ಕಸ್ತೂರಿ ರಂಗನ್ ವರದಿ ಜಾರಿ ಸಾಧ್ಯವಿಲ್ಲ, ಕೇಂದ್ರಕ್ಕೆ ಪತ್ರ ಬರೆದಿದ್ದೇವೆ: ಸಚಿವ ಈಶ್ವರ ಖಂಡ್ರೆ
ಕಸ್ತೂರಿ ರಂಗನ್ ವರದಿಗೆ ರಾಜ್ಯದ ಒಪ್ಪಿಗೆ ಇಲ್ಲ ಎಂದು ನಿರ್ಣಯಿಸಿ ಕೇಂದ್ರಕ್ಕೆ ಪತ್ರ ಬರೆದಿರುವುದಾಗಿ ಈಶ್ವರ ಖಂಡ್ರೆ ತಿಳಿಸಿದರು.

Published : December 16, 2025 at 4:55 PM IST
ಬೆಳಗಾವಿ: ಪಶ್ಚಿಮಘಟ್ಟದ ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಸಂಬಂಧಿಸಿದ ಕಸ್ತೂರಿ ರಂಗನ್ ವರದಿಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ.ಖಂಡ್ರೆ ಇಂದು ವಿಧಾನ ಪರಿಷತ್‌ಗೆ ತಿಳಿಸಿದ್ದಾರೆ.
ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯ ಐವಾನ್ ಡಿಸೋಜಾ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪಶ್ಚಿಮಘಟ್ಟಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ 6 ಅಧಿಸೂಚನೆ ಹೊರಡಿಸಿದೆ. 2024ರಲ್ಲಿ 6ನೇ ಅಧಿಸೂಚನೆಯಾದ ಬಳಿಕ 10 ಜಿಲ್ಲೆಗಳ ಜನಪ್ರತಿನಿಧಿಗಳ ಸಭೆ ಕರೆದು ಚರ್ಚಿಸಿ ನಂತರ ಸಚಿವ ಸಂಪುಟದ ಉಪಸಮಿತಿ ಸಭೆಯಲ್ಲೂ ಪರಾಮರ್ಶಿಸಿ, ಸಚಿವ ಸಂಪುಟದಲ್ಲಿ ಕಸ್ತೂರಿ ರಂಗನ್ ವರದಿಗೆ ರಾಜ್ಯದ ಒಪ್ಪಿಗೆ ಇಲ್ಲ ಎಂದು ನಿರ್ಣಯಿಸಿ ಕೇಂದ್ರಕ್ಕೆ ಪತ್ರ ಬರೆದಿದ್ದೇವೆ ಎಂದರು.
ಕಸ್ತೂರಿ ರಂಗನ್ ವರದಿಯಲ್ಲಿ ರಾಜ್ಯದ ಪಶ್ಚಿಮಘಟ್ಟದ ಸುಮಾರು 20,668 ಚದರ ಕಿಲೋ ಮೀಟರ್ ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸುವಂತೆ ಶಿಫಾರಸು ಮಾಡಲಾಗಿದೆ. ಈ ಪೈಕಿ 16 ಸಾವಿರ ಚದರ ಕಿಲೋ ಮೀಟರ್ ಈಗಾಗಲೇ ರಾಜ್ಯದ ವನ್ಯಜೀವಿಧಾಮಗಳು, ರಾಷ್ಟ್ರೀಯ ಉದ್ಯಾನ, ಹುಲಿ ಸಂರಕ್ಷಿತ ಪ್ರದೇಶ, ರಕ್ಷಿತ ಅರಣ್ಯ ಪ್ರದೇಶದಲ್ಲಿದ್ದು, ಉಳಿದ 4 ಸಾವಿರ ಚದರ ಕಿಲೋ ಮೀಟರ್ ವ್ಯಾಪ್ತಿ ವರದಿಯಲ್ಲಿದೆ. ಆದರೆ ನಾವು ಇದನ್ನು ತಿರಸ್ಕರಿಸಿದ್ದು, ಈ ಭಾಗದ ಜನರಿಗೆ ಯಾವುದೇ ತೊಂದರೆ ಇಲ್ಲ ಎಂದು ಹೇಳಿದ್ದಾರೆ.
ಬೀದರ್ ವಿಮಾನಯಾನ ಸೇವೆಗೆ ವೆಚ್ಚ ಮಾಡಿರುವುದು 35 ಕೋಟಿ ರೂ ಮಾತ್ರ- ಈಶ್ವರ ಖಂಡ್ರೆ:
ಬೀದರ್ ನಗರಕ್ಕೆ ಉಡಾನ್ ಯೋಜನೆಯಡಿ ಕಲ್ಪಿಸಲಾಗಿದ್ದ ನಾಗರಿಕ ವಿಮಾನಯಾನ ಸೇವೆ ಒಂದೂವರೆ ವರ್ಷದಿಂದ ಸ್ಥಗಿತವಾಗಿದ್ದ ಕಾರಣ, ಜನರ ಅನುಕೂಲಕ್ಕಾಗಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ 15 ಕೋಟಿ ರೂ. ನೀಡಿ ಮರು ಆರಂಭ ಮಾಡಲಾಗಿದೆ. ಆದರೆ ಬೇರೆ ಕಡೆಗಳಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ 300 ಕೋಟಿಯಿಂದ 1000 ಕೋಟಿ ರೂ ವೆಚ್ಚ ಮಾಡಲಾಗಿದೆ ಎಂದು ಖಂಡ್ರೆ ಸ್ಪಷ್ಟಪಡಿಸಿದರು.
ಪ್ರಶ್ನೋತ್ತರ ಕಲಾಪದ ವೇಳೆ ಮಧ್ಯ ಪ್ರವೇಶಿಸಿ ಮಾತನಾಡಿದ ಅವರು, 1960ರ ದಶಕದಿಂದಲೂ ವಿಮಾನ ನಿಲ್ದಾಣವಿದ್ದು, ಕೇವಲ 20 ಕೋಟಿ ರೂ. ವೆಚ್ಚದಲ್ಲಿ ಟರ್ಮಿನಲ್ ಸಿದ್ಧಪಡಿಸಿ ವಿಮಾನ ಯಾನ ನಡೆಯುತ್ತಿತ್ತು. ಆದರೆ ಉಡಾನ್ ಯೋಜನೆ 3 ವರ್ಷ ಆದ ಬಳಿಕ ಸ್ಥಗಿತಗೊಂಡಿತ್ತು ಎಂದರು.
ಬೀದರ್ ನಾಗರಿಕ ವಿಮಾನ ಯಾನ ಸೇವೆಗಾಗಿ ಟರ್ಮಿನಲ್ ಮತ್ತು ಅನುದಾನ ಸೇರಿ ಒಟ್ಟು ವೆಚ್ಚ ಮಾಡಿರುವುದು 35 ಕೋಟಿ ರೂ. ಮಾತ್ರ ಎಂದು ಸಚಿವರು ಸ್ಪಷ್ಟನೆ ನೀಡಿದರು.
ಇವುಗಳನ್ನೂ ಓದಿ:

