ರೈಲ್ವೆ ಮೇಲ್ಸೇತುವೆ ಕಾಮಗಾರಿ ವೇಳೆ ಶಿಷ್ಟಾಚಾರ ಉಲ್ಲಂಘನೆ ಆರೋಪ: ಕೇಂದ್ರ ಸಚಿವ ಸೋಮಣ್ಣ ಜೊತೆ ಶಿವರಾಜ್ ತಂಗಡಗಿ ವಾಗ್ವಾದ
ರೈಲ್ವೆ ಮೇಲ್ಸೇತುವೆ ಕಾಮಗಾರಿ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ತಮ್ಮ ಹೆಸರನ್ನು ಹಾಕಿಲ್ಲ, ಈ ಮೂಲಕ ಶಿಷ್ಟಾಚಾರ ಉಲ್ಲಂಘಿಸಲಾಗಿದೆ ಎಂದು ಕೇಂದ್ರ ಸಚಿವ ಸೋಮಣ್ಣ ಜೊತೆ ಸಚಿವ ಶಿವರಾಜ್ ತಂಗಡಗಿ ವಾಗ್ವಾದ ನಡೆಸಿದರು.

Published : January 5, 2026 at 7:38 PM IST
ಕೊಪ್ಪಳ: ಜಿಲ್ಲೆಯ ಹಿಟ್ನಾಳ ಗ್ರಾಮದಲ್ಲಿ ನಡೆದ ರೈಲ್ವೆ ಮೇಲ್ಸೇತುವೆ ಕಾಮಗಾರಿ ಶಿಲಾನ್ಯಾಸದ ವೇಳೆ ರಾಜಕೀಯ ಹೈಡ್ರಾಮಾ ನಡೆದಿದೆ. ರೈಲ್ವೆ ಮೇಲ್ಸೇತುವೆ ಕಾಮಗಾರಿಯ ಉದ್ಘಾಟನೆಗಾಗಿ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಸೋಮವಾರ ಹಿಟ್ನಾಳ ಗ್ರಾಮಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಶಂಕು ಸ್ಥಾಪನೆ ಮುಗಿಸಿ ಹೊರಡುವಾಗ ರೈಲ್ವೆ ಮೇಲ್ಸೇತುವೆ ಕಾಮಗಾರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಸ್ಥಳೀಯ ಕೆಲವು ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸಚಿವ ಸೋಮಣ್ಣ ಅವರನ್ನು ಸುತ್ತುವರಿದು ಆಕ್ರೋಶ ಹೊರಹಾಕಿದ ಘಟನೆ ಜರುಗಿದೆ.
ಆಹ್ವಾನ ಪತ್ರಿಕೆಯಲ್ಲಿ ಸ್ಥಳೀಯ ಸಂಸದರು, ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಹೆಸರುಗಳನ್ನು ನಮೂದಿಸಿಲ್ಲ. ಇದು ಜನಪ್ರತಿನಿಧಿಗಳಿಗೆ ಮಾಡಿದ ಅವಮಾನ ಎಂದು ಸಚಿವ ಶಿವರಾಜ್ ತಂಗಡಗಿ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಕರಣ ಕುರಿತು ಸೋಮಣ್ಣ ಹೇಳಿದ್ದೇನು: ಉದ್ಘಾಟನಾ ಕಾರ್ಯಕ್ರಮದಲ್ಲಿ ಯಾವುದೇ ಶಿಷ್ಟಾಚಾರ ಉಲ್ಲಂಘನೆ ಆಗಿಲ್ಲ. ಸಚಿವ ಶಿವರಾಜ ತಂಗಡಗಿ ಮೊದಲು ಹೇಳಿದಾಗ ನನಗೆ ಕಸಿವಿಸಿ ಅನ್ನಿಸಿತು. ಆದರೆ, ಅಡಿಗಲ್ಲಿನಲ್ಲಿ ಎಲ್ಲರ ಹೆಸರು ಇದೆ. ಕೇಂದ್ರದಲ್ಲಿ ಕೇವಲ ನರೇಂದ್ರ ಮೋದಿ ಅವರ ಹೆಸರು ಹಾಕುತ್ತೇವೆ. ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಆಗಾಗ ಬಂದು ಕಾಮಗಾರಿ ಮುಗಿಸುತ್ತೇವೆ. ಆದರೆ, ತಂಗಡಗಿ ಅವರು ನಮ್ಮ ಬಳಿ ಬಂದು ಶಿಲಾನ್ಯಾಸ ಕಲ್ಲಿನಲ್ಲಿ ತಮ್ಮ ಹೆಸರನ್ನು ಹಾಕಿಲ್ಲ ಎಂದು ತಿಳಿಸಿದರು. ನನಗೆ ಈ ಬಗ್ಗೆ ಮಾಹಿತಿ ಇಲ್ಲದ್ದರಿಂದ ಆ ಕ್ಷಣಕ್ಕೆ ನಾನು ಗದ್ಗದಿತನಾದೆ. ಆದರೆ, ಇಲ್ಲಿ ಬಂದು ನೋಡಿದಾಗ ಎಲ್ಲರ ಹೆಸರು ಕಲ್ಲಿನಲ್ಲಿ ಹಾಕಿದ್ದನ್ನು ಗಮನಿಸಿದೆ. ಶಿಷ್ಟಾಚಾರವನ್ನು ಎಲ್ಲಿಯೂ ಕೂಡ ಉಲ್ಲಂಘನೆ ಮಾಡಿಲ್ಲ. ಬ್ಯಾನರ್ನಲ್ಲಿಯೂ ತಮ್ಮ ಹೆಸರು ಹಾಕಿಲ್ಲ ಎನ್ನುತ್ತಿದ್ದಾರೆ. ಆದರೆ, ಬ್ಯಾನರ್ ಅನ್ನು ಅವರವರ ಪಕ್ಷದವರು ಹಾಕಿಕೊಳ್ಳುತ್ತಾರೆ. ಇದು ರೈಲ್ವೆ ಇಲಾಖೆಗೆ ಸಂಬಂಧಪಟ್ಟಿದ್ದರಿಂದ ಇಲ್ಲಿ ಪ್ರಧಾನಿ ಮೋದಿ ಒಬ್ಬರದ್ದೇ ಫೋಟೋವನ್ನು ಹಾಕಲಾಗಿದೆ. ಬೇರೆ ಯಾರದ್ದೂ ಫೋಟೋವನ್ನು ಬ್ಯಾನರ್ನಲ್ಲಿ ಹಾಕಿಲ್ಲ ಎಂದರು.
ಸಚಿವ ತಂಗಡಗಿ ಪ್ರಕ್ರಿಯೆ: ಆಹ್ವಾನ ಪತ್ರಿಕೆಯಲ್ಲಿ ಸ್ಥಳೀಯ ಸಂಸದರು, ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಹೆಸರುಗಳನ್ನು ನಮೂದಿಸಿಲ್ಲ. ಈ ಮೂಲಕ ಶಿಷ್ಟಾಚಾರವನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿದ ಸಚಿವ ಶಿವರಾಜ್ ತಂಗಡಗಿ, ಬಿಜೆಪಿಯವರ ಈ ಸರ್ವಾಧಿಕಾರ ಇಲ್ಲಿ ನಡೆಯುವುದಿಲ್ಲ. ಇವರು ಸದ್ದಾಂ ಹುಸೇನರಂತೆ ವರ್ತಿಸುತ್ತಿದ್ದಾರೆ. ವೇದಿಕೆ ಸೇರಿದಂತೆ, ಶಂಕುಸ್ಥಾಪನೆಯ ಕಲ್ಲಿನಲ್ಲಿ ಸ್ಥಳೀಯ ಜನಪ್ರತಿನಿಧಿಗಳ ಹೆಸರೇ ಇಲ್ಲ. ಜನಪ್ರತಿನಿಧಿಗಳು ಯಾವ ಪಕ್ಷದವರೇ ಇರಲಿ, ಅವರಿಗೆ ಗೌರವ ಕೊಡಬೇಕು. ಇದನ್ನು ನಮ್ಮ ಕಾರ್ಯಕರ್ತರು ಸಹಿಸಿಕೊಳ್ಳುವುದಿಲ್ಲ. ತಂಗಡಗಿ ಪಟಾಲಂ ಕರೆದುಕೊಂಡು ಬಂದಿದ್ದಾರೆ ಎಂದು ಕೇಂದ್ರ ಸಚಿವ ಸೋಮಣ್ಣ ಅವರು ಮಾತನಾಡಿದ್ದಾರೆ. ಸೋಮಣ್ಣರಿಂದ ಇಂತಹ ಹೇಳಿಕೆ ನಾನು ನಿರೀಕ್ಷೆ ಮಾಡಿರಲಿಲ್ಲ. ನರೇಂದ್ರ ಮೋದಿ ದೇವ ಮಾನವ ಎನ್ನುತ್ತಾರೆ. ಇದನ್ನು ಕೊಪ್ಪಳ ಜನತೆ ಸಹಿಸಿಕೊಳ್ಳುವುದಿಲ್ಲ ಎಂದು ಸಚಿವ ತಂಗಡಗಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ನಮ್ಮ ತಂದೆಯವರು ಹಾಗೂ ನಾನು ಈ ಆರೋಪದಿಂದ ಮುಕ್ತರಾಗುತ್ತೇವೆ: ಚಿದಾನಂದ ಸವದಿ

