ಟಾರ್ಗೆಟ್ IPL: ಚಿನ್ನಸ್ವಾಮಿ ಕ್ರೀಡಾಂಗಣದ ನವೀಕರಣ ಕೆಲಸ ಶುರು
ಐಪಿಎಲ್ 19ನೇ ಆವೃತ್ತಿ ಸಮೀಪಿಸುತ್ತಿದೆ. ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೆಲವು ನವೀಕರಣ ಕೆಲಸಗಳನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ) ಕೈಗೆತ್ತಿಕೊಂಡಿದೆ.

Published : January 9, 2026 at 1:25 PM IST
ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್(IPL)ನ 19ನೇ ಆವೃತ್ತಿ ಸಮೀಪಿಸುತ್ತಿದ್ದು, ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೆಲವು ನವೀಕರಣ ಕಾರ್ಯಗಳನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಕೈಗೆತ್ತಿಕೊಂಡಿದೆ. ಕಾಲ್ತುಳಿತ ದುರಂತದ ಬಳಿಕ ನ್ಯಾಯಮೂರ್ತಿ ಜಾನ್ ಮೈಕೆಲ್ ಡಿ ಕುನ್ಹಾ ನೇತೃತ್ವದ ಸಮಿತಿಯ ವರದಿ ಸೂಚಿಸಿರುವಂತೆ ಅಗತ್ಯ ಮಾರ್ಪಾಡುಗಳನ್ನು ಅನುಷ್ಠಾನಗೊಳಿಸಲು ಮುಂದಾಗಿರುವ ಕೆಎಸ್‌ಸಿಎ, ಪ್ರವೇಶ ಹಾಗೂ ನಿರ್ಗಮನ ದ್ವಾರಗಳನ್ನು ಮತ್ತಷ್ಟು ಅಗಲಗೊಳಿಸುವ ಕಾರ್ಯಾರಂಭಿಸಿದೆ.
ಆಯೋಗದ ಸೂಚನೆಯಂತೆ ನವೀಕರಣ ಕೆಲಸ ಶುರುವಾಗಿದ್ದು, ಫೆಬ್ರವರಿ ಮೊದಲ ಅಥವಾ ಎರಡನೇ ವಾರದೊಳಗೆ ಪೂರ್ಣಗೊಳಿಸುವ ಗುರಿ ಇದೆ. ಮಾರ್ಚ್ 26ರಿಂದ ಐಪಿಎಲ್ ಪಂದ್ಯಗಳು ಆರಂಭವಾಗಲಿರುವುದರಿಂದ, ಅದಕ್ಕೂ ಮುನ್ನ ಸಂಬಂಧಪಟ್ಟ ಇಲಾಖೆಗಳು ಪರಿಶೀಲನೆ ನಡೆಸಲು ಅಗತ್ಯವಿರುವ ಕೆಲಸಗಳನ್ನು ಮಾಡಲಾಗುತ್ತಿದೆ ಎಂದು ಕೆಎಸ್‌ಸಿಎ ಮೂಲಗಳು ತಿಳಿಸಿವೆ.
ಜೂನ್ 4ರಂದು ಆರ್‌ಸಿಬಿ ತಂಡದ ಆಟಗಾರರ ಸಂಭ್ರಮಾಚರಣೆ ಸಂದರ್ಭದಲ್ಲಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಜನ ಸಾವನ್ನಪ್ಪಿದ್ದರು. ಬಳಿಕ ಕ್ರೀಡಾಂಗಣದಲ್ಲಿ ಪಂದ್ಯಗಳ ಆಯೋಜನೆಗಿರುವ ಸುರಕ್ಷತಾ ಅಪಾಯಗಳನ್ನು ಉಲ್ಲೇಖಿಸಿ ರಾಜ್ಯ ಸರ್ಕಾರ ಅನುಮತಿ ನಿರಾಕರಿಸಿತ್ತು.
ಕ್ರೀಡಾಂಗಣವನ್ನು ಪರಿಶೀಲನೆ ನಡೆಸಿದ್ದ ನ್ಯಾಯಮೂರ್ತಿ ಜಾನ್ ಮೈಕೆಲ್ ಡಿ ಕುನ್ಹಾ ಅವರ ನೇತೃತ್ವದ ಸಮಿತಿ,
- 32 ಸಾವಿರ ಪ್ರೇಕ್ಷಕರ ಸಾಮರ್ಥ್ಯ ಹೊಂದಿರುವ ಕ್ರೀಡಾಂಗಣದ ಸುತ್ತಮುತ್ತ ಸೂಕ್ತ ಪಾರ್ಕಿಂಗ್, ಪಿಕ್ ಆ್ಯಂಡ್ ಡ್ರಾಪ್ ವ್ಯವಸ್ಥೆ ಏರ್ಪಡಿಸಬೇಕು.
- ಕ್ರೀಡಾಂಗಣದ ಪ್ರವೇಶ ದ್ವಾರಗಳು ಪಾದಚಾರಿ ಮಾರ್ಗಗಳ ಪಕ್ಕದಲ್ಲಿಯೇ ಇರುವುದರಿಂದ ಪ್ರೇಕ್ಷಕರು ಸರತಿ ಸಾಲಿನಲ್ಲಿ ನಿಂತುಕೊಳ್ಳಲು ಕ್ರೀಡಾಂಗಣದ ಸ್ವತ್ತಿನಲ್ಲಿಯೇ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಬೇಕು.
- ಕಿರಿದಾದ ಪ್ರವೇಶ ದ್ವಾರಗಳನ್ನು ಕನಿಷ್ಠ ಆರು ಅಡಿ ಅಗಲಗೊಳಿಸಿ, ಮೆಟ್ಟಿಲುಗಳನ್ನು ಸರಿಪಡಿಸುವ ಮೂಲಕ ಆಗಮನ ಹಾಗೂ ನಿರ್ಗಮನ ವ್ಯವಸ್ಥೆ ಸುಲಭಗೊಳಿಸಬೇಕು.
- ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸಿದ ಸಂದರ್ಭದಲ್ಲಿ ಮಹಿಳೆಯರು, ಮಕ್ಕಳ ಪ್ರವೇಶ ಹಾಗೂ ನಿರ್ಗಮನಕ್ಕೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಬೇಕು.
- ತುರ್ತು ಪರಿಸ್ಥಿತಿ ನಿರ್ವಹಣೆಗಾಗಿ ಆಂಬ್ಯುಲೆನ್ಸ್, ವೈದ್ಯಕೀಯ ನೆರವು ಖಚಿತಪಡಿಸಿಕೊಳ್ಳಲು ಪ್ರತ್ಯೇಕ ಮಾರ್ಗ, ವೈದ್ಯಕೀಯ ತಂಡಗಳಿಗೆ ಶಾಶ್ವತ ವ್ಯವಸ್ಥೆ ಕಲ್ಪಿಸಬೇಕು.
- ಅಗ್ನಿಶಾಮಕ ದಳ, ವಿದ್ಯುತ್ ಇಲಾಖೆಯಿಂದ ಆಡಿಟ್ ಮಾಡಿಸಿ ವರದಿ ಪಡೆಯಬೇಕು.
- ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಐಡಿ ಪರಿಶೀಲನೆ, ಬಾಂಬ್ ನಿಷ್ಕ್ರೀಯ ದಳ, ಮೆಟಲ್ ಡಿಟೆಕ್ಟರ್ ಅಳವಡಿಸಿ ತರಬೇತಿ ಪಡೆದಿರುವ ನುರಿತ ಸಿಬ್ಬಂದಿಗಳನ್ನು ನೇಮಿಸಬೇಕು.
- ಆಟಗಾರರಿಗೆ ಪ್ರತ್ಯೇಕವಾಗಿ ಪ್ರವೇಶ ಮತ್ತು ನಿರ್ಗಮನ ಮಾರ್ಗಗಳನ್ನು ಕಾಯ್ದಿರಿಸಬೇಕು.
- ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಪ್ರೇಕ್ಷಕರಿಗೆ ಅಂತಾರಾಷ್ಟ್ರೀಯ ಮಾನದಂಡಗಳ ಆಧಾರದಲ್ಲಿ ಪ್ರತ್ಯೇಕ ಸುರಕ್ಷತಾ ಸ್ಥಳ ಸಿದ್ಧಪಡಿಸಬೇಕು.
- ಪ್ರವೇಶ ದ್ವಾರಗಳ ಬಳಿ ಬ್ಯಾಗೇಜ್ ಸ್ಕ್ಯಾನರ್ಸ್, ಸಿಸಿಟಿವಿ ಕಣ್ಗಾವಲು, ದೀರ್ಘಾವಧಿ ಸ್ಟೋರೇಜ್ ವ್ಯವಸ್ಥೆ ಕಲ್ಪಿಸಬೇಕು.
- ಕ್ರೀಡಾಂಗಣದ ಸಿಬ್ಬಂದಿ, ಭದ್ರತಾ ಸಿಬ್ಬಂದಿ, ಮಳಿಗೆಗಳನ್ನು ಇರಿಸುವವರ ಬಗ್ಗೆ ಪೊಲೀಸ್ ವೆರಿಫಿಕೇಶನ್ ಸರ್ಟಿಫಿಕೇಟ್ ಜೊತೆ ಸೆಕ್ಯೂರಿಟಿ ಏಜೆನ್ಸಿಗಳ ಲೈಸೆನ್ಸ್ ಪಡೆಯಬೇಕು.
- ಪಂದ್ಯದ ವೇಳೆ ಒಳಗಡೆ ಮಾರಾಟ ಮಾಡುವ ತಿಂಡಿ, ತಿನಿಸುಗಳ ಪರಿಶೀಲನೆಗೆ ನಿರ್ದಿಷ್ಟ ಮಾನದಂಡ ನಿಗದಿಪಡಿಸಬೇಕು.
- ಸಾರ್ವಜನಿಕ ಸಾರಿಗೆ ವ್ಯವಸ್ಥೆ ಮೂಲಕ ಬರುವ ಪ್ರೇಕ್ಷಕರ ಪ್ರವೇಶ ಮತ್ತು ನಿರ್ಗಮನಕ್ಕೆ ಸರಿಯಾದ ವ್ಯವಸ್ಥೆ ಕಲ್ಪಿಸಬೇಕು.
- ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿ ಗುಂಪು ನಿರ್ವಹಣೆ & ಮೂಲಭೂತ ಸೌಕರ್ಯಗಳ ವ್ಯವಸ್ಥೆ ಮಾಡಬೇಕು.
- ಪ್ರೇಕ್ಷಕರ ಪ್ರವೇಶ ಸಂಖ್ಯೆ ನಿಖರತೆಗಾಗಿ ನೈಜ ಸಮಯದ ಜನಸಂದಣಿ ಹರಿವಿನ ಮೇಲ್ವಿಚಾರಣಾ ವ್ಯವಸ್ಥೆ(Real Time Crowd Flow Monitoring System) ಜಾರಿಗೊಳಿಸಬೇಕು.
- ಟಿಕೆಟ್ ವಿತರಣೆ, ಮಾರಾಟ, ಕಾಯಲು ಪ್ರತ್ಯೇಕ ಸ್ಥಳಗಳ ವ್ಯವಸ್ಥೆ ಮಾಡಬೇಕು ಎಂಬುದೂ ಸೇರಿದಂತೆ ಕೆಲವು ಪ್ರಮುಖ ಅಗತ್ಯ ನಿರ್ದೇಶನಗಳನ್ನು ನೀಡಿತ್ತು.
ಇವುಗಳನ್ನೂ ಓದಿ:

