ETV Bharat / state

ಕೊಂಗಳ್ಳಿ ಬೆಟ್ಟದಲ್ಲಿ ಕೊಂಡೋತ್ಸವ: ಇದು ಪುರುಷರ ಜಾತ್ರೆ! ರಾಗಿ ಮುದ್ದೆಯೇ ಇಲ್ಲಿ ಪ್ರಸಾದ

ಚಾಮರಾಜನಗರ ಜಿಲ್ಲೆಯ ತಾಳವಾಡಿ ತಾಲೂಕಿನ ಶ್ರೀ ಕೊಂಗಳ್ಳಿ ಮಲ್ಲಿಕಾರ್ಜುನ ಸ್ವಾಮಿ ಬೆಟ್ಟದಲ್ಲಿ ಮಂಗಳವಾರ ಅದ್ಧೂರಿಯಾಗಿ ಕೊಂಡೋತ್ಸವ ಜಾತ್ರೆ ನಡೆಯಿತು.

KONGALLI HILL KONDOTSAVA
ಕೊಂಗಳ್ಳಿ ಬೆಟ್ಟದಲ್ಲಿ ಕೊಂಡೋತ್ಸವ (ETV Bharat)
author img

By ETV Bharat Karnataka Team

Published : March 4, 2026 at 7:30 AM IST

1 Min Read
Choose ETV Bharat

ಚಾಮರಾಜನಗರ: ‌ಜಾತ್ರೆ, ಕೊಂಡೋತ್ಸವ, ಹಬ್ಬ-ಹರಿದಿನಗಳೆಂದರೆ ಅಲ್ಲಿ ಮಹಿಳೆಯರ ಕಲರವ ಹೆಚ್ಚಿರುತ್ತದೆ. ಆದರೆ, ಇಲ್ಲಿ ನಡೆಯುವ ಜಾತ್ರೆ ಪುರುಷರಿಗಷ್ಟೇ ಸೀಮಿತ. ಏಕೆಂದರೆ ಮಹಿಳೆಯರು ದೇವಸ್ಥಾನಕ್ಕೆ ಬರುವುದು ನಿಷೇಧ!.

ಚಾಮರಾಜನಗರ ಜಿಲ್ಲೆಯ ಗಡಿಭಾಗದಲ್ಲಿರುವ ತಾಳವಾಡಿ ತಾಲೂಕಿನ ಶ್ರೀ ಕೊಂಗಳ್ಳಿ ಮಲ್ಲಿಕಾರ್ಜುನ ಸ್ವಾಮಿ ಬೆಟ್ಟದಲ್ಲಿ ಮಂಗಳವಾರ ಅದ್ಧೂರಿಯಾಗಿ ಕೊಂಡೋತ್ಸವ ಜಾತ್ರೆ ನಡೆಯಿತು. ಸಾವಿರಾರು ಪುರುಷರು ಭಾಗವಹಿಸಿದ್ದರು. ಪ್ರತಿವರ್ಷ ನಡೆಯುವ ಕೊಂಡೋತ್ಸವದ ಅಂಗವಾಗಿ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ಬಳಿಕ ಅರ್ಚಕರು ಕೊಂಡ ಹಾಯ್ದರು.

ಕೊಂಗಳ್ಳಿ ಬೆಟ್ಟದಲ್ಲಿ ಕೊಂಡೋತ್ಸವ (ETV Bharat)

ಜಾತ್ರೆಯ‌ ಮತ್ತೊಂದು ವಿಶೇಷ ಪ್ರಸಾದ. ಕೊಂಗಳ್ಳಿ ಬೆಟ್ಟದ ಸುತ್ತಮುತ್ತಲಿನ 18ಕ್ಕೂ ಅಧಿಕ ಗ್ರಾಮಗಳ ಜನರು ಒಗ್ಗೂಡಿ ಪ್ರಸಾದ ತಯಾರಿಸುತ್ತಾರೆ. ಅನ್ನ, ಸಾರು, ಪಾಯಸದ ಜೊತೆ ರಾಗಿ ಮುದ್ದೆ- ಹಳಸಿನಕಾಯಿ ವಿತರಿಸುವುದು ಇಲ್ಲಿ ವಾಡಿಕೆ. ಅದರಂತೆ, ಮಂಗಳವಾರ 4,500 ಮುದ್ದೆಗಳನ್ನು ತಯಾರಿಸಿ ಭಕ್ತರಿಗೆ ಉಣಬಡಿಸಲಾಗಿದೆ.

ಕೊಂಗಳ್ಳಿ ಮಲ್ಲಿಕಾರ್ಜುನ ಸ್ವಾಮಿ ಕಠೋರ ತಪಸ್ವಿ. ತನ್ನ ಕ್ಷೇತ್ರಕ್ಕೆ ಮಹಿಳೆಯರ ಪ್ರವೇಶ ನಿಷೇಧಿಸಿದ್ದ ಹಿನ್ನೆಲೆಯಲ್ಲಿ ಇಂದಿಗೂ ಮಹಿಳೆಯರು ದೇವಾಲಯಕ್ಕೆ ಹೋಗುವುದಿಲ್ಲ. ಹೋದರೆ ಕಲ್ಲಾಗುತ್ತಾರೆ ಎಂಬುದು ನಂಬಿಕೆ.

ಈ ದೇವಾಲಯ ತಮಿಳುನಾಡಿಗೆ ಸೇರಿದ್ದರೂ, ಕನ್ನಡಿಗ ಭಕ್ತರೇ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ತೆರಳುತ್ತಾರೆ. ಅದರಂತೆ ಚಾಮರಾಜನಗರ ಜಿಲ್ಲೆ ಮತ್ತು ಕರ್ನಾಟಕದ ನಾನಾಭಾಗದಿಂದ ಭಕ್ತಸಮೂಹ ಮಲ್ಲಿಕಾರ್ಜುನ ಸ್ವಾಮಿ ಕೊಂಡೋತ್ಸವದಲ್ಲಿ ಭಾಗಿಯಾಗಿತ್ತು.

ಕಾರ್ತಿಕ ಮಾಸ, ಶಿವರಾತ್ರಿ ಸೇರಿದಂತೆ ಇಲ್ಲಿ‌ ನಡೆಯುವ ಜಾತ್ರೆಗಳು, ವಿಶೇಷ ಉತ್ಸವಗಳಲ್ಲಿ ಪುರುಷರಷ್ಟೇ ಭಾಗಿಯಾಗುತ್ತಾರೆ‌. ತಮಿಳುನಾಡಿಗೆ ದೇಗುಲ‌ ಒಳಪಟ್ಟರೂ ಕನ್ನಡಿಗರೇ ಹೆಚ್ಚು ಇಲ್ಲಿನ ಭಕ್ತರು. ಮಲ್ಲಿಕಾರ್ಜುನ ಸ್ವಾಮಿ ರೈತರ ಆರಾಧ್ಯ ದೈವ ಆಗಿರುವುದರಿಂದ ರೈತರು ಎತ್ತಿ‌ನ‌ಗಾಡಿಗಳಲ್ಲಿ ಬಂದು ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಜಾತ್ರೆಗೆ ಬರುವ ಭಕ್ತರಿಗೇ ಪುರುಷರೇ ಪ್ರಸಾದ ತಯಾರಿಸಿ ವಿತರಿಸುತ್ತಾರೆ.

ತಮಿಳುನಾಡಿನ ಸತ್ಯಮಂಗಲಂ ಹುಲಿ ಸಂರಕ್ಷಿತ ಪ್ರದೇಶಕ್ಕೆ ಈ ದೇಗುಲ ಸೇರುತ್ತದೆ. ದೀಪಾವಳಿ ಹಾಗೂ ಯುಗಾದಿ ಜಾತ್ರೆಗೆ ಇಲ್ಲಿ ಕೊಂಡೋತ್ಸವ ನಡೆಯುತ್ತದೆ. ಇದೇ ದೇಗುಲದ ಒಂದೂವರೆ ಕಿ.ಮೀ ವ್ಯಾಪ್ತಿಯಿಂದಲೇ ಮಹಿಳೆಯರಿಗೆ ಪ್ರವೇಶ ನಿರ್ಬಂಧವಿದೆ. ಯಾವುದೇ ವಯೋಮಾನದ ಮಹಿಳೆಯರಿಗೂ ದೇವಸ್ಥಾನಕ್ಕೆ ಪ್ರವೇಶ ಸಂಪೂರ್ಣ ನಿಷಿದ್ಧ.

ಇದನ್ನೂ ಓದಿ: 60ನೇ ವಯಸ್ಸಿನಲ್ಲಿ 11,000 ಕಿ.ಮೀ ಪ್ರಯಾಣ; ಕಾಲ್ನಡಿಗೆ ಮೂಲಕವೇ 400 ದೇವಾಲಯಕ್ಕೆ ಭೇಟಿ ನೀಡಿದ ಸುಂದರ್​ಲಾಲ್