ಖಾಸಗಿ ಸಂಸ್ಥೆಗಳ ವ್ಯವಹಾರ ವಿಸ್ತರಣೆಗೆ ಬಡ ರೈತರ ಜಮೀನು ಕಿತ್ತುಕೊಳ್ಳುವುದು ಕೆಐಎಡಿಬಿ ಕಾಯಿದೆ ಉದ್ದೇಶವಲ್ಲ: ಹೈಕೋರ್ಟ್
ಭೂಮಾಲೀಕರು, ಕೆಐಎಡಿಬಿ, ಮತ್ತು 'ಇಂಡಿಯನ್ ಮೆಷಿನ್ ಟೂಲ್ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಷನ್' ಸಂಸ್ಥೆಗಳು ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಮೇಲ್ಮನವಿ ಅರ್ಜಿ ಸಲ್ಲಿಸಿದ್ದವು.

Published : June 4, 2026 at 3:10 PM IST
ಬೆಂಗಳೂರು: ಖಾಸಗಿ ಸಂಸ್ಥೆಗಳ ವ್ಯವಹಾರ ವಿಸ್ತರಣೆ ಮಾಡಲು ಬಡ ರೈತರ ಜಮೀನು ಕಿತ್ತುಕೊಳ್ಳುವುದು ಕೆಐಎಡಿಬಿ ಕಾಯಿದೆ ಉದ್ದೇಶವಲ್ಲ ಎಂದು ತಿಳಿಸಿರುವ ಹೈಕೋರ್ಟ್, ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿ ಗ್ರಾಮದ ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರ(ಬಿಐಇಸಿ) ಬಳಿ ಬಹುಹಂತದ ಕಾರು ಪಾರ್ಕಿಂಗ್ ಮತ್ತು ಇತರ ಸೌಲಭ್ಯಗಳಿಗಾಗಿ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಡಿಬಿ) ಕೈಗೊಂಡಿದ್ದ ಭೂಸ್ವಾಧೀನ ಪ್ರಕ್ರಿಯೆಯನ್ನು ರದ್ದುಗೊಳಿಸಿದೆ.
ಈ ಆದೇಶದಿಂದಾಗಿ ಕಳೆದ 14 ವರ್ಷಗಳ ಕಾಲ ತಮ್ಮ ಭೂಮಿಗಾಗಿ ಕಾನೂನು ಹೋರಾಟ ನಡೆಸುತ್ತಿದ್ದ ರೈತರಿಗೆ ಮತ್ತು ಜಮೀನು ಮಾಲೀಕರಿಗೆ ಜಯ ಸಿಕ್ಕಂತಾಗಿದೆ.
ಭೂಸ್ವಾಧೀನ ಪ್ರಕ್ರಿಯೆಗೆ ಕೆಐಎಡಿಬಿ ಹೊರಡಿಸಿದ್ದ ಅಂತಿಮ ಅಧಿಸೂಚನೆ ಎತ್ತಿಹಿಡಿದ್ದ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ರೈತರಾದ ಮುಖೇಶ್ ಕುಮಾರ್ ಮತ್ತಿತರರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ಕೆ. ಸಿಂಗ್ ಮತ್ತು ನ್ಯಾಯಮೂರ್ತಿ ಟಿ.ಎಂ. ನದಾಫ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಅಲ್ಲದೇ ಈ ಸಂಬಂಧ ಏಕಸದಸ್ಯ ಪೀಠ ನೀಡಿದ್ದ ಆದೇಶವನ್ನು ರದ್ದುಪಡಿಸಿ ಆದೇಶಿಸಿದೆ.
ಕೆಐಎಡಿಬಿ ಕಾಯಿದೆಯ ಪ್ರಕಾರ ಭೂಮಿ ಸ್ವಾಧೀನ ಪಡಿಸಿಕೊಳ್ಳುವ ಪ್ರಕ್ರಿಯೆಗಳನ್ನು ವಿವರಿಸಿರುವ ನ್ಯಾಯಪೀಠ, ಸೆಕ್ಷನ್ 29ರ ಪ್ರಕಾರ, ಪರಿಹಾರ ಪಾವತಿ ಮಾಡಬೇಕಾಗುತ್ತದೆ. ಈ ಎಲ್ಲ ಕ್ರಮಗಳನ್ನು ಕೈಗೊಂಡಲ್ಲಿ ಮಾತ್ರ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಆದರೆ, ಅಂತಿಮ ಅಧಿಸೂಚನೆ ಹೊರಡಿಸಿ ಸುದೀರ್ಘ 14 ವರ್ಷಗಳು ಕಳೆದಿದ್ದರೂ, ಜಮೀನು ಮಾಲೀಕರಿಗೆ ಯಾವುದೇ ಪರಿಹಾರ ಘೋಷಣೆ ಮಾಡಿಲ್ಲ. ಹಾಗೂ ಯಾವುದೇ ಪರಿಹಾರ ಧನವನ್ನು ಠೇವಣಿ ಮಾಡಿ, ಪಾವತಿಸಿಯೂ ಇಲ್ಲ, ಯಾವುದೇ ತಡೆಯಾಜ್ಞೆ ಇಲ್ಲದಿದ್ದರೂ ಪರಿಹಾರ ಘೋಷಣೆ ಮಾಡದಿರುವುದು ಭೂಸ್ವಾಧೀನ ಪ್ರಕ್ರಿಯೆ ರದ್ದಾಗಲು ಕಾರಣವಾಗಿದೆ ಎಂದು ತಿಳಿಸಿದೆ.
ಅಲ್ಲದೇ, ಕೆಐಡಿಬಿ ಕಾಯಿದೆಯ ಮೂಲ ಉದ್ದೇಶ ರಾಜ್ಯದಲ್ಲಿ ಕೈಗಾರಿಕಾ ಪ್ರದೇಶಗಳನ್ನು ವ್ಯವಸ್ಥಿತವಾಗಿ ಅಭಿವೃದ್ಧಿಪಡಿಸುವುದಾಗಿದೆ. ಅದಕ್ಕಾಗಿ ಜಮೀನನ್ನು ಗುರುತಿಸುವುದು, ಸ್ವಾಧೀನಪಡಿಸಿಕೊಳ್ಳುವುದು ಮತ್ತು ಅದಕ್ಕೆ ಬೇಕಾದ ರೀತಿಯಲ್ಲಿ ಮೂಲಸೌಲಭ್ಯಗಳನ್ನು ಕಲ್ಪಿಸುವುದಾಗಿದೆ. ಆದರೆ, ಯಾವುದೇ ನಿರ್ದಿಷ್ಟ ಖಾಸಗಿ ಸಂಸ್ಥೆಯಗಳು, ಲಾಭದಾಯಕ ಕಂಪನಿಯ ವ್ಯವಹಾರ ವಿಸ್ತರಣೆಗಾಗಿ ಬಡ ರೈತರ ಜಮೀನನ್ನು ಕಿತ್ತುಕೊಳ್ಳಲು ಅವಕಾಶವನ್ನು ಕಲ್ಪಿಸಲಾಗಿಲ್ಲ. ಒಂದು ವೇಳೆ ಖಾಸಗಿ ಕಂಪಿನಿಗಳುಗೆ ಜಮೀನು ಸ್ವಾಧೀನ ಪಡಿಸಿಕೊಂಡರೂ, ಅದನ್ನು ಸಾರ್ವಜನಿಕ ಉದ್ದೇಶಕ್ಕಾಗಿ ಎಂದು ಪರಿಗಣಿಸಲಾಗುವುದಿಲ್ಲ ಎಂದು ಪೀಠ ಹೇಳಿದೆ.
ಕೈಗಾರಿಕಾ ಪ್ರದೇಶ ರಚನೆ ಮಾಡುವುದು ಸಾರ್ವಜನಿಕ ಉದ್ದೇಶವಾಗಿದೆ. ಆದರೆ, ಲಾಭ ಗಳಿಸುವ ಘಟಕಕ್ಕಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದು ಕೆಐಎಡಿ ಕಾಯ್ದೆಯ ಉದ್ದೇಶಗಳಿಗೆ ಒಳಪಡುವುದಿಲ್ಲ. ಕೆಐಎಡಿಬಿಯ ಈ ಕ್ರಮ ಭೂಮಾಲೀಕರನ್ನು ತಮ್ಮ ಭೂ ಹಿಡುವಳಿಗಳಿಂದ ಅಲ್ಪ ಮೊತ್ತಕ್ಕೆ ತನ್ನ ವ್ಯವಹಾರವನ್ನು ವಿಸ್ತರಿಸಲು ಮತ್ತು ಹೆಚ್ಚು ಹೆಚ್ಚು ಲಾಭ ಗಳಿಸಲು ಖಾಸಗಿ ಸಂಸ್ಥೆಯ ಪರವಾಗಿ ಮಾರಾಟ ಮಾಡುವುದು ವಂಚನೆಯಾಗಲಿದೆ. ಇದು ಅಧಿಕಾರವನ್ನು ಚಲಾಯಿಸುವುದು ರಾಜ್ಯ ಅಧಿಕಾರಿಗಳು ಮಾಡುವ ಶಾಸನಬದ್ಧ ಮತ್ತು ಸಾಂವಿಧಾನಿಕ ವಂಚನೆಯಾಗಿರಲಿದೆ ಎಂದು ಪೀಠ ತಿಳಿಸಿದೆ.
ಸಂವಿಧಾನದ ವಿಧಿ 300(ಎ) ಪ್ರಕಾರ ಯಾವುದೇ ವ್ಯಕ್ತಿಯನ್ನು ಕಾನೂನಿನ ಅಧಿಕಾರವಿಲ್ಲದೇ ಆಸ್ತಿಯಿಂದ ವಂಚಿತಗೊಳಿಸುವಂತಿಲ್ಲ ಎಂದು ಹಲವು ಪ್ರಕರಣಗಳಲ್ಲಿ ಸುಪ್ರೀಂಕೋರ್ಟ್ ಹೇಳಿದೆ. ಆಸ್ತಿಯ ಹಕ್ಕು ಕೇವಲ ಸಾಂವಿಧಾನಿಕ ಹಕ್ಕಲ್ಲ, ಅದು ವ್ಯಕ್ತಿಯ ಜೀವನೋಪಾಯ, ವಸತಿ ಮತ್ತು ಮಾನವ ಹಕ್ಕಿನ ವ್ಯಾಪ್ತಿಗೆ ಬರುತ್ತದೆ. ಸಾರ್ವಜನಿಕ ಹಿತಾಸಕ್ತಿಯ ಹೆಸರಿನಲ್ಲಿ ಖಾಸಗಿ ಸಂಸ್ಥೆಗಳಿಗೆ ಅನುಕೂಲ ಮಾಡಿಕೊಡುವುದು ಸಂವಿಧಾನದ ವಿಧಿ 14, 19 ಮತ್ತು 21 ರ ಉಲ್ಲಂಘನೆಯಾಗಿದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಅಲ್ಲದೇ, ಭೂಮಾಲೀಕರ ಮೇಲ್ಮನವಿ ಅರ್ಜಿಗಳನ್ನು ಪುರಸ್ಕರಿಸಿದ್ದು, ಕೆಐಎಡಿಬಿ ಮತ್ತು ಖಾಸಗಿ ಸಂಸ್ಥೆಯ ಮೇಲ್ಮನವಿ ಅರ್ಜಿಗಳನ್ನು ವಜಾಗೊಳಿಸಿದೆ. ಜತೆಗೆ, ಏಕಸದಸ್ಯ ಪೀಠವು ಈ ಹಿಂದೆ ನೀಡಿದ್ದ ಆದೇಶವನ್ನು ರದ್ದುಗೊಳಿಸದ್ದು, ಮಾದನಾಯಕನಹಳ್ಳಿ ಜಮೀನಿನ ಭೂಸ್ವಾಧೀನ ಪ್ರಕ್ರಿಯೆಯ ಎಲ್ಲಾ ಅಧಿಸೂಚನೆಗಳನ್ನು ವಜಾಗೊಳಿಸಿ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ: 'ಇಂಡಿಯನ್ ಮೆಷಿನ್ ಟೂಲ್ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಷನ್' ಸಂಸ್ಥೆಯು ಮಾದನಾಯಕನಹಳ್ಳಿ ಗ್ರಾಮದ ಸರ್ವೇ ನಂಬರ್ 18/316, 18/317, 68, 69, 70 ಮತ್ತು 71 ರಲ್ಲಿದ್ದ ಒಟ್ಟು 23 ಎಕರೆ 38 ಗುಂಟೆ ಜಮೀನನ್ನು ಬಹುಹಂತದ ಕಾರು ಪಾರ್ಕಿಂಗ್ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಡುವಂತೆ ಸರ್ಕಾರಕ್ಕೆ ಕೋರಿಕೆ ಸಲ್ಲಿಸಿತ್ತು.
ಮನವಿಯನ್ನು ಪರಿಗಣಿಸಿದ್ದ ಕೆಐಎಡಿಬಿ 2010ರಲ್ಲಿ ಪ್ರಾಥಮಿಕ ಅಧಿಸೂಚನೆ ಮತ್ತು 2012ರ ಮೇ 2 ರಂದು 17.38 ಎಕರೆಗೆ ಸೀಮಿತಗೊಳಿಸಿ ಅಂತಿಮ ಭೂಸ್ವಾಧೀನ ಅಧಿಸೂಚನೆ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಟಿ. ಕೃಷ್ಣಪ್ಪ, ಸುರೇಶ್ ಚಂದ್ರಗುಪ್ತಾ, ಎಂ.ಬಿ. ಶಾಂತಪ್ಪ ಸೇರಿದಂತೆ ಹಲವು ಜಮೀನು ಮಾಲೀಕರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಈ ಹಿಂದೆ ಅರ್ಜಿಯ ವಿಚಾರಣೆ ನಡೆಸಿದ್ದ ಏಕಸದಸ್ಯ ಪೀಠ, ಒಟ್ಟು ಜಮೀನಿನ ಪೈಕಿ ಕೇವಲ 7 ಎಕರೆ ಭೂಸ್ವಾಧೀನವನ್ನು ಮಾತ್ರ ಎತ್ತಿಹಿಡಿದು, ಉಳಿದ ಪ್ರಕ್ರಿಯೆಯನ್ನು ರದ್ದುಗೊಳಿಸಿ 2013ರ ಜೂನ್ 20 ರಂದು ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಭೂಮಾಲೀಕರು, ಕೆಐಎಡಿಬಿ, ಮತ್ತು 'ಇಂಡಿಯನ್ ಮೆಷಿನ್ ಟೂಲ್ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಷನ್' ಸಂಸ್ಥೆಗಳು ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದವು.

