ETV Bharat / state

ಸಾಗರದ ನಟ್ಟನಡುವೆ ಕೂರ್ಮಗಡ ಜಾತ್ರೆ: ಕಡಲ ಅಲೆಗಳ ಮೇಲೆ ಭಕ್ತರ ಸವಾರಿ

ಮೀನುಗಾರರು ತಮ್ಮ ಹಂಗಾಮು ಸುಗಮವಾಗಿ ಸಾಗಲಿ ಎಂದು ಸಮುದ್ರ ಮಧ್ಯದ ಈ ದೇವರಿಗೆ ವಿಶೇಷ ನೈವೇದ್ಯ ಅರ್ಪಿಸುತ್ತಾರೆ.

Kurmagada Jatra
ಕೂರ್ಮಗಡ ಜಾತ್ರೆ (ETV Bharat)
author img

By ETV Bharat Karnataka Team

Published : January 4, 2026 at 1:01 PM IST

2 Min Read
Choose ETV Bharat

ಕಾರವಾರ: ಸಾಮಾನ್ಯವಾಗಿ ಜಾತ್ರೆ ಎಂದರೆ ರಥಬೀದಿ, ಜನಜಂಗುಳಿ, ಅಂಗಡಿ ಮುಂಗಟ್ಟುಗಳು ನೆನಪಾಗುತ್ತವೆ. ಆದರೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆಯುವ ಈ ಜಾತ್ರೆ ವಿಭಿನ್ನ. ಇಲ್ಲಿ ದೇವಸ್ಥಾನ ಇರುವುದು ಸಮುದ್ರದ ಮಧ್ಯದ ದ್ವೀಪದಲ್ಲಿ. ಈ ದೈವದ ದರ್ಶನಕ್ಕೆ ಭಕ್ತರು ಕಾಲ್ನಡಿಗೆಯಲ್ಲಿ ಹೋಗುವಂತಿಲ್ಲ. ಬದಲಾಗಿ ಬೋಟ್ ಏರಿ ಸಾಗರವನ್ನು ದಾಟಿಯೇ ಹೋಗಬೇಕು.

ಕಾರವಾರದ ಬೈತಖೋಲ ಬಂದರಿನಿಂದ ಸುಮಾರು 10 ಕಿಲೋ ಮೀಟರ್ ದೂರದಲ್ಲಿರುವ ಕೂರ್ಮಗಡ ದ್ವೀಪದಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ಶ್ರೀ ನರಸಿಂಹ ದೇವರ ಜಾತ್ರಾ ಮಹೋತ್ಸವ ಶನಿವಾರ ಅದ್ದೂರಿಯಾಗಿ ಜರುಗಿತು. ಮೀನುಗಾರಿಕಾ ಬೋಟ್‌ಗಳನ್ನು ತಳಿರು ತೋರಣಗಳಿಂದ ಶೃಂಗರಿಸಿ, ಸಾವಿರಾರು ಭಕ್ತರನ್ನು ದ್ವೀಪಕ್ಕೆ ಕರೆದೊಯ್ಯಲಾಯಿತು. ಕೇವಲ ಕರ್ನಾಟಕ ಮಾತ್ರವಲ್ಲದೆ ನೆರೆರಾಜ್ಯಗಳಿಂದಲೂ ಸಾವಿರಾರು ಪ್ರವಾಸಿಗರು ಆಗಮಿಸಿ ಭಕ್ತಿ ಮತ್ತು ಪ್ರಕೃತಿಯ ಸೌಂದರ್ಯವನ್ನು ಏಕಕಾಲಕ್ಕೆ ಅನುಭವಿಸಿದರು.

ಶ್ರೀ ನರಸಿಂಹ ದೇವರ ಜಾತ್ರಾ ಮಹೋತ್ಸವ (ETV Bharat)

ವಿಶಿಷ್ಟ ಸಂಪ್ರದಾಯಕ್ಕೆ ಸುಮಾರು 150 ವರ್ಷಗಳ ಇತಿಹಾಸವಿದೆ. ಹಿಂದೆ ಹಿಮಾಲಯದಿಂದ ಬಂದ ಸಾಧುವೊಬ್ಬರು ನೀಡಿದ ಸಾಲಿಗ್ರಾಮವನ್ನು ಕಾಳಿ ನದಿ ಮತ್ತು ಅರಬ್ಬಿ ಸಮುದ್ರ ಸಂಗಮವಾಗುವ ಈ ದ್ವೀಪದಲ್ಲಿರಿಸಿ ಪೂಜಿಸಲಾಗುತ್ತಿದೆ. ಇಲ್ಲಿ ನರಸಿಂಹ ದೇವರಿಗೆ ಬಾಳೆಗೊನೆ ಅರ್ಪಿಸುವುದು ಅತ್ಯಂತ ವಿಶೇಷ ಸೇವೆ. ಭಕ್ತರು ಹರಕೆ ಹೊತ್ತರೆ ಇಷ್ಟಾರ್ಥಗಳು ಸಿದ್ಧಿಸುತ್ತವೆ ಎಂಬ ಬಲವಾದ ನಂಬಿಕೆಯಿದೆ. ಮೀನುಗಾರರು ತಮ್ಮ ಹಂಗಾಮು ಸುಗಮವಾಗಿ ಸಾಗಲೆಂದು ಸಮುದ್ರ ಮಧ್ಯದ ಈ ದೇವರಿಗೆ ವಿಶೇಷ ನೈವೇದ್ಯ ಅರ್ಪಿಸುತ್ತಾರೆ.

ಐದು ವರ್ಷಗಳ ಹಿಂದೆ ಸಂಭವಿಸಿದ ದೋಣಿ ದುರಂತದ ಕಹಿ ನೆನಪು ಇಂದಿಗೂ ಮಾಸಿಲ್ಲ. ಹೀಗಾಗಿ, ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಅತ್ಯಂತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿತ್ತು.

Kurmagada Jatra
ಕೂರ್ಮಗಡ ಜಾತ್ರೆ (ETV Bharat)

"ಭಕ್ತರ ಸುರಕ್ಷತೆ ನಮಗೆ ಮುಖ್ಯ. ಪ್ರತಿಯೊಂದು ಬೋಟ್‌ನ ಸಾಮರ್ಥ್ಯ ಮತ್ತು ಲೈಫ್ ಜಾಕೆಟ್‌ಗಳ ಬಳಕೆಯನ್ನು ಕಡ್ಡಾಯವಾಗಿ ಪರಿಶೀಲಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಬಂದೋಬಸ್ತ್ ಮಾಡಲಾಗಿದೆ" ಎಂದು ದೇವರ ದರ್ಶನ ಪಡೆದ ಬಳಿಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಪ್ರತಿಕ್ರಿಯಿಸಿದರು.

Kurmagada Jatra
ಶ್ರೀ ನರಸಿಂಹ ದೇವರ ಜಾತ್ರಾ ಮಹೋತ್ಸವ (ETV Bharat)

ಜಾತ್ರೆಗೆ ಬಂದವರಿಗೆ ಇದು ಕೇವಲ ಧಾರ್ಮಿಕ ಕಾರ್ಯಕ್ರಮವಾಗಿರದೆ, ಒಂದು ಸುಂದರ ಪ್ರವಾಸದ ಅನುಭವವನ್ನೂ ನೀಡುತ್ತದೆ. ಪ್ರತಿ ವರ್ಷವೂ ಜಾತ್ರೆಗೆ ತೆರಳಲೆಂದೇ ರಾಜ್ಯ ಅಂತಾರಾಜ್ಯದಿಂದಲೂ ಪ್ರವಾಸಿಗರು ಆಗಮಿಸುತ್ತಾರೆ. ಮೀನುಗಾರರು ತಮ್ಮ‌ ಬೋಟ್​ಗಳ ಮೂಲಕ ಉಚಿತವಾಗಿ ಕರೆದುಕೊಂಡು ಹೋಗುತ್ತಾರೆ. ದ್ವೀಪದ ಸುತ್ತಲಿನ ನೀಲಿ ಸಾಗರ, ತಣ್ಣನೆಯ ಗಾಳಿ ಮತ್ತು ಐತಿಹಾಸಿಕ ದೇವಾಲಯದ ಆವರಣ ಭಕ್ತರು ಹಾಗೂ ಪ್ರವಾಸಿಗರನ್ನು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಗಮನ ಸೆಳೆಯುತ್ತದೆ.

ಇದನ್ನೂ ಓದಿ: ಸವದತ್ತಿ ಯಲ್ಲಮ್ಮನಗುಡ್ಡದಲ್ಲಿ ಬನದ ಹುಣ್ಣಿಮೆ ಜಾತ್ರೆ ಸಂಭ್ರಮ: ಲಕ್ಷಾಂತರ ಭಕ್ತರ ಸಮಾಗಮ