ETV Bharat / state

ಕಾರವಾರದಲ್ಲಿ ಯುವತಿ ಆತ್ಮಹತ್ಯೆ: ಯುವಕನ ವಿರುದ್ಧ ಪ್ರೀತಿಸುವಂತೆ ಪೀಡಿಸಿದ ಆರೋಪ

ಪ್ರೀತಿಸುವಂತೆ ಕಾಟ ಕೊಟ್ಟಿದ್ದಕ್ಕೆ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಆರೋಪ ಕಾರವಾರದ ಬಾಡ ನಂದನಗದ್ದಾದಲ್ಲಿ ನಡೆದಿದೆ.

UTTARAKANNADA  KARWAR  LOVE CASE  ಕಾರವಾರದಲ್ಲಿ ಯುವತಿ ಆತ್ಮಹತ್ಯೆ GIRL DEATH
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Karnataka Team

Published : January 11, 2026 at 8:45 PM IST

2 Min Read
Choose ETV Bharat

ಕಾರವಾರ: ಪ್ರೀತಿಸುವಂತೆ ಪೀಡಿಸುತ್ತಿದ್ದ ಯುವಕನ ಕಾಟ ತಾಳಲಾರದೆ ತಮ್ಮ ಪುತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಿ ಯುವತಿಯ ತಂದೆ ಕದ್ರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮೃತ ಯುವತಿಯನ್ನು ರಿಶೆಲ್ ಎಂದು ಗುರುತಿಸಲಾಗಿದೆ. ಆರೋಪಿ ಬಾಡ ನಂದನಗದ್ದಾದ ಶರಾಗ್ ಚಂದ್ರಾಹಾಸ ಕೊಡಾರಕರ್ ಎಂಬಾತನೇ ತನ್ನ ಮಗಳಿಗೆ ಕಾಟ ಕೊಟ್ಟಿದ್ದಾನೆ ಎಂದು ಮೃತ ಯುವತಿಯ ತಂದೆ ಕಿಸ್ತೋದ್ ಪ್ರಾನ್ಸಿಸ್ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.

ಈತ ತನ್ನ ಮಗಳಿಗೆ ಪರಿಚಯಸ್ಥನಾಗಿದ್ದು, ಪದೇ ಪದೇ ಫೋನ್ ಮಾಡಿ ಪ್ರೀತಿಸುವಂತೆ ಒತ್ತಾಯಿಸುತ್ತಿದ್ದನು. ಅಲ್ಲದೆ, ಆಗಾಗ ಮನೆಯ ಸುತ್ತಮುತ್ತ ಸುತ್ತಾಡುತ್ತಾ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದ ಎಂದು ದೂರಲಾಗಿದೆ.

ಆರೋಪಿಯ ಪ್ರೇಮ ನಿವೇದನೆಯನ್ನು ಯುವತಿ ನಿರಾಕರಿಸಿದಾಗ, ಆತ ಆಕೆಯನ್ನು ಟಾರ್ಗೆಟ್ ಮಾಡಿ ಅತ್ಯಂತ ಕ್ರೂರವಾಗಿ ಮಾತನಾಡುತ್ತಿದ್ದನು. "ನೀನು ಬದುಕಿದ್ದು ಪ್ರಯೋಜನವಿಲ್ಲ, ಸತ್ತು ಹೋಗು. ನೀನು ಬದುಕಿರುವುದಕ್ಕಿಂತ ಸತ್ತರೆ ಒಳ್ಳೆಯದು" ಎಂದು ಹೀಯಾಳಿಸಿ ಆತ್ಮಹತ್ಯೆಗೆ ಪ್ರಚೋದನೆ ನೀಡುತ್ತಿದ್ದನು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ದುರಂತ ಅಂತ್ಯ: ಇದರಿಂದ ಮನನೊಂದು ಜನವರಿ 09, 2026 ರಂದು ಮಧ್ಯಾಹ್ನ ಸುಮಾರು 2:30 ಗಂಟೆಗೆ ತನ್ನ ಮನೆಯ ಬೆಡ್‌ರೂಮ್‌ನಲ್ಲಿ ನೇಣು ಬಿಗಿದುಕೊಂಡು ನನ್ನ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತ ಯುವತಿ ತಂದೆ ದೂರಿದ್ದಾರೆ.

ಯುವತಿಯ ತಂದೆ ನೀಡಿದ ದೂರಿನ ಮೇರೆಗೆ ಕದ್ರಾ ಪೊಲೀಸರು ಬಿಎನ್​ಎಸ್​ ಕಲಂ 108 (ಆತ್ಮಹತ್ಯೆಗೆ ಪ್ರಚೋದನೆ) ಅಡಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ: ದಾವಣಗೆರೆ: ಕಾರಿನಲ್ಲೇ ಬೆಂಕಿ ಹಚ್ಚಿಕೊಂಡು ಬಿಜೆಪಿ ಮುಖಂಡ ಆತ್ಮಹತ್ಯೆ

ನಾಪತ್ತೆಯಾಗಿದ್ದ ಬಾಲಕರು ಪತ್ತೆ: ಶನಿವಾರ ಶಾಲೆ ಮುಗಿದ ಮೇಲೆ ನಾಪತ್ತೆಯಾಗಿದ್ದ ಕಾರವಾರ ಖಾಸಗಿ ಶಾಲೆಯ ಇಬ್ಬರು ವಿದ್ಯಾರ್ಥಿಗಳು, ರೈಲ್ವೆ ಪೊಲೀಸರು ಮತ್ತು ಸಹಪಾಠಿಯ ಸಮಯಪ್ರಜ್ಞೆಯಿಂದಾಗಿ ಈಗ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ.

ಕಾರವಾರ ತಾಲೂಕಿನ ಶಿರವಾಡದ ಐದನೇ ತರಗತಿಯ ಇಬ್ಬರು ವಿದ್ಯಾರ್ಥಿಗಳನ್ನು ಗೋವಾದ ಮಡಗಾಂವ್ ರೈಲ್ವೆ ನಿಲ್ದಾಣದಲ್ಲಿ ಸುರಕ್ಷಿತವಾಗಿ ವಶಕ್ಕೆ ಪಡೆಯಲಾಗಿದೆ. ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸವ ಪ್ರಕ್ರಿಯೆ ನಡೆದಿದೆ.

ಶಾಲೆ ಮುಗಿದ ನಂತರ ಮನೆಗೆ ಹೋಗುವ ಬದಲು ಸೈಕಲ್‌ನಲ್ಲಿ ವಿದ್ಯಾರ್ಥಿಗಳು ರೈಲು ನಿಲ್ದಾಣದತ್ತ ತೆರಳಿದ್ದರು. ಇದನ್ನು ಅದೇ ಶಾಲೆಯ ಮತ್ತೊಬ್ಬ ವಿದ್ಯಾರ್ಥಿ ಗಮನಿಸಿ, ತಕ್ಷಣ ಪಾಲಕರಿಗೆ ವಿಷಯ ಮುಟ್ಟಿಸಿದ್ದ. ಬಳಿಕ ಪಾಲಕರು ಶಿರವಾಡ ರೈಲ್ವೆ ನಿಲ್ದಾಣಕ್ಕೆ ಧಾವಿಸಿ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಮಕ್ಕಳು ದೆಹಲಿ ಕಡೆಗೆ ಹೋಗುವ ರೈಲು ಹತ್ತಿರುವುದು ಖಚಿತವಾಗಿತ್ತು. ತಕ್ಷಣ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿ ಅಲರ್ಟ್ ಘೋಷಿಸಲಾಗಿತ್ತು.

ಬಳಿಕ ರೈಲ್ವೆ ಪೊಲೀಸರು, ಚಲಿಸುತ್ತಿದ್ದ ರೈಲಿನಲ್ಲಿ ತಪಾಸಣೆ ನಡೆಸಿ ಗೋವಾದ ಮಡಗಾಂವ್ ರೈಲ್ವೆ ನಿಲ್ದಾಣದಲ್ಲಿ ಮಕ್ಕಳನ್ನು ಸುರಕ್ಷಿತವಾಗಿ ವಶಕ್ಕೆ ಪಡೆದರು.