ETV Bharat / state

ಕೋಗಿಲು ಲೇಔಟ್ ಒತ್ತುವರಿ ಪ್ರಕರಣ; ನಾಲ್ವರ ವಿರುದ್ಧ ಎಫ್ಐಆರ್

ವಿಜಯ್, ವಾಸಿಂ ಉಲ್ಲಾ ಬೇಗ್, ಮುನಿ ಆಂಜಿನಪ್ಪ ಹಾಗೂ ರಾಬಿನ್ ಎಂಬುವವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Kogilu Layout encroachment case
ತೆರವು ಮಾಡಿದ ಬಳಿಕ ಕಂಡುಬಂದಿದ್ದು (ETV Bharat)
author img

By ETV Bharat Karnataka Team

Published : January 7, 2026 at 3:34 PM IST

2 Min Read
Choose ETV Bharat

ಬೆಂಗಳೂರು : ಕೋಗಿಲು ಲೇಔಟ್‌ನಲ್ಲಿ ಸರ್ಕಾರಿ ಜಾಗ ಒತ್ತುವರಿ ಮಾಡಿ ಮನೆಗಳ ನಿರ್ಮಾಣಕ್ಕೆ ಪ್ರಚೋದನೆ ನೀಡಿ ಸಾರ್ವಜನಿಕರಿಂದ ಹಣ ವಸೂಲಿ ಮಾಡಿದ ಆರೋಪದಡಿ ನಾಲ್ವರ ವಿರುದ್ಧ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಲಿಮಿಟೆಡ್(BSWML)ನ ಇಂಜಿನಿಯರ್ ಸಂತೋಷ್ ಕುಮಾರ್ ಅವರು ನೀಡಿದ ದೂರಿನ ಅನ್ವಯ ವಿಜಯ್, ವಾಸಿಂ ಉಲ್ಲಾ ಬೇಗ್, ಮುನಿ ಆಂಜಿನಪ್ಪ ಹಾಗೂ ರಾಬಿನ್ ಎಂಬುವವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ಹಿನ್ನೆಲೆ: ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಆದೇಶದ ಪ್ರಕಾರ ಕೋಗಿಲು ಗ್ರಾಮದ ಸರ್ವೆ ನಂಬರ್ 99ರಲ್ಲಿರುವ 14 ಎಕರೆ 36 ಗುಂಟೆ ಜಮೀನನ್ನು ಬಿಬಿಎಂಪಿ ಘನತ್ಯಾಜ್ಯ ನಿರ್ವಹಣೆಗೆ ಹಸ್ತಾಂತರಿಸಲಾಗಿತ್ತು. ಆ ಜಾಗದಲ್ಲಿ ಬಯೋ ಮೆಥನೈಸೆಷನ್ ಘಟಕ, ಎಳನೀರು ಚಿಪ್ಪು ಸಂಸ್ಕರಣೆ ಹಾಗೂ ಪ್ರಾಣಿ ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ನಿರ್ಮಿಸಲು 2023ರಲ್ಲಿಯೇ ಟೆಂಡರ್ ಪ್ರಕ್ರಿಯೆ ಮುಗಿದು ಕಾರ್ಯಾದೇಶ ನೀಡಲಾಗಿತ್ತು. ಆದರೆ, ಆ ಜಾಗದ ಸುಮಾರು 4 ಎಕರೆ ಪ್ರದೇಶವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಅಲ್ಲಿ ನಿರ್ಮಿಸಲಾಗಿದ್ದ ಸುಮಾರು 160ಕ್ಕೂ ಹೆಚ್ಚು ಮನೆಗಳನ್ನು ಡಿಸೆಂಬರ್ 20ರಂದು ಜಿಲ್ಲಾಡಳಿತ ಮತ್ತು ಬಿಎಸ್‌ಡಬ್ಲ್ಯೂಎಂಎಲ್ (ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ಲಿಮಿಟೆಡ್) ಜಂಟಿ ಕಾರ್ಯಾಚರಣೆ ನಡೆಸಿ ತೆರವುಗೊಳಿಸಿದ್ದವು.

ಆರೋಪಿಗಳು ಸ್ಥಳೀಯರಿಂದ ಹಣ ಪಡೆದು ಸರ್ಕಾರಿ ಜಾಗದಲ್ಲಿ ಅನಧಿಕೃತ ಮನೆಗಳನ್ನು ನಿರ್ಮಿಸಲು ಮತ್ತು ಅವುಗಳನ್ನು ನಿರ್ವಹಿಸಲು ಸಹಕಾರ ನೀಡುತ್ತಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ನಾಲ್ವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಯಲಹಂಕ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ: ಕೋಗಿಲು ಬಡಾವಣೆಯಲ್ಲಿ ಸೂರು ಕಳೆದುಕೊಂಡವರಿಗೆ ಬೈಯ್ಯಪ್ಪನಹಳ್ಳಿಯಲ್ಲಿ ಪರ್ಯಾಯ ಮನೆ ಹಂಚಿಕೆ: ಸಿಎಂ ಸಿದ್ದರಾಮಯ್ಯ ಭರವಸೆ

ಕೋಗಿಲು ಬಡಾವಣೆಯಲ್ಲಿ ಸೂರು ಕಳೆದುಕೊಂಡವರಿಗೆ ಬೈಯ್ಯಪ್ಪನಹಳ್ಳಿಯಲ್ಲಿ ಪರ್ಯಾಯ ಮನೆ ಹಂಚಿಕೆ ಮಾಡಲಾಗುವುದು. ಕೋಗಿಲುಯಿಂದ 7 ಕಿಮೀ ವ್ಯಾಪ್ತಿಯಲ್ಲೇ ಬದಲಿ ಮನೆ ಕೊಡಲು ತೀರ್ಮಾನಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಕೋಗಿಲು ಬಡಾವಣೆಯಲ್ಲಿ ಅಕ್ರಮ ನಿರ್ಮಾಣ ತೆರವು ಸಂಬಂಧ ಕಾವೇರಿ ನಿವಾಸದಲ್ಲಿ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಸಿಎಂ ಮಾತನಾಡಿದ್ದರು. ಆದರೆ, ಭೂ ಒತ್ತುವರಿ ಮಾಡುವವರಿಗೆ ಮನೆ ನಿರ್ಮಿಸಿಕೊಡುವ ಮೂಲಕ ಕಾಂಗ್ರೆಸ್ ಸರ್ಕಾರ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದೆ. ಈ ಮೂಲಕ ಭೂ ಮಾಫಿಯಾಗೆ ಪ್ರೋತ್ಸಾಹ ನೀಡಲಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಸೇರಿದಂತೆ ಹಲವು ಬಿಜೆಪಿ-ಜೆಡಿಎಸ್​ ನಾಯಕರು ಆರೋಪಿಸಿದ್ದಾರೆ.