ETV Bharat / state

ಸ್ಫೂರ್ತಿಯ ಚಿಲುಮೆಯಾದ ಕೌಶಿಕ್, ನೇಹಾ ರೈ; ದಿವ್ಯಾಂಗರಿಗೆ ಬೇಕಿದೆ ಸಮಾಜದ ಬೆಂಬಲ

ದಕ್ಷಿಣ ಕನ್ನಡ ಜಿಲ್ಲಾ ದಿವ್ಯಾಂಗ ಸಮ್ಮೇಳನದಲ್ಲಿ ಕೌಶಿಕ್ ಎಂಬುವವರು ಕಾಲಿನಲ್ಲೇ ಚಿತ್ರ ಬಿಡಿಸುವ ಮೂಲಕ ಗಮನ ಸೆಳೆದರು.

kaushik-neha-rai-are-a-source-of-inspiration-in-dakshina-kannada
ಕಾಲಿನಿಂದ ಚಿತ್ರ ಬಿಡಿಸುತ್ತಿರುವ ಕೌಶಿಕ್ (ಎಡಬದಿ) ನೇಹಾ ರೈ (ಬಲಬದಿ) (ETV Bharat)
author img

By ETV Bharat Karnataka Team

Published : March 2, 2026 at 1:40 PM IST

2 Min Read
Choose ETV Bharat

ಬಂಟ್ವಾಳ (ದಕ್ಷಿಣ ಕನ್ನಡ) : ಕಾಲಿನಲ್ಲೇ ಚಿತ್ರಬಿಡಿಸುವ ಕೌಶಿಕ್, ನಡೆಯಲು ಕಷ್ಟವಾದರೂ ಸುಮಾರು 300 ಮಕ್ಕಳಿಗೆ ಟ್ಯೂಶನ್ ಹೇಳಿಕೊಡುವ ನೇಹಾ. ಶೇ. 80ರಷ್ಟು ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದರೂ ಅಂಥದ್ದೇನೂ ಆಗಿಲ್ಲ ಎಂಬ ಆತ್ಮವಿಶ್ವಾಸದಲ್ಲಿ ಮಾತನಾಡುವ ಮಂಗಳೂರು ವಿಶ್ವವಿದ್ಯಾಲಯ ಬಾಟನಿ ವಿಭಾಗದಲ್ಲಿ ರಿಸರ್ಚ್ ಮಾಡುತ್ತಿರುವ ಮಂಜುನಾಥ್, ಒಂದು ಕಣ್ಣು ಇಲ್ಲದಿದ್ದರೂ ಧೃತಿಗೆಡದೇ, ವಿಶೇಷಚೇತನರಿಗೆ ಕೆಲಸ ಮಾಡುವ ಎಂ.ಕಾಂ. ಪದವೀಧರ ಗಿರೀಶ್, ಇವರೆಲ್ಲರು ಬಂಟ್ವಾಳದ ರೋಟರಿ ಹಾಲ್​ನಲ್ಲಿ ಸಕ್ಷಮ ದಕ್ಷಿಣ ಕನ್ನಡ ಜಿಲ್ಲಾ ಘಟಕ ಆಶ್ರಯದಲ್ಲಿ ಸಕ್ಷಮ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ ದಿವ್ಯಾಂಗ ಸಮ್ಮೇಳನದಲ್ಲಿ ಕಂಡುಬಂದ ಸ್ಫೂರ್ತಿಯ ಚಿಲುಮೆಗಳು.

'ನಾನು ಈ ಮಟ್ಟಕ್ಕೆ ಬೆಳೆಯಲು ನನ್ನ ತಾಯಿ ಕಾರಣ, ನಿಮ್ಮ ಮಕ್ಕಳನ್ನು ದುರ್ಬಲರು ಎಂದು ಅಂದುಕೊಳ್ಳಬೇಡಿ, ಅವರನ್ನು ಗಟ್ಟಿಗೊಳಿಸಿ, ಅವರನ್ನು ಬೆಂಬಲಿಸಿ, ಅವರಿಗೆ ಶಿಕ್ಷಣ ಕೊಡಿ, ಅವರ ಕೌಶಲ್ಯಗಳನ್ನು ಹೆಚ್ಚಿಸುವಂತೆ ಮಾಡಿ, ನೀವು ಬೆಂಬಲಿಸಿದರೆ ನನ್ನ ಹಾಗೆ ಎಲ್ಲ ಮಕ್ಕಳು ಬೆಳೆಯಲು ಸಾಧ್ಯವಾಗುತ್ತದೆ' ಎನ್ನುತ್ತಾರೆ ನೇಹಾ ರೈ.

ಪೆನ್ಶನ್ ಹಣ ಬಸ್​​ಗೆ ಖರ್ಚಾಗುತ್ತೆ : ತನ್ನ ಕೈಯೆರಡು ಶಕ್ತಿಹೀನವಾಗಿದ್ದರೂ ಕಾಲಲ್ಲೇ ಬರೆಯುತ್ತಾ ಗಮನ ಸೆಳೆದ ಎಂ.ಎಸ್.ಡಬ್ಲ್ಯು ವಿದ್ಯಾರ್ಥಿ ಕೌಶಿಕ್ ಆಚಾರ್ಯ ಅವರು ಮಾತನಾಡಿ, 'ಸರ್ಕಾರದಿಂದ 1200 ರೂ. ನೆರವು ಬರುತ್ತೆ. ಆದರೆ, ಆ ಹಣವೆಲ್ಲ ಬಸ್​ಗೆ ಕೊಡಲು ಖರ್ಚಾಗುತ್ತದೆ' ಎಂದು ಬೇಸರ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಅವರು ಭಗತ್ ಸಿಂಗ್ ಚಿತ್ರವನ್ನು ಕಾಲ ಬೆರಳಲ್ಲೇ ರಚಿಸಿ ಸ್ಪೂರ್ತಿಯಾದರು.

ವಂಶವಾಹಿ ಸಂಶೋಧನೆ ಬಲಗೊಳ್ಳಲಿ: 'ವಂಶವಾಹಿ(ಜೀನ್)ಗಳ ಕುರಿತು ಸಂಶೋಧನೆಗಳು ಹಾಗೂ ಚಿಕಿತ್ಸಾ ವಿಧಾನಗಳು ಭಾರತದಲ್ಲೂ ಪ್ರಗತಿಯಲ್ಲಿದ್ದು, ಯಶಸ್ವಿಯಾಗಿ ಸಾಮಾನ್ಯ ವರ್ಗದ ಕೈಗೆಟುಕುವಂಥ ಯೋಜನೆಗಳು ಜಾರಿಯಾದರೆ, ದಿವ್ಯಾಂಗರಿಗೆ ಅನುಕೂಲವಾಗುತ್ತದೆ. ದಿವ್ಯಾಂಗರು ವಿಶೇಷವಾದ ಶಕ್ತಿ ಪಡೆದವರಾಗಿದ್ದು, ಸೂಕ್ತ ನೆರವು ಅಗತ್ಯವಾಗಿದೆ. ಕಣ್ಣು ಸಹಿತ ಬೇರೆ ಬೇರೆ ನ್ಯೂನತೆಗಳನ್ನು ಸರಿಪಡಿಸಲು ಸಾಧ್ಯ. ಸಕ್ಷಮದ ಶಿಫಾರಸಿನಲ್ಲಿ ಬಂದ ದಿವ್ಯಾಂಗರಿಗೆ ತಮ್ಮಲ್ಲಿ ಉಚಿತ ಚಿಕಿತ್ಸೆ ಹಾಗೂ ಫಿಸಿಯೋಥೆರಪಿಯನ್ನು ಉಚಿತವಾಗಿ ಒದಗಿಸುತ್ತೇವೆ' ಎಂದು ಮಂಗಳೂರು ಪ್ರಸಾದ್ ನೇತ್ರಾಲಯದ ಎಂ. ಡಿ. ಡಾ. ಕೃಷ್ಣಪ್ರಸಾದ ಕೂಡ್ಲು ಆಶ್ವಾಸನೆ ನೀಡಿದರು.

ಸಮಾಜದ ಸ್ಪಂದನೆ ಅಗತ್ಯ : ಹಿರಿಯ ಪತ್ರಕರ್ತ ಹಾಗೂ ದಿವ್ಯಾಂಗ ಮಗುವಿನ ತಂದೆಯೂ ಆಗಿರುವ ಹರೀಶ್ ಮಾಂಬಾಡಿ ಅವರು ಮಾತನಾಡಿ, ಮಕ್ಕಳನ್ನು ಬೆಳೆಸುವ ವೇಳೆ ಇರುವ ಸವಾಲುಗಳನ್ನು ವಿವರಿಸಿದರು. ಸಮಾಜದ ಕಾಳಜಿ, ಸ್ಪಂದನೆ ಅಗತ್ಯವಾಗಿದ್ದು, ಸರ್ಕಾರ ಹಾಗೂ ಖಾಸಗಿ ಬಸ್​ಗಳಲ್ಲಿ ಉಚಿತ ಪ್ರಯಾಣ, ಉದ್ಯೋಗ ಮೀಸಲಾತಿ ಒದಗಿಸಬೇಕು ಎಂದರು. ದಿವ್ಯಾಂಗರ ಕುರಿತು ಆರಂಭಿಕ ಗುರುತಿಸುವಿಕೆ ಕುರಿತು ವಿಕಾಸಂ ಸಹಸಂಸ್ಥಾಪಕ ಗಣೇಶ್ ಭಟ್ ವಾರಣಾಸಿ ವಿಚಾರ ಮಂಡಿಸಿ, ಸರಿಯಾದ ಸಮಯದಲ್ಲಿ ಗುರುತಿಸುವಿಕೆ ಅಗತ್ಯ ಎಂದರು.

ಲೋಕಾಕ್ಷ ಜಾದೂ ಅವರಿಂದ ಜಾದೂ ಪ್ರದರ್ಶನ : ನಿರಾಮಯ ಯೋಜನೆ, ಕಾನೂನು ಪೋಷಕತ್ವ, ಯುಡಿಐಡಿ ಕಾರ್ಡ್ ಕುರಿತು ಚೇತನ ಬಾಲವಿಕಾಸ ಕೇಂದ್ರದ ಗಣರಾಜ ಭಟ್ ವಿಚಾರ ಮಂಡಿಸಿದರು. ಸುರೇಖಾ ಕಾರ್ಯಕ್ರಮ ನಿರ್ವಹಿಸಿದರು. ಸಮಾರೋಪ ಸಮಾರಂಭದಲ್ಲಿ ಭಾಸ್ಕರ ಹೊಸಮನೆ ವಂದಿಸಿದರು. ಸತೀಶ್ ರಾವ್ ಸಹಕರಿಸಿದರು. ಲೋಕಾಕ್ಷ ಜಾದೂ ಅವರಿಂದ ಜಾದೂ ಪ್ರದರ್ಶನ ನಡೆಯಿತು.

ಸಕ್ಷಮ ಜಿಲ್ಲಾ ಘಟಕದ ಅಧ್ಯಕ್ಷ ರಾಜಶೇಖರ್ ಭಟ್, ಕಾಕುಂಜೆ ಬಿಎಎಸ್​ಎಫ್ ಇಂಡಿಯಾ ಲಿಮಿಟೆಡ್ ಮಾನವ ಸಂಪನ್ಮೂಲ ಅಧಿಕಾರಿ ಸಂತೋಷ್ ಪೈ, ಸಕ್ಷಮ ಕರ್ನಾಟಕ ದಕ್ಷಿಣ ಪ್ರಾಂತ ಅಧ್ಯಕ್ಷ ಕೇಶವ ಕುಮಾರ್, ವಿಕಾಸಂ ಸೇವಾ ಫೌಂಡೇಶನ್ ಸಹಸಂಸ್ಥಾಪಕರಾದ ಗೋಪಾಲ್ ಗೋವಿಂದತೋಟ, ಧರ್ಮಪ್ರಸಾದ್ ರೈ, ಗಣೇಶ್ ಭಟ್ ವಾರಣಸಿ, ಉಪನ್ಯಾಸಕ ಡಾ. ಬಾಲಕೃಷ್ಣ ಕುಮಾರ್, ಸಕ್ಷಮ ದ. ಕ. ಜಿಲ್ಲಾ ಘಟಕದ ಕಾರ್ಯದರ್ಶಿ ಹರೀಶ್ ಪ್ರಭು ಉಪಸ್ಥಿತರಿದ್ದರು.

ಇದನ್ನೂ ಓದಿ : ಶತಮಾನದ ಶಾಲೆಗೆ ಪಾರಂಪರಿಕ ಶೈಲಿಯ ಹೊಸ ಕಟ್ಟಡ ಕಟ್ಟಿಕೊಟ್ಟ ಹಳೆ ವಿದ್ಯಾರ್ಥಿಗಳು