ಕೃಷ್ಣಾ ನದಿ ಆರ್ಭಟಕ್ಕೆ ಕುಡಚಿ-ಉಗಾರಖುರ್ದ್ ಸೇತುವೆ ಜಲಾವೃತ: ಜಮಖಂಡಿ-ಮೀರಜ್ ಹೆದ್ದಾರಿ ಬಂದ್
ಕುಡಚಿ ಹಾಗೂ ಉಗಾರಖುರ್ದ್ ಮಧ್ಯದ ಸಂಪರ್ಕ ಸೇತುವೆ ಮುಳುಗಡೆಯಾದ ಪರಿಣಾಮ ಜಮಖಂಡಿ-ಮೀರಜ್ ರಾಜ್ಯ ಹೆದ್ದಾರಿಯನ್ನು ಪೊಲೀಸರು ಬಂದ್ ಮಾಡಿದ್ದಾರೆ.

Published : July 9, 2026 at 1:31 PM IST
ಚಿಕ್ಕೋಡಿ (ಬೆಳಗಾವಿ): ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಹಾಗೂ ಕೃಷ್ಣಾ ನದಿ ಪಾತ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ನದಿಯ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗಿದೆ. ಪರಿಣಾಮವಾಗಿ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಕುಡಚಿ ಹಾಗೂ ಉಗಾರಖುರ್ದ್ ಮಧ್ಯೆ ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಡೆಯಾಗಿದ್ದು, ಜಮಖಂಡಿ-ಮೀರಜ್ ರಾಜ್ಯ ಹೆದ್ದಾರಿಯನ್ನು ಪೊಲೀಸರು ಬಂದ್ ಮಾಡಿದ್ದಾರೆ.
ಸದ್ಯ ಕೃಷ್ಣಾ ನದಿಗೆ 1 ಲಕ್ಷ 35 ಸಾವಿರ ಕ್ಯೂಸೆಕ್‌ನಷ್ಟು ಬೃಹತ್ ಪ್ರಮಾಣದ ಒಳಹರಿವು ಇದ್ದು, ನದಿ ಪಾತ್ರದ ಜನರಲ್ಲಿ ಆತಂಕ ಮೂಡಿಸಿದೆ. ಕುಡಚಿ ಹಾಗೂ ಉಗಾರಖುರ್ದ್ ಮಧ್ಯದ ಸೇತುವೆ ಮೇಲೆ ಈಗಾಗಲೇ ಒಂದು ಅಡಿಯಷ್ಟು ನೀರು ಹರಿಯುತ್ತಿದ್ದೆ. ಕರ್ನಾಟಕ ಮತ್ತು ಮಹಾರಾಷ್ಟ್ರಕ್ಕೆ ಪ್ರಮುಖ ಸಂಪರ್ಕ ಕೊಂಡಿಯಾಗಿರುವ ಹಾಗೂ ನಿತ್ಯ ನೂರಾರು ಬಸ್, ವಾಹನಗಳು ಓಡಾಡುವ ಈ ಪ್ರಮುಖ ರಾಜ್ಯ ಹೆದ್ದಾರಿಯಲ್ಲಿ ಅನಾಹುತ ತಪ್ಪಿಸಲು ಇದೀಗ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಂಡಿದೆ. ಕುಡಚಿ ಠಾಣೆ ಪೊಲೀಸರು ತಕ್ಷಣವೇ ಸ್ಥಳಕ್ಕೆ ದೌಡಾಯಿಸಿ ಸೇತುವೆಯ ಬಳಿ ಬ್ಯಾರಿಕೇಡ್‌ಗಳನ್ನು ಅಳವಡಿಸುವ ಮೂಲಕ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಿದ್ದಾರೆ.
ಕುಡಚಿ-ಐನಾಪುರ ಹಾಗೂ ಕುಡಚಿ-ಉಗಾರಖುರ್ದ್ ಸೇತುವೆಗಳು ಜಲಾವೃತಗೊಂಡಿರುವುದರಿಂದ ಸಾರ್ವಜನಿಕರು ಮತ್ತು ಪ್ರಯಾಣಿಕರು ತೀವ್ರ ಪರದಾಡುವಂತಾಗಿದೆ. ಸೇತುವೆ ಬಂದ್ ಆಗಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರವನ್ನು ಸಂಪರ್ಕಿಸಲು ವಾಹನ ಸವಾರರು ಸುಮಾರು 50 ಕಿಲೋಮೀಟರ್‌ಗಳಷ್ಟು ಸುತ್ತುವರೆದು ಪ್ರಯಾಣಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಪ್ರಯಾಣಿಕರು ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ, ಮೀರಜ್ ತಲುಪಲು ಇದೀಗ ದರೂರ ಹಾಗೂ ಅಂಕಲಿ ಮಾರ್ಗದ ರಸ್ತೆಗಳನ್ನು ಅವಲಂಬಿಸಬೇಕಾಗಿದೆ. ಕೃಷ್ಣೆಯ ಆರ್ಭಟ ಹೆಚ್ಚಾಗುತ್ತಿರುವ ಕಾರಣ ಗಡಿ ಭಾಗದ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಆಡಳಿತ ಮಂಡಳಿ ಹೈಅಲರ್ಟ್ ಘೋಷಿಸಿದೆ.
ಜಿಲ್ಲೆಯ ನದಿಗಳು ಭರ್ತಿ: ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿನ ವರುಣಾರ್ಭಟದಿಂದ ಕೃಷ್ಣಾ, ದೂಧಗಂಗಾ, ವೇದಗಂಗಾ ಹಾಗೂ ಘಟಪ್ರಭಾ ನದಿಗಳು ಮೈದುಂಬಿ ಹರಿಯುತ್ತಿವೆ. ಪರಿಣಾಮ ಕೆಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ.
ಇನ್ನು ಎರಡು ದಿನಗಳ ಹಿಂದಷ್ಟೇ ಚಿಕ್ಕೋಡಿ ತಾಲೂಕಿನ ಮಲ್ಲಿಕವಾಡ ಬಳಿ ದೂಧಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಮಲ್ಲಿಕವಾಡ-ದತ್ತವಾಡ ಸಂಪರ್ಕಿಸುವ ಸೇತುವೆ ಸಂಪೂರ್ಣವಾಗಿ ಮುಳುಗಡೆಯಾಗಿತ್ತು. ದೂಧಗಂಗಾ, ವೇದಗಂಗಾ, ಕೃಷ್ಣಾ ಮತ್ತು ಘಟಪ್ರಭಾ ನದಿಗಳ ಅಬ್ಬರಕ್ಕೆ ಜಿಲ್ಲೆಯ ಹಲವು ಕೆಳಹಂತದ ಸೇತುವೆಗಳ ಮೇಲೆ ನೀರು ಹರಿದು, ವಾಹನ ಸಂಚಾರ ಕಡಿತಗೊಂಡಿತ್ತು.
ಹಾಗೆಯೇ ನಿಪ್ಪಾಣಿ ತಾಲೂಕಿನಲ್ಲೂ ಜಲಕಂಟಕ ಎದುರಾಗಿದ್ದು, ದೂಧಗಂಗಾ ಹಾಗೂ ವೇದಗಂಗಾ ನದಿಗಳು ಪ್ರವಾಹದ ಭೀತಿ ಹೆಚ್ಚಿಸಿವೆ. ನೀರಿನ ಹರಿವು ಹೆಚ್ಚಾದ ಪರಿಣಾಮ ತಾಲೂಕಿನ ಕೆಲವೆಡೆ ಪ್ರಮುಖ ಸಂಪರ್ಕ ಸೇತುವೆಗಳು ಜಲಾವೃತಗೊಂಡಿದ್ದವು.
ಇದನ್ನೂ ಓದಿ:

