ETV Bharat / state

ಪ್ರಲ್ಹಾದ್​ ಜೋಶಿಯವರು ಕುಮಾರಸ್ವಾಮಿ ಅವರನ್ನು ಹರಕೆ ಕುರಿ ಮಾಡುತ್ತಿದ್ದಾರೆ: ಬಿ.ಕೆ. ಹರಿಪ್ರಸಾದ್

ಪ್ರಲ್ಹಾದ್​ ಜೋಶಿ ಅವರ ಪಕ್ಷ ಕಾಂಗ್ರೆಸ್ ಪಕ್ಷವನ್ನು ನೇರವಾಗಿ ಎದುರಿಸಲು ಸಾಧ್ಯವಿಲ್ಲ. ಅದಕ್ಕಾಗಿ ಕುಮಾರಸ್ವಾಮಿ ಬೆಂಬಲ ಪಡೆದು ದಾಳವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಟೀಕಿಸಿದರು.

B K HARIPRASAD
ಬಿ.ಕೆ.ಹರಿಪ್ರಸಾದ್ (ETV Bharat)
author img

By ETV Bharat Karnataka Team

Published : July 6, 2026 at 4:57 PM IST

4 Min Read
Choose ETV Bharat

ಬೆಂಗಳೂರು: ಕುಮಾರಸ್ವಾಮಿ ಅವರನ್ನು ದಾಳವಾಗಿ ಬಳಸಿಕೊಳ್ಳುತ್ತಿರುವ ಮಹಾನ್ ನಾಯಕ ಪ್ರಲ್ಹಾದ್​ ಜೋಶಿ ಅವರು ಕುಮಾರಸ್ವಾಮಿ ಅವರನ್ನು ಹರಕೆ ಕುರಿ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಆರೋಪಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಕರ್ನಾಟಕ ರಾಜ್ಯದ ಮಹಾನ್ ನಾಯಕ ಪ್ರಲ್ಹಾದ್​​ ಜೋಶಿ ಹಾಗೂ ಕುಮಾರಸ್ವಾಮಿ ಅವರು ಚುನಾವಣಾ ಆಯೋಗಕ್ಕೆ ಹೋಗಿ ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ ಎಂಬುದನ್ನು ಮಾಧ್ಯಮಗಳಲ್ಲಿ ನೋಡಿದೆ. ಎರಡು ಬಾರಿ ರಾಜ್ಯದ ಸಿಎಂ ಆಗಿದ್ದ ಕುಮಾರಸ್ವಾಮಿ ಅವರು ಈ ಹಿಂದೆ ಪ್ರಲ್ಹಾದ್​ ಜೋಶಿ ಅವರ ಬಗ್ಗೆ ಏನು ಹೇಳಿದ್ದರು ಎಂದು ನಾನು ಮತ್ತೆ ಹೇಳುವ ಅಗತ್ಯವಿಲ್ಲ. ಕುಮಾರಸ್ವಾಮಿ ಅವರಿಗೆ ಯಾಕೆ ಈ ಪರಿಸ್ಥಿತಿ ಬಂತು ಅನ್ನೋದು ನನಗೆ ತಿಳಿಯುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ (ETV Bharat)

ಕುಮಾರಸ್ವಾಮಿ ಅವರನ್ನು ದಾಳವಾಗಿ ಬಳಸಿಕೊಳ್ಳುತ್ತಿರುವ ಮಹಾನ್ ನಾಯಕ ಪ್ರಲ್ಹಾದ್​ ಜೋಶಿ ಅವರು ಕುಮಾರಸ್ವಾಮಿ ಅವರನ್ನು ಹರಕೆ ಕುರಿ ಮಾಡುತ್ತಿದ್ದಾರೆ. ಇಡೀ ದೇಶದಲ್ಲಿ ಶಿವಸೇನಾ, ಅಕಾಲಿ ದಳ, ಟಿಎಂಸಿ, ಜೆಡಿಯು ಸೇರಿದಂತೆ ಎಲ್ಲಾ ಪಕ್ಷಗಳನ್ನು ವಿಭಜಿಸಿ ಬೇಳೆ ಬೇಯಿಸಿಕೊಂಡಿರುವ ಬಿಜೆಪಿ ಈಗ ಕರ್ನಾಟಕದಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದೆ. ಪ್ರಲ್ಹಾದ್​ ಜೋಶಿ ಅವರ ಪಕ್ಷ ಕಾಂಗ್ರೆಸ್ ಪಕ್ಷವನ್ನು ನೇರವಾಗಿ ಎದುರಿಸಲು ಸಾಧ್ಯವಿಲ್ಲ. ಅದಕ್ಕಾಗಿ ಕುಮಾರಸ್ವಾಮಿ ಬೆಂಬಲ ಪಡೆದು ದಾಳವಾಗಿ ಬಳಸಿಕೊಳ್ಳುತ್ತಿದ್ದಾರೆ. ಕುಮಾರಸ್ವಾಮಿ ಅವರು ಯಾಕೆ ಅವರ ದಾಳವಾಗಿದ್ದಾರೆ ಎಂಬುದು ತಿಳಿಯುತ್ತಿಲ್ಲ. ಕರ್ನಾಟಕ ರಾಜ್ಯದಲ್ಲಿ 5.65 ಲಕ್ಷ ಮತದಾರರ ಮ್ಯಾಪಿಂಗ್ ಆಗಿದ್ದು, 50 ಲಕ್ಷ ಜನರನ್ನು ಕೈಬಿಡಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.

ರಾಮನಗರದ ಮಸೀದಿಯಲ್ಲಿ, ಕಾಂಗ್ರೆಸ್ ನಾಯಕರ ಮನೆಯಲ್ಲಿ ಗಣತಿ ನಮೂನೆ ತುಂಬಲಾಗುತ್ತಿದೆ ಎಂದು ಕುಮಾರಸ್ವಾಮಿ ಅವರು ಆರೋಪಿಸಿದ್ದಾರೆ. ಈ ಪ್ರಕ್ರಿಯೆಯಲ್ಲಿ ಲೋಪದೋಷವಾದರೆ ಅದನ್ನು ಚುನಾವಣಾ ಆಯೋಗ ನೋಡುತ್ತದೆ. ಬಿಜೆಪಿ ಪರವಾಗಿ ಆರ್​​ಎಸ್ಎಸ್​​ನವರು ಸತ್ತವರ ಪರವಾಗಿ ಮತ ಹಾಕಿರುವುದನ್ನು ನಾವು ಸಾಕಷ್ಟು ಬಾರಿ ನೋಡಿದ್ದೇವೆ. ಇದರಲ್ಲಿ ಬಿಜೆಪಿಯವರು ಡಾಕ್ಟರೇಟ್ ಮಾಡಿದ್ದಾರೆ. ನಾವು ಎಂದಿಗೂ ಅಕ್ರಮವಾಗಿ ಚುನಾವಣೆ ಗೆಲ್ಲುವ, ಸರ್ಕಾರ ರಚಿಸುವ ಪ್ರಯತ್ನ ಮಾಡಿಲ್ಲ. ರಾಮನಗರ ಉಪಚುನಾವಣೆಯಲ್ಲಿ ಅನಿತಾ ಕುಮಾರಸ್ವಾಮಿ ಅವರು 1 ಲಕ್ಷ ಮತಗಳ ಅಂತರದಲ್ಲಿ ಗೆದ್ದಾಗ ರಾಮನಗರದಲ್ಲಿ ಬಾಂಗ್ಲಾದೇಶದವರು ಇರಲಿಲ್ಲವೇ ಎಂದು ಹರಿಪ್ರಸಾದ್​ ಪ್ರಶ್ನಿಸಿದರು.

ಪ್ರಲ್ಹಾದ್​ ಜೋಶಿ ಅವರು ರಾಜ್ಯದ ಅಭಿವೃದ್ಧಿ, ಸಂಸ್ಕೃತಿ ಬಗ್ಗೆ ಸಂಸತ್ತಿನಲ್ಲಿ ಎಷ್ಟು ಮಾತನಾಡಿದ್ದಾರೆ. ರಾಜ್ಯಕ್ಕೆ ಎಷ್ಟು ಅನುದಾನ ತಂದಿದ್ದಾರೆ ಎಂದು ಹೇಳಬೇಕು. ಚುನಾವಣೆಗೂ ಮುನ್ನ ಮಹದಾಯಿ ಯೋಜನೆ ಜಾರಿಯಾಗೇ ಬಿಟ್ಟುತು ಎಂದು ಸಂಭ್ರಮಾಚರಣೆ ಮಾಡಿದ್ದೇ ಮಾಡಿದ್ದು, ಇನ್ನು ಪರಿಸರ ಇಲಾಖೆ ಅನುಮತಿ ತರಲು ಅವರಿಂದ ಸಾಧ್ಯವಾಗುತ್ತಿಲ್ಲ. ಹೀಗಾಗಿ ಇಲ್ಲಸಲ್ಲದ ಆರೋಪ ಮಾಡುವ ಬದಲು ನೈಜ್ಯ ಪರಿಸ್ಥಿತಿ ಅರಿತು ಮಾತನಾಡಬೇಕು ಎಂದರು.

ಚುನಾವಣೆ ಪ್ರಕ್ರಿಯೆ, ಮತಪಟ್ಟಿ ರಚನೆ ಹೇಗೆ ಮಾಡಬೇಕು ಎಂದು ಸಂವಿಧಾನದ ವಿವಿಧ ಪರಿಚ್ಛೇಧದಲ್ಲಿ ತಿಳಿಸಲಾಗಿದೆ. ಇವರು ಮೊದಲು ಸಿಎಎ ಹುನ್ನಾರ ಮಾಡಿದರು. ಎನ್ಆರ್​​ಸಿ ಮಾಡಿದರು. ಅನೇಕ ಬಾಂಗ್ಲಾ ಅಕ್ರಮ ವಲಸಿಗರಿದ್ದಾರೆ ಎಂದು ಅಸ್ಸಾಂನಲ್ಲಿ ದೊಡ್ಡ ಪಟ್ಟಿ ಬಿಡುಗಡೆ ಮಾಡಿದರು. ಕೊನೆಗೆ 23 ಸಾವಿರ ಅಕ್ರಮ ಬಾಂಗ್ಲಾ ವಲಸಿಗರು ಸಿಗಲಿಲ್ಲ. ಈಗ ಸಿಎಎ ಹಾಗೂ ಎನ್ಆರ್​​ಸಿ ಬಿಟ್ಟು ಎಸ್ಐಆರ್ ತೆಗೆದುಕೊಂಡಿದ್ದಾರೆ. ಬಂಗಾಳದಲ್ಲಿ 91 ಲಕ್ಷ ಮತಗಳನ್ನು ಮತಪಟ್ಟಿಯಿಂದ ಕೈಬಿಡಲಾಗಿದ್ದು, 27 ಲಕ್ಷ ಜನರ ಸ್ಪಷ್ಟತೆ ಇಲ್ಲವಾಗಿದೆ. ಈ 27 ಲಕ್ಷ ಜನರಿಗೆ ಮತದಾನ ಮಾಡಲು ಅವಕಾಶ ನೀಡದಿರುವುದು ಪ್ರಜಾಪ್ರಭುತ್ವದ ಆಶಯ ವಿರುದ್ಧವಾಗಿದೆ ಎಂದು ಟೀಕಿಸಿದರು.

ಕಾಂಗ್ರೆಸ್ ಪಕ್ಷ 2 ಕ್ಷೇತ್ರಗಳಲ್ಲಿ ಗೆದ್ದಿದ್ದು, ಎರಡೂ ಕ್ಷೇತ್ರಗಳು ಅಲ್ಪಸಂಖ್ಯಾತ ಮತದಾರರ ಕ್ಷೇತ್ರವಾಗಿದೆ. ಆ ಇಬ್ಬರು ಶಾಸಕರ ಹೆಸರೇ ಮತಪಟ್ಟಿಯಿಂದ ಹೆಸರು ಕೈಬಿಡಲಾಗಿತ್ತು. ನೇರವಾಗಿ ಜನರಿಂದ ಬಹುಮತ ಪಡೆಯಲು ಸಾಧ್ಯವಿಲ್ಲ ಎಂದು ನರೇಂದ್ರ ಮೋದಿ, ಅಮಿತ್ ಶಾ ಅವರು ಈ ಷಡ್ಯಂತ್ರ ಮಾಡಿ ಸಂವಿಧಾನ ಬುಡಮೇಲು ಮಾಡುತ್ತಿದ್ದಾರೆ. ಹೀಗಾಗಿ ನಾವು ಸಂವಿಧಾನ ಕಾಪಾಡಿಕೊಳ್ಳಬೇಕು. ಚುನಾವಣಾ ಆಯೋಗದ ಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿ ಗಣತಿ ನಮೂನೆ ಅರ್ಜಿ ತುಂಬಬಹುದು. ಬೆಂಗಳೂರಿನ ಮಹಾಲಕ್ಷ್ಮಿ ಬಡಾವಣೆಯಲ್ಲಿ ಬಿಜೆಪಿ ಬಿಎಲ್ಎಗಳು ಬಿಎಲ್​ಒಗಳ ಜೊತೆ ಹೋಗಿ ನೀವು ಬಿಜೆಪಿಯವರಿಗೆ ಮತ ಹಾಕಬೇಕು ಎಂದು ಹೇಳುತ್ತಿದ್ದಾರೆ. ಸದಾಶಿವನಗರದಲ್ಲಿ ಬಲವಂತವಾಗಿ ಸೇರಿಸಲಾಗುತ್ತಿದೆ. ಜಯನಗರದಲ್ಲಿ ಧಮ್ಕಿ ಹಾಕಲಾಗುತ್ತಿದೆ ಎಂದು ಆರೋಪಿಸಿದರು.

ಕೊಳಗೇರಿ ಪ್ರದೇಶಕ್ಕೆ ಹೋಗಲು ಸಾಧ್ಯವಿಲ್ಲ ಎಂದು ಬಿಎಲ್​ಒಗಳು ಹೇಳಿದ ಹಿನ್ನೆಲೆಯಲ್ಲಿ ಕಾನೂನುಬದ್ಧವಾಗಿ ಸಮುದಾಯ ಭವನ, ಮಸೀದಿ, ದೇವಾಲಯಗಳಲ್ಲಿ ಗಣತಿ ನಮೂನೆ ತುಂಬಲಾಗುತ್ತಿದೆ. ಈ ಅರ್ಜಿ ತುಂಬಿದ ಬಳಿಕ ಪ್ರಕ್ರಿಯೆಯೂ ಸವಾಲಿನದ್ದಾಗಿದೆ. ಅನಕ್ಷರಸ್ಥರು, ಬಡವರು ಇದನ್ನು ಮಾಡಲು ಹೇಗೆ ಸಾಧ್ಯ? ಹೀಗಾಗಿ ಈ ಪ್ರಕ್ರಿಯೆ ಸುಗಮವಾಗಲಿ ಎಂದು ಈ ರೀತಿ ಮಾಡಲಾಗಿದೆ. ಎರಡು ಮೂರು ಕಡೆ ಮತದಾನದ ಮಾಡುವ ಅವಕಾಶವಿರುವವರು, ನಕಲಿ ಮತದಾರರನ್ನು, ಮೃತಪಟ್ಟಿರುವವರನ್ನು ಕಿತ್ತೊಗೆಯಿರಿ ಎಂದು ನಾವು ಆಗ್ರಹಿಸುತ್ತೇವೆ. ನಮ್ಮ ಕಾಳಜಿ ಇರುವುದು ನೈಜ ಮತದಾರರು ಮತದಾನದ ಹಕ್ಕು ಕಳೆದುಕೊಳ್ಳುವಂತಾಗಬಾರದು ಎಂದರು.

ಈ ದೇಶದಲ್ಲಿ ನೆಲೆಸಿರುವವರೆಲ್ಲರೂ ಭಾರತೀಯರು ಎಂದು ನಿತೀನ್ ಗಡ್ಕರಿ ಅವರೇ ಹೇಳಿದ್ದಾರೆ. ಅವರಿಂದ ಸ್ವಲ್ಪವಾದರೂ ಬುದ್ಧಿ ಕಲಿಯಲಿ ಎಂದು ನಾನು ಪ್ರಲ್ಹಾದ್ ಜೋಶಿ ಅವರಿಗೆ ಹೇಳುವೆ. ಬಿಜೆಪಿಯಲ್ಲಿ ಈ ದ್ವಂದ್ವ ನೀತಿ ಯಾಕೆ?, ನಾವು ನಿರಂತರವಾಗಿ ಕಳೆದ 1 ವರ್ಷದಿಂದ ಬಿಎಲ್ಎ2 ನೇಮಕ ಮಾಡುತ್ತಿದ್ದು, ಅವರ ಗಣತಿ ನಮೂನೆ ಸಿಕ್ಕಿದೆಯೇ ಇಲ್ಲವೇ?, ಸರಿಯಾಗಿ ತುಂಬಲಾಗಿದೆಯೇ ಇಲ್ಲವೇ, ಅವುಗಳನ್ನು ಆಯೋಗದ ಅಧಿಕಾರಿಗಳಿಗೆ ತಲುಪಿಸುವುದು ಬಿಎಲ್ಎ2ಗಳ ಕೆಲಸ. ಇದು ಅವರಿಂದ ಸಾಧ್ಯವಾಗುತ್ತಿಲ್ಲ. ಹೀಗಾಗಿ ಕುಣಿಯಲಾಗದವರು ನೆಲ ಡೊಂಕು ಎಂಬಂತೆ ಇವರು ವರ್ತಿಸುತ್ತಿದ್ದಾರೆ. ಅವರ ಪಕ್ಷದಲ್ಲೇ ಬಹಳ ಗೊಂದಲವಿದ್ದು, ನಮ್ಮ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ವಿಧಾನ ಪರಿಷತ್ ಚುನಾವಣೆ ನಂತರ ಅವರ ನಡತೆ, ಮುಖ, ಯೋಚನೆ ಬೇರೆಯದೇ ಆಗಿದೆ. ಅಯೋಧ್ಯೆ ಲೂಟಿ ಇದಕ್ಕೆ ಸಾಕ್ಷಿ. ಯಾವುದೇ ಅರ್ಹ ಮತದಾರರನ್ನು ಮತಪಟ್ಟಿಯಿಂದ ಕೈ ಬಿಡಬಾರದು ಎಂಬುದು ನಮ್ಮ ಆಗ್ರಹ ಎಂದು ಅವರು ತಿಳಿಸಿದರು.

ಇವುಗಳನ್ನೂ ಓದಿ: