀಕ್ಷಿಸಿದಾಗ ಚಿರತೆ ಕಾಣಿಸಿದೆ.

"ಈ ಹಿಂದೆ ಇದೇ ಆವರಣದಲ್ಲಿ ಒಂದು ನಾಯಿ, ಒಂದು ಕುರಿ, 5 ಕೋಳಿಗಳನ್ನು ಚಿರತೆ ಬೇಟೆಯಾಡಿತ್ತು. ಆದರೆ ಆಗ ಯಾರೋ ಕದ್ದಿರಬಹುದು ಎಂದು ಸುಮ್ಮನಾಗಿದ್ದೆವು. ಇತ್ತೀಚೆಗೆ ಸಮೀಪದ ನಿಖಿಲ್ ಕಾಂಕ್ರೀಟ್ ಪ್ರಾಡಕ್ಟ್, ಕಾಳಿ ಕಾಂಕ್ರೀಟ್​ ಪ್ರಾಡಕ್ಟ್​ ಸಮೀಪದಲ್ಲಿ ನಾಯಿಯನ್ನು ಚಿರತೆಯೇ ಹೊತ್ತೊಯ್ದಿದೆ. ಸಮೀಪದಲ್ಲಿ ಅಮೃತಮಹಲ್​ ಕಾವಲು, ಜಮೀನು ಇದೆ. ಬ್ಯಾಗಡೆಹಳ್ಳಿ ಗ್ರಾಮದಲ್ಲೂ ಚಿರತೆ ಓಡಾಡಿದ್ದು, ಚಿರತೆ ಓಡಾಡಿರುವಂತಹ ಹೆಜ್ಜೆ ಗುರುತುಗಳು ಸಹ ಮೂಡಿತ್ತು. ಈ ಹಿಂದೆ ಈ ಭಾಗದಲ್ಲಿ ಒಂದು ಚಿರತೆ ಸೆರೆ ಹಿಡಿಯಲಾಗಿತ್ತು. ಅರಣ್ಯ ಇಲಾಖೆ ಅಧಿಕಾರಿಗಳಿಗೆ ಈ ವಿಷಯವಾಗಿ ದೂರು ನೀಡಲಾಗಿದೆ" ಎಂದು ಪುಟ್ಟಸ್ವಾಮಿ ತಿಳಿಸಿದ್ದಾರೆ.

ಉಪ ಅರಣ್ಯಾಧಿಕಾರಿ ಪ್ರತಿಕ್ರಿಯೆ : "ಜನತೆ ಚಿರತೆ ಕಾಣಿಸಿಕೊಂಡ ವಿಷಯವನ್ನು ನಮ್ಮ ಗಮನಕ್ಕೆ ತಂದಿದ್ದು, ಅದರ ಪರಿಶೀಲನೆಗಾಗಿ ಸಿಬ್ಬಂದಿ ಕಳುಹಿಸಲಾಗಿದೆ. ಚಿರತೆಯ ಸೆರೆಗೆ ಬೋನು ಇರಿಸಲಾಗುವುದು" ಎಂದು ಕಡೂರು ವಲಯ ಉಪ ಅರಣ್ಯಾಧಿಕಾರಿ ಎನ್.ಆರ್​. ಹರೀಶ್ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: ಚಾರ್ಮಾಡಿ ಘಾಟ್​ನ ರಸ್ತೆ ಮಧ್ಯೆ ಬಂದು ನಿಂತ ಆನೆ : ಟ್ರಾಫಿಕ್ ಜಾಮ್